ಕೆಟ್ಟದರ ವಿರುದ್ಧ ಒಳಿತಿನ ಜಯವೇ ದಸರಾ: ಅನಿತಾ ಮಧುಬಂಗಾರಪ್ಪ
ಸೊರಬ: ಕೆಟ್ಟದರ ಮೇಲೆ ಒಳಿತಿನ ಜಯ ಹಾಗೂ ಅಧರ್ಮದ ವಿರುದ್ಧ ಧರ್ಮದ ವಿಜಯದ ಸಂಕೇತವೇ ದಸರಾ ಎಂದು ದಸರಾ ಉತ್ಸವ ಮಹಿಳಾ ಸಮಿತಿ ಅಧ್ಯಕ್ಷೆ ಅನಿತಾ ಮಧುಬಂಗಾರಪ್ಪ ಹೇಳಿದರು.
ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ದಸರಾ ಉತ್ಸವ ಸಮಿತಿ, ತಾಲೂಕು ಆಡಳಿತ ಹಾಗೂ ಪುರಸಭೆ ಸಹ ಯೋಗದಲ್ಲಿ ಆಯೋಜಿಸಿರುವ ೧೮ನೇ ವರ್ಷದ ಸಾರ್ವಜನಿಕ ದಸರಾ ಉತ್ಸವದ ನಾಲ್ಕನೇ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳಾ ದಸರಾ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಸರಾ ಶಕ್ತಿ ಮತ್ತು ಬೆಳಕಿನ ಹಬ್ಬವಾಗಿದ್ದು, ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸಮಾನವಾಗಿ ಸಾಧನೆ ಮಾಡುತ್ತಿzರೆ. ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು. ನಾಡಿನಲ್ಲಿ ಉತ್ತಮ ಮಳೆ- ಬೆಳೆಯಾಗಿ, ಯುವಕರಿಗೆ ಉಜ್ವಲ ಭವಿಷ್ಯ ದೊರೆಯಲಿ ಹಾಗೂ ಮಕ್ಕಳು ಸುಶಿಕ್ಷಿತರಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ವೈದ್ಯೆ ಡಾ. ಸೌಭಾಗ್ಯ ಈರೇಶ್ ಗೌಡ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ದಸರಾ ಹಬ್ಬಕ್ಕೆ ವಿಶಿಷ್ಟ ಸ್ಥಾನವಿದೆ. ಕುಟುಂಬ ನಿರ್ವಹಣೆಯ ಜವಾಬ್ದಾರಿ ಯೊಂದಿಗೆ ಮಹಿಳೆಯರು ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ಒತ್ತಡದ ಬದುಕಿನಲ್ಲಿ ಸಕಾರಾತ್ಮಕ ಚಿಂತನೆ, ಸಹನೆ ಮತ್ತು ತಾಳ್ಮೆ ಮಾನಸಿಕ ನೆಮ್ಮದಿಗೆ ಸಹಕಾರಿಯಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯ ಆರೋಗ್ಯ ಸಹಾಯಕಿ ಎಚ್.ಎನ್. ಜಯಮ್ಮ ಅವರಿಗೆ ದಸರಾ ಉತ್ಸವ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅನಿತಾ ಮಧುಬಂಗಾರಪ್ಪ ಅವರನ್ನು ಮಹಿಳಾ ಸಮಿತಿ ವತಿಯಿಂದ ಗೌರವಿಸಲಾಯಿತು.
ಸಿಡಿಪಿಒ ಕಚೇರಿ ಮೇಲ್ವಿಚಾರಕಿ ಕೆ.ಜಿ. ನೇತ್ರಾವತಿ, ಕ್ಷೇತ್ರ ಶಿಕ್ಷಣಾಽಕಾರಿ ಆರ್. ಪುಷ್ಪಾ, ಪಿಎಲ್ಡಿ ಬ್ಯಾಂಕ್ ನಿರ್ದೇಶಕಿ ರತ್ನಮ್ಮ ಎಂ. ನಾಗಪ್ಪ, ಅಕ್ಕನ ಬಳಗದ ಪ್ರಧಾನ ಕಾರ್ಯದರ್ಶಿ ಜಯಮಾಲಾ ಅಣ್ಣಾಜಿಗೌಡ, ಜಿಪಂ ಮಾಜಿ ಸದಸ್ಯೆ ಕೆ.ಜಿ. ಲೋಲಾಕ್ಷಮ್ಮ, ಗೀತಾ ಶಿವಾನಂದ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಅಭಿನಂದಿಸಲಾಯಿತು.
ದಸರಾ ಉತ್ಸವ ಮಹಿಳಾ ಸಮಿತಿ ಅಧ್ಯಕ್ಷೆ ಸುಜಾತಾ ಜೋತಾಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದ ವೀಣಕ್ಕ, ಚೇತನಕ್ಕ, ವಿಜಯ ಮಹಾ ಲಿಂಗಪ್ಪ, ಪ್ರೇಮಾ ಟೋಕಪ್ಪ, ರೇಖಾ ಜಗದೀಶ್, ಸರಸ್ವತಿ ನಾವುಡಾ, ಪುಷ್ಪಾ ವಿಶ್ವನಾಥ್ ಸೇರಿದಂತೆ ಹಲವರು ಉಪಸ್ಥಿತರಿ ದ್ದರು. ಪ್ರತಿಭಾ ಗಣೇಶ್ ಭಟ್ ಪ್ರಾರ್ಥಿಸಿದರು. ಅನುಕೃತ ಸ್ವಾಗತಿಸಿ, ಪೂರ್ಣಿಮಾ ಭಾವೆ ವಂದಿಸಿದರು. ಗಾಯತ್ರಿ ಗೋಖಲೆ ನಿರೂಪಿಸಿದರು.

