ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

14 ತಿಂಗಳುಗಳಿಂದ ಬಾಯಿ ತೆರೆಯಲಾಗದೆ ಪರದಾಡುತ್ತಿದ್ದ ಮಹಿಳೆಗೆ ಶಸ್ತ್ರಚಿಕಿತ್ಸೆ ಮೂಲಕ ಹೊಸ ಬದುಕು ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆ…

Share Below Link

ಶಿವಮೊಗ್ಗ: ಕ್ಯಾನ್ಸರ್ ಪೂರ್ವ ಬೆಳವಣಿಗೆಯಿಂದಾಗಿ (precancerous growth)  ಸರಿಸುಮಾರು  14  ತಿಂಗಳುಗಳಿಂದ  ಬಾಯಿ ತೆರೆಯಲು  ಸಾಧ್ಯವಾಗದೆ ನರಳುತ್ತಿದ್ದ  30 ವರ್ಷದ ಮಹಿಳೆಯೊಬ್ಬರಿಗೆ ಹೊಸ ಬದುಕು ಸಿಕ್ಕಿದೆ. ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ನ ಶಸ್ತ್ರವೈದ್ಯ,  ಹಾಗೂ ಬಾಯಿ, ಮುಖ, ದವಡೆಯ ಶಸ್ತ್ರ ವೈದ್ಯ ಡಾ. ದೀಪಕ್ ಕಿತ್ತೂರು ನೇತೃತ್ವದಲ್ಲಿ,  ಸಹ್ಯಾದ್ರಿ  ನಾರಾಯಣ  ಮಲ್ಟಿಸ್ಪೆಷಾಲಿಟಿ  ಆಸ್ಪತ್ರೆಯ  ವೈದ್ಯರ  ತಂಡ  ನಡೆಸಿದ  ಸಕಾಲಿಕ  ಶಸ್ತ್ರಚಿಕಿತ್ಸೆಯಿಂದಾಗಿ  ಇದು ಸಾಧ್ಯವಾಗಿದೆ.

ತಂಬಾಕು ಮತ್ತು ಅಡಿಕೆ ಜಗಿಯುವ ಅಭ್ಯಾಸ ಹೊಂದಿದ್ದ ಈ ಮಹಿಳೆ ಕ್ರಮೇಣ ತನ್ನ ದವಡೆಯ ಚಲನೆಯನ್ನು  ಕಳೆದುಕೊಂಡಿದ್ದರು. ಹಲವು ವರ್ಷಗಳ ಕಾಲ ನಿರಂತರವಾಗಿ ಈ ಮಿಶ್ರಣವನ್ನು ಸೇವಿಸಿದ್ದರಿಂದ ಬಾಯಿಯೊಳಗೆ  ಕ್ಯಾನ್ಸರ್  ಪೂರ್ವ  ಹಂತದ  ಗಟ್ಟಿಯಾದ  ಫೈಬ್ರೋಟಿಕ್  ಬ್ಯಾಂಡ್ಗಳು  (ಮಾಂಸಖಂಡದ ಬಿಗಿಯಾದ ಪಟ್ಟಿಗಳು)  ಬೆಳೆದಿದ್ದವು. ಇದರಿಂದಾಗಿ ಕನಿಷ್ಠ ಅರ್ಧ ಬೆರಳಿನಷ್ಟೂ ಬಾಯಿ ತೆರೆಯಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಸುಮಾರು 14 ತಿಂಗಳ ಹಿಂದೆ ಈ ಸಮಸ್ಯೆ ಕಾಣಿಸಿಕೊಂಡಿತಾದರೂ, ದವಡೆಯು ಶೀಘ್ರದಲ್ಲೇ ಸಹಜ ಸ್ಥಿತಿಗೆ ಮರಳ ಬಹುದೆಂಬ ನಂಬಿಕೆಯಿಂದ ಅವರು ಆರಂಭದಲ್ಲಿ ಚಿಕಿತ್ಸೆ ಪಡೆಯುವುದನ್ನು ಮುಂದೂಡಿದ್ದರು. ಆದರೆ ತೊಂದರೆ ಕಡಿಮೆಯಾಗಲಿಲ್ಲ. ಆಹಾರವನ್ನು ಜಗಿದು ತಿನ್ನಲು ಬಾಯಿ ತೆರೆಯಲಾಗದ ಸ್ಥಿತಿ ತಲುಪಿದಾಗ, ಅವರು ಸಂಪೂರ್ಣವಾಗಿ ದ್ರವ ಆಹಾರವನ್ನೇ ಅವಲಂಬಿಸಬೇಕಾಯಿತು. ಪೌಷ್ಟಿಕಾಂಶದ ಕೊರತೆಯಿಂದಾಗಿ ಅವರ ಆರೋಗ್ಯ  ಕ್ಷೀಣಿಸತೊಡಗಿತು. ಅತಿಯಾದ ಸುಸ್ತು ಕಾಣಿಸಿಕೊಂಡಾಗ ಅವರು ತಮ್ಮ ಮನೆಯ ಸಮೀಪದ ಸ್ಥಳೀಯ ಕ್ಲಿನಿಕ್  ಹಾಗೂ ದಂತ ವೈದ್ಯರನ್ನು ಸಂಪರ್ಕಿಸಿದರು. ಅಲ್ಲಿನ ವೈದ್ಯರಿಗೆ ನಿಖರವಾದ ಸಮಸ್ಯೆ ಏನೆಂದು ಪತ್ತೆಹಚ್ಚಲಾಗದ  ಕಾರಣ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ಡಾ. ಕಿತ್ತೂರು ಮತ್ತು ಅವರ ತಂಡ ನಡೆಸಿದ ಆರಂಭಿಕ ತಪಾಸಣೆಗಳಿಂದ, ಇದು ಉಲ್ಬಣಗೊಂಡಿದ್ದ ‘ಓರಲ್ ಸಬ್ಮ್ಯೂಕಸ್ ಫೈಬ್ರೋಸಿಸ್’ (OSMF – ಬಾಯಿಯೊಳಗೆ  ಕಾಣಿಸಿಕೊಳ್ಳುವ  ಮತ್ತು  ಕ್ಯಾನ್ಸರ್  ಆಗಿ ಬದಲಾಗುವ ಸಾಧ್ಯತೆಯಿರುವ ದೀರ್ಘಕಾಲದ ಕಾಯಿಲೆ) ಎಂಬುದು ದೃಢಪಟ್ಟಿತು. ಬಾಯಿಯನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡಿರುವ ರಬ್ಬರ್ ಬ್ಯಾಂಡ್ಗಳಂತೆ ಈ ಫೈಬ್ರೋಟಿಕ್ ಬ್ಯಾಂಡ್ಗಳು ಗಟ್ಟಿಯಾಗಿದ್ದ ಕಾರಣ, ವೈದ್ಯರ  ತಂಡವು ‘ಲೋಕಲ್ ಫ್ಲಾಪ್ ರೀಕನ್ಸ್ಟ್ರಕ್ಷನ್’ನೊಂದಿಗೆ ‘ಬೈಲ್ಯಾಟರಲ್ ಫೈಬ್ರೋಟಮಿ’ ಶಸ್ತ್ರಚಿಕಿತ್ಸೆ  ಮಾಡಲು  ನಿರ್ಧರಿಸಿತು. ಈ ಬಗ್ಗೆ ಮಾತನಾಡಿದ ಡಾ. ದೀಪಕ್ ಕಿತ್ತೂರು, “ರೋಗಿಯು  ಆಸ್ಪತ್ರೆಗೆ  ಬಂದಾಗ,  ಅವರಿಗೆ  ಊಟ  ಮಾಡಲು,  ಮಾತನಾಡಲು  ಅಥವಾ  ಕನಿಷ್ಠ ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳಲು  ಕೂಡ  ಸಾಧ್ಯವಾಗುತ್ತಿರಲಿಲ್ಲ.  ಇದೆಲ್ಲವೂ  ಅವರ  ಜೀವನದ  ಗುಣಮಟ್ಟದ  ಮೇಲೆ ತೀವ್ರ ಪರಿಣಾಮ  ಬೀರಿತ್ತು.  ಶಸ್ತ್ರಚಿಕಿತ್ಸೆಯ  ಸಮಯದಲ್ಲಿ,  ದವಡೆಯ ಬಿಗಿತವನ್ನು ಸಡಿಲಗೊಳಿಸಲು ನಾವು ಆ ಬಿಗಿಯಾದ ಬ್ಯಾಂಡ್ಗಳನ್ನು ಬಹಳ ಎಚ್ಚರಿಕೆಯಿಂದ ಕತ್ತರಿಸಿದೆವು. ನಂತರ ಬಾಯಿಯ ಒಳಗಿನ ಗಾಯವು ಸರಿಯಾಗಿ ಗುಣಮುಖವಾಗಲು ಮತ್ತು ಮತ್ತೆ ಬಿಗಿತ ಬಾರದಂತೆ ತಡೆಯಲು ‘ಫ್ಲಾಪ್’ (ಆರೋಗ್ಯಕರ ಅಂಗಾಂಶದ ತುಣುಕು) ಬಳಸಿ ಆ ಜಾಗವನ್ನು ಮುಚ್ಚಿದೆವು” ಎಂದು ವಿವರಿಸಿದರು. ಶಸ್ತ್ರಚಿಕಿತ್ಸೆಯು ಸಂಪೂರ್ಣ ಯಶಸ್ವಿಯಾಗಿದೆ. ರೋಗಿಯು ಇದೀಗ ಮೂರು ಬೆರಳುಗಳಿಗಿಂತ ಹೆಚ್ಚು ಅಗಲವಾಗಿ ಬಾಯಿ  ತೆರೆಯಲು  ಶಕ್ತರಾಗಿದ್ದಾರೆ.  ಶಸ್ತ್ರಚಿಕಿತ್ಸೆಯ  ಬಳಿಕ,  ಗುಣಮುಖವಾಗುವ  ಹಂತದಲ್ಲಿ  ಬಾಯಿಯ  ಸ್ನಾಯುಗಳ  ನಮ್ಯತೆಯನ್ನು  ಕಾಪಾಡಿಕೊಳ್ಳುವುದು  ಅತ್ಯಗತ್ಯವಾಗಿದ್ದರಿಂದ  ರೋಗಿಯು  ಫಿಸಿಯೋಥೆರಪಿ  (ದವಡೆಯ ವ್ಯಾಯಾಮ)  ಚಿಕಿತ್ಸೆಗೂ ಬದ್ಧರಾಗಿದ್ದಾರೆ. ಓರಲ್ ಸಬ್ಮ್ಯೂಕಸ್ ಫೈಬ್ರೋಸಿಸ್ (OSMF) ಎಂಬುದು ಅಡಿಕೆ, ಗುಟ್ಕಾ ಮತ್ತು ಇತರ ತಂಬಾಕು  ಉತ್ಪನ್ನಗಳನ್ನು  ಜಗಿಯುವುದರಿಂದ  ಬಾಯಿಯೊಳಗೆ  ಉಂಟಾಗುವ  ಗಾಯದ  ಕಲೆಗಳ  ದೀರ್ಘಕಾಲದ  ಕಾಯಿಲೆಯಾಗಿದೆ  ಎಂದು ಡಾ. ಕಿತ್ತೂರು ವಿವರಿಸಿದರು. “ಮಹಿಳೆಯರು  ಸೇರಿದಂತೆ  ಯುವಜನರಲ್ಲಿ  ಈ ಕಾಯಿಲೆ  ಹೆಚ್ಚಾಗಿ  ಕಂಡುಬರುತ್ತಿದ್ದು, ಸರಿಯಾದ ಸಮಯದಲ್ಲಿ  ಚಿಕಿತ್ಸೆ ನೀಡದಿದ್ದರೆ  ಕ್ಯಾನ್ಸರ್  ಆಗಿ  ಬದಲಾಗುವ  ಅಪಾಯವನ್ನು ಹೊಂದಿರುತ್ತದೆ. ಖಾರವಾದ ಆಹಾರವನ್ನು  ತಿಂದಾಗ  ಬಾಯಿಯಲ್ಲಿ  ಉರಿಯುವುದು,  ಬಾಯಿಯ  ಒಳಗಿನ  ಪದರವು  ಬಿಳಿ ಅಥವಾ ಅಮೃತಶಿಲೆಯಂತೆ  (mucosal blanching)  ಕಾಣಿಸಿಕೊಳ್ಳುವುದು  ಹಾಗೂ  ಬಾಯಿ  ತೆರೆಯುವಿಕೆ  ಕಡಿಮೆಯಾಗುವುದು  ಇದರ ಆರಂಭಿಕ  ಲಕ್ಷಣಗಳಾಗಿವೆ.  ಕಾಯಿಲೆ  ಮುಂದುವರಿದ  ಹಂತಗಳಲ್ಲಿ ದವಡೆ  ಸಂಪೂರ್ಣವಾಗಿ  ಲಾಕ್ ಆಗಿಬಿಡುತ್ತದೆ,  ಇದರಿಂದ ರೋಗಿಗಳು  ಪೌಷ್ಟಿಕಾಂಶದ  ಕೊರತೆಯಿಂದ  ಬಳಲುವಂತಾಗುತ್ತದೆ” ಎಂದು ಅವರು ಮಾಹಿತಿ ನೀಡಿದರು.

ಶಸ್ತ್ರಚಿಕಿತ್ಸೆಯ ಮಹತ್ವ: ಆರಂಭಿಕ  ಹಂತದಲ್ಲಿ  ಕೇವಲ  ಔಷಧೋಪಚಾರಗಳಿಂದಲೇ ಇದನ್ನು  ಗುಣಪಡಿಸಬಹುದಾದರೂ,  ಮುಂದುವರಿದ ಹಂತದಲ್ಲಿರುವ  OSMF ಕಾಯಿಲೆಗೆ ಶಸ್ತ್ರಚಿಕಿತ್ಸೆಯ  ಅಗತ್ಯವಿರುತ್ತದೆ.  ಬೈಲ್ಯಾಟರಲ್  ಫೈಬ್ರೋಟಮಿ  ಮತ್ತು  ಫ್ಲಾಪ್ ಕವರೇಜ್ನಂತಹ ಶಸ್ತ್ರಚಿಕಿತ್ಸೆ  ಹಾಗೂ  ಅದರ  ನಂತರದ ಕಟ್ಟುನಿಟ್ಟಾದ ಫಿಸಿಯೋಥೆರಪಿಯು ಬಾಯಿ ತೆರೆಯುವಿಕೆಯನ್ನು ಮರುಸ್ಥಾಪಿಸುವಲ್ಲಿ ಮತ್ತು ಇಂತಹ ರೋಗಿಗಳ ಜೀವನಮಟ್ಟವನ್ನು ಸುಧಾರಿಸುವಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿದೆ. ಈ ರೀತಿಯ ಕಾಯಿಲೆಗಳನ್ನು ವೈದ್ಯಕೀಯವಾಗಿ ಗುಣಪಡಿಸಬಹುದಾದರೂ, ಜನರಲ್ಲಿ ಮತ್ತು ವೈದ್ಯಕೀಯ ವಲಯದಲ್ಲಿ ಇದರ ಬಗ್ಗೆ ಜಾಗೃತಿಯ ಕೊರತೆಯಿದೆ ಎನ್ನುತ್ತಾರೆ ಡಾ. ಕಿತ್ತೂರು. ಆಸ್ಪತ್ರೆಯು ಕಳೆದ ಒಂದು ದಶಕದಿಂದ ಅತ್ಯುತ್ತಮ ಫಲಿತಾಂಶಗಳೊಂದಿಗೆ ಇಂತಹ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡುತ್ತಾ ಬಂದಿದೆ. “ನಮ್ಮ ರೋಗಿಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವಂತಹ ವಿಶ್ವದರ್ಜೆಯ ಶಸ್ತ್ರಚಿಕಿತ್ಸಾ ಪರಿಣತಿಯನ್ನು ಒದಗಿಸುವುದೇ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಧ್ಯೇಯವಾಗಿದೆ” ಎಂದರು. ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್ ಡಾ. ಉತ್ತಮ ಶರ್ಮಾ ಮಾತನಾಡಿ, “ಸಕಾಲಿಕ  ವೈದ್ಯಕೀಯ  ನೆರವು ಕೇವಲ ರೋಗಿಗಳ ಆರೋಗ್ಯವನ್ನು ಮಾತ್ರವಲ್ಲ, ಬದಲಾಗಿ ಅವರ ಘನತೆ ಮತ್ತು ಜೀವನದ ಗುಣಮಟ್ಟವನ್ನೂ ಮರುಸ್ಥಾಪಿಸುತ್ತದೆ ಎಂಬುದಕ್ಕೆ ಅಡ್ವಾನ್ಸ್ಡ್ OSMF ನ ಈ ಪ್ರಕರಣವೇ ಒಂದು ಅತ್ಯುತ್ತಮ ಉದಾಹರಣೆ. ಇಂತಹ ಯಾವುದೇ ಸಮಸ್ಯೆಗಳಿಂದ ಬಳಲುತ್ತಿರುವವರು ಮುಕ್ತವಾಗಿ ಮುಂದೆ ಬಂದು ತಜ್ಞರಿಂದ ಸಕಾಲಿಕ ಚಿಕಿತ್ಸೆ  ಪಡೆಯಬೇಕು ಎಂದು ನಾನು ವಿನಂತಿಸುತ್ತೇನೆ” ಎಂದರು.

Leave a Reply

Your email address will not be published. Required fields are marked *