ತಾಜಾ ಸುದ್ದಿ

ಶಿವಮೊಗ್ಗ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿಶ್ರೀ ಪ್ರಭುಲಿಂಗ ಕವಳಿಕಟ್ಟಿ, ಮಾನ್ಯ ಜಿಲ್ಲಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ ಇವರು ನೀಡಿದ ಸಂದೇಶ

Share Below Link

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಶಿವಮೊಗ್ಗ ಜಿಲ್ಲೆಯ ಸಹೋದರ ಸಹೋದರಿಯರೇ, ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿರುವ ಗೌರವಾನ್ವಿತ ಜನಪ್ರತಿನಿಧಿಗಳೇ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರೇ, ಗಣ್ಯರೇ, ಅಧಿಕಾರಿ ಮಿತ್ರರೇ, ಸಂಘ-ಸಂಸ್ಥೆಗಳ ಪ್ರತಿನಿಧಿಗಳೇ, ಮಾಧ್ಯಮ ಮಿತ್ರರೇ, ವಿದ್ಯಾರ್ಥಿ-ವಿದ್ಯಾರ್ಥಿನಿಯರೇ ಹಾಗೂ ಶಿವಮೊಗ್ಗ ಜಿಲ್ಲೆಯ ಸಮಸ್ತ ನಾಗರಿಕ ಬಂಧುಗಳೇ ತಮಗೆಲ್ಲರಿಗೂ ನನ್ನ ಆತ್ಮೀಯ ವಂದನೆಗಳು.

ಕನ್ನಡದ ಕಂಪು, ಭಾಷೆಯ ಸೊಗಡು, ಸಾಹಿತ್ಯದ ಶ್ರೀಮಂತಿಕೆ, ಕಲೆ ಮತ್ತು ಸಂಸ್ಕೃತಿಯ ವೈಭವವನ್ನು ನಾಡಿನ ಎಲ್ಲರೂ ಸಡಗರ-ಸಂಭ್ರಮಗಳಿಂದ ಆಚರಿಸುತ್ತಿದ್ದೇವೆ. ಜಾತಿ-ಮತ-ಬಾಷೆ ಬಣ್ಣಗಳ ಹಂಗಿಲ್ಲದೆ ಆಚರಿಸುವ ಹಬ್ಬ ಇದಾಗಿದೆ. ಈ ದಿನದಂದು ನಾವೆಲ್ಲರೂ ಕನ್ನಡದ ಉಳಿವಿಗೆ ಸಂಕಲ್ಪ ಮಾಡಬೇಕಾಗಿದೆ.

ನವೆಂಬರ್ 1 ಕನ್ನಡಿಗರ ಪಾಲಿಗೆ ಕೇವಲ ಒಂದು ದಿನಾಂಕವಲ್ಲ. ಇದು ನೂರಾರು ವರ್ಷಗಳ ಹೋರಾಟ, ತ್ಯಾಗ, ಕನಸು ಮತ್ತು ಕನ್ನಡಿಗರ ಒಗ್ಗಟ್ಟಿನ ಸಂಕೇತವಾಗಿದೆ. ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ 1956ರ ನವೆಂಬರ್ 1ರಂದು ಮೈಸೂರು ರಾಜ್ಯ ಉದಯವಾಯಿತು. ನಂತರ 1973ರ ನವೆಂಬರ್ 1ರಂದು ಕರ್ನಾಟಕ ಎಂದು ಮರುನಾಮಕರಣಗೊಂಡಿತು. ಈ ಐತಿಹಾಸಿಕ ದಿನವು ನಮ್ಮ ಭಾಷಾ ಏಕತೆ, ನಾಡಿನ ಅಸ್ಮಿತೆ ಮತ್ತು ಸಾಂಸ್ಕೃತಿಕ ಸ್ವಾಭಿಮಾನದ ಪ್ರತೀಕವಾಗಿದೆ.

ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಕುವೆಂಪು, ಆಲೂರು ವೆಂಕಟರಾವ್, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಐಯ್ಯಂಗಾರ್‌, ಬಿ.ಎಂ.ಶ್ರೀಕಂಠಯ್ಯ ಸೇರಿದಂತೆ ಅನೇಕ ಮಹನೀಯರು, ಕನ್ನಡಪರ ಹೋರಾಟಗಾರರು, ಸಾಹಿತಿಗಳು, ಕಲಾವಿದರು ಹಾಗೂ ನಾಡು-ನುಡಿಯ ಸೇವಕರನ್ನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸೋಣ.

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಶಾಸನಗಳು, ವಚನ ಸಾಹಿತ್ಯ, ದಾಸ ಸಾಹಿತ್ಯ, ಕಾವ್ಯ ಪರಂಪರೆ ಮತ್ತು ಆಧುನಿಕ ಸಾಹಿತ್ಯದ ಮೂಲಕ ಕನ್ನಡವು ತನ್ನ ವಿಶಿಷ್ಟತೆಯನ್ನು ಜಗತ್ತಿಗೆ ಪರಿಚಯಿಸಿದೆ. ಪಂಪ, ರನ್ನ, ಪೊನ್ನರಂತಹ ಆದಿಕವಿಗಳಿಂದ ಹಿಡಿದು ಬಸವಣ್ಣ, ಅಕ್ಕಮಹಾದೇವಿ, ಕನಕದಾಸ, ಪುರಂದರದಾಸರವರೆಗೆ ಕನ್ನಡ ಸಾಹಿತ್ಯದ ಪರಂಪರೆ ಮಾನವೀಯತೆ, ಸಮಾನತೆ, ಭಕ್ತಿ ಮತ್ತು ವೈಚಾರಿಕತೆಯ ಸಂದೇಶವನ್ನು ಸಾರಿದೆ. ಕನ್ನಡ ಸಾರಸ್ವತ ಲೋಕಕ್ಕೆ ಜಿ.ಎಸ್.ಶಿವರುದ್ರಪ್ಪನವರಂತಹ ರಾಷ್ಟ್ರಕವಿಯನ್ನು ಕೊಟ್ಟ ಹಿರಿಮೆ ಅಷ್ಟೇ ಅಲ್ಲ ಕುವೆಂಪು ಮತ್ತು ಯು.ಆರ್.ಅನಂತಮೂರ್ತಿ ಅವರಂತಹ ಇಬ್ಬರು ಜ್ಞಾನಪೀಠ ಪುರಸ್ಕೃತರನ್ನು ನಾಡಿಗೆ ಪರಿಚಯಿಸಿದ, ಮೂರು ಜನ ಮುಖ್ಯಮಂತ್ರಿಗಳನ್ನು ಈ ನಾಡಿಗೆ ನೀಡಿದ ಹಿರಿಮೆ ಶಿವಮೊಗ್ಗ ಜಿಲ್ಲೆಯದ್ದು. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಕನ್ನಡ ಸಾಹಿತ್ಯದ ಸಾಧನೆ ನಮ್ಮೆಲ್ಲರ ಹೆಮ್ಮೆಯಾಗಿದೆ.

ಕನ್ನಡವೆಂದರೆ ಕೇವಲ ಸಂವಹನದ ಭಾಷೆಯಲ್ಲ; ಅದು ನಮ್ಮ ಭಾವನೆ, ಬದುಕಿನ ಕ್ರಮ, ಸಂಸ್ಕೃತಿ ಮತ್ತು ಸ್ವಾಭಿಮಾನದ ಪ್ರತಿಬಿಂಬ. ಕನ್ನಡದ ಮೇಲಿನ ಅಭಿಮಾನ ನಮ್ಮ ದಿನನಿತ್ಯದ ಬದುಕಿನಲ್ಲಿ ವ್ಯಕ್ತವಾಗಬೇಕು. ಮನೆಗಳಲ್ಲಿ, ಶಾಲೆಗಳಲ್ಲಿ, ಕಚೇರಿಗಳಲ್ಲಿ ಮತ್ತು ಸಾರ್ವಜನಿಕ ಜೀವನದಲ್ಲಿ ಕನ್ನಡದ ಬಳಕೆ ಹೆಚ್ಚಾಗಬೇಕು. ಕನ್ನಡವನ್ನು ಪ್ರೀತಿಸುವುದರ ಜೊತೆಗೆ ಇತರ ಭಾಷೆಗಳನ್ನೂ ಗೌರವಿಸುವ ವಿಶಾಲ ಮನೋಭಾವ ನಮ್ಮದಾಗಬೇಕು.

ಮಲೆನಾಡಿನ ಹಸಿರು ಸಿರಿಯ ಮಡಿಲಲ್ಲಿರುವ ಶಿವಮೊಗ್ಗ ಜಿಲ್ಲೆ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದ ಪರಂಪರೆಯ ಶ್ರೀಮಂತ ನೆಲವಾಗಿದೆ. ಈ ಜಿಲ್ಲೆಯ ಹೆಮ್ಮೆಯ ರಾಷ್ಟ್ರಕವಿ ಕುವೆಂಪು ಅವರು ಸಾರಿದ ವಿಶ್ವಮಾನವ ಸಂದೇಶವು ಇಡೀ ಮಾನವಕುಲಕ್ಕೆ ದಾರಿದೀಪವಾಗಿದೆ. ಜಾತಿ, ಧರ್ಮ, ಭಾಷೆ ಮತ್ತು ಪ್ರದೇಶಗಳ ಎಲ್ಲೆಗಳನ್ನು ಮೀರಿ ಮನುಷ್ಯತ್ವವೇ ಶ್ರೇಷ್ಠ ಎಂಬ ಅವರ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯ ಮಣ್ಣಿನಲ್ಲಿ ಅರಳಿದ ಅವರ ಸಾಹಿತ್ಯವು ಮಲೆನಾಡಿನ ಪ್ರಕೃತಿ ಸೌಂದರ್ಯ ಮತ್ತು ಮಾನವೀಯ ಸಂಬಂಧಗಳನ್ನು ಜಗತ್ತಿಗೆ ಪರಿಚಯಿಸಿದೆ.

ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಸಾಹಿತ್ಯದ ಮೂಲಕ ಪ್ರಕೃತಿ, ಪರಿಸರ, ಜೀವವೈವಿಧ್ಯ ಮತ್ತು ವೈಜ್ಞಾನಿಕ ಮನೋಭಾವದ ಮಹತ್ವವನ್ನು ಸಾರಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್. ಅನಂತಮೂರ್ತಿ ಅವರ ಸಾಹಿತ್ಯವು ಸಾಮಾಜಿಕ ಮತ್ತು ವೈಚಾರಿಕ ಚಿಂತನೆಗಳಿಗೆ ಹೊಸ ಆಯಾಮ ನೀಡಿದೆ. ಅಕ್ಕಮಹಾದೇವಿಯವರ ವಚನಗಳು ಆತ್ಮಗೌರವ, ಸಮಾನತೆ ಮತ್ತು ಆಧ್ಯಾತ್ಮಿಕ ಸ್ವಾತಂತ್ರ್ಯದ ಸಂದೇಶವನ್ನು ಸಾರುತ್ತವೆ. ಗೋಪಾಲಕೃಷ್ಣ ಅಡಿಗ, ಜಿ.ಎಸ್. ಶಿವರುದ್ರಪ್ಪ, ಎಂ.ಕೆ. ಇಂದಿರಾ, ನಾ. ಡಿಸೋಜ, ಎಸ್.ವಿ.ಪರಮೇಶ್ವರ ಭಟ್ಟ, ಕೆ.ವಿ.ಸುಬ್ಬಣ್ಣ ಸೇರಿದಂತೆ ಅನೇಕ ಸಾಹಿತಿಗಳು ಮತ್ತು ಸಾಂಸ್ಕೃತಿಕ ಚಿಂತಕರು ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ.
ಸಾಗರ ತಾಲ್ಲೂಕಿನ ಹೆಗ್ಗೋಡಿನ ನೀನಾಸಂ ಸಂಸ್ಥೆಯು ಕನ್ನಡ ರಂಗಭೂಮಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಶಿಷ್ಟ ಕೊಡುಗೆ ನೀಡಿದೆ. ನಮ್ಮ ಜಿಲ್ಲೆಯ ಯಕ್ಷಗಾನ, ಡೊಳ್ಳು ಕುಣಿತ, ಕೋಲಾಟ, ಜನಪದ ಹಾಡುಗಳು, ಸುಗ್ಗಿ ಸಂಭ್ರಮ ಮತ್ತು ಚಿತ್ತಾರ ಕಲೆಯಂತಹ ಸಾಂಪ್ರದಾಯಿಕ ಕಲೆಗಳು ನಮ್ಮ ಜನಜೀವನದ ಸೊಗಡನ್ನು ಪ್ರತಿಬಿಂಬಿಸುತ್ತವೆ.
ಕೆಳದಿ, ಇಕ್ಕೇರಿ, ಬಳ್ಳಿಗಾವಿ ಮತ್ತು ತಾಳಗುಂದದ ಐತಿಹಾಸಿಕ ಪರಂಪರೆ ನಮ್ಮ ಪೂರ್ವಜರ ವಾಸ್ತುಶಿಲ್ಪ ಮತ್ತು ಕಲಾತ್ಮಕತೆಗೆ ಸಾಕ್ಷಿಯಾಗಿವೆ. ಜೋಗ ಜಲಪಾತ, ಕೊಡಚಾದ್ರಿ, ಆಗುಂಬೆಯ ಮಳೆಕಾಡುಗಳು, ತುಂಗಾ ಮತ್ತು ಶರಾವತಿ ನದಿಗಳು ಹಾಗೂ ಮಲೆನಾಡಿನ ಜೀವವೈವಿಧ್ಯ ಶಿವಮೊಗ್ಗ ಜಿಲ್ಲೆಗೆ ವಿಶಿಷ್ಟ ಗುರುತನ್ನು ನೀಡಿವೆ. ಈ ಪ್ರಕೃತಿ ಮತ್ತು ಸಾಂಸ್ಕೃತಿಕ ಸಂಪತ್ತನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಶಿಕ್ಷಣವು ವ್ಯಕ್ತಿಯ ಬದುಕನ್ನು ರೂಪಿಸುವುದರ ಜೊತೆಗೆ ಸಮಾಜದ ಪ್ರಗತಿಗೆ ಭದ್ರ ಬುನಾದಿ ಹಾಕುತ್ತದೆ. ಮಕ್ಕಳಲ್ಲಿ ಮಾತೃಭಾಷೆಯ ಮೇಲಿನ ಪ್ರೀತಿ, ವೈಜ್ಞಾನಿಕ ಮನೋಭಾವ, ಸಂವಿಧಾನದ ಅರಿವು, ಸಾಮಾಜಿಕ ಸಾಮರಸ್ಯ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಅತ್ಯಂತ ಮುಖ್ಯ. ಕನ್ನಡದ ಬೇರುಗಳನ್ನು ಗಟ್ಟಿಗೊಳಿಸುತ್ತಲೇ ವಿಜ್ಞಾನ, ತಂತ್ರಜ್ಞಾನ ಮತ್ತು ಜಾಗತಿಕ ಜ್ಞಾನವನ್ನು ಅಳವಡಿಸಿಕೊಳ್ಳುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು.

ಇಂದಿನ ಡಿಜಿಟಲ್ ಯುಗದಲ್ಲಿ ಕನ್ನಡ ಭಾಷೆಯ ಬಳಕೆ, ಅಂತರ್ಜಾಲ, ಸಾಮಾಜಿಕ ಜಾಲತಾಣಗಳು ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ವ್ಯಾಪಕವಾಗಬೇಕು. ಇಂಗ್ಲೀಷ್‌ಭಾಷಾ ಜ್ಞಾನ ಅಗತ್ಯವಾಗಿದ್ದರೂ ಮಾತೃಭಾಷೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಕನ್ನಡದಲ್ಲಿ ಓದುವ, ಬರೆಯುವ ಮತ್ತು ಸೃಜನಶೀಲವಾಗಿ ಅಭಿವ್ಯಕ್ತಿಸುವ ಹೊಸ ಪೀಳಿಗೆಯನ್ನು ರೂಪಿಸುವುದು ನಮ್ಮೆಲ್ಲರ ಆಶಯವಾಗಬೇಕು. ಕನ್ನಡ ರಾಜ್ಯೋತ್ಸವವು ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ, ಕನ್ನಡ ಭಾಷೆಯ ಉಳಿವು, ಬೆಳವಣಿಗೆ ಮತ್ತು ಬಳಕೆಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ದಿನವೂ ಆಗಬೇಕು. ನಮ್ಮ ಭಾಷೆ, ನೆಲ, ಜಲ, ಪರಿಸರ ಮತ್ತು ಸಾಂಸ್ಕೃತಿಕ ಪರಂಪರೆಯ ರಕ್ಷಣೆಗೆ ಪ್ರತಿಯೊಬ್ಬರೂ ಬದ್ಧರಾಗಬೇಕು.

ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವ, ಕುವೆಂಪು ಅವರ ವಿಶ್ವಮಾನವ ಸಂದೇಶ ಹಾಗೂ ನಮ್ಮ ಸಂವಿಧಾನ ಸಾರುವ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಸಹೋದರತ್ವದ ಮೌಲ್ಯಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಜಾತಿ, ಧರ್ಮ, ಭಾಷೆ ಮತ್ತು ಪ್ರಾದೇಶಿಕ ಭಿನ್ನತೆಗಳನ್ನು ಮೀರಿ ಸೌಹಾರ್ದಯುತ ಸಮಾಜವನ್ನು ನಿರ್ಮಿಸಲು ಶ್ರಮಿಸೋಣ.

ಕನ್ನಡದ ಶ್ರೀಮಂತ ಪರಂಪರೆಯನ್ನು ಹೃದಯದಲ್ಲಿಟ್ಟುಕೊಂಡು, ಆಧುನಿಕ ಜ್ಞಾನದ ಹೊಸ ಸಾಧ್ಯತೆಗಳನ್ನು ಅಪ್ಪಿಕೊಂಡು, ಮಾನವೀಯ ಮೌಲ್ಯಗಳನ್ನು ಬದುಕಿನ ಭಾಗವಾಗಿಸಿಕೊಂಡು ಸಮೃದ್ಧ, ಸೌಹಾರ್ದಯುತ ಮತ್ತು ಸಮಾನತೆಯ ಕರ್ನಾಟಕವನ್ನು ಕಟ್ಟಲು ನಾವೆಲ್ಲರೂ ಕೈಜೋಡಿಸೋಣ.

ವಿಶೇಷವಾಗಿ ನಮ್ಮ ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಸಚಿವರು, ಸಮಾಜವಾದಿ ಚಿಂತನೆಯ ನಾಯಕರಾದ ಕಾಗೋಡು ತಿಮ್ಮಪ್ಪ ಅವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ ಎಂದು ಹೇಳಲು ಸಂತಸವೆನಿಸುತ್ತದೆ.

ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಿದ ನಮ್ಮನಾಡು ಎಲ್ಲಾ ಜಾತಿ ಧರ್ಮಗಳ ಜನರು ಸಾಮರಸ್ಯದಿಂದ ಬದುಕುವ ಸುಂದರ ತೋಟವಾಗಿಯೇ ಉಳಿಯಬೇಕು ಎಂಬುದು ನನ್ನ ಆಶಯ.

ಜಿಲ್ಲೆಯ ಸಮಸ್ತ ಜನತೆಗೆ ಮತ್ತೊಮ್ಮೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಜೈ ಹಿಂದ್! ಜೈ ಕರ್ನಾಟಕ ಮಾತೆ!

Leave a Reply

Your email address will not be published. Required fields are marked *