ಸಂಪ್ರದಾಯ, ಸಂಸ್ಕೃತಿ, ಪ್ರಕೃತಿಯ ಸಮ್ಮಿಲನದಲ್ಲಿ ದಸರಾ ವೈಭವ
ವಿಜಯದ ಸಂಭ್ರಮ, ಸಂಪ್ರದಾಯದ ಸೊಬಗು, ಸಂಸ್ಕೃತಿಯ ಶ್ರೀಮಂತಿಕೆ ಹಾಗೂ ಭಕ್ತಿ-ಭಾವಗಳ ಸಂಗಮವೇ ವಿಜಯದಶಮಿ. ನವರಾತ್ರಿಯ ಒಂಬತ್ತು ದಿನಗಳ ಆರಾಧನೆಗೆ ಮಂಗಳ ಹಾಡುವ ಈ ಹಬ್ಬವು ದುಷ್ಟಶಕ್ತಿಯ ವಿರುದ್ಧ ಶಿಷ್ಟಶಕ್ತಿಯ ವಿಜಯವನ್ನು ಸಾರುವುದರ ಜೊತೆಗೆ, ಬದುಕಿನಲ್ಲಿ ಹೊಸ ಭರವಸೆ ಮತ್ತು ಉತ್ಸಾಹವನ್ನು ತುಂಬುತ್ತದೆ. ಬನ್ನಿ ಎಲೆಗಳ ವಿನಿಮಯ, ಆಯುಧ ಪೂಜೆ, ದೇವಿಯ ಆರಾಧನೆ ಹಾಗೂ ಸಾಂಸ್ಕೃತಿಕ ಮೆರವಣಿಗೆಗಳ ಮೂಲಕ ನಾಡಿನ ಜನಮನದಲ್ಲಿ ವಿಜಯದಶಮಿ ವಿಶಿಷ್ಟ ಸ್ಥಾನ ಪಡೆದಿದೆ.

ವಿಜಯದ ಸಂಕೇತವಾಗಿ ಬನ್ನಿ ಮರವನ್ನು ಪೂಜಿಸುವುದು ಹಾಗೂ ಅದರ ಎಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು ಕರ್ನಾಟಕದ ಹಲವು ಭಾಗಗಳಲ್ಲಿ ಇಂದಿಗೂ ಜೀವಂತವಾಗಿರುವ ಸಂಪ್ರದಾಯ. ಬನ್ನಿ ಎಲೆಗಳನ್ನು ಸ್ನೇಹಿತರು, ಬಂಧುಗಳು ಹಾಗೂ ಪರಿಚಿತರೊಂದಿಗೆ ವಿನಿಮಯ ಮಾಡಿಕೊಂಡು ಪರಸ್ಪರ ಶುಭ ಹಾರೈಸುವ ಈ ಆಚರಣೆಯ ಹಿಂದೆ ಪೌರಾಣಿಕ ಹಿನ್ನೆಲೆ ಮಾತ್ರವಲ್ಲ, ಪ್ರೀತಿ, ಸೌಹಾರ್ದ ಮತ್ತು ಸಂಬಂಧಗಳ ಬೆಸುಗೆಯ ಸಂದೇಶವೂ ಅಡಗಿದೆ.
ಪಾಂಡವರ ವಿಜಯದೊಂದಿಗೆ ಬೆಸೆದ ಬನ್ನಿ ಮರ:
ಪುರಾಣದ ಕಥನದ ಪ್ರಕಾರ, ಪಾಂಡವರು ಅeತವಾಸಕ್ಕೆ ತೆರಳುವ ಸಂದರ್ಭದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನಿ ಮರದಲ್ಲಿ ಅಡಗಿಸಿಟ್ಟಿದ್ದರು. ಅeತವಾಸ ಪೂರ್ಣಗೊಂಡ ಬಳಿಕ ಕೌರವರ ವಿರುದ್ಧ ಯುದ್ಧಕ್ಕೆ ಹೊರಡುವ ಮುನ್ನ ಬನ್ನಿ ಮರವನ್ನು ಪೂಜಿಸಿ ಶಸ್ತ್ರಾಸ್ತ್ರಗಳನ್ನು ಮರಳಿ ಪಡೆದುಕೊಂಡರು. ಬನ್ನಿ ಮರದ ಆರಾಧನೆಯ ಬಳಿಕ ಪಾಂಡವರಿಗೆ ವಿಜಯ ದೊರೆಯಿತು ಎಂಬ ನಂಬಿಕೆ ಜನಪದ ಪರಂಪರೆಯಲ್ಲಿ ಪ್ರಸಿದ್ಧವಾಗಿದೆ.
ಹೀಗಾಗಿ, ಬನ್ನಿ ಮರವು ವಿಜಯ, ಧೈರ್ಯ ಮತ್ತು ಶುಭಾರಂಭದ ಸಂಕೇತವಾಗಿ ಗುರುತಿಸಿಕೊಂಡಿದೆ. ವಿಜಯದಶಮಿಯಂದು ಬನ್ನಿ ಎಲೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಪರಸ್ಪರ ಒಳಿತಾಗಲಿ, ಕೈಗೊಳ್ಳುವ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿ ಎಂದು ಹಾರೈಸಲಾಗುತ್ತದೆ. ಹಿರಿಯರಿಂದ ಕಿರಿಯರವರೆಗೆ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿರುವುದು ನಮ್ಮ ಸಾಂಸ್ಕೃತಿಕ ಪರಂಪರೆಯ ನಿರಂತರತೆಗೆ ಸಾಕ್ಷಿಯಾಗಿದೆ.

ಮೈಸೂರಿನ ಜಂಬೂ ಸವಾರಿ; ಶಿವಮೊಗ್ಗದ ದಸರಾ ವೈಭವ:
ನಾಡಹಬ್ಬ ದಸರಾ ಎಂದಾಕ್ಷಣ ನೆನಪಾಗುವುದು ಸಾಂಸ್ಕೃತಿಕ ವೈಭವಕ್ಕೆ ಹೆಸರಾದ ಮೈಸೂರು ದಸರಾ. ದಸರಾ ಮಹೋತ್ಸವದ ಕೊನೆಯ ದಿನವಾದ ವಿಜಯದಶಮಿಯಂದು ನಡೆಯುವ ಜಂಬೂ ಸವಾರಿ ನಾಡಿನ ಜನರನ್ನು ಮಾತ್ರವಲ್ಲದೆ, ದೇಶ-ವಿದೇಶಗಳ ಪ್ರವಾಸಿಗರನ್ನೂ ಆಕರ್ಷಿಸುತ್ತದೆ. ಜಂಬೂ ಸವಾರಿ ಮುಕ್ತಾಯದ ಬಳಿಕ ಬನ್ನಿ ಮರದ ಪೂಜೆ ನೆರವೇರಿಸುವ ಸಂಪ್ರದಾಯವೂ ದಸರಾ ಆಚರಣೆಯ ಮಹತ್ವದ ಭಾಗವಾಗಿದೆ.
ಮೈಸೂರಿನಂತೆಯೇ ಶಿವಮೊಗ್ಗದಲ್ಲಿಯೂ ನಾಡಹಬ್ಬ ದಸರಾವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶಿವಮೊಗ್ಗ ಮಹಾನಗರ ಪಾಲಿಕೆಯ ಕಮಿಷನರ್ ಮಾಯಣ್ಣ ಗೌಡ ಅವರ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಿ, ಹಬ್ಬವನ್ನು ಜನಸಾಮಾನ್ಯರ ಪಾಲ್ಗೊಳ್ಳುವಿಕೆಯ ಸಾಂಸ್ಕೃತಿಕ ಉತ್ಸವವನ್ನಾಗಿ ರೂಪಿಸಲಾಗುತ್ತದೆ. ಸಾಂಸ್ಕೃತಿಕ ದಸರಾ, ಮಹಿಳಾ ದಸರಾ, ಗಮಕ ದಸರಾ, ಯುವ ದಸರಾ, ಪರಿಸರ ದಸರಾ, ಯೋಗ ದಸರಾ, ರಂಗ ದಸರಾ, ರೈತ ದಸರಾ, ಆಹಾರ ದಸರಾ, ಚಲನಚಿತ್ರ ದಸರಾ, ಮಕ್ಕಳ ದಸರಾ, ಕಲಾ ದಸರಾ ಹಾಗೂ eನ ದಸರಾ ಹೀಗೆ ಹಲವು ಆಯಾಮಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ.
ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಕ್ರೀಡೆ, ಕೃಷಿ, ಪರಿಸರ ಮತ್ತು eನದ ಮಹತ್ವವನ್ನು ಸಾರುವ ಈ ಕಾರ್ಯಕ್ರಮಗಳು ವಿವಿಧ ವರ್ಗಗಳ ಜನರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆಯಾಗುತ್ತವೆ. ಮಹಿಳೆಯರು, ಮಕ್ಕಳು, ಯುವಜನರು, ರೈತರು ಹಾಗೂ ಕಲಾವಿದರ ಪಾಲ್ಗೊಳ್ಳುವಿಕೆಯಿಂದ ದಸರಾ ಸಂಭ್ರಮವು ಜನೋತ್ಸವದ ಸ್ವರೂಪ ಪಡೆದುಕೊಳ್ಳುತ್ತದೆ.
ವಿಜಯದಶಮಿಯಂದು ನಡೆಯುವ ಜಂಬೂ ಸವಾರಿ, ಆಕರ್ಷಕ ಸಿಡಿಮದ್ದು ಪ್ರದರ್ಶನ ಹಾಗೂ ನಾಡಿನ ಇತಿಹಾಸ ಮತ್ತು ಪರಂಪರೆಯನ್ನು ಬಿಂಬಿಸುವ ಲೇಸರ್ ಪ್ರದರ್ಶನದಂತಹ ಕಾರ್ಯಕ್ರಮಗಳು ಹಬ್ಬದ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಸಾಂಪ್ರದಾಯಿಕ ಆಚರಣೆಗಳ ಜತೆಗೆ ಆಧುನಿಕ ತಂತ್ರeನದ ಬಳಕೆಯೂ ಸೇರಿಕೊಂಡಾಗ, ಹಬ್ಬವು ಹೊಸ ತಲೆಮಾರಿನ ಮನಸ್ಸನ್ನೂ ಸೆಳೆಯುತ್ತದೆ.
ಹೀಗೆ ವರ್ಷದಿಂದ ವರ್ಷಕ್ಕೆ ಶಿವಮೊಗ್ಗ ದಸರಾವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದ್ದು, ಆಯುಕ್ತ ಮಾಯಣ್ಣಗೌಡರ ಮ್ಯಾಜಿಕ್ನಿಂದಾಗಿ ಶಿವಮೊಗ್ಗ ದಸರಾ ರಾಜ್ಯದ ಗಮನ ಸೆಳೆಯುತ್ತಿದೆ.
ಬನ್ನಿ ಮರವು ಕೇವಲ ಧಾರ್ಮಿಕ ನಂಬಿಕೆಯ ಸಂಕೇತವಲ್ಲ. ಅದು ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ನೆನಪಿಸುವ ಜೀವಂತ ಕೊಂಡಿಯಾಗಿದೆ. ಪ್ರಕೃತಿಯನ್ನು ಗೌರವಿಸುವುದು, ಮರಗಳನ್ನು ಉಳಿಸುವುದು ಮತ್ತು ಪರಿಸರದ ಸಮತೋಲನ ಕಾಪಾಡುವುದು ನಮ್ಮ ಬದುಕಿನ ಅವಿಭಾಜ್ಯ ಭಾಗವಾಗಬೇಕು ಎಂಬ ಸಂದೇಶವನ್ನು ಈ ಆಚರಣೆಯೊಂದಿಗೆ ಬೆಸೆಯಬಹುದು.

ಹಬ್ಬದ ಸಂಭ್ರಮದಲ್ಲಿ ಪರಿಸರದ ಕಾಳಜಿಯೂ ಮರೆಯಾಗಬಾರದು. ಹಬ್ಬದ ಸಂದರ್ಭದಲ್ಲಿ ಸ್ವಚ್ಛತೆಗೆ ಮಹತ್ವ ನೀಡಿ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಸಂಕಲ್ಪ ಮಾಡಬೇಕು.
ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡ ನೆಟ್ಟು ಅದನ್ನು ಬೆಳೆಸುವ ಜವಾಬ್ದಾರಿ ಹೊತ್ತರೆ, ಹಬ್ಬದ ಸಂಭ್ರಮವು ಪರಿಸರ ಸಂರಕ್ಷಣೆಯ ಚಳವಳಿಗೂ ಪ್ರೇರಣೆಯಾಗಬಲ್ಲದು. ಇಂದು ನೆಡುವ ಒಂದು ಗಿಡ ನಾಳಿನ ಪೀಳಿಗೆಗೆ ನೆರಳು, ಶುದ್ಧ ಗಾಳಿ ಮತ್ತು ಹಸಿರಿನ ಕೊಡುಗೆಯಾಗುತ್ತದೆ.

ವಿಜಯದಶಮಿ ಎಂದರೆ ಅದು ಒಳಿತಿನ ಗೆಲುವು, ಹೊಸ ಸಂಕಲ್ಪದ ಆರಂಭ ಹಾಗೂ ಸಮಾಜದಲ್ಲಿ ಸೌಹಾರ್ದ ಬೆಳೆಸುವ ಹಬ್ಬ. ಬನ್ನಿ ಎಲೆಗಳನ್ನು ವಿನಿಮಯ ಮಾಡಿಕೊಳ್ಳುವಾಗ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಯಶಸ್ಸನ್ನು ಹಾರೈಸೋಣ. ಅದೇ ಸಂದರ್ಭದಲ್ಲಿ ಪ್ರಕೃತಿಯ ಸಂರಕ್ಷಣೆಯ ಹೊಣೆಗಾರಿಕೆಯನ್ನೂ ಮನಗಾಣೋಣ.

ಸಂಪ್ರದಾಯದ ಬೇರುಗಳನ್ನು ಗಟ್ಟಿಗೊಳಿಸುತ್ತಾ, ಸಂಸ್ಕೃತಿಯ ಸೊಬಗನ್ನು ಉಳಿಸುತ್ತಾ, ಹಸಿರು ಪರಿಸರವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಸಂಕಲ್ಪದೊಂದಿಗೆ ವಿಜಯದಶಮಿಯನ್ನು ಆಚರಿಸೋಣ. ಒಳಿತಿನ ವಿಜಯವು ಪ್ರತಿಯೊಬ್ಬರ ಬದುಕಿನಲ್ಲೂ ಅರಳಲಿ. ನಾಡಿನಾದ್ಯಂತ ಶಾಂತಿ, ಸಮೃದ್ಧಿ ಮತ್ತು ಸೌಹಾರ್ದ ನೆಲೆಸಲಿ.

ಪತ್ರಕರ್ತರು
