ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ನಸೀಬಿನ ಅಕ್ಷರಗಳಲ್ಲಿ ಬರೆದ ಪ್ರೀತಿ…

Share Below Link

ಯಾವ ಪರಿಚಯವೂ ಆಕಸ್ಮಿಕವಲ್ಲ. ಪ್ರತಿ ಪರಿಚಯವೂ ದೈವ ಇಚ್ಛೆಯಾಗಿರುತ್ತದೆ ಎಂಬ ಮಾತನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ. ಆದರೆ ಅದರ ನಿಜ ಅರ್ಥ ತಿಳಿಯುವುದು ಬದುಕಿನಲ್ಲಿ ಯಾರೋ ಒಬ್ಬರು ಅನಿರೀಕ್ಷಿತವಾಗಿ ಬಂದು, ನಮ್ಮೊಳಗೆ ವರ್ಷಗಳಿಂದ ಖಾಲಿ ಉಳಿದಿದ್ದ ಮನಸ್ಸಿನ ಒಂದು ಮೂಲೆಯನ್ನು ಮನವಾಗಿ ತುಂಬಿದಾಗ ಮಾತ್ರ. ಕೆಲವು ಭೇಟಿಗಳು ಕ್ಯಾಲೆಂಡರ್ ಅಥವಾ ಡೈರಿಯಲ್ಲಿ ಗುರುತು ಬಿಟ್ಟ ದಿನಗಳಾಗುವುದಿಲ್ಲ. ಅವು ವಿಽಯ ದಿನಚರಿಯಲ್ಲಿ ಮೊದಲೇ ಬರೆದಿಟ್ಟ ಅಧ್ಯಾಯಗಳಾಗಿರುತ್ತವೆ.
ಅವಳು ಮತ್ತು ಅವನು ಮೊದಲ ಬಾರಿ ಭೇಟಿಯಾದಾಗ ಅದು ಸಾಮಾನ್ಯ ಕ್ಷಣದಂತೆ ಕಂಡಿತ್ತು. ಒಂದಿಷ್ಟು ಮಾತು, ಒಂದು ನಗು, ಒಂದು ಸಣ್ಣ ಪರಿಚಯ. ಆದರೆ ದಿನಗಳು ಕಳೆಯುತ್ತಿದ್ದಂತೆ ಆ ಪರಿಚಯ ಹೃದಯದ ಆಳದಲ್ಲಿ ಬೇರು ಬಿಟ್ಟಿತು. ಇಬ್ಬರಿಗೂ ಅರಿವಾಗುವಷ್ಟರಲ್ಲಿ, ಅವರ ಬದುಕಿನ ಕಥೆಯಲ್ಲಿ ಒಬ್ಬರ ಹೆಸರು ಮತ್ತೊಬ್ಬರ ಉಸಿರಿನ ಜೊತೆ ಸೇರಿಕೊಂಡಿತ್ತು. ಅವರ ಮನಕ್ಕೂ ಅರ್ಥವಿತ್ತು. ಮಾತಿಲ್ಲದ ಕ್ಷಣಗಳಲ್ಲೂ ಪರಸ್ಪರದ ಮನಸ್ಸನ್ನು ಓದುವ ಸಾಮರ್ಥ್ಯ ಅವರಿಬ್ಬರಲ್ಲೂ ಬೆಳೆದಿತ್ತು. ಆಗಾಗ ಅವನು ಗುನುಗುತ್ತಿದ್ದ ಕನ್ನಡ ಭಾವಗೀತೆಯೊಂದು ಅವರ ಸಂಬಂಧಕ್ಕೆ ಅಕ್ಷರಶಃ ಅರ್ಥ ನೀಡುತ್ತಿದ್ದಂತೆ ಅನಿಸುತ್ತಿತ್ತು.
ನಿನ್ನ ಕಂಡ ಕ್ಷಣದಿಂದಲೇ..
ಮನದೊಳೊಂದು ಹೊಸ ಬೆಳಕು ಮೂಡಿತು…
ಆ ಸಾಲುಗಳು ಅವರ ಪ್ರೀತಿಯ ಮೊದಲ ಹೆಜ್ಜೆಗಳಿಗೆ ಸಂಗೀತದ ಹದ ನೀಡುತ್ತಿದ್ದವು.
ಒಂದು ಮುಸ್ಸಂಜೆಯಲ್ಲಿ ಅವಳು ಮೆಲ್ಲನೆ ಅವನಿಗೆ ಹೇಳಿದಳು..
ನನ್ನ ನಿನ್ನ ಸ್ನೇಹ ಅದ್ಯಾವ ಜನ್ಮದ ಪುಣ್ಯದ ಫಲವೋ ಗೊತ್ತಿಲ್ಲ. ಆದರೆ ನಾವಿಬ್ಬರೂ ಮನಸಾರೆ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ ಅಂದ ಮೇಲೆ ಜೀವನದಲ್ಲಿ ಬರುವ ಸಂಕಷ್ಟಗಳನ್ನೂ ಕೈ ಕೈ ಹಿಡಿದು ಎದುರಿಸೋಣ…
ಆ ಮಾತು ಕೇಳಿದ ಅವನ ಕಣ್ಣುಗಳಲ್ಲಿ ಕೇವಲ ಸಂತೋಷ ಮಾತ್ರವಲ್ಲ ಅವನೊಳಗಿನ ಆತ್ಮವಿಶ್ವಾಸ ಮತ್ತಷ್ಟು ದೃಢವಾಯಿತು. ಅದು ಕೇವಲ ಪ್ರೇಮದ ಒಪ್ಪಿಗೆಯಲ್ಲ, ಜೀವನದ ಒಪ್ಪಂದವಾಗಿತ್ತು. ಪ್ರೀತಿ ಎಂದರೆ ಸುಖದ ದಿನಗಳಲ್ಲಿ ಜೊತೆಯಾಗಿರುವುದು ಮಾತ್ರವಲ್ಲ. ಜೀವನದಲ್ಲಿ ದುಃಖದ ಮೋಡಗಳು ಕವಿದಾಗಲೂ ನೆರಳಾಗಿ ನಿಲ್ಲುವುದೇ ಅದರ ನಿಜವಾದ ಅರ್ಥ ಎಂಬ ಅರಿವು ಅವನೊಳಗೆ ಆಳವಾಗಿ ಬೇರೂರಿತು.
ಆ ಕ್ಷಣದಲ್ಲಿ ಅವನರಿವಿಗಿಲ್ಲದೇ ಮನಸ್ಸಿನಲ್ಲಿ ಈ ಸಾಲುಗಳು ಗುನುಗತೊಡಗಿದವು…
ತುಮ್ಸೇ ಮೇರಾ ಮಿಲ್ನಾ ಲಿಖಾ ಹೋಗಾ ಕಹೀ,
ನಸೀಬೋಂ ಕಾ ಸಿತಾರಾ ಮಿಲ್ತಾ ಹೋಗಾ ಕಹೀ…
ಆ ಪದಗಳು ಅವರ ಹೃದಯದ ಅನಾವರಣವಾಗಿದ್ದವು. ಬಹುಶಃ ಅವರ ಭೇಟಿಯನ್ನು ಕಾಲವೇ ಮೊದಲೇ ಬರೆದುಟ್ಟಿರಬಹುದು. ವಿಶಾಲವಾದ ಆಕಾಶದಲ್ಲಿ ಎರಡು ನಕ್ಷತ್ರಗಳು ವರ್ಷಗಳ ಹಿಂದೆಯೇ ಒಂದಾಗಲು ನಿರ್ಧರಿಸಿದ್ದಿರಬಹುದು.
ಆದರೆ ಜೀವನ ಎಂದಿನಂತೆ ತನ್ನ ಪರೀಕ್ಷೆಗಳನ್ನು ಮುಂದಿಟ್ಟಿತು. ಮನೆಯವರ ವಿರೋಧ, ದೂರಗಳು, ತಪ್ಪು ತಿಳುವಳಿಕೆಗಳು, ಮನಸ್ಸನ್ನು ಕಾಡಿದ ನಿಶ್ಶಬ್ದ ರಾತ್ರಿಗಳು ಎಲ್ಲವೂ ಒಂದರ ಹಿಂದೆ ಒಂದರಂತೆ ಬಂದವು. ಕೆಲವೊಮ್ಮೆ ಮಾತುಗಳಿಗಿಂತ ಕಣ್ಣೀರು ಹೆಚ್ಚು ಮಾತನಾಡಿತು. ಕೆಲವು ದಿನಗಳು ಫೋನ್ ಸ್ವಿಚ್ ಆ- ಆಗಿತ್ತು, ಕೆಲವು ದಿನಗಳು ಮನಸ್ಸು ಮಾತಾಡಲಿಲ್ಲ. ಆದರೂ ಪ್ರತಿಯೊಂದು ಬಿರುಗಾಳಿಯ ನಂತರ ಅವರು ಮತ್ತೆ ಒಬ್ಬರ ಕೈಯನ್ನು ಮತ್ತೊಬ್ಬರು ಬಿಗಿಯಾಗಿ ಹಿಡಿದರು. ಏಕೆಂದರೆ ಅವರ ಪ್ರೀತಿಯ ಅಡಿಪಾಯ ಕೇವಲ ದೈಹಿಕ ಆಕರ್ಷಣೆಯಾಗಿರಲಿಲ್ಲ. ಅದು ದೃಢವಾದ ನಂಬಿಕೆ – ಒಟ್ಟಿಗೆ ನಡೆಯುವ ನಿರ್ಧಾರವಾಗಿತ್ತು. ನೀನು ಇದ್ದರೆ ಯಾವ ದಾರಿಯೂ ಕಷ್ಟವಲ್ಲ ಎಂಬ ಆತ್ಮವಿಶ್ವಾಸ ಅವರಲ್ಲಿತ್ತು.
ಕೆಲವೊಮ್ಮೆ ಪ್ರೀತಿಯ ನಿಜವಾದ ಪರೀಕ್ಷೆ ದೂರದಲ್ಲಿರುವುದಲ್ಲ. ದೂರದಲ್ಲಿದ್ದರೂ ಮನಸ್ಸಿನಲ್ಲಿ ಹತ್ತಿರವಾಗಿಯೇ ಉಳಿಯುವುದಾಗಿದೆ.
ವರ್ಷಗಳು ಉರುಳಿದವು.
ಒಂದು ಮಳೆಗಾಲದ ಮುಸ್ಸಂಜೆಯಲ್ಲಿ ಅದೇ ಹಳೆಯ ಮರದ ನೆರಳಲ್ಲಿ ಕುಳಿತಿzಗ ಅವಳು ನಗುತ್ತಾ ಕೇಳಿದಳು…
ನಿಜವಾಗಿಯೂ ನಮ್ಮ ಪರಿಚಯ ದೈವ ಇಚ್ಛೆಯೇ ಅಂತ ನಿನಗೆ ಅನಿಸುತ್ತದೆಯಾ…?
ಅವನು ಆಕಾಶದತ್ತ ನೋಡಿದ… ಮಳೆಯ ಹನಿಗಳು ಎಲೆಗಳ ಮೇಲೆ ಬಿದ್ದು ಮಧುರ ಸಂಗೀತವನ್ನು ಸೃಷ್ಟಿಸುತ್ತಿದ್ದವು. ನಂತರ ಅವಳ ಕೈ ಹಿಡಿದು ನಿಧಾನವಾಗಿ ಹೇಳಿದ..
ನಿನ್ನನ್ನು ಭೇಟಿಯಾಗಿದ್ದು ಆಕಸ್ಮಿಕವಾಗಿರಬಹುದು. ಆದರೆ ನಿನ್ನನ್ನು ಕಳೆದುಕೊಳ್ಳದಂತೆ ಪ್ರತಿದಿನ ಹೋರಾಡಿದ್ದು ನನ್ನ ಆಯ್ಕೆ. ಆ ಆಯ್ಕೆಗೆ ಶಕ್ತಿ ಕೊಟ್ಟದ್ದು ಮಾತ್ರ ನಿನ್ನ ಪ್ರೀತಿ.
ಅವಳು ನಕ್ಕಳು…
ಆ ನಗುವಿನಲ್ಲಿ ಸಾವಿರ ಮಾತುಗಳಿದ್ದವು. ಸಾವಿರ ಭರವಸೆಗಳಿದ್ದವು. ಸಾವಿರ ಜನ್ಮಗಳ ಬಂಧವಿದ್ದಂತೆ ಅನಿಸಿತು. ಆ ಕ್ಷಣದಲ್ಲಿ ಅವರಿಗೆ ಒಂದು ಸತ್ಯ ಸ್ಪಷ್ಟವಾಯಿತು. ಕೆಲವು ಭೇಟಿಗಳು ನಿಜವಾಗಿಯೂ ವಿಽಯ ಬರಹವಾಗಿರುತ್ತವೆ. ಆದರೆ ಆ ಭೇಟಿಯನ್ನು ಜೀವಮಾನವಿಡೀ ಉಳಿಯುವ ಕಥೆಯಾಗಿ ರೂಪಿಸುವುದು ಪರಸ್ಪರ ಪ್ರೀತಿ, ತ್ಯಾಗ, ಕ್ಷಮೆ, ಸಹನೆ ಮತ್ತು ಒಬ್ಬರ ಮೇಲೊಬ್ಬರಿಗೆ ಇರುವ ಅಚಲ ನಂಬಿಕೆಯೇ.
ಪ್ರೀತಿ ಎಂಬುದು ಕೇವಲ ಐ ಲವ್ ಯೂ.. ಎನ್ನುವ ಮೂರು ಪದಗಳಲ್ಲ. ಏನೇ ಆದರೂ ನಿನ್ನ ಜೊತೆ ನಿಲ್ಲುತ್ತೇನೆ ಎನ್ನುವ ಜೀವಿತಪರ್ಯಂತದ ನಿರ್ಧಾರ. ಬಹುಶಃ ಅದಕ್ಕಾಗಿಯೇ ಕೆಲವು ಸಂಬಂಧಗಳು ಕಾಲದ ಪರೀಕ್ಷೆಯನ್ನೂ ಗೆದ್ದು ಉಳಿಯುತ್ತವೆ. ಅವುಗಳಿಗೆ ಆರಂಭ ಆಕಸ್ಮಿಕವಾಗಿರಬಹುದು, ಆದರೆ ಅಂತ್ಯವನ್ನು ಬರೆಯುವುದು ಪ್ರೀತಿ ಮತ್ತು ಪರಸ್ಪರ ವಿಶ್ವಾಸ.
ಕೊನೆಗೆ ಉಳಿಯುವುದು ಒಂದು ಸಿಹಿ ನೆನಪು ಮಾತ್ರ. ಕೆಲವು ಭೇಟಿಗಳನ್ನು ದೇವರು ಮಾಡಿಸುತ್ತಾನೆ. ಆದರೆ ಅದನ್ನು ಅಮರವಾದ ಕಥೆಗಳನ್ನಾಗಿ ಮಾಡುವವರು ಪ್ರೀತಿಸುವ ಎರಡು ಹೃದಯಗಳು. ಅದೇ ಪ್ರೀತಿಯ ನಿಜವಾದ ಅದ್ಭುತ. ಅದೇ ಬದುಕಿನ ಅತ್ಯಂತ ಸುಂದರವಾದ ಕವಿತೆ….

Leave a Reply

Your email address will not be published. Required fields are marked *