ಜು.6: ಕಾರ್ಮೆಲ್ ಮಾತೆ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ…
ಶಿವಮೊಗ್ಗ : ನಗರದ ಬಿ.ಹೆಚ್. ರಸ್ತೆಯಲ್ಲಿರುವ ಐತಿಹಾಸಿಕ ಪ್ರಸಿದ್ಧ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದಲ್ಲಿ ಗ್ರಾಮದೇವತೆ ಕಾರ್ಮೆಲ್ ದೇವಮಾತೆಯ ಮಹೋತ್ಸವವನ್ನು ಪ್ರತಿವರ್ಷದಂತೆ ಈ ಬಾರಿಯೂ ಜುಲೈ ೧೬ರಂದು ಭಕ್ತಿಭಾವ ಮತ್ತು ವೈಭವದಿಂದ ಆಚರಿಸಲಾಗುತ್ತಿದ್ದು, ಈ ಜಾತ್ರಾ ಮಹೋತ್ಸವಕ್ಕೆ ಇಂದು ಸಂಜೆ ಸಕಲ ಭಕ್ತಾಧಿಗಳ ಸಮ್ಮುಖದಲ್ಲಿ ವಿದ್ಯುಕ್ತ ಚಾಲನೆ ನೀಡಲಾಗುವುದು.
ಕಾರ್ಮೆಲ್ ದೇವಮಾತೆಯ ಮಹೋತ್ಸವದ ಅಧಿಕೃತ ಶುಭಾರಂಭಕ್ಕೆ ದೇವಮಾತೆಯ ಧ್ವಜಾರೋಹಣವು ಒಂದು ಶ್ರೇಷ್ಠ ಸಂಪ್ರದಾಯ ವಾಗಿದ್ದು, ಭಕ್ತರೊಳಗಿನ ಆತ್ಮೀಯ ಭಕ್ತಿ ಮತ್ತು ಸಮುದಾಯದ ಪ್ರೀತಿ, ಐಕ್ಯತೆ ಇಂದಿನ ಈ ಭಕ್ತಿಕಾರ್ಯದಲ್ಲಿ ಸ್ಪಷ್ಟವಾಗಿದೆ.
ಜು. ೬ರ ಇಂದಿನಿಂದ ಒಂಬತ್ತು ದಿನಗಳ ನವದಿನಗಳ ನವೇನ ಪ್ರಾರ್ಥನೆ ಆರಂಭವಾಗಲಿದ್ದು, ಸಂಜೆ ೫ ಗಂಟೆಗೆ ದೇವಮಾತೆಗೆ ವಿಶೇಷ ಜಪಸರ ಪ್ರಾರ್ಥನೆ, ಸಂಜೆ ೫.೩೦ಕ್ಕೆ ಚರ್ಚ್ ಆವರಣದಲ್ಲಿ ದೇವಮಾತೆಯ ಧ್ವಜರೋಹಣ ನೆರವೇರಲಿದೆ. ಬಳಿಕ ಸಂಜೆ ೬ ಗಂಟೆಗೆ ವಿಶೇಷ ಬಲಿಪೂಜೆ ಹಾಗೂ ಪ್ರಬೋಧನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ನವದಿನಗಳ ಪ್ರಾರ್ಥನೆ ಹಾಗೂ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಮೆಲ್ ದೇವಮಾತೆಯ ಆಶೀರ್ವಾದ ಮತ್ತು ಕೃಪೆಗೆ ಪಾತ್ರರಾಗುವಂತೆ ಶಿವಮೊಗ್ಗ ಧರ್ಮಕ್ಷೇತ್ರದ ಶ್ರೇಷ್ಠಗುರು ಹಾಗೂ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದ ಧರ್ಮಗುರುಗಳಾದ ರೆ| ಫಾ| ಸ್ಟ್ಯಾನಿ ಡಿಸೋಜಾ ಭಕ್ತರಲ್ಲಿ ಮನವಿ ಮಾಡಿzರೆ.
ಕಾರ್ಮೆಲ್ ದೇವಮಾತೆಗೆ ವಿಶೇಷ ಪೂಜೆ, ಹರಕೆ ಹಾಗೂ ಕಾಣಿಕೆಗಳನ್ನು ಸಲ್ಲಿಸಲು ಇಚ್ಛಿಸುವ ಭಕ್ತರು ಧರ್ಮಕೇಂದ್ರದ ಕಚೇರಿ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದಾಗಿದೆ ಎಂದು ಧರ್ಮಕೇಂದ್ರದ ಗುರುಗಳ ಪರವಾಗಿ ಆರ್ಥಿಕ ಸಮಿತಿ ಹಾಗೂ ಧರ್ಮಕೇಂದ್ರದ ಪಾಲನಾ ಸಮಿತಿಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿzರೆ.
