ಎಸ್ಐಆರ್ ವಿರುದ್ಧ ಕಾಂಗ್ರೆಸ್ ಆರೋಪ ಆಧಾರರಹಿತ: ಮಾ. ನಾಗರಾಜ್ ಟೀಕೆ
ಭದ್ರಾವತಿ, ಅ.೧೫: ಚುನಾವಣೆಯಲ್ಲಿ ಸೋಲನು ಭವಿಸಿದಾಗ ಕಾಂಗ್ರೆಸ್ ಪಕ್ಷವು ಇವಿಎಂ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್ ಸೇರಿದಂತೆ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಆಧಾರರಹಿತ ಆರೋಪ ಗಳನ್ನು ಮಾಡುತ್ತಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾ. ನಾಗರಾಜ್ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಎಸ್ಐಆರ್ ಪ್ರಕ್ರಿಯೆ ಹೊಸದಲ್ಲ. ಕಳೆದ ೨೫ ವರ್ಷಗಳಿಂದ ವಿವಿಧ ಸಂದರ್ಭ ಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ಈ ಪ್ರಕ್ರಿಯೆಯ ಮೂಲಕವೇ ಕಾಂಗ್ರೆಸ್ ಪಕ್ಷವೂ ವಿವಿಧ ರಾಜ್ಯಗಳಲ್ಲಿ ಚುನಾವಣಾ ಯಶಸ್ಸು ಕಂಡಿದೆ. ಆದರೆ ಸೋಲಿನ ಬಳಿಕ ಇವಿಎಂ ಮತ್ತು ಎಸ್ಐಆರ್ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿ ರುವುದು ಸರಿಯಲ್ಲ ಎಂದರು.

ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸುವವರು, ಮರಣ ಹೊಂದಿದವರು, ಸ್ಥಳಾಂತರಗೊಂಡವರು, ನಕಲಿ ಮತದಾರರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿ ರುವವರ ವಿವರಗಳನ್ನು ಪರಿಶೀಲಿ ಸಬೇಕು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಲಕ್ಷಾಂತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಹೊಸ ಮತದಾರರ ಹೆಸರು ಸೇರ್ಪಡೆಗೂ ಅವಕಾಶವಿದೆ. ಹೀಗಾಗಿ ಈ ಪ್ರಕ್ರಿಯೆಯ ಕುರಿತು ಆರೋಪ ಮಾಡುವವರು ವಾಸ್ತವಾಂಶಗಳನ್ನು ಗಮನಿಸಬೇಕು ಎಂದರು.
ಎಸ್ಐಆರ್ ಕುರಿತು ಆಕ್ಷೇಪ ಗಳಿದ್ದರೆ ಸೂಕ್ತ ದಾಖಲೆಗಳೊಂದಿಗೆ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು. ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ವಿದ್ದರೂ ಗದ್ದಲ ಸೃಷ್ಟಿಸುವುದು ಸರಿಯಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಉತ್ತರ ಬಯಸುವವರು ಸಂಸತ್ತಿನಲ್ಲಿ ವಿಷಯ ಮಂಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಆರ್ಥಿಕತೆ ಪ್ರಗತಿಯತ್ತ ಸಾಗುತ್ತಿದೆ ಎಂದು ಹೇಳಿದ ಅವರು, ಭಾರತದ ಜಿಡಿಪಿ ಬೆಳವಣಿಗೆ ಹಾಗೂ ಆರ್ಥಿಕ ಗುರಿಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಟೀಕಿಸಿದ ನಾಗರಾಜ್, ಯೋಜನೆಗಳಿಗೆ ಅನುದಾನ ಒದಗಿಸುವಲ್ಲಿ ಸರ್ಕಾರಕ್ಕೆ ತೊಂದರೆಯಾಗುತ್ತಿದೆ. ಚುನಾವಣೆಗೆ ಮುನ್ನ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಎಚ್. ತೀರ್ಥಯ್ಯ, ಕೂಡ್ಲಿಗೆರೆ ಹಾಲೇಶ್, ಜಿ. ಧರ್ಮಪ್ರಸಾದ್, ಬಿ.ಜಿ. ರಾಮಲಿಂಗಯ್ಯ, ಎಂ.ಎಸ್. ಸುರೇಶಪ್ಪ, ಕಾ.ರಾ. ನಾಗರಾಜ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

