ವೀರ ಮದಕರಿ ನಾಯಕನ ಆದರ್ಶಗಳು ಸಮಾಜಕ್ಕೆ ಪ್ರೇರಣೆ: ಸಂಸದ ರಾಘವೇಂದ್ರ
ಶಿಕಾರಿಪುರ : ವೀರ ಮದಕರಿ ನಾಯಕರು ಧೈರ್ಯ, ಸ್ವಾಭಿಮಾನ ಹಾಗೂ ನಾಡಪ್ರೇಮದ ಪ್ರತೀಕವಾಗಿದ್ದು, ಕರ್ನಾಟಕದ ಇತಿಹಾಸದಲ್ಲಿ ಚಿತ್ರದುರ್ಗದ ಪಾಳೆಯಗಾರರಿಗೆ ವಿಶಿಷ್ಟ ಸ್ಥಾನವಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ವಿವಿಧ ವಾಲ್ಮೀಕಿ ಸಮಾಜದ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜವೀರ ಮದಕರಿ ನಾಯಕರ ೨೮೪ನೇ ಜಯಂತ್ಯುತ್ಸವದಲ್ಲಿ ವೀರ ಮದಕರಿ ನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ವೀರ ಮದಕರಿ ನಾಯಕರ ಬದುಕು, ಹೋರಾಟ ಹಾಗೂ ಪರಂಪರೆ ಚಿತ್ರದುರ್ಗದ ಇತಿಹಾಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದೆ. ಚಿತ್ರದುರ್ಗದ ಕೋಟೆಯ ರಕ್ಷಣೆ, ಯುದ್ಧತಂತ್ರ ಹಾಗೂ ಸ್ವತಂತ್ರ ಆಡಳಿತದ ಹೋರಾಟಗಳೊಂದಿಗೆ ಅವರ ಹೆಸರು ಬೆಸೆದುಕೊಂಡಿದೆ. ನಾಯಕ ವಂಶದ ಪಾಳೆಯಗಾರರು ಆಡಳಿತ ಮತ್ತು ಸೈನಿಕ ಸಾಮರ್ಥ್ಯಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಅವರ ಶೌರ್ಯ, ಸಾಹಸ ಮತ್ತು ಸ್ವಾಭಿಮಾನದ ಆದರ್ಶಗಳು ಇಂದಿಗೂ ಜನಮಾನಸದಲ್ಲಿ ಗೌರವದ ಸ್ಥಾನ ಪಡೆದಿವೆ ಎಂದರು.
ನಾಡಿನ ಮಹಾನ್ ವೀರರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಹುಚ್ಚುರಾಯಸ್ವಾಮಿ ದೇವಸ್ಥಾನ ದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಿ ಸಿಹಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಾಲ್ಮೀಕಿ ಯುವ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸಂತೋಷ್ ಫಕೀರಪ್ಪ, ನಟರಾಜ್ ಬಗನಗಟ್ಟೆ, ಬಸವರಾಜಪ್ಪ ನೆಲವಾಗಿಲು, ರಾಜು ಹೊಸ ನಗರ, ಗೋಣಿ ಮಾಲತೇಶ್, ಭಂಡಾರಿ ಮಾಲತೇಶ್, ರಾಘವೇಂದ್ರ ನಾಯ್ಕ ಸೇರಿದಂತೆ ವಿವಿಧ ಸಂಘಟನೆಗಳ ಪದಾಽಕಾರಿಗಳು ಉಪಸ್ಥಿತರಿದ್ದರು.
