ಆಯುಧ ಪೂಜೆ ಸಂಭ್ರಮ:ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ
ಶಿವಮೊಗ್ಗ, ಅ. ೧೯: ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಸಂಭ್ರಮ ನಗರಾದ್ಯಂತ ಕಳೆಗಟ್ಟಿದ್ದು, ಪೂಜೆಗೆ ಅಗತ್ಯವಾದ ಹೂವು, ಹಣ್ಣು, ಬೂದು ಗುಂಬಳ, ಬಾಳೆಕಂದು ಸೇರಿದಂತೆ ವಿವಿಧ ಸಾಮಗ್ರಿಗಳ ಖರೀದಿ ಭರಾಟೆ ಮಾರು ಕಟ್ಟೆ ಗಳಲ್ಲಿ ಜೋರಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣುಗಳ ಬೆಲೆ ಏರಿಕೆಯಾಗಿ ದ್ದರೂ ಜನರು ಉತ್ಸಾಹದಿಂದ ಖರೀದಿಯಲ್ಲಿ ತೊಡಗಿzರೆ.

ನವರಾತ್ರಿ ಹಾಗೂ ದಸರಾ ಆಚರಣೆಯ ಸಂದರ್ಭದಲ್ಲಿ ಪ್ರತಿ ವರ್ಷ ಹೂವುಗಳಿಗೆ ಬೇಡಿಕೆ ಹೆಚ್ಚಾಗುವುದು ಸಾಮಾನ್ಯ. ಕೆಲ ದಿನಗಳ ಹಿಂದೆ ಕುಸಿತ ಕಂಡಿದ್ದ ಹೂವುಗಳ ಬೆಲೆ ಇದೀಗ ಹಬ್ಬದ ಹಿನ್ನೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ನವರಾತ್ರಿ ಅವಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ದೇವತಾ ಪೂಜೆಗಳು ಹಾಗೂ ಆಯುಧ ಪೂಜೆ ನಡೆಯುವುದ ರಿಂದ ಹೂವುಗಳ ಬಳಕೆ ಹೆಚ್ಚಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಹೂವುಗಳ ಬೇಡಿಕೆ ಗಣನೀಯವಾಗಿ ಹೆಚ್ಚಿದೆ.

ಹೂವುಗಳ ಬೆಲೆ ಗಗನಮುಖಿ:
ದಸರಾ ಹಬ್ಬದ ಹಿನ್ನೆಲೆಯಲ್ಲಿ ಚೆಂಡು ಹೂವು, ಸೇವಂತಿಗೆ, ಕನಕಾಂಬರ, ಮಲ್ಲಿಗೆ ಹಾಗೂ ಗುಲಾಬಿ ಹೂವುಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಆಯುಧ ಪೂಜೆ ಯಂದು ವಾಹನಗಳು, ಅಂಗಡಿಗಳು, ಕಚೇರಿಗಳು, ಕಾರ್ಖಾನೆಗಳು ಹಾಗೂ ಮನೆಗಳಲ್ಲಿರುವ ಯಂತ್ರೋಪಕರಣಗಳು ಮತ್ತು ವಿವಿಧ ವಸ್ತುಗಳನ್ನು ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸುವ ಸಂಪ್ರದಾಯ ವಿದೆ. ಈ ಹಿನ್ನೆಲೆಯಲ್ಲಿ ಹೂವುಗಳ ಮಾರಾಟ ಹೆಚ್ಚಾಗಿದ್ದು, ಬೆಲೆಯೂ ಏರಿಕೆಯಾಗಿದೆ.
ಮಾರುಕಟ್ಟೆಯಲ್ಲಿ ಕನಕಾಂಬರ ಮತ್ತು ಮಲ್ಲಿಗೆ ಹೂವುಗಳು ಪ್ರತಿ ಕೆಜಿಗೆ ತಲಾ ೮೦೦ ರೂ.ಗಳಂತೆ ಮಾರಾಟವಾಗುತ್ತಿವೆ. ಗುಲಾಬಿ ಹಾಗೂ ಸೇವಂತಿಗೆ ಹೂವುಗಳ ಬೆಲೆ ಕೆಜಿಗೆ ಸುಮಾರು ೪೦೦ ರೂ. ತಲುಪಿದೆ. ಬಿಡಿ ಹೂವುಗಳ ಬೆಲೆಯೂ ಕೆಜಿಗೆ ೪೦೦ ರೂ.ಗಳ ಗಡಿ ದಾಟಿದೆ. ಚೆಂಡುಹೂವು ಮಾರಿನ ಲೆಕ್ಕದಲ್ಲಿ ೬೦ರಿಂದ ೧೦೦ ರೂ.ಗಳವರೆಗೆ ಮಾರಾಟವಾಗು ತ್ತಿದ್ದರೆ, ಸೇವಂತಿಗೆ, ಜಾಜಿ ಹಾಗೂ ಕಾಕಡ ಹೂವುಗಳ ಬೆಲೆ ಮಾರಿಗೆ ೧೫೦ರಿಂದ ೨೫೦ ರೂ.ಗಳವರೆಗೆ ಇದೆ.

ಬೂದುಗುಂಬಳ, ಹಣ್ಣುಗಳಿಗೂ ಬೇಡಿಕೆ:
ಆಯುಧ ಪೂಜೆಯಲ್ಲಿ ಪ್ರಮುಖ ವಾಗಿ ಬಳಸುವ ಬೂದುಗುಂಬಳಕ್ಕೂ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಗಾತ್ರಕ್ಕೆ ಅನುಗುಣವಾಗಿ ಪ್ರತಿ ಕೆಜಿಗೆ ಸುಮಾರು ೪೦ ರೂ.ಗಳಿಂದ ಮಾರಾಟ ವಾಗುತ್ತಿದ್ದು, ಒಂದಕ್ಕೆ ೧೦೦ರಿಂದ ೨೦೦ ರೂ.ಗಳವರೆಗೂ ಬೆಲೆ ಇದೆ. ನಿಂಬೆಹಣ್ಣು ಸೇರಿದಂತೆ ಪೂಜೆಗೆ ಅಗತ್ಯವಾದ ಇತರ ಸಾಮಗ್ರಿಗಳ ಬೆಲೆಯಲ್ಲಿಯೂ ಏರಿಕೆ ಕಂಡುಬಂದಿದೆ.
ಪೂಜೆಗೆ ಬಳಸುವ ಸೇಬು, ಬಾಳೆಹಣ್ಣು, ಮುಸುಂಬಿ ಸೇರಿದಂತೆ ವಿವಿಧ ಹಣ್ಣುಗಳ ಬೆಲೆಯೂ ಹೆಚ್ಚಾಗಿದೆ. ಹೂವು, ಹಣ್ಣುಗಳ ಜತೆಗೆ ತೆಂಗಿನಕಾಯಿ, ಬಾಳೆ ಕಂದು, ಮಾವಿನ ಎಲೆ, ಪೂಜಾ ಸಾಮಗ್ರಿಗಳು ಹಾಗೂ ಅಲಂಕಾರಿಕ ವಸ್ತುಗಳ ಖರೀದಿಯೂ ಜೋರಾಗಿದೆ.
ಮಾರುಕಟ್ಟೆಗಳಲ್ಲಿ ಜನಜಂಗುಳಿ:
ನಗರದ ಗಾಂಧಿ ಬಜಾರ್, ದುರ್ಗಿಗುಡಿ, ನೆಹರು ರಸ್ತೆ, ಬಿ.ಎಚ್. ರಸ್ತೆ, ಪೊಲೀಸ್ ಚೌಕಿ, ಗೋಪಾಳ ಹಾಗೂ ವಿನೋಬನಗರ ಸೇರಿದಂತೆ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಜನಜಂಗುಳಿ ಕಂಡುಬಂದಿದೆ. ಬೆಳಗ್ಗೆಯಿಂದಲೇ ಜನರು ಮಾರುಕಟ್ಟೆಗಳಿಗೆ ಆಗಮಿಸಿ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸುತ್ತಿ ರುವ ದೃಶ್ಯ ಸಾಮಾನ್ಯವಾಗಿತ್ತು. ಹೂವು, ಹಣ್ಣುಗಳ ಅಂಗಡಿಗಳಲ್ಲಿ ವ್ಯಾಪಾರ ಚುರುಕುಗೊಂಡಿದ್ದು, ತರಕಾರಿ, ದಿನಸಿ ಹಾಗೂ ಪೂಜಾ ಸಾಮಗ್ರಿಗಳ ಮಾರಾಟವೂ ಹೆಚ್ಚಾಗಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರಿಗೆ ತುಸು ಹೊರೆಯಾಗಿದ್ದರೂ, ಹಬ್ಬದ ಸಂಭ್ರಮಕ್ಕೆ ಯಾವುದೇ ಕೊರತೆಯಾಗಿಲ್ಲ. ಆಯುಧ ಪೂಜೆ ಮತ್ತು ವಿಜಯದಶಮಿಯನ್ನು ಸಡಗರದಿಂದ ಆಚರಿಸಲು ಜನರು ಸಿದ್ಧತೆ ಮಾಡಿಕೊಂಡಿದ್ದು, ನಗರದೆಡೆ ಹಬ್ಬದ ವಾತಾವರಣ ಮನೆಮಾಡಿದೆ.

