ನಾಡಿಗೆ ಬೆಳಕು ಕೊಟ್ಟ ಮಹನೀಯನ ಪ್ರತಿಮೆ ಕತ್ತಲಲ್ಲಿಟ್ಟ ನಗರಪಾಲಿಕೆ…!
ಶಿವಮೊಗ್ಗ, ಮೇ ೨೧: ಕರುನಾಡಿಗೆ ನೀರು, ಬೆಳಕು ಮತ್ತು ಅಭಿವೃದ್ಧಿಯ ದಿಕ್ಕು ತೋರಿದ ಮಹಾನ್ ಚೇತನ, ರಾಷ್ಟ್ರನಿರ್ಮಾತೃ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಪ್ರತಿಮೆ ಇಂದು ಕತ್ತಲಲ್ಲಿ ನಿಂತಿರುವುದು ವಿಪರ್ಯಾಸದ ಸಂಗತಿಯಾಗಿದೆ. ದೇಶ ಕಂಡ ಶ್ರೇಷ್ಠ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ ಅವರ ಸೇವೆಗಳನ್ನು ಸ್ಮರಿಸುವ ಬದಲು, ಶಿವಮೊಗ್ಗ ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದ ಅವರ ಪ್ರತಿಮೆ ಇಂದು ಅವಮಾನಕ್ಕೊಳಗಾಗಿರುವ ಸ್ಥಿತಿ ನಿರ್ಮಾಣವಾಗಿದೆ.
ಕೆಲ ವರ್ಷಗಳ ಹಿಂದೆ ಭಾರೀ ಪ್ರಚಾರ, ದೊಡ್ಡ ದೊಡ್ಡ ಭಾಷಣಗಳು, ಫೋಟೋಶೂಟ್‌ಗಳು ಮತ್ತು ಪುಕ್ಕಟ್ಟೆ ಕ್ರೆಡಿಟ್ ಪಡೆಯಲು ತರಾತುರಿಯಲ್ಲಿ ಪ್ರತಿಷ್ಠಾಪಿಸಲಾದ ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆ ಇಂದು ಸಂಪೂರ್ಣ ಅನಾಥ ಸ್ಥಿತಿಗೆ ತಳ್ಳಲ್ಪಟ್ಟಿದೆ. ಪ್ರತಿಮೆ ಅನಾವರಣದ ವೇಳೆ ದೇಶಭಕ್ತಿ ಮತ್ತು ಅಭಿವೃದ್ಧಿಯ ಬಗ್ಗೆ ವೇದಿಕೆ ಮೇಲೆ ಗಂಟೆಗಟ್ಟಲೆ ಉಪನ್ಯಾಸ ಬಾರಿಸಿದ್ದವರು ಇಂದು ಇತ್ತ ತಿರುಗಿ ನೋಡುವ ಮನಸ್ಸು ಕೂಡ ತೋರಿಸುತ್ತಿಲ್ಲ. ಪುಕ್ಕಟ್ಟೆ ಪ್ರಚಾರಪಡೆದ ಗಿಮಿಕ್ ಗಿರಾಕಿಗಳು ವರ್ಷಕ್ಕೊಮ್ಮೆ ಇಂಜಿನಿಯರ್‍ಸ್ ಡೇ ದಿನದಂದು ಇತ್ತ ಸುಳಿಯುವುದೇ ಅವರ ಜೀವಮಾನದ ಸಾಧನೆಯಾಗಿದೆ.

ಆಧುನಿಕ ಭಾರತದ ನಿರ್ಮಾಪಕ ಎಂದೇ ಖ್ಯಾತರಾದ ಸರ್ ಎಂ. ವಿಶ್ವೇಶ್ವರಯ್ಯ ಅವರು ಭಾರತದ ಅಭಿವೃದ್ಧಿ ಇತಿಹಾಸದಲ್ಲಿ ಅಕ್ಷರಶಃ ಅಜರಾಮರ ಹೆಸರು. ಅನೇಕ ಅಣೆಕಟ್ಟುಗಳು, ನೀರಾವರಿ ಯೋಜನೆ ಗಳು, ಪ್ರವಾಹ ನಿಯಂತ್ರಣ ವ್ಯವಸ್ಥೆ ಗಳು ಮತ್ತು ಕೈಗಾರಿಕಾ ಅಭಿವೃದ್ಧಿಯ ಕನಸುಗಳಿಗೆ ಅವರು ಶಿಲ್ಪಿಯಾಗಿದ್ದಾರೆ. ಅವರ ದೂರದೃಷ್ಟಿಯ ಫಲವನ್ನು ಇಂದಿಗೂ ದೇಶ ಅನುಭವಿಸುತ್ತಿದೆ.
ಮೈಸೂರು ರಾಜ್ಯದ ದಿವಾನರಾಗಿ ೧೯೧೨ರಿಂದ ೧೯೧೮ರವರೆಗೆ ಸೇವೆ ಸಲ್ಲಿಸಿದ ಅವರು, ಕೃಷ್ಣರಾಜ ಸಾಗರ ಅಣೆಕಟ್ಟಿನ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದರು. ಮೈಸೂರು ವಿವಿ ಹಾಗೂ ಭದ್ರಾವತಿಯ ಉಕ್ಕಿನ ಕಾರ್ಖಾನೆಯ ಸ್ಥಾಪನೆಗೆ ಅವರು ನೀಡಿದ ಕೊಡುಗೆ ಅಪಾರ.
ಅದೇ ರೀತಿ ಜೋಗ್ ಜಲವಿದ್ಯುತ್ ವ್ಯವಸ್ಥೆಯನ್ನು ಅಧಿಕೃತವಾಗಿ ಮಹಾತ್ಮ ಗಾಂಧಿ ಜಲವಿದ್ಯುತ್ ಯೋಜನೆ ಎಂದು ಕರೆಯಲಾಗುತ್ತದೆ. ಇದನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭ ಗೊಂಡು ೧೯೪೮ರಲ್ಲಿ ಪೂರ್ಣಗೊಂಡಿತು. ಈ ಯೋಜನೆಯ ಮೂಲ ಮಾಸ್ಟರ್ ಮೈಂಡ್ ಶರಾವತಿ ನದಿಯ ಬೃಹತ್ ಹನಿಯನ್ನು ಬಳಸಿಕೊಳ್ಳುವ ಪರಿಕಲ್ಪನೆಯನ್ನು ಹೊಂದಿರುವ ದಾರ್ಶನಿಕ ಎಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ.
ಪ್ರವಾಹ ನಿಯಂತ್ರಣಕ್ಕಾಗಿ ಸ್ವಯಂಚಾಲಿತ ಗೇಟ್ ವ್ಯವಸ್ಥೆಯನ್ನು ರೂಪಿಸಿದ ಅವರ ದೂರದೃಷ್ಟಿ ಇಂದಿಗೂ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಮಾದರಿ ಯಾಗಿದೆ. ದೇಶಕ್ಕೆ ಸಲ್ಲಿಸಿದ ಅನನ್ಯ ಸೇವೆಯನ್ನು ಗೌರವಿಸಿ ಭಾರತ ಸರ್ಕಾರವು ೧೯೫೫ರಲ್ಲಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿತು. ಅವರ ಜನ್ಮದಿನವಾದ ಸೆಪ್ಟೆಂಬರ್ ೧೫ನ್ನು ದೇಶಾದ್ಯಂತ ಇಂಜಿನಿಯರ್ಸ್ ಡೇಯಾಗಿ ಆಚರಿಸಲಾಗುತ್ತದೆ.
ಶಿಸ್ತು, ಪರಿಶ್ರಮ ಮತ್ತು ದೇಶಸೇವೆಯನ್ನು ಜೀವನಮಲ್ಯ ಗಳಾಗಿ ಮಾಡಿಕೊಂಡಿದ್ದ ಸರ್ ಎಂ.ವಿ ಅವರು ಕೆಲಸವೇ ಪೂಜೆ ಎಂಬ ನಂಬಿಕೆಯಿಂದ ಬದುಕಿದ ಅಪರೂಪದ ವ್ಯಕ್ತಿತ್ವ. ಅವರ ಜೀವನಗಾಥೆ ಇಂದಿಗೂ ಯುವಜನತೆಗೆ ದೇಶಾಭಿಮಾನ, ಕಠಿಣ ಪರಿಶ್ರಮ ಮತ್ತು ನೈತಿಕತೆಯ ಪ್ರೇರಣೆಯಾಗಿದೆ.
ಇಂತಹ ಮಹಾನ್ ವ್ಯಕ್ತಿಯ ಪ್ರತಿಮೆಯನ್ನು ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯ ಸರ್ಕಾರಿ ಶಾಲೆಯ ಕಾಂಪೌಂಡ್ ಮೂಲೆಯಲ್ಲಿ ಕಾಟಾಚಾರಕ್ಕೆ ನಿಲ್ಲಿಸಿ ಬಳಿಕ ಸಂಪೂರ್ಣ ಮರೆತುಬಿಟ್ಟಿರುವುದು ನಿಜಕ್ಕೂ ದುರಂತ. ಪ್ರತಿಮೆ ಸುತ್ತ ಕಸದ ರಾಶಿ, ಸ್ವಚ್ಛತೆಯ ಕೊರತೆ, ಸಮರ್ಪಕ ಬೆಳಕಿನ ವ್ಯವಸ್ಥೆಯಿಲ್ಲ, ನಿರ್ವಹಣೆ ಎಂಬುದೇ ಇಲ್ಲ. ರಾತ್ರಿ ವೇಳೆಗೆ ಪ್ರತಿಮೆ ಕತ್ತಲಲ್ಲಿ ಮುಳುಗಿರುವ ದೃಶ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಕೆಲವು ಸೋ ಕಾಲ್ಡ್ ಉದ್ಯಮಿಗಳು ಹಾಗೂ ಪ್ರಚಾರಪ್ರಿಯ ಗಣ್ಯರು ಪ್ರತಿಮೆ ಅನಾವರಣದ ವೇಳೆ ಮಾತ್ರ ದೇಶಭಕ್ತಿ ಪ್ರದರ್ಶಿಸಿ, ನಂತರ ಸಂಪೂರ್ಣ ನಿದ್ರೆಗೆ ಜಾರಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಇಂಜಿನಿಯರ್ಸ್ ಡೇ ಬಂದಾಗ ಒಂದೆರಡು ಸೀರಿಯಲ್ ಲೈಟ್ ಹಾಕಿ ಫೋಟೋ ಕ್ಲಿಕ್ಕಿಸಿಳ್ಳುವುದನ್ನೇ ಪ್ರತಿಷ್ಠೆ ಎಂದುಕೊಂಡಿರುವ ಈ ನಕಲಿ ದೇಶಭಕ್ತ ಗಿಮಿಕ್ ಗಿರಾಕಿಗಳಿಗೆ ಸರ್ ಎಂ. ವಿಶ್ವೇಶ್ವರಯ್ಯ ಅವರ ಆದರ್ಶಗಳ ಅರಿವು ಇದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.
ಹೈಟೆಕ್ ಡ್ರೆಸ್‌ಕೋಡ್ ಧರಿಸಿ ಮಾಧ್ಯಮಗಳ ಮುಂದೆ ಕುಳಿತು ಸುದ್ದಿಗೋಷ್ಠಿಗಳಲ್ಲಿ ಅಭಿವೃದ್ಧಿಯ ಭಾಷಣ ಮಾಡುವುದು, ನಗರದ ಸಮಸ್ಯೆಹೊತ್ತು ಯಾರಾದರೂ ಪ್ರತಿಭಟಿಸುತ್ತಿದ್ದರೆ ಕೇವಲ ಪ್ರಚಾರಕ್ಕಾಗಿ ತಮ್ಮ ಬೆಂಬಲ ವ್ಯಕ್ತಪಡಿಸುವ ಗಿಮಿಕ್ ಗಿರಾಕಿಗಳು, ಪ್ರತಿಮೆಯ ದುಸ್ಥಿತಿಯ ಬಗ್ಗೆ ಮಾತಾಡದಿರುವುದು ಅವರ ಕಪಟ ಸಮಾಜಸೇವೆಯ ನಾಟಕವನ್ನು ಬೆತ್ತಲೆ ಗೊಳಿಸುತ್ತಿದೆ. ಕೇವಲ ಪ್ರಚಾರಕ್ಕಾಗಿ ಗಿಮಿಕ್ ಮಾಡುವ ಕೆಲ ಜನಪ್ರತಿನಿಧಿಗಳು ಹಾಗೂ ಸಂಘಟನೆಗಳ ಪದಾಧಿಕಾರಿಗಳು ಇನ್ನಾದರೂ ನಿಜವಾದ ಗೌರವ ಮತ್ತು ಜವಾಬ್ದಾರಿಯ ಅರ್ಥವನ್ನು ತಿಳಿದುಕೊಳ್ಳಬೇಕಾಗಿದೆ.
ನಾಡಿಗೆ ಬೆಳಕು ನೀಡಿದ ಮಹಾನ್ ಚೇತನದ ಪ್ರತಿಮೆಯೇ ಇಂದು ಕತ್ತಲಲ್ಲಿ ನಿಂತಿರುವುದು ಕೇವಲ ಆಡಳಿತದ ವೈಫಲ್ಯವಲ್ಲ. ಅದು ನಮ್ಮ ಸಮಾಜದ ಮಲ್ಯಹೀನತೆಯ ಪ್ರತಿಬಿಂಬವಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳು, ಸಂಬಂಧಪಟ್ಟ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತು ಕೊಂಡು ಪ್ರತಿಮೆಯ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ನೀಡಿ, ಶಾಶ್ವತ ಬೆಳಕಿನ ವ್ಯವಸ್ಥೆ ಕಲ್ಪಿಸಿ, ರಾಷ್ಟ್ರ ನಿರ್ಮಾತೃನಿಗೆ ಸಲ್ಲಬೇಕಾದ ಕನಿಷ್ಠ ಗೌರವವನ್ನಾದರೂ ನೀಡಬೇಕಾಗಿದೆ.
ಸರ್ ಎಂ. ವಿಶ್ವೇಶ್ವರಯ್ಯ ಅವರು ನೀಡಿರುವ ಅಭಿವೃದ್ಧಿಯ ಬೆಳಕನ್ನು ನಾವಿಂದು ಅನುಭವಿಸುತ್ತಿzವೆ. ಅವರು ದೇಶದ ಭವಿಷ್ಯಕ್ಕೆ ದೀಪವಾಗಿ ದ್ದಾರೆ. ಆದರೆ ಅವರ ಪ್ರತಿಮೆಗೆ ಒಂದು ದೀಪ ಹಚ್ಚುವ ಸಂಸ್ಕಾರವನ್ನೇ ನಾವು ಕಳೆದುಕೊಂಡಿದ್ದರೆ, ಇತಿಹಾಸಕ್ಕೂ ಭವಿಷ್ಯಕ್ಕೂ ಮಾಡುತ್ತಿರುವ ಕ್ಷಮಿಸಲಾಗದ ಅಪರಾಧವಾಗುತ್ತದೆ.


