ಕೆಲವು ಕವಿತೆಗಳು ಮುಗಿಯುವುದಿಲ್ಲ… ಅವುಗಳ ಹೆಸರೇ ನೀನು…
ಕೆಲವರು ನಮ್ಮ ಬದುಕಿಗೆ ಆಕ್ಮಿಕವಾಗಿ ಬರುತ್ತಾರೆ,
ನೆನಪಾಗಿ ಉಳಿದು ಹೋಗಲು ಅಲ್ಲ. ಬದುಕಿನ ಅರ್ಥವೇ ಆಗಲು.
ಅವರು ಬಂದು ಹಾದುಹೋದವರು ಅಲ್ಲ,
ಅವರು ನಮ್ಮ ಉಸಿರಿನೊಳಗೆ ಬೆರೆತುಹೋಗುತ್ತಾರೆ.
ಅವರ ಅನುಪಸ್ಥಿತಿಯಲ್ಲಿಯೂ ಅವರ ಸಾನ್ನಿಧ್ಯ ನಮ್ಮನ್ನು ಸುತ್ತುವರಿದಿರುತ್ತದೆ.
ಅಂತಹ ಒಬ್ಬಳು ನೀನು…
ನಿನ್ನನ್ನು ಕುರಿತು ಬರೆಯಲು ನಾನು ಪ್ರತೀ ಬಾರಿ ಲೇಖನಿ ಹಿಡಿದಾಗ,
ಪದಗಳು ನನ್ನ ಮುಂದೆ ತಲೆತಗ್ಗಿಸುತ್ತವೆ.
ಏಕೆಂದರೆ ನಿನ್ನನ್ನು ವರ್ಣಿಸುವಷ್ಟು ದೊಡ್ಡ ಭಾಷೆ
ಇನ್ನೂ ಹುಟ್ಟಿಲ್ಲ ಎನ್ನುವ ಭಾವನೆ ನನ್ನನ್ನು ಕಾಡುತ್ತದೆ.
ಬಿಳಿ ಕಾಗದದ ಮೇಲೆ ಸಾವಿರಾರು ಪದಗಳನ್ನು ಬಿತ್ತರಿಸಿದರೂ,
ನಿನ್ನ ಅಸ್ತಿತ್ವದ ಒಂದು ತುಣುಕನ್ನೂ ಸಂಪೂರ್ಣವಾಗಿ
ಹಿಡಿದಿಡಲು ಸಾಧ್ಯವಾಗುವುದಿಲ್ಲ.
ನೀನು ಮುಗಿಯದ ಕವಿತೆ.
ನಾನು ಮಾತ್ರ ಆ ಕವಿತೆಯನ್ನು ಓದುತ್ತಾ.., ಬರೆಯುತ್ತಾ..,
ಕೊನೆಗೆ ಖಾಲಿಯಾಗುವ ಲೇಖನಿ…
ನನ್ನ ಮನಸ್ಸಿನ ಅತ್ಯಂತ ಆಳದ ಮನಕ್ಕೂ ಒಂದು ರೂಪವಿದ್ದರೆ,
ಅದು ನಿನ್ನ ಮುಖವಾಗಿರುತ್ತಿತ್ತು.
ನನ್ನ ಕನಸುಗಳಿಗೆ ಒಂದು ಬಣ್ಣವಿದ್ದರೆ,
ಅದು ನಿನ್ನ ಕಣ್ಣಿನ ಹೊಳಪಾಗಿರುತ್ತಿತ್ತು.
ನನ್ನ ಹೃದಯದ ಪ್ರತಿಯೊಂದು ಬಡಿತಕ್ಕೂ ಒಂದು ಹೆಸರಿದ್ದರೆ,
ಅದು ನಿನ್ನದೇ ಆಗಿರುತ್ತಿತ್ತು.
ನನ್ನ ಪ್ರತಿಯೊಂದು ನಗುವಿನ ಹಿಂದೆ ನಿನ್ನ ನೆನಪಿನ ಬೆಳಕು ಇತ್ತು.
ನನ್ನ ಪ್ರತಿಯೊಂದು ಮನದೊಳಗೂ ನಿನ್ನ ಹೆಜ್ಜೆಗಳ ಪ್ರತಿಧ್ವನಿ ಕೇಳಿಸುತ್ತಿತ್ತು.
ಆದರೆ ಜೀವನವೆಂಬುದು ಎಷ್ಟು ವಿಚಿತ್ರ ಅಲ್ವಾ…!
ನಾನು ನನ್ನ ಮನಸ್ಸಿನಲ್ಲಿ ಕಟ್ಟಿಕೊಂಡ ಲೋಕದ
ಕೇಂದ್ರಬಿಂದು ನೀನಾಗಿz.
ಆದರೆ ನಿನ್ನ ಕನಸುಗಳ ಅಂಚಿನಲ್ಲೂ
ನನ್ನ ನೆರಳು ಕಾಣಿಸಿಕೊಳ್ಳಲಿಲ್ಲ.
ನೀನು ನನ್ನ ಬದುಕಿನ ವಾಸ್ತವವಾಗಿz.
ನಾನು ಮಾತ್ರ ನಿನ್ನ ಅರಿವಿಗೂ ಬಾರದ ಒಂದು ಕಲ್ಪನೆಯಾಗಿ ಉಳಿದೆ.
ಈ ಸತ್ಯ ಮೊದಲು ನನಗೆ ನೋಯಿಸಿತು…
ನಂತರ ಅದೇ ನನ್ನ ಪ್ರೀತಿಯ ಅರ್ಥವನ್ನು ಕಲಿಸಿತು…!
ಯಾಕೆಂದರೆ ನಿಜವಾದ ಪ್ರೀತಿ ಎಂದರೆ
ಯಾರನ್ನಾದರೂ ನಮ್ಮದಾಗಿಸಿಕೊಳ್ಳುವುದು ಅಲ್ಲ.
ಅವರ ಸಂತೋಷದಲ್ಲಿ ನಮ್ಮ ಸಂತೋಷವನ್ನು ಕಂಡುಕೊಳ್ಳುವುದು.
ಅವರ ನಗುವನ್ನು ಕಾಪಾಡಲು ನಮ್ಮ ನೋವನ್ನು ಮರೆಮಾಚುವುದು.
ಪ್ರತಿಫಲದ ನಿರೀಕ್ಷೆಯಿಲ್ಲದೆ ಮನಸ್ಸನ್ನೆಲ್ಲ ಒಪ್ಪಿಸುವುದೇ ಪ್ರೀತಿ.
ಆ ಪಾಠವನ್ನು ನನಗೆ ಕಲಿಸಿದವಳು ನೀನು….
ನನ್ನ ಮನಸ್ಸಿನ ಸಿಂಹಾಸನದಲ್ಲಿ ರಾಣಿಯಾಗಿ ನೀನು ಕುಳಿತಾಗ,
ನಿನ್ನ ಸುಖವನ್ನು ಕಾಪಾಡುವ ಸಾಮಾನ್ಯ ಸೇವಕನಾಗಿರುವುದೇ
ನನಗೆ ದೊಡ್ಡ ಗೌರವವೆನಿಸಿತು.
ನಿನ್ನ ಕೈ ಹಿಡಿಯುವ ಭಾಗ್ಯ ದೊರೆಯದಿದ್ದರೂ,
ನೀನು ನಡೆಯುವ ದಾರಿಯ ಅಂಚಿನಲ್ಲಿ ನೆರಳಾಗಿ ನಿಲ್ಲುವ ಅವಕಾಶವೇ
ನನ್ನ ಪಾಲಿಗೆ ದೇವರ ವರದಾನವಾಗಿತ್ತು.
ಏಕೆಂದರೆ ಪ್ರೀತಿಯಲ್ಲಿ ಹಕ್ಕಿಗಿಂತ ಪ್ರಾರ್ಥನೆ ದೊಡ್ಡದು…
ಸ್ವಾಧೀನಕ್ಕಿಂತ ಸಮರ್ಪಣೆ ಶ್ರೇಷ್ಠ…
ಕೆಲವರು ಪ್ರೀತಿಯನ್ನು ಪಡೆಯಲು ಬದುಕುತ್ತಾರೆ.
ನಾನು ಮಾತ್ರ ಪ್ರೀತಿಯನ್ನು ಅನುಭವಿಸಲು ಬದುಕಿದೆ.
ನಿನ್ನನ್ನು ಪಡೆದಿದ್ದರೆ ನಾನು ಸಂತೋಷವಾಗಿರುತ್ತಿz.
ಆದರೆ ನಿನ್ನನ್ನು ಪ್ರೀತಿಸಲು ಅವಕಾಶ ಸಿಕ್ಕಿದ್ದರಿಂದ ನಾನು ಸಂಪೂರ್ಣನಾದೆ.
ನನ್ನ ಹೃದಯ ಒಂದು ದೇವಾಲಯವಾಗಿದ್ದರೆ
ಅದರ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿತಳಾದ ದೇವತೆ ನೀನು.
ಆ ದೇವಾಲಯದಲ್ಲಿ ಮತ್ತಾರಿಗೂ ಸ್ಥಾನವಿಲ್ಲ.
ಕಾಲ ಎಷ್ಟೇ ಬದಲಾಗಲಿ,
ಋತುಗಳು ಎಷ್ಟೇ ಬಣ್ಣ ಬದಲಿಸಲಿ,
ಬದುಕಿನ ದಾರಿಗಳು ನಮ್ಮನ್ನು ಎಷ್ಟೇ ದೂರ ಕರೆದೊಯ್ಯಲಿ,
ನನ್ನ ಹೃದಯದ ಬಡಿತದಲ್ಲಿ ಕೆತ್ತಲ್ಪಟ್ಟಿರುವ
ನಿನ್ನ ಹೆಸರನ್ನು ಯಾರೂ ಅಳಿಸಲಾರರು.
ಯಾಕೆಂದರೆ ನಿಜವಾದ ಪ್ರೀತಿ ಕಾಲದೊಂದಿಗೆ ಹಳೆಯದಾಗುವುದಿಲ್ಲ.
ಅದು ಪ್ರತಿದಿನವೂ ಹೊಸ ಅರ್ಥವನ್ನು ಪಡೆದುಕೊಳ್ಳುತ್ತದೆ.
ದೂರ ಹೆಚ್ಚಾದಷ್ಟೂ ಅದರ ಆಳ ಹೆಚ್ಚಾಗುತ್ತದೆ.
ಭೇಟಿಗಳು ಕಡಿಮೆಯಾದಷ್ಟೂ ನೆನಪುಗಳು ಇನ್ನಷ್ಟು ಜೀವಂತವಾಗುತ್ತವೆ.
ಕೆಲವೊಮ್ಮೆ ರಾತ್ರಿ ಮನವಾಗಿರುತ್ತದೆ.
ಆದರೆ ನನ್ನೊಳಗೆ ನಿನ್ನ ನೆನಪುಗಳ ಮಳೆ ಸುರಿಯುತ್ತಿರುತ್ತದೆ.
ಎಲ್ಲರೂ ನಿzಗೆ ಜಾರಿದ ಮೇಲೂ ನನ್ನ ಮನಸ್ಸು ನಿನ್ನೊಂದಿಗೆ ಮಾತಾಡುತ್ತಿರುತ್ತದೆ.
ಹೇಳಲಾಗದೆ ಉಳಿದ ಮಾತುಗಳು…,
ಕೇಳಲಾಗದೆ ಹೋದ ಪ್ರಶ್ನೆಗಳು..,
ಮುಟ್ಟಲಾಗದೆ ಉಳಿದ ಕನಸುಗಳು..
ಇವೆಲ್ಲವೂ ನನ್ನ ಹೃದಯದ ಒಂದು ಮೂಲೆಯಲ್ಲಿ ಇನ್ನೂ ಜೀವಂತವಾಗಿವೆ.
ನೀನು ಬಹುಶಃ ನನ್ನ ಬಗ್ಗೆ ಯೋಚಿಸದೇ ಇರಬಹುದು.
ನನ್ನ ನೆನಪು ನಿನ್ನ ದಿನಚರಿಯ ಒಂದು ಪುಟದಲ್ಲೂ ಇರದೇ ಇರಬಹುದು.
ಆದರೆ ನನ್ನ ಪ್ರತಿಯೊಂದು ದಿನವೂ ನಿನ್ನ ನೆನಪಿನಿಂದಲೇ ಆರಂಭವಾಗುತ್ತದೆ.
ಪ್ರತಿಯೊಂದು ರಾತ್ರಿ ನಿನ್ನ ಹೆಸರಿನೊಂದಿಗೆ ಮುಗಿಯುತ್ತದೆ.
ನನ್ನ ಜೀವನದ ಎಲ್ಲ ಋತುಗಳಲ್ಲೂ
ನೀನೇ ಸ್ಥಿರವಾಗಿರುವ ಏಕೈಕ ವಸಂತ.
ನಿನ್ನೊಂದಿಗೆ ಕಳೆದ ಕ್ಷಣಗಳು ಕಡಿಮೆಯಾಗಿರಬಹುದು.
ಆದರೆ ನಿನ್ನನ್ನು ನೆನೆದು ಕಳೆದ ಕ್ಷಣಗಳೇ ನನ್ನ ಬದುಕಿನ ಬಹುಭಾಗ.
ಕೆಲವರು ವರ್ಷಗಳ ಕಾಲ ಜೊತೆಯಲ್ಲಿದ್ದರೂ
ಒಬ್ಬರನ್ನೊಬ್ಬರು ಅರಿಯುವುದಿಲ್ಲ.
ಕೆಲವರು ಕ್ಷಣಮಾತ್ರ ಭೇಟಿಯಾದರೂ
ಜೀವಮಾನವಿಡೀ ಮನಸ್ಸಿನಲ್ಲಿ ನೆಲೆಸುತ್ತಾರೆ.
ನೀನು ನನ್ನ ಪಾಲಿಗೆ ಅಂತಹ ಶಾಶ್ವತ ಸಾನ್ನಿಧ್ಯ.
ಕೆಲವು ಸಂಬಂಧಗಳಿಗೆ ಹೆಸರುಗಳಿರುತ್ತವೆ.
ಕೆಲವು ಸಂಬಂಧಗಳಿಗೆ ಹಕ್ಕುಗಳಿರುತ್ತವೆ.
ಆದರೆ ಕೆಲವು ಪ್ರೀತಿಗಳಿಗೆ ಯಾವುದೂ ಇರುವುದಿಲ್ಲ.
ಅವು ಕೇವಲ ಮನಸ್ಸಿನೊಳಗೆ ಬೆಳಗುವ ದೀಪಗಳಂತೆ.
ಯಾರಿಗೂ ಕಾಣದಂತೆ ಉರಿಯುತ್ತಲೇ ಇರುತ್ತವೆ.
ನನ್ನ ಪ್ರೀತಿ ಕೂಡ ಅಂಥದೇ.
ಅದಕ್ಕೆ ಬೇಡಿಕೆ ಇಲ್ಲ..,
ದೂರು ಇಲ್ಲ…,
ನಿರೀಕ್ಷೆ ಇಲ್ಲ….
ಇರುವುದೊಂದೇ
ಅದು ಕೇವಲ ನಿನ್ನ ಸುಖಕ್ಕಾಗಿ ಪ್ರತಿದಿನವೂ
ಮನವಾಗಿ ಮಾಡುವ ಪ್ರಾರ್ಥನೆ.
ಕೆಲವು ಪ್ರೇಮಕಥೆಗಳು ಒಂದಾಗುವುದರಿಂದ ಸುಂದರವಾಗುತ್ತವೆ.
ಇನ್ನೂ ಕೆಲವು ದೂರ ಉಳಿದರೂ ಅಮರವಾಗುತ್ತವೆ.
ಒಟ್ಟಿಗೆ ಬದುಕಿದ ಕಥೆಗಳಿಗಿಂತ
ಮನಸ್ಸಿನಲ್ಲಿ ಜೀವಂತವಾಗಿಯೇ ಉಳಿದ ಕಥೆಗಳು ಹೆಚ್ಚು ಕಾಲ ಉಳಿಯುತ್ತವೆ.
ನಮ್ಮ ಕಥೆ ಯಾವ ಸಾಲಿನಲ್ಲಿ ಬರೆಯಲ್ಪಟ್ಟಿದೆಯೋ ನನಗೆ ತಿಳಿದಿಲ್ಲ.
ಆದರೆ ನನ್ನ ಜೀವನದ ಪ್ರತಿಯೊಂದು ಪುಟದಲ್ಲೂ
ಮೊದಲ ಅಕ್ಷರ ನಿನ್ನ ಹೆಸರೇ ಆಗಿರುತ್ತದೆ
ಎಂಬ ನಂಬಿಕೆ ಮಾತ್ರ ಎಂದಿಗೂ ಬದಲಾಗುವುದಿಲ್ಲ.
ಒಂದು ದಿನ ನನ್ನ ತಲೆ ಕೂದಲು ಬಿಳಿಯಾಗಬಹುದು…
ನನ್ನ ಹೆಜ್ಜೆಗಳು ನಿಧಾನವಾಗಬಹುದು…
ನನ್ನ ನೆನಪುಗಳು ಮಸುಕಾಗಬಹುದು…
ಆದರೆ ನಿನ್ನನ್ನು ಪ್ರೀತಿಸಿದ ಈ ಹೃದಯ
ತನ್ನ ಕರ್ತವ್ಯವನ್ನು ಎಂದಿಗೂ ಮರೆತುಕೊಳ್ಳುವುದಿಲ್ಲ.
ಏಕೆಂದರೆ …
ಕೆಲವು ಭಾವನೆಗಳಿಗೆ ವಯಸ್ಸಾಗುವುದಿಲ್ಲ.
ಅವು ಕೇವಲ ಇನ್ನಷ್ಟು ಪರಿಶುದ್ಧವಾಗುತ್ತವೆ.
ನನ್ನ ಕೊನೆಯ ಉಸಿರು ಎದೆಯಿಂದ ಹೊರಡುವ ಆ ಕ್ಷಣದಲ್ಲಿಯೂ
ನನ್ನ ಕಣ್ಣುಗಳು ಹುಡುಕುವುದು ನಿನ್ನನ್ನೇ…
ನನ್ನ ತುಟಿಗಳು ಉಚ್ಚರಿಸುವ ಕೊನೆಯ ಹೆಸರು
ನಿನ್ನದೇ ಆಗಿರುತ್ತದೆ.
ಅದು ಯಾವುದೋ ಹಠದಿಂದಲ್ಲ..
ಅದು ನನ್ನ ಅಸ್ತಿತ್ವದ ಸಹಜ ಸ್ವಭಾವ.
ಯಾಕೆಂದರೆ ನನ್ನ ಪಾಲಿಗೆ ಪ್ರೀತಿ ಬದುಕಿನ ಒಂದು ಅಧ್ಯಾಯವಲ್ಲ.
ಅದು ಇಡೀ ಬದುಕಿನ ಅರ್ಥ.
ನಾನು ಬದುಕಿದ್ದರೆ ನಿನ್ನನ್ನು ಪ್ರೀತಿಸುತ್ತಲೇ ಬದುಕುತ್ತೇನೆ.
ನಾನು ಇರದಿದ್ದರೂ ನನ್ನ ಪ್ರೀತಿಯ ಸುಗಂಧ
ಈ ಭೂಮಿಯ ಗಾಳಿಯಲ್ಲಿ ಎ ಉಳಿದುಕೊಂಡಿರುತ್ತದೆ.
ಯಾರಿಗೂ ಕಾಣದ ಒಂದು ಪ್ರಾರ್ಥನೆಯಾಗಿ..,
ಯಾರಿಗೂ ಕೇಳಿಸದ ಒಂದು ಹಾಡಾಗಿ…,
ಯಾರೂ ಓದದ ಒಂದು ಕವಿತೆಯಾಗಿ…
ಕೆಲವು ಪ್ರೇಮಗಳು ಗೆಲ್ಲುವುದಕ್ಕಾಗಿ ಹುಟ್ಟಿರುವುದಿಲ್ಲ.
ಅವು ಬದುಕನ್ನು ಪವಿತ್ರಗೊಳಿಸಲು ಹುಟ್ಟಿರುತ್ತವೆ.
ಮತ್ತೆ ಕೆಲವು ಕವಿತೆಗಳು ಎಂದಿಗೂ ಮುಗಿಯುವುದಿಲ್ಲ…
ಅವುಗಳ ಹೆಸರೇ ನೀನು…
