ಜಿಲ್ಲಾ ಸುದ್ದಿತಾಜಾ ಸುದ್ದಿ

ಹಿಂದೂ ಮಹಾ ಭಕ್ತ ಸಾಗರದ ನಡುವೆ ಗಣಪತಿಯ ವೈಭವದ ಮೆರವಣಿಗೆಗೆ ಚಾಲನೆ..

Share Below Link

ಶಿವಮೊಗ್ಗ, ಸೆ.೨೫: ನಗರದ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಹಿಂದೂ ಮಹಾಮಂಡಲದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾ ಗಣಪತಿಯ ೮೨ನೇ ವರ್ಷದ ರಾಜಬೀದಿ ಉತ್ಸವಕ್ಕೆ ಇಂದು ಅದ್ದೂರಿ ಚಾಲನೆ ದೊರೆಯಿತು. ಬೆಳಗ್ಗೆಯಿಂದಲೇ ನಗರದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ನಗರಕ್ಕೆ ಆಗಮಿಸಿದ್ದರಿಂದ ಶಿವಮೊಗ್ಗದ ಪ್ರಮುಖ ರಸ್ತೆಗಳು ಜನಸಾಗರದಿಂದ ತುಂಬಿ ತುಳುಕಿದವು.
ಬೆಳಗ್ಗೆ ೧೦.೩೦ರ ಸುಮಾರಿಗೆ ಭೀಮೇಶ್ವರ ದೇವಸ್ಥಾನದಲ್ಲಿ ಹಿಂದೂ ಮಹಾಸಭಾ ಗಣಪತಿಯೊಂದಿಗೆ ಪೂಜಿಸಲ್ಪಟ್ಟ ಸಣ್ಣ ಗಣಪತಿ ಮೂರ್ತಿಯನ್ನು ಭೀಮನ ಮಡುವಿನಲ್ಲಿ ವಿಸರ್ಜಿಸಲಾಯಿತು. ಬಳಿಕ ಉತ್ಸವ ಗಣಪತಿಗೆ ಮಂಗಳಾರತಿ ನೆರವೇರಿಸಿ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಕೋಟೆ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳು ರಾಜಬೀದಿ ಉತ್ಸವದ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಹಾಗೂ ಡಾ. ಧನಂಜಯ ಸರ್ಜಿ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಪ್ರಮುಖರಾದ ಎಸ್.ಕೆ. ಮರಿಯಪ್ಪ, ಎಂ. ಶ್ರೀಕಾಂತ್, ಎನ್.ಕೆ. ಜಗದೀಶ್, ಎಸ್. ಗಣೇಶ್ವರ್, ಕೆ.ಇ. ಕಾಂತೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
೧೫೦ ಕೆ.ಜಿ. ಸೇಬಿನ ಹಾರ:
ದಶಕಗಳಿಂದ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯ ವಾಹನ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಧನಂಜಯ್ ಅವರು ಈ ಬಾರಿಯೂ ಟ್ರ್ಯಾಕ್ಟರ್ ಚಾಲನೆ ಮಾಡಿದರು. ಮೆರವಣಿಗೆ ಆರಂಭವಾಗುತ್ತಿದ್ದಂತೆ ಹರಿಗೆಯ ಕೆ.ಕೆ. ಗೌಡ ಕುಟುಂಬದ ವತಿಯಿಂದ ಸುಮಾರು ೧೫೦ ಕೆ.ಜಿ. ತೂಕದ ಬೃಹತ್ ಸೇಬಿನ ಹಾರವನ್ನು ಗಣಪತಿಗೆ ಸಮರ್ಪಿಸಲಾಯಿತು. ಇದು ಸಾರ್ವಜನಿಕರ ಗಮನ ಸೆಳೆಯಿತು.
ರಾಜಬೀದಿ ಉತ್ಸವದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರವೇ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದಿತ್ತು. ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಮೆರವಣಿಗೆ ಸಾಗುವ ಮಾರ್ಗಗಳನ್ನು ಕೇಸರಿ ಬಂಟಿಂಗ್‌ಗಳು, ಸ್ವಾಗತ ಕಮಾನುಗಳು ಹಾಗೂ ವಿವಿಧ ಕಲಾಕೃತಿಗಳಿಂದ ಅಲಂಕರಿಸಲಾಗಿತ್ತು. ಇದರಿಂದ ನಗರದ ಹಲವು ಪ್ರಮುಖ ಪ್ರದೇಶಗಳು ಕೇಸರಿಮಯವಾಗಿ ಕಂಗೊಳಿಸುತ್ತಿದ್ದವು.
ಕಲಾಕೃತಿಗಳ ವೈಭವ:
ಹಿಂದೂ ಕೇಸರಿ ಅಲಂಕಾರ ಸಮಿತಿಯ ವತಿಯಿಂದ ಗಣಪತಿ ಮೆರವಣಿಗೆ ಸಾಗುವ ಮಾರ್ಗಗಳಷ್ಟೇ ಅಲ್ಲದೆ ನಗರದ ಪ್ರಮುಖ ವೃತ್ತಗಳಲ್ಲಿಯೂ ವಿವಿಧ ಕಲಾಕೃತಿಗಳನ್ನು ನಿರ್ಮಿಸಲಾಗಿತ್ತು. ಗಾಂಧಿ ಬಜರ್ ಪ್ರವೇಶದ್ವಾರದಲ್ಲಿ ಕಲಾವಿದ ಜೀವನ್ ಅವರ ನೇತೃತ್ವದಲ್ಲಿ ನಿರ್ಮಿಸಲಾದ ಬೃಹತ್ ಆಂಜನೇಯನ ಕಲಾಕೃತಿ ವಿಶೇಷ ಆಕರ್ಷಣೆಯಾಗಿತ್ತು. ಎದೆ ಬಗೆದು ತನ್ನ ಆರಾಧ್ಯರಾದ ಶ್ರೀರಾಮ- ಸೀತೆಯನ್ನು ತೋರಿಸುವ ಆಂಜನೇಯನ ಕಲಾಕೃತಿ ನೋಡುಗರ ಗಮನ ಸೆಳೆಯಿತು.
ಶಿವಮೊಗ್ಗ ಹಿಂದೂ ಮಹಾ ಸಭಾ ದ್ವಾರದಲ್ಲಿ ಪಂಚಮುಖಿ ಆಂಜನೇಯನ ಕಲಾಕೃತಿ ಹಾಗೂ ಅದಕ್ಕೆ ಮಾಡಲಾಗಿದ್ದ ವಿದ್ಯುತ್ ಅಲಂಕಾರವೂ ಜನರನ್ನು ಆಕರ್ಷಿಸಿತು. ಅಮೀರ್ ಅಹಮದ್ ವೃತ್ತದಲ್ಲಿ ಅಂಬಾ ಭವಾನಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಖಡ್ಗವನ್ನು ನೀಡುತ್ತಿರುವ ದೃಶ್ಯವನ್ನು ಬಿಂಬಿಸುವ ಕಲಾಕೃತಿ ಗಮನ ಸೆಳೆಯಿತು. ವೀರ ಶಿವಮೂರ್ತಿ ವೃತ್ತದಲ್ಲಿ ಸೀಮೋಲ್ಲಂಘನೆಗೆ ಸಿದ್ಧನಾಗಿರುವ ಆಂಜನೇಯನ ಕಲಾಕೃತಿ, ನರ್ಸಿಂಗ್‌ಹೋಮ್ ವೃತ್ತದಲ್ಲಿ ಸ್ಥಾಪಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸೇರಿದಂತೆ ಹಲವು ಕಲಾಕೃತಿಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದವು.
ಗಾಡಿಕೊಪ್ಪ, ಸಹ್ಯಾದ್ರಿ ಕಾಲೇಜು ಬಳಿಯ ಎಂಆರ್‌ಎಸ್ ವೃತ್ತ, ಗಾಂಧಿ ಬಜರ್, ಅಕ್ಕಮಹಾದೇವಿ ವೃತ್ತ ಸೇರಿದಂತೆ ನಗರದ ವಿವಿಧೆಡೆ ಸ್ವಾಗತ ಕಮಾನುಗಳು ಮತ್ತು ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು.
ದುರ್ಗಿಗುಡಿ ಮುಖ್ಯ ರಸ್ತೆ, ಬಿ.ಆರ್. ಅಂಬೇಡ್ಕರ್ ವೃತ್ತ, ಕುವೆಂಪು ರಸ್ತೆ, ವೀರ ಶಿವಮೂರ್ತಿ ವೃತ್ತ, ಸರ್.ಎಂ. ವಿಶ್ವೇಶ್ವರಯ್ಯ ರಸ್ತೆ, ಮಹಾವೀರ ವೃತ್ತ, ಕುವೆಂಪು ರಂಗಮಂದಿರ ರಸ್ತೆ, ಬಸವೇಶ್ವರ ವೃತ್ತ, ಕಾನ್ವೆಂಟ್ ರಸ್ತೆ ಹಾಗೂ ಬಿ.ಎಚ್. ರಸ್ತೆಯ ಮೂಲಕ ಕೋಟೆ ಪೊಲೀಸ್ ಠಾಣೆ ರಸ್ತೆಯವರೆಗೆ ಕೇಸರಿ ಬಂಟಿಂಗ್‌ಗಳು ರಾರಾಜಿಸುತ್ತಿದ್ದವು.
ಜನಪದ ಕಲಾತಂಡಗಳ ಮೆರಗು:
ರಾಜಬೀದಿ ಉತ್ಸವದಲ್ಲಿ ವಿವಿಧ ಜನಪದ ಕಲಾತಂಡಗಳ ಪ್ರದರ್ಶನ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು. ವಾದ್ಯಗಳ ತಾಳ, ನಾದ ಮತ್ತು ಜನಪದ ಕಲೆಯ ವೈವಿಧ್ಯಮಯ ಪ್ರದರ್ಶನಕ್ಕೆ ಸಾರ್ವಜನಿಕರು ಹೆಜ್ಜೆ ಹಾಕಿ ಸಂಭ್ರಮಿಸಿದರು. ನಗರದ ಹೃದಯಭಾಗದಲ್ಲಿ ಕಲಾತಂಡಗಳ ಸದ್ದು ಮೊಳಗುತ್ತಿದ್ದರೆ, ಅಲಂಕೃತ ವಾಹನದಲ್ಲಿ ಸಾಗುತ್ತಿದ್ದ ಉತ್ಸವಮೂರ್ತಿ ಗಣೇಶನ ದರ್ಶನ ಪಡೆಯಲು ಜನರು ಮುಗಿಬಿದ್ದರು.
ರಾಜ್ಯದ ವಿವಿಧ ಭಾಗಗಳಿಂದಲೂ ಭಕ್ತರು ಹಾಗೂ ಸಾರ್ವಜನಿಕರು ಉತ್ಸವ ವೀಕ್ಷಿಸಲು ಆಗಮಿಸಿದ್ದರು. ವಿವಿಧ ಸಂಘ- ಸಂಸ್ಥೆಗಳು ಸಾರ್ವಜನಿಕರಿಗೆ ತಿಂಡಿ, ಪಾನೀಯ, ಸಿಹಿ, ಪ್ರಸಾದ, ಕುಡಿಯುವ ನೀರು ಮತ್ತು ಮಜ್ಜಿಗೆಯ ವ್ಯವಸ್ಥೆ ಮಾಡಿದ್ದವು.
ವಿಶೇಷ ಕಮಾನುಗಳು, ಧಾರ್ಮಿಕ ಸಂಕೇತಗಳು:
ಗಾಂಧಿ ಬಜರ್ ಮಾರ್ಗದಲ್ಲಿ ಆಂಜನೇಯನ ಕಲಾಕೃತಿಯೊಂದಿಗೆ ವಿವಿಧ ಧಾರ್ಮಿಕ ಮತ್ತು ಐತಿಹಾಸಿಕ ಸಂಕೇತಗಳನ್ನು ಬಿಂಬಿಸುವ ಅಲಂಕಾರಗಳು ಗಮನ ಸೆಳೆದವು. ಶ್ರೀ ವೀರಭದ್ರಸ್ವಾಮಿಯ ತಾಳಧ್ವಜ ರಥ, ದೇವಿ ಸುಭದ್ರೆಯ ದರ್ಪದಲನ ರಥ ಹಾಗೂ ಶ್ರೀ ಪುರಿ ಜಗನ್ನಾಥ ಸ್ವಾಮಿಯ ನಂದಿಘೋಷ ರಥದ ಮಾದರಿಯ ಕಮಾನುಗಳು ಮೆರವಣಿಗೆಯ ಮಾರ್ಗದಲ್ಲಿ ವಿಶೇಷ ಆಕರ್ಷಣೆಯಾಗಿದ್ದವು. ಶಿವಪ್ಪನಾಯಕ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗಳೂ ವಿವಿಧೆಡೆ ಅಲಂಕಾರದ ಭಾಗವಾಗಿದ್ದವು.
ಮೆರವಣಿಗೆಯ ಮಾರ್ಗದಲ್ಲಿ ನಿರ್ಮಿಸಲಾಗಿದ್ದ ಕೆಲವು ಕಮಾನುಗಳು ಹಾಗೂ ಕಲಾಕೃತಿಗಳು ಪ್ರಸಕ್ತ ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಚರ್ಚೆಗೂ ಕಾರಣವಾಗುವ ರೀತಿಯಲ್ಲಿ ರೂಪುಗೊಂಡಿದ್ದವು. ಪ್ರತಿ ವರ್ಷವೂ ವಿಭಿನ್ನ ಪರಿಕಲ್ಪನೆಯೊಂದಿಗೆ ಅಲಂಕಾರಗಳನ್ನು ರೂಪಿಸುವುದು ರಾಜಬೀದಿ ಉತ್ಸವದ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್:
ರಾಜಬೀದಿ ಉತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಡಳಿತ ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಂಡಿತ್ತು. ಮೆರವಣಿಗೆ ಸಾಗುವ ಮಾರ್ಗದಲ್ಲಿ ವಾಹನ ಸಂಚಾರವನ್ನು ಪರ್ಯಾಯ ಮಾರ್ಗಗಳಿಗೆ ತಿರುಗಿಸಲಾಗಿತ್ತು. ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಿಸಿಟಿವಿ ಕ್ಯಾಮೆರಾಗಳು ಹಾಗೂ ಡ್ರೋನ್‌ಗಳ ಮೂಲಕ ನಿಗಾ ವಹಿಸಲಾಯಿತು.
ಭದ್ರತಾ ವ್ಯವಸ್ಥೆಯ ಮೇಲ್ವಿಚಾರಣೆಗೆ ಐವರು ಎಸ್‌ಪಿ ಹಾಗೂ ಎಎಸ್‌ಪಿ ದರ್ಜೆಯ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಅವರ ಅಧೀನದಲ್ಲಿ ೨೨ ಡಿವೈಎಸ್‌ಪಿಗಳು, ೮೪ ಇನ್‌ಸ್ಪೆಕ್ಟರ್‌ಗಳು, ೨೮೯ ಪಿಎಸ್‌ಐ ಗಳು, ೧೦೮ ಎಎಸ್‌ಐಗಳು, ೨,೧೩೪ ಪೊಲೀಸ್ ಕಾನ್‌ಸ್ಟೆಬಲ್ ಗಳು ಹಾಗೂ ೬೦೦ ಗೃಹರಕ್ಷಕ ದಳದ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು.
ಇದರೊಂದಿಗೆ ಕರ್ನಾಟಕ ರಾಜ್ಯ ಮೀಸಲು ಪಡೆಯ ೧೨ ತುಕಡಿ, ಜಿ ಸಶಸ್ತ್ರ ಮೀಸಲು ಪಡೆಯ ೧೦ ತುಕಡಿ, ಎರಡು ತ್ವರಿತ ಕಾರ್ಯಾಚರಣೆ ಪಡೆಗಳು, ಒಂದು ವಿಶೇಷ ಕಾರ್ಯಪಡೆ, ಎರಡು ಕ್ಷಿಪ್ರ ಕಾರ್ಯಪಡೆಗಳು ಹಾಗೂ ವಿಶೇಷ ಸಶಸ್ತ್ರ ಪಡೆಗಳ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ತುರ್ತು ಪರಿಸ್ಥಿತಿಗಾಗಿ ಏಳು ಅಗ್ನಿಶಾಮಕ ವಾಹನಗಳು ಮತ್ತು ನಾಲ್ಕು ಆಂಬುಲೆನ್ಸ್‌ಗಳನ್ನು ಸನ್ನದ್ಧವಾಗಿಡಲಾಗಿತ್ತು. ಸುಮಾರು ೩,೫೦೦ ವಿಡಿಯೊ/ಸಿಸಿಟಿವಿ ಕ್ಯಾಮೆರಾಗಳು ಹಾಗೂ ೧೨ ಡ್ರೋನ್‌ಗಳ ಮೂಲಕ ಮೆರವಣಿಗೆಯ ಮೇಲೆ ನಿಗಾ ವಹಿಸಲಾಯಿತು.
ವಿಸರ್ಜನೆಗೆ ನಾಂದಿ:
ಬೆಳಗ್ಗೆ ಕೋಟೆ ರಸ್ತೆಯ ಭೀಮೇಶ್ವರ ದೇವಸ್ಥಾನದಿಂದ ಆರಂಭವಾದ ರಾಜಬೀದಿ ಉತ್ಸವವು ನಗರದ ಪ್ರಮುಖ ಮಾರ್ಗಗಳಲ್ಲಿ ಸಾಗಿತು. ಮೆರವಣಿಗೆ ಸಾಗಿದ ಎಡೆ ಸಾರ್ವಜನಿಕರು ಗಣಪತಿಯ ದರ್ಶನ ಪಡೆದು ಭಕ್ತಿಭಾವದಿಂದ ಕೈಮುಗಿದರು. ಯುವಕರು, ಮಹಿಳೆಯರು, ಮಕ್ಕಳು ಸೇರಿದಂತೆ ವಿವಿಧ ವಯೋಮಾನದ ಜನರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವವು ಕೇವಲ ಮೆರವಣಿಗೆಯಾಗಿ ಮಾತ್ರವಲ್ಲದೆ ಹಲವು ವರ್ಷಗಳಿಂದ ಶಿವಮೊಗ್ಗದ ಸಾರ್ವಜನಿಕ ಜೀವನದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ವಾರ್ಷಿಕ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮವಾಗಿ ರೂಪುಗೊಂಡಿದೆ. ಪ್ರತಿಷ್ಠಾಪನೆಯಿಂದ ಆರಂಭವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ನಗರದಾದ್ಯಂತದ ಅಲಂಕಾರ ಹಾಗೂ ರಾಜಬೀದಿ ಉತ್ಸವದವರೆಗೆ ಹಲವು ದಿನಗಳ ಕಾಲ ನಗರದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ.
೮೨ನೇ ವರ್ಷದ ರಾಜಬೀದಿ ಉತ್ಸವದೊಂದಿಗೆ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಕಾರ್ಯಕ್ರಮಕ್ಕೂ ನಾಂದಿ ಹಾಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಉತ್ಸವದ ವಿವಿಧ ಕ್ಷಣಗಳನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು. ಭಕ್ತಿ, ಜನಪದ ಕಲೆ, ಅಲಂಕಾರ ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ ರಾಜಬೀದಿ ಉತ್ಸವವು ಶಿವಮೊಗ್ಗ ನಗರದ ಮತ್ತೊಂದು ಗಮನಾರ್ಹ ಸಾರ್ವಜನಿಕ ಕಾರ್ಯಕ್ರಮವಾಗಿ ಮೂಡಿಬಂದಿತು.

Leave a Reply

Your email address will not be published. Required fields are marked *