ನಾಯಿ ಎಂದರೆ ಬರೀ ಸಾಕುಪ್ರಾಣಿಯಲ್ಲ | ನಿಸ್ವಾರ್ಥ ಪ್ರೀತಿಯ ಮೂಕ ಸಂಗಾತಿ |ಮನೆಯ ಹೃದಯದ ಸದಸ್ಯ…
ಮನುಷ್ಯನ ಬದುಕಿನಲ್ಲಿ ಕೆಲವು ಸಂಬಂಧಗಳಿಗೆ ಮಾತುಗಳ ಅಗತ್ಯವೇ ಇರುವುದಿಲ್ಲ. ಕಣ್ಣೋಟದ ಭಾವನೆ ಅರ್ಥವಾಗುತ್ತದೆ. ಮನದ ಸಾಂತ್ವನ ಸಿಗುತ್ತದೆ. ದೂರವಿದ್ದರೂ ಪ್ರೀತಿ ಮಾತ್ರ ದೂರವಾಗುವುದಿಲ್ಲ. ಮನುಷ್ಯ ಮತ್ತು ಶ್ವಾನದ ನಡುವಿನ ಸಂಬಂಧವೂ ಅಂತಹz. ಪ್ರತಿಫಲದ ನಿರೀಕ್ಷೆಯಿಲ್ಲದೆ ಪ್ರೀತಿಸುವ, ತನ್ನ ಒಡೆಯನ ಸಂತೋಷದಲ್ಲಿ ಸಂತೋಷಪಡುವ, ದುಃಖದಲ್ಲಿ ಮನವಾಗಿ ಪಕ್ಕದಲ್ಲಿ ಕುಳಿತು ಸಾಂತ್ವನ ನೀಡುವ ಶ್ವಾನ ನಿಜಕ್ಕೂ ಮನುಷ್ಯನ ಅತ್ಯಂತ ನಿಷ್ಠಾವಂತ ಸಂಗಾತಿ.
ಪ್ರತಿ ವರ್ಷ ಆಗಸ್ಟ್ ೨೬ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಶ್ವಾನ ದಿನ, ನಾಯಿಗಳ ಮೇಲಿನ ಪ್ರೀತಿ ಮತ್ತು ಕಾಳಜಿಯನ್ನು ವ್ಯಕ್ತಪಡಿಸುವುದಷ್ಟೇ ಅಲ್ಲದೆ, ಅವು ಸಮಾಜಕ್ಕೆ ನೀಡುತ್ತಿರುವ ಅಮೂಲ್ಯ ಕೊಡುಗೆಯನ್ನು ಸ್ಮರಿಸುವ ದಿನವೂ ಹೌದು. ಬೀದಿ ನಾಯಿಗಳು, ಆಶ್ರಯ ಕೇಂದ್ರಗಳಲ್ಲಿರುವ ಶ್ವಾನಗಳು ಹಾಗೂ ಆರೈಕೆ ಮತ್ತು ಆಶ್ರಯದ ಅಗತ್ಯವಿರುವ ನಾಯಿಗಳ ಬಗ್ಗೆ ಜಾಗೃತಿ ಮೂಡಿಸುವುದೂ ಈ ದಿನದ ಪ್ರಮುಖ ಉzಶವಾಗಿದೆ.
ಪ್ರಾಣಿ ಕಲ್ಯಾಣ ಕಾರ್ಯಕರ್ತೆ ಮತ್ತು ಪೆಟ್ ಲೈಫ್ಸ್ಟೈಲ್ ತe ಕೊಲೀನ್ ಪೈಜ್ ಅವರು ೨೦೦೪ರಲ್ಲಿ ಈ ದಿನಾಚರಣೆಗೆ ಚಾಲನೆ ನೀಡಿದರು. ಆ.೨೬ರಂದು ಅವರ ಕುಟುಂಬವು ಶೆಲ್ಟಿ ಎಂಬ ತನ್ನ ಮೊದಲ ನಾಯಿಯನ್ನು ಪ್ರಾಣಿ ಆಶ್ರಯ ಕೇಂದ್ರದಿಂದ ದತ್ತು ಪಡೆದ ನೆನಪಿಗಾಗಿ ಈ ದಿನವನ್ನು ಆಯ್ಕೆ ಮಾಡಲಾಯಿತು. ಅಂದಿನಿಂದ ಈ ದಿನವು ವಿಶ್ವದಾದ್ಯಂತ ನಾಯಿಗಳ ಮೇಲಿನ ಪ್ರೀತಿ, ಕಾಳಜಿ ಮತ್ತು ಜವಾಬ್ದಾರಿಯ ಸಂದೇಶವನ್ನು ಸಾರುತ್ತಿದೆ.
ನಾಯಿ ಎಂದರೆ ಕೇವಲ ಸಾಕುಪ್ರಾಣಿ ಅಲ್ಲ. ಅನೇಕ ಕುಟುಂಬಗಳಿಗೆ ಅದು ಮನೆಯ ಹೃದಯದ ಸದಸ್ಯನೇ ಆಗಿರುತ್ತದೆ. ಮನುಷ್ಯನ ಧ್ವನಿ, ವಾಸನೆ, ಹೆಜ್ಜೆಯ ಸದ್ದು ಮತ್ತು ಹಾವಭಾವಗಳನ್ನೇ ಗುರುತಿಸುವ ಅದರ ಸೂಕ್ಷ್ಮ ಗ್ರಹಿಕೆ ಅಚ್ಚರಿ ಮೂಡಿಸುತ್ತದೆ.
ಬಹುಕಾಲದ ಬಳಿಕ ಮನೆಗೆ ಮರಳಿದ ತನ್ನ ಒಡೆಯನನ್ನು ಕಂಡ ತಕ್ಷಣ ಬಾಲ ಅಡಿಸುತ್ತಾ, ಉತ್ಸಾಹದಿಂದ ಓಡಿ ಬಂದು ಸ್ವಾಗತಿಸುವ ನಾಯಿಯ ಆ ಕ್ಷಣವನ್ನು ಒಮ್ಮೆ ಗಮನಿಸಿ ನೋಡಿ. ಅಲ್ಲಿ ಯಾವುದೇ ಸ್ವಾರ್ಥವಿಲ್ಲ. ಯಾವುದೇ ಲೆಕ್ಕಾಚಾರವಿಲ್ಲ. ಇರುವುದೆ ನಿಷ್ಕಲ್ಮಷ ಪ್ರೀತಿ ಮಾತ್ರ.
ನಾವು ಸಂತೋಷದಲ್ಲಿzಗ ನಮ್ಮೊಂದಿಗೆ ಕುಣಿದಾಡುವ ನಾಯಿ, ನಾವು ದುಃಖದಲ್ಲಿzಗ ಮನವಾಗಿ ನಮ್ಮ ಪಕ್ಕದಲ್ಲಿ ಕುಳಿತುಕೊಳ್ಳುತ್ತದೆ. ಒಂಟಿತನ ಕಾಡಿದಾಗ ಅದು ಸಂಗಾತಿಯಾಗುತ್ತದೆ. ಕೆಲವೊಮ್ಮೆ ಮನುಷ್ಯರ ಮಾತುಗಳಿಂದ ಸಿಗದ ನೆಮ್ಮದಿ, ಅದರ ತಲೆಯ ಮೇಲೆ ಕೈಯಾಡಿಸಿದಾಗ ಸಿಗುತ್ತದೆ.
ನಾಯಿಯನ್ನು ಮುzಡುವುದು, ಅದರೊಂದಿಗೆ ಆಟವಾಡುವುದು ಅಥವಾ ಆತ್ಮೀಯವಾಗಿ ಸಮಯ ಕಳೆಯುವುದು ಮನುಷ್ಯನಲ್ಲಿ ಸಂತೋಷ ಮತ್ತು ನೆಮ್ಮದಿಯ ಭಾವನೆ ಮೂಡಿಸಬಹುದು. ಮನುಷ್ಯ-ನಾಯಿ ನಡುವಿನ ಕಣ್ಣಿನ ಸಂಪರ್ಕ ಮತ್ತು ಸಾಮಾಜಿಕ ಬಂಧದಲ್ಲಿ ಆಕ್ಸಿಟೋಸಿನ್ ಸೇರಿದಂತೆ ಕೆಲವು ಹಾರ್ಮೋನುಗಳ ಪಾತ್ರವಿದೆ ಎಂದು ಸಂಶೋಧನೆಗಳು ಸೂಚಿಸಿವೆ. ಅಂದರೆ ಈ ಬಾಂಧವ್ಯ ಕೇವಲ ಭಾವನೆಯಲ್ಲ. ಅದರ ಹಿಂದೆ ದೈಹಿಕ ಮತ್ತು ಮಾನಸಿಕ ಪರಿಣಾಮಗಳೂ ಇವೆ.
ನಾಯಿ ತನ್ನ ಕುಟುಂಬದೊಂದಿಗೆ ಗಾಢವಾದ ಬಾಂಧವ್ಯ ಬೆಳೆಸಿಕೊಳ್ಳುತ್ತದೆ. ಮನುಷ್ಯನ ಸ್ಥಿತಿ, ಸಂಪತ್ತು, ಯಶಸ್ಸು ಅಥವಾ ವೈಫಲ್ಯ ಯಾವುದನ್ನೂ ಪರಿಗಣಿಸದೆ ಅದು ಪ್ರೀತಿಯನ್ನು ನೀಡುತ್ತದೆ. ಅದಕ್ಕಾಗಿಯೇ ನಾಯಿಯ ಪ್ರೀತಿ ನಿರ್ವ್ಯಾಜ ಪ್ರೀತಿ ಎಂದು ಕರೆಯಲ್ಪಡುತ್ತದೆ.
ಶ್ವಾನಪ್ರಿಯರು ನಾಯಿಯ ಹಾವಭಾವಗಳನ್ನು ಅರ್ಥ ಮಾಡಿಕೊಳ್ಳಲು ಕಲಿಯುತ್ತಾರೆ. ಅದೇ ರೀತಿ ನಾಯಿ ಕೂಡ ಮನುಷ್ಯನ ಧ್ವನಿ, ದೇಹಭಾಷೆ ಮತ್ತು ಮನಸ್ಥಿತಿಯನ್ನು ಗ್ರಹಿಸಲು ಕಲಿಯುತ್ತದೆ. ಹೀಗೆ ದಿನಗಳು ಉರುಳಿದಂತೆ ಇಬ್ಬರ ನಡುವಿನ ಭಾಷೆ ಮಾತುಗಳನ್ನು ಮೀರಿಸುತ್ತದೆ. ಒಂದು ನೋಟ, ಒಂದು ಸ್ಪರ್ಶ, ಒಂದು ಸಣ್ಣ ಸನ್ನೆ ಸಾಕಾಗುತ್ತದೆ.
ಮನುಷ್ಯನು ನಾಯಿಗೆ ಆಹಾರ, ಆಶ್ರಯ, ವೈದ್ಯಕೀಯ ಆರೈಕೆ ಮತ್ತು ಭದ್ರತೆಯನ್ನು ನೀಡುತ್ತಾನೆ. ಅದಕ್ಕೆ ಪ್ರತಿಯಾಗಿ ನಾಯಿ ನಿಷ್ಠೆ, ಆತ್ಮೀಯತೆ ಮತ್ತು ಪ್ರೀತಿಯನ್ನು ನೀಡುತ್ತದೆ. ಈ ಪರಸ್ಪರ ನಂಬಿಕೆಯೇ ಮನುಷ್ಯ-ನಾಯಿ ಸಂಬಂಧವನ್ನು ವಿಶಿಷ್ಟವಾಗಿಸುತ್ತದೆ.
ನಾಯಿಗಳ ಕೊಡುಗೆ ಮನೆಯ ಅಂಗಳಕ್ಕೆ ಮಾತ್ರ ಸೀಮಿತವಾಗಿಲ್ಲ. ಪೊಲೀಸ್ ಮತ್ತು ಸೇನಾ ಕಾರ್ಯಾಚರಣೆಗಳಿಂದ ಹಿಡಿದು ವಿಪತ್ತು ನಿರ್ವಹಣೆಯವರೆಗೆ ಅವುಗಳ ಸೇವೆಯ ವ್ಯಾಪ್ತಿ ವಿಶಾಲವಾಗಿದೆ.
ಮಾದಕ ವಸ್ತುಗಳು ಮತ್ತು ಸ್ಫೋಟ ಕಗಳ ಪತ್ತೆ, ನಾಪತ್ತೆಯಾದವರ ಶೋಧ, ಅಪರಾಧ ತನಿಖೆ, ವಿಪತ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತರಬೇತಿ ಪಡೆದ ಶ್ವಾನಗಳು ಮನುಷ್ಯರಿಗೆ ನೆರವಾಗುತ್ತಿವೆ. ದೃಷ್ಟಿಹೀನರಿಗೆ ಮಾರ್ಗದರ್ಶಕರಾಗುವ ನಾಯಿಗಳಿಂದ ಹಿಡಿದು ಆಸ್ಪತ್ರೆಗಳು ಮತ್ತು ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸಾ ಸಹಾಯಕ ಪ್ರಾಣಿಗಳಾಗಿ ಸೇವೆ ಸಲ್ಲಿಸುವ ನಾಯಿಗಳವರೆಗೆ ಅವುಗಳ ಕೊಡುಗೆ ಅನನ್ಯ.
ಮನೆಯ ಭದ್ರತೆಯಲ್ಲೂ ನಾಯಿಗಳ ಪಾತ್ರ ಮಹತ್ವದ್ದು. ಮಕ್ಕಳೊಂದಿಗೆ ಅವು ಬೆಳೆಸಿಕೊಳ್ಳುವ ಆತ್ಮೀಯ ಬಂಧವೂ ವಿಶೇಷ. ತಮ್ಮ ಕುಟುಂಬದ ಸದಸ್ಯರಿಗೆ ಅಪಾಯ ಎದುರಾದಾಗ ಎಚ್ಚರಿಸುವುದು, ಅಪರಿಚಿತರ ಉಪಸ್ಥಿತಿಯನ್ನು ಗುರುತಿಸುವುದು ಸೇರಿದಂತೆ ಹಲವು ರೀತಿಯಲ್ಲಿ ಅವು ಮನುಷ್ಯರಿಗೆ ನೆರವಾಗುತ್ತವೆ.
ನಮ್ಮ ಮನೆಯಂಗಳದಲ್ಲಿ ನಮ್ಮ ರಕ್ಷಕನಾಗಿ ನಮ್ಮೊಡನೆ ವಾಸಿಸುವ ನಾಯಿಗಳು ಒಂದೆಡೆಯಾದರೆ, ಮತ್ತೊಂದೆಡೆ ಹಸಿವು, ರೋಗ, ಅಪಘಾತ, ಹಿಂಸೆ ಮತ್ತು ನಿರ್ಲಕ್ಷ್ಯವನ್ನು ಎದುರಿಸುತ್ತಾ ಬೀದಿಯಲ್ಲಿ ಬದುಕು ಸಾಗಿಸುವ ಸಾವಿರಾರು ಶ್ವಾನಗಳಿವೆ. ಹೀಗೆ ಬೀದಿಗಳಲ್ಲಿ ಮತ್ತು ಆಶ್ರಯ ಕೇಂದ್ರಗಳಲ್ಲಿರುವ ಶ್ವಾನಗಳಿಗೂ ಮಮತೆ ಬೇಕು. ಒಂದು ಸುರಕ್ಷಿತ ಮನೆ ಬೇಕು. ತನ್ನನ್ನು ಪ್ರೀತಿಯಿಂದ ಕರೆಯುವ ಒಂದು ಧ್ವನಿ ಬೇಕು. ನನ್ನವನು ಎಂದು ಹೇಳಿಕೊಳ್ಳುವ ಒಬ್ಬ ಮನುಷ್ಯ ಬೇಕು. ಆದ್ದರಿಂದ ಶ್ವಾನ ದಿನವು ಕೇವಲ ನಮ್ಮ ಸಾಕು ನಾಯಿಗಳಿಗೆ ಮುದ್ದು ಮಾಡುವ ದಿನವಾಗಬಾರದು. ನಮ್ಮ ಸುತ್ತಲಿರುವ ಪ್ರತಿಯೊಂದು ಶ್ವಾನದ ಬದುಕಿನ ಬಗ್ಗೆ ಕಾಳಜಿ ವಹಿಸುವ ದಿನವಾಗಬೇಕು.
ಹಸಿದಿರುವ ನಾಯಿಗೆ ಸಾಧ್ಯವಾದಷ್ಟು ಆಹಾರ ನೀಡುವುದು, ಗಾಯಗೊಂಡ ಶ್ವಾನವನ್ನು ಪಶುವೈದ್ಯರ ಬಳಿಗೆ ಕರೆದೊಯ್ಯುವುದು, ಸಾಧ್ಯವಾದರೆ ಆಶ್ರಯ ಕೇಂದ್ರದಿಂದ ನಾಯಿಯನ್ನು ದತ್ತು ಪಡೆಯುವುದು, ಬೀದಿ ನಾಯಿಗಳೊಂದಿಗೆ ಮಾನವೀಯವಾಗಿ ವರ್ತಿಸುವುದು. ಇವೆಲ್ಲವೂ ಸಣ್ಣ ಹೆಜ್ಜೆಗಳಂತೆ ಕಾಣಬಹುದು. ಆದರೆ ಒಂದು ಮೂಕ ಜೀವಿಯ ಬದುಕಿನಲ್ಲಿ ಅವು ಬಹುದೊಡ್ಡ ಅರ್ಥವನ್ನು ಹೊಂದಿರಬಹುದು.
ಭಾರತದಂತಹ ದೇಶದಲ್ಲಿ ಸಾಕು ನಾಯಿಗಳ ಕಲ್ಯಾಣದ ಜೊತೆಗೆ ಬೀದಿ ನಾಯಿಗಳ ಕಲ್ಯಾಣವೂ ಸಮಾನ ಮಹತ್ವ ಹೊಂದಿದೆ. ಜವಾಬ್ದಾರಿಯುತ ಸಾಕಾಣಿಕೆ, ಲಸಿಕಾಕರಣ, ಸಂತಾನೋತ್ಪತ್ತಿ ನಿಯಂತ್ರಣ ಮತ್ತು ಸೂಕ್ತ ವೈದ್ಯಕೀಯ ಆರೈಕೆಯಂತಹ ಕ್ರಮಗಳು ಮನುಷ್ಯ-ಶ್ವಾನ ಸಹಬಾಳ್ವೆಗೆ ನೆರವಾಗುತ್ತವೆ.
ನಾಯಿಗಳಿಂದ ಎದುರಾಗ ಬಹುದಾದ ಸಮಸ್ಯೆಗಳನ್ನು ನಿರ್ಲಕ್ಷಿಸುವುದೂ ಸರಿಯಲ್ಲ. ಅವುಗಳ ಮೇಲೆ ಕ್ರೌರ್ಯ ಎಸಗುವುದೂ ಪರಿಹಾರವಲ್ಲ. ಸಾರ್ವಜನಿಕ ಆರೋಗ್ಯ ಮತ್ತು ಪ್ರಾಣಿಗಳ ಕಲ್ಯಾಣ ಎರಡನ್ನೂ ಗಮನದಲ್ಲಿಟ್ಟುಕೊಂಡು ಮಾನವೀಯ ಹಾಗೂ ಜವಾಬ್ದಾರಿಯುತ ರೀತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸಮಾಜದ ಕರ್ತವ್ಯ.
ನಾಯಿಗಳು ನಮ್ಮಿಂದ ಕೇಳುವುದು ದೊಡ್ಡದೇನಲ್ಲ. ಒಂದು ತುತ್ತು ಆಹಾರ, ಒಂದು ಹನಿ ನೀರು, ಗಾಯವಾದಾಗ ಒಂದು ನೆರವು, ಭಯಗೊಂಡಾಗ ಒಂದು ಸುರಕ್ಷಿತ ಜಾಗ ಮತ್ತು ಮುಖ್ಯವಾಗಿ ಸ್ವಲ್ಪವೇ ಸ್ವಲ್ಪ ಪ್ರೀತಿ.
ಮನುಷ್ಯನಿಗೆ ನಾಯಿ ನೀಡುವ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಏಕೆಂದರೆ ಅದು ಸಂಪತ್ತನ್ನು ನೋಡುವುದಿಲ್ಲ, ಸ್ಥಾನಮಾನವನ್ನು ನೋಡುವುದಿಲ್ಲ, ಯಶಸ್ಸನ್ನು ಅಳೆಯುವುದಿಲ್ಲ. ಮನುಷ್ಯ ಹೇಗಿzನೋ ಹಾಗೆಯೇ ಸ್ವೀಕರಿಸುವ ಆ ನಿಸ್ವಾರ್ಥ ಪ್ರೀತಿಯೇ ನಾಯಿಯ ದೊಡ್ಡತನ.
ಈ ಶ್ವಾನ ದಿನದಂದು ನಮ್ಮ ಮನೆಯಲ್ಲಿರುವ ನಾಯಿಯನ್ನು ಮಾತ್ರ ನೆನೆಯದೆ, ನಮ್ಮ ಬೀದಿಯ ಮೂಕ ಜೀವಿಯ ಕಣ್ಣನ್ನೂ ಒಮ್ಮೆ ನೋಡೋಣ. ಅದರ ಕಣ್ಣಲ್ಲಿ ಹಸಿವಿದ್ದರೆ ಆಹಾರ ನೀಡೋಣ. ನೋವಿದ್ದರೆ ನೆರವಾಗೋಣ. ಭಯವಿದ್ದರೆ ಭರವಸೆಯಾಗೋಣ. ಪ್ರತಿಯೊಂದು ನಾಯಿಗೂ ಪ್ರೀತಿ, ಆರೈಕೆ ಮತ್ತು ಸುರಕ್ಷಿತ ಬದುಕಿನ ಹಕ್ಕಿದೆ. ಮನುಷ್ಯನಿಗೆ ನಿಸ್ವಾರ್ಥ ಪ್ರೀತಿಯನ್ನು ಹಂಚುವ ಆ ಮೂಕ ಜೀವಿಗಳ ಕಣ್ಣಲ್ಲಿ ನೆಮ್ಮದಿ ಮೂಡಿಸುವ ಸಮಾಜವೇ ನಿಜವಾದ ಮಾನವೀಯ ಸಮಾಜ.
ಈ ಶ್ವಾನ ದಿನದಂದು ಅವು ನಮಗೆ ನೀಡಿದ ಪ್ರೀತಿಯನ್ನು ಕೇವಲ ನೆನಪಿಸಿಕೊಳ್ಳದೆ, ಅವುಗಳ ಬದುಕಿನ ಮೇಲಿನ ನಮ್ಮ ಜವಾಬ್ದಾರಿಯನ್ನೂ ಹೃದಯಪೂರ್ವಕವಾಗಿ ಸ್ವೀಕರಿಸೋಣವೇ…?
