ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ನೆನಪುಗಳ ನೆರಳಲ್ಲೂ ನಿನ್ನದೇ ಪ್ರತಿಬಿಂಬ..

Share Below Link

ಏನೇ ಯೋಚಿಸಿದರೂ ಅಲ್ಲಿ ನಿನ್ನದೇ ನೆನಪು. ಅಷ್ಟೇ ಅಲ್ಲ, ಏನೇ ಮಾತನಾಡಿದರೂ ಅಲ್ಲಿ ನಿನ್ನದೇ ಹೆಸರು… ಕೆಲವೊಮ್ಮೆ ಈ ಎರಡು ಸಾಲುಗಳು ಇಡೀ ಬದುಕಿನ ಆತ್ಮಕಥೆಯಾಗಿಬಿಡುತ್ತವೆ. ನನ್ನ ಬದುಕಿನ ಕಥೆಯೂ ಅಷ್ಟೇ. ಕೆಲವು ಪ್ರೇಮಗಳಿಗೆ ಆರಂಭ ಇರುತ್ತದೆ. ಆದರೆ ಅಂತ್ಯ ಎಂಬುದೇ ಇರುವುದಿಲ್ಲ. ಅವು ಕಾಲದೊಂದಿಗೆ ಕೊನೆಗೊಳ್ಳುವುದಿಲ್ಲ ಬದಲಿಗೆ ಬದುಕಿನೊಂದಿಗೆ ಬೆರೆತು ನೆನಪುಗಳಾಗಿ, ನಿಟ್ಟುಸಿರುಗಳಾಗಿ, ಮನಸ್ಸಿನ ಮನ ಭಾಷೆಯಾಗಿ ನಮ್ಮೊಳಗೆ ಶಾಶ್ವತವಾಗಿ ಉಳಿದುಬಿಡುತ್ತವೆ.
ಆಕಸ್ಮಿಕವಾಗಿ ನಿನ್ನನ್ನು ಮೊದಲ ಬಾರಿ ಭೇಟಿಯಾದ ಆ ದಿನ ಇಂದಿಗೂ ಮನಸ್ಸಿನ ಕಿಟಕಿಯಲ್ಲಿ ಮಳೆಯ ಹನಿಯಂತೆ ಜರಿಬರುತ್ತದೆ. ನೀನು ಹೇಳಿದ ಮಾತುಗಳಿಗಿಂತ, ಹೇಳದೆ ಉಳಿಸಿದ ನಗುವೇ ನನ್ನ ಹೃದಯವನ್ನು ಗೆದ್ದಿತ್ತು. ಆ ಒಂದು ನಗು ನನ್ನ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿತು. ಕೆಲವರನ್ನು ಪರಿಚಯ ಮಾಡಿಕೊಳ್ಳಲು ವರ್ಷಗಳು ಬೇಕಾಗುತ್ತವೆ. ಆದರೆ ಕೆಲವರನ್ನು ಪ್ರೀತಿಸಲು ಒಂದು ಕ್ಷಣ ಸಾಕಾಗುತ್ತದೆ. ನೀನು ನನ್ನ ಪಾಲಿಗೆ ಅಂಥ ಕ್ಷಣವಾಗಿಬಿಟ್ಟೆ.
ಪರಿಚಯವು ಸ್ನೇಹವಾಯಿತು…
ಸ್ನೇಹ ಪ್ರೀತಿಯಾಯಿತು..
ಪ್ರೀತಿ ನನ್ನ ಉಸಿರಾಯಿತು…
ನಿನ್ನೊಂದಿಗೆ ಕಳೆದ ಪ್ರತಿಯೊಂದು ಕ್ಷಣವೂ ಬದುಕಿನ ಅಮೂಲ್ಯ ಅಧ್ಯಾಯ. ಆ ಕ್ಷಣಗಳು ಈಗ ನೆನಪುಗಳಾಗಿದ್ದರೂ, ಅವುಗಳ ಪರಿಮಳ ಇನ್ನೂ ಮನಸ್ಸನ್ನು ಬಿಟ್ಟು ಹೋಗಿಲ್ಲ. ಕೆಲವೊಮ್ಮೆ ಮನಸ್ಸು ತಾನಾಗಿಯೇ ಗುನುಗುತ್ತದೆ. ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದೂ… ಆ ಚಿಕ್ಕ ಗುನುಗು ಸಾಕು ಹೃದಯ ಮತ್ತೆ ನಿನ್ನ ದಾರಿಯನ್ನೇ ಹಿಡಿದು ನಡೆಯಲು.
ಆದರೆ ಕಾಲ ಯಾರಿಗಾಗಿ ನಿಲ್ಲುವುದಿಲ್ಲ. ಬದುಕಿನ ದಾರಿಗಳು ಬೇರೆಬೇರೆ ಆದವು. ಪರಿಸ್ಥಿತಿಗಳು ನಮ್ಮನ್ನು ದೂರ ಮಾಡಿದವು. ದೂರವಾದದ್ದು ನಮ್ಮ ಹೆಜ್ಜೆಗಳೇ ಹೊರತು ಹೃದಯಗಳ ನಡುವೆ ಇದ್ದ ಪ್ರೀತಿಗೆ ದೂರದ ಅಳತೆ ಗೊತ್ತಿರಲಿಲ್ಲ.
ಇಂದಿಗೂ ಬೆಳಗಿನ ಮೊದಲ ಬೆಳಕಿನೊಂದಿಗೆ ಮೂಡುವ ನೆನಪು ನೀನೇ… ಸಂಜೆಯ ಗಾಳಿಯ ಸ್ಪರ್ಶದಲ್ಲೂ ಕೇಳಿಬರುವುದು ನಿನ್ನ ಹೆಸರೇ… ಯಾರೊಂದಿಗೇ ಮಾತನಾಡಿದರೂ, ಯಾವ ವಿಷಯವೇ ಬಂದರೂ, ಮಾತಿನ ಕೊನೆಯ ತಿರುವು ನಿನ್ನ ಬಳಿಯೇ ಬಂದು ನಿಲ್ಲುತ್ತದೆ. ಆಗ ಮನಸ್ಸು ಮನವಾಗಿ ಪ್ರಶ್ನಿಸುತ್ತದೆ ಈ ಹೃದಯದ ಮಾತನ್ನು ಇನ್ನೆಷ್ಟು ಅಂತ ಹೇಳಿಕೊಳ್ಳಲಿ..?!
ಅಂತಹ ಕ್ಷಣಗಳಲ್ಲಿ ಕೆಲ ಕನ್ನಡ ಪ್ರೇಮಗೀತೆಗಳು ನೆನಪಾಗುತ್ತವೆ. ವಿಶೇಷವಾಗಿ ಮುಂಗಾರು ಮಳೆ ಚಿತ್ರದ ಹಾಡುಗಳ ಮನಭಾವದಂತೆಯೇ, ಪ್ರೀತಿಯು ಕೆಲವೊಮ್ಮೆ ಜೊತೆಯಾಗುವುದಕ್ಕಿಂತ ನೆನಪಾಗಿ ಉಳಿಯುವುದೇ ಹೆಚ್ಚು ಶಾಶ್ವತ ಎನ್ನಿಸುತ್ತದೆ.
ಕೆಲವು ಪ್ರೇಮಗಳು ಜೊತೆಯಾಗಿ ಬದುಕುವುದಕ್ಕಿಂತ ನೆನಪಾಗಿ ಬದುಕುವುದನ್ನೇ ಆಯ್ದುಕೊಳ್ಳುತ್ತವೆ. ಅಂತಹ ಪ್ರೀತಿಗೆ ದೂರ ಅಡ್ಡಿಯಾಗುವುದಿಲ್ಲ. ಸಮಯ ಸೋಲಿಸಲಾಗುವುದಿಲ್ಲ. ಅದು ಹೃದಯದ ಪ್ರತಿಯೊಂದು ಬಡಿತದಲ್ಲೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡೇ ಮುನ್ನಡೆಯುತ್ತದೆ.
ನೀನು ನನ್ನ ಜೊತೆಯಲ್ಲಿಲ್ಲ ಎನ್ನುವ ಸತ್ಯವನ್ನು ಒಪ್ಪಿಕೊಂಡಿzನೆ. ಆದರೆ ನೀನು ನನ್ನೊಳಗಿಲ್ಲ ಎನ್ನುವುದನ್ನು ಮಾತ್ರ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಏಕೆಂದರೆ ನನ್ನ ಕಣ್ಣುಗಳು ಕಟ್ಟುವ ಪ್ರತಿಯೊಂದು ಕನಸಿನಲ್ಲೂ ನಿನ್ನ ನೆರಳೇ ಮೂಡುತ್ತದೆ. ನನ್ನ ಹೃದಯ ಬಡಿಯುವ ಪ್ರತಿಕ್ಷಣವೂ ನಿನ್ನ ಹೆಸರಿನ ಪ್ರತಿಧ್ವನಿಯೇ ಕೇಳಿಸುತ್ತದೆ.
ಕೆಲವರು ಬದುಕಿನಲ್ಲಿ ಬಂದು ಹೋಗುತ್ತಾರೆ. ಕೆಲವರು ಬದುಕನ್ನೇ ಬದಲಾಯಿಸಿ ಹೋಗುತ್ತಾರೆ. ಆದರೆ ಅಪರೂಪದ ಕೆಲವರು ಮಾತ್ರ ಬದುಕಿನ ಅರ್ಥವಾಗಿಬಿಡುತ್ತಾರೆ. ನನಗೆ ನೀನು ಅಂಥವಳು.
ಇಂದು ನಮ್ಮ ನಡುವೆ ಮಾತುಗಳಿಲ್ಲ… ಯಾವುದೇ ಸುದ್ದಿಗಳಿಲ್ಲ… ಭೇಟಿಯಂತೂ ಇಲ್ಲವೇ ಇಲ್ಲ… ಆದರೂ ಮುಗಿಯದ ಒಂದು ಸಂಭಾಷಣೆ ಇದೆ.
ಅದರ ಹೆಸರು ಪ್ರೀತಿ….
ನನ್ನ ಪ್ರತಿಯೊಂದು ಉಸಿರೂ ನಿನ್ನನ್ನು ನೆನಪಿಸುವ ಪ್ರಾರ್ಥನೆಯಾಗಿದೆ. ನನ್ನ ಪ್ರತಿಯೊಂದು ನಿಟ್ಟುಸಿರೂ ನಿನ್ನ ಹೆಸರನ್ನು ಹೊತ್ತ ತಂಗಾಳಿಯಾಗಿದೆ. ನಿನ್ನನ್ನು ಮರೆಯಲು ಸಾವಿರ ಕಾರಣಗಳು ಸಿಕ್ಕರೂ, ನಿನ್ನನ್ನು ನೆನಪಿಸಿಕೊಳ್ಳಲು ಒಂದೇ ಕಾರಣ ಸಾಕು.. ಅದು ನನ್ನ ಹೃದಯ…
ಕೆಲವೊಮ್ಮೆ ಬದುಕೇ ಮನವಾಗಿ ಹಾಡುತ್ತದೆ . ನಿನ್ನಿಂದಲೇ… ಶುವಾಯ್ತು ಹೊಸ ಜೀವನಾ… ಆ ಒಂದು ಪದದ ನನ್ನ ಬದುಕಿನ ಸಂಪೂರ್ಣ ಅರ್ಥ ಅಡಗಿದೆ. ಆದ್ದರಿಂದಲೇ ಇಂದಿಗೂ ನನ್ನ ಮನಸ್ಸು ಅದೇ ಮಾತನ್ನು ಮತ್ತೆ ಮತ್ತೆ ಹೇಳುತ್ತದೆ.
ಏನೇ ಯೋಚಿಸಿದರೂ ಅಲ್ಲಿ ನಿನ್ನದೇ ನೆನಪು…
ಏನೇ ಮಾತನಾಡಿದರೂ ಅಲ್ಲಿ ನಿನ್ನದೇ ಹೆಸರು…
ಈ ಮನಸ್ಸಿನ ಮಾತನ್ನು ಇನ್ನೆಷ್ಟು ಅಂತ ಹೇಳಿಕೊಳ್ಳಲಿ…?
ಯಾಕೆಂದರೆ ನನ್ನ ಪ್ರತಿ ಉಸಿರಲ್ಲೂ ಇನ್ನೂ ನೀನೇ ತುಂಬಿರುವೆ… ಉಳಿದದ್ದು ಬದುಕಲ್ಲ…
ನಿನ್ನ ನೆನಪುಗಳೊಂದಿಗೆ ನಿತ್ಯವೂ ಮುಂದುವರಿಯುತ್ತಿರುವ ನಿಷ್ಕಲ್ಮಷವಾದ ಪ್ರೇಮಕಾವ್ಯ…

Leave a Reply

Your email address will not be published. Required fields are marked *