ಹೊಸನಾವಿಕ ವರದಿಗೆ ಕೊನೆಗೂ ಎಚ್ಚೆತ್ತ ಪಾಲಿಕೆ..! ಬೆಳಕಿನ ಹರಿಕಾರನ ಪ್ರತಿಮೆ ಸುತ್ತ ಅಭಿವೃದ್ಧಿಯ ಬೆಳಕು…
ಅ.ರಾಕೇಶ್ ಡಿಸೋಜ, ಮೊ:9482482182
ಶಿವಮೊಗ್ಗ : ನಾಡಿಗೆ ನೀರು, ಬೆಳಕು ಮತ್ತು ಅಭಿವೃದ್ಧಿಯ ಹೊಸ ದಾರಿಯನ್ನು ತೋರಿದ ಮಹಾನ್ ಚೇತನ, ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಯೇ ಕತ್ತಲಲ್ಲಿ ನಿಂತಿದ್ದ ದೃಶ್ಯ ಶಿವಮೊಗ್ಗದ ನಾಗರಿಕರನ್ನು ಬೇಸರ ಗೊಳಿಸಿತ್ತು. ಆದರೆ ಜನರ ಧ್ವನಿಯಾಗಿ ನಿಂತ ಹೊಸನಾವಿಕ ಪತ್ರಿಕೆಯ ವರದಿಗೆ ಸ್ಪಂದಿಸಿರುವ ಮಹಾನಗರ ಪಾಲಿಕೆ ಇದೀಗ ಅಪೂರ್ಣಗೊಂಡಿದ್ದ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕಾರ್ಯಕ್ಕೆ ಮುಂದಾಗಿದೆ.
ನಗರದ ಹೆಮ್ಮೆಯ ಸಂಕೇತವಾಗ ಬೇಕಿದ್ದ ಸರ್.ಎಂ.ವಿ. ಅವರ ಪ್ರತಿಮೆ ಯನ್ನು ಕಾಮಗಾರಿ ಸಂಪೂರ್ಣ ಮುಗಿಯುವ ಮುನ್ನವೇ ತರಾತುರಿಯಲ್ಲಿ ಉದ್ಘಾಟಿಸಲಾಗಿತ್ತು. ಬಳಿಕ ಪ್ರತಿಮೆಯ ಸುತ್ತಮುತ್ತ ಕಸದ ರಾಶಿ, ಮಣ್ಣಿನ ಗುಡ್ಡೆಗಳು, ಸಮರ್ಪಕ ಸ್ವಚ್ಛತೆಯ ಕೊರತೆ ಹಾಗೂ ಬೆಳಕಿನ ವ್ಯವಸ್ಥೆಯ ಅಭಾವ ಕಂಡುಬಂದಿತ್ತು. ನಾಡಿಗೆ ಬೆಳಕು ನೀಡಿದ ಮಹಾನ್ ರಾಷ್ಟ್ರನಿರ್ಮಾತೃನ ಪ್ರತಿಮೆಯೇ ಕತ್ತಲಲ್ಲಿ ನಿಂತಿರುವುದು ಕೇವಲ ಆಡಳಿತದ ನಿರ್ಲಕ್ಷ್ಯದ ಸಂಕೇತವಲ್ಲ, ಸಮಾಜದ ಮಲ್ಯಗಳ ಕುಸಿತವನ್ನೂ ಪ್ರತಿಬಿಂಬಿಸುತ್ತಿದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು.
ಈ ದುಸ್ಥಿತಿಯನ್ನು ಚಿತ್ರಸಹಿತವಾಗಿ ವಿವರಿಸಿ ಹೊಸನಾವಿಕ ಪತ್ರಿಕೆ ಮೇ ೨೧ರಂದು ವಿಶೇಷ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾದ ಬೆನ್ನ ಮಹಾನಗರ ಪಾಲಿಕೆ ಅಧಿಕಾರಿಗಳು ರಾತ್ರೋರಾತ್ರಿ ಪ್ರತಿಮೆಯ ಮುಂಭಾಗದಲ್ಲಿ ಗುಡ್ಡೆ ಹಾಕಿದ್ದ ಮಣ್ಣಿನ ರಾಶಿಯನ್ನು ತೆರವುಗೊಳಿಸಿ ಮೊದಲ ಹೆಜ್ಜೆ ಇಟ್ಟಿದ್ದರು.
ಇದೀಗ ಕಳೆದ ಮೂರು-ನಾಲ್ಕು ದಿನಗಳಿಂದ ಸ್ಥಗಿತಗೊಂಡಿದ್ದ ಕಾಮಗಾರಿಗೆ ಮತ್ತೆ ಚಾಲನೆ ದೊರೆತಿದೆ. ಪ್ರತಿಮೆಯ ಹಿಂಬದಿಯ ಸುತ್ತಲಿನ ಗೋಡೆಯ ಮೇಲೆ ಆಕರ್ಷಕ ವಿನ್ಯಾಸ ಅಭಿವೃದ್ಧಿಪಡಿಸುವ ಕಾರ್ಯಗಳು ಪುನರಾರಂಭಗೊಂಡಿದ್ದು, ಅಪೂರ್ಣವಾಗಿದ್ದ ಕೆಲಸಗಳು ವೇಗ ಪಡೆದುಕೊಂಡಿವೆ. ಹಲವು ತಿಂಗಳುಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸ್ಥಳದಲ್ಲಿ ಮತ್ತೆ ಚಟುವಟಿಕೆ ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.
ಆದರೆ ಕೇವಲ ಕಾಮಗಾರಿ ಪೂರ್ಣಗೊಳಿಸುವುದಷ್ಟೇ ಸಾಕಾಗುವುದಿಲ್ಲ ಎನ್ನುವುದು ನಾಗರಿಕರ ಅಭಿಪ್ರಾಯ. ಪ್ರತಿಮೆಯ ಸುತ್ತಮುತ್ತ ಶಾಶ್ವತ ಸ್ವಚ್ಛತೆ, ಸಮರ್ಪಕ ಬೆಳಕಿನ ವ್ಯವಸ್ಥೆ ಹಾಗೂ ನಿರಂತರ ನಿರ್ವಹಣೆಗೆ ಪಾಲಿಕೆ ಮುಂದಾಗಬೇಕಿದೆ. ರಾಷ್ಟ್ರ ನಿರ್ಮಾಣದ ಕನಸು ಕಂಡು, ಕರ್ನಾಟಕದ ಅಭಿವೃದ್ಧಿಗೆ ಅಡಿಗಲ್ಲು ಹಾಕಿದ ಸರ್ ಎಂ. ವಿಶ್ವೇಶ್ವರಯ್ಯ ಅವರಿಗೆ ಸಲ್ಲಬೇಕಾದ ಗೌರವ ಇದೇ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಜನಸಾಮಾನ್ಯರ ಧ್ವನಿಗೆ ಆಡಳಿತ ಸ್ಪಂದಿಸಿದ ಈ ಬೆಳವಣಿಗೆ, ಜವಾಬ್ದಾರಿಯುತ ಪತ್ರಿಕೋದ್ಯಮದ ಪರಿಣಾಮಕಾರಿತ್ವಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಕತ್ತಲಲ್ಲಿ ನಿಂತಿದ್ದ ಮಹಾನ್ ಚೇತನದ ಪ್ರತಿಮೆಗೆ ಇದೀಗ ಸ್ವಚ್ಚತೆ -ಬೆಳಕಿನ ಸ್ಪರ್ಶ ಸಿಗುತ್ತಿರುವುದು ನಗರದ ನಾಗರಿಕರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.
