ಸ್ವದೇಶಿ ಉತ್ಪನ್ನಗಳ ಬಳಕೆಯಿಂದ ಸ್ವಾವಲಂಬಿ ಭಾರತ ನಿರ್ಮಾಣ…
ಶಿಕಾರಿಪುರ: ಸ್ವಾವಲಂಬಿ ಭಾರತ ನಿರ್ಮಾಣ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವದ ಕನಸಾಗಿದ್ದು, ಅದನ್ನು ನನಸಾಗಿಸಲು ಪ್ರತಿಯೊಬ್ಬರೂ ಸ್ವದೇಶಿ ಉತ್ಪನ್ನಗಳ ಬಳಕೆಗೆ ಆದ್ಯತೆ ನೀಡಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಕರೆ ನೀಡಿದರು.

ದಸರಾ ಹಬ್ಬದ ಅಂಗವಾಗಿ ಪಟ್ಟಣದ ಗುರುಭವನದಲ್ಲಿ ಜೆಸಿಐ ಶಿಕಾರಿಪುರ ಚಂದನ್, ಸುಮುಖ ಇವೆಂಟ್ಸ್ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಸ್ವದೇಶಿ ವಸ್ತುಗಳ ಮೇಳ ಮತ್ತು ಆಹಾರ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವದೇಶಿ ಉತ್ಪನ್ನಗಳ ಖರೀದಿ ಮತ್ತು ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸ ಬೇಕು. ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವುದರಿಂದ ದೇಶೀಯ ಉದ್ಯಮಿಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಆಶಯಕ್ಕೆ ಬೆಂಬಲ ನೀಡುವ ಮೂಲಕ ಆತ್ಮನಿರ್ಭರ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕು ಎಂದು ಹೇಳಿದರು.

ದೇಶೀಯ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವ ಆತ್ಮನಿರ್ಭರ ಭಾರತ ಮತ್ತು ವೋಕಲ್ ಫಾರ್ ಲೋಕಲ್ ಪರಿಕಲ್ಪನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಇಂತಹ ಮೇಳಗಳು ಪ್ರಮುಖ ಪಾತ್ರ ವಹಿಸುತ್ತವೆ. ದೇಶೀಯ ಉದ್ಯಮಿಗಳು, ಸ್ಥಳೀಯ ಕೈಗಾರಿಕೆಗಳು, ರೈತರು ಹಾಗೂ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಇವು ಉತ್ತಮ ವೇದಿಕೆಯಾಗಿವೆ ಎಂದು ಅಭಿಪ್ರಾಯಪಟ್ಟರು.
ಸ್ಥಳೀಯವಾಗಿ ತಯಾರಾ ಗುವ ವಸ್ತುಗಳಿಗೆ ಉತ್ತೇಜನ ನೀಡುವುದರಿಂದ ಗ್ರಾಮೀಣ ಆರ್ಥಿಕತೆ ಬಲಗೊಳ್ಳುವುದರ ಜತೆಗೆ ಯುವಜನರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಪ್ರೇರಣೆ ದೊರೆಯುತ್ತದೆ. ಸ್ಥಳೀಯ ವ್ಯಾಪಾರಿಗಳು, ಸಣ್ಣ ಉದ್ಯಮಿಗಳು ಹಾಗೂ ಸ್ವದೇಶಿ ಉತ್ಪನ್ನಗಳ ತಯಾರಕರಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ವಿವಿಧ ಬಗೆಯ ಆಹಾರ ಮಳಿಗೆಗಳು ಜನರ ಗಮನ ಸೆಳೆಯುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡ ವಸಂತಗೌಡ, ಜೆಸಿಐ ಶಿಕಾರಿಪುರ ಚಂದನ್ ಅಧ್ಯಕ್ಷ ಶಾಂತಾರಾಮ್ ಶೇಟ್, ಸುಮುಖ ಇವೆಂಟ್ಸ್ ಮುಖ್ಯಸ್ಥ ರಾಘವೇಂದ್ರ, ಸುಧಾಕರ್, ಶಶಿಕುಮಾರ್ ತಾಳಗುಂದ, ಪ್ರವೀಣ್ ಕುಮಾರ್ ಹದಡಿ, ವಿಜಯಲಕ್ಷ್ಮಿ ಮಂಜುನಾಯ್ಕ, ಪ್ರಶಾಂತ್ ಪ್ರತಿಬಿಂಬ, ಭಾಗ್ಯ ವೀರೇಶ್, ಭಾವನಾ ರಾಮಪ್ಪ, ಈಶ್ವರಪ್ಪ, ರಾಮಚಂದ್ರ, ದರ್ಶನ್, ಚಂದ್ರು, ವೀರೇಶ್, ಪ್ರಕಾಶ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

