ಭೀಮನ ಮಡುವಿನಲ್ಲಿ ಶಾಂತವಾಗಿ ವಿಸರ್ಜನೆಗೊಂಡ ಹಿಂದೂ ಮಹಾಸಭಾ ಗಣಪತಿ; ಅದ್ಧೂರಿ ರಾಜಬೀದಿ ಉತ್ಸವಕ್ಕೆ ತೆರೆ…
ಶಿವಮೊಗ್ಗ, ಸೆ.೨೬: ಶಿವಮೊಗ್ಗದ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ, ನಮ್ಮೂರ ಗಣಪ ಎಂದೇ ಆತ್ಮೀಯವಾಗಿ ಕರೆಯಲ್ಪಡುವ ಹಿಂದೂ ಸಂಘಟನಾ ಮಹಾ ಮಂಡಳಿ ಗಣಪತಿಯ ವಿಸರ್ಜನಾಪೂರ್ವ ರಾಜಬೀದಿ ಉತ್ಸವ ನಗರದಲ್ಲಿ ಭಕ್ತಿ, ಸಂಭ್ರಮ, ಸಾಂಸ್ಕೃತಿಕ ವೈಭವ ಹಾಗೂ ಜನಸಾಗರದ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯಿತು.
ಹನ್ನೊಂದು ದಿನಗಳ ಕಾಲ ಕೋಟೆ ಶ್ರೀ ಭೀಮೇಶ್ವರ ದೇವಾಲಯದ ಆವರಣದಲ್ಲಿ ಭಕ್ತರ ಆರಾಧನೆಗೆ ಪಾತ್ರವಾಗಿದ್ದ ೮೨ನೇ ವರ್ಷದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವದ ಬಳಿಕ ಇಂದು ಬೆಳಗಿನ ಜವ ಸುಮಾರು ೫.೧೫ಕ್ಕೆ ಭೀಮನ ಮಡುವಿನಲ್ಲಿ ಶಾಂತವಾಗಿ ವಿಸರ್ಜನೆ ಗೊಳ್ಳುವ ಮೂಲಕ ವಿಜೃಂಭಣೆಯ ಉತ್ಸವಕ್ಕೆ ಭಕ್ತಿಪೂರ್ವಕ ತೆರೆ ಎಳೆಯಿತು.
ಸೆ.೨೫ರಂದು ಬೆಳಿಗ್ಗೆ ೧೧.೧೫ಕ್ಕೆ ಕೋಟೆ ಶ್ರೀ ಭೀಮೇಶ್ವರ ದೇವಾಲಯದ ಆವರಣದಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ರಾಜಬೀದಿ ಉತ್ಸವಕ್ಕೆ ಚಾಲನೆ ದೊರೆಯುತ್ತಿ ದ್ದಂತೆಯೇ, ಶಿವಮೊಗ್ಗದ ಪ್ರಮುಖ ರಸ್ತೆಗಳು ಭಕ್ತರಿಂದ ಕಿಕ್ಕಿರಿದು ತುಂಬಿದವು. ಗಣಪತಿಯ ದರ್ಶನ ಪಡೆಯಲು ನಗರದ ವಿವಿಧ ಭಾಗಗಳಿಂದ ಮಾತ್ರ ವಲ್ಲದೆ ಸುತ್ತಮುತ್ತಲಿನ ಊರು ಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಗಣಪತಿ ಬಪ್ಪಾ ಮೋರಿಯಾ, ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ಜೈ ಜೈ ಶಿವಾಜಿ ಅಂಬಾಭವಾನಿ ಸೇರಿದಂತೆ ಮೊಳಗಿದ ಘೋಷಣೆಗಳು ವಾತಾವರಣದಲ್ಲಿ ಭಕ್ತಿಯ ಕಿಚ್ಚು ಹೊತ್ತಿಸಿದವು. ಡಿಜೆ, ಡೊಳ್ಳು, ತಮಟೆ, ನಾದಸ್ವರ ಹಾಗೂ ವಿವಿಧ ವಾದ್ಯಮೇಳಗಳ ನಾದಕ್ಕೆ ಯುವಕರು ಹೆಜ್ಜೆ ಹಾಕಿದರೆ, ಮಹಿಳೆ ಯರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದ ಜನರು ಉತ್ಸವದ ಸಂಭ್ರಮದಲ್ಲಿ ಪಾಲ್ಗೊಂಡರು.
ನಗರದ ಪ್ರಮುಖ ರಸ್ತೆಗಳು ಕೇಸರಿ ಧ್ವಜಗಳು, ತಳಿರು ತೋರಣಗಳು, ವಿದ್ಯುತ್ ದೀಪಾಲಂಕಾರ, ಸ್ವಾಗತ ಕಮಾನುಗಳು ಹಾಗೂ ಗಣಪತಿಯ ವಿವಿಧ ರೂಪಗಳ ಕಲಾಕೃತಿಗಳಿಂದ ಕಂಗೊಳಿಸುತ್ತಿದ್ದವು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಮನೆಗಳ ಮಹಡಿ, ಕಟ್ಟಡಗಳ ಮೇಲ್ಛಾವಣಿ ಹಾಗೂ ರಸ್ತೆ ಬದಿಗಳಲ್ಲಿ ನಿಂತಿದ್ದ ಸಾವಿರಾರು ಭಕ್ತರು ಗಣಪತಿಯ ದರ್ಶನ ಪಡೆದರು. ಸೆಲ್ಫಿ ಕ್ಲಿಕ್ಕಿಕೊಂಡರು. ಹಲವರು ಹೂವುಗಳನ್ನು ಅರ್ಪಿಸಿ, ಆರತಿ ಬೆಳಗಿ ತಮ್ಮ ಭಕ್ತಿಭಾವವನ್ನು ಸಮರ್ಪಿಸಿದರು.
ರಾಜಬೀದಿ ಉತ್ಸವ ಸಾಗುತ್ತಿದ್ದಂತೆ ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ಜನಜಂಗುಳಿ ಹೆಚ್ಚುತ್ತಲೇ ಸಾಗಿತು. ಒಂದೆಡೆ ವಾದ್ಯಗಳ ಮೊಳಗು, ಮತ್ತೊಂದೆಡೆ ಭಕ್ತರ ಜಯಘೋಷ, ಇನ್ನೊಂದೆಡೆ ಕಣ್ಮನ ಸೆಳೆಯುವ ಅಲಂಕಾರ, ಡಿಸಿ ಸದ್ದು ಹಾಗೂ ಆಕರ್ಷಕ ಸಿಡಿಮದ್ದು ಪ್ರದರ್ಶನ ಇವೆಲ್ಲವೂ ಸೇರಿ ಶಿವಮೊಗ್ಗದ ಗಣೇಶೋತ್ಸವದ ವೈಭವವನ್ನು ಅನಾವರಣಗೊಳಿಸಿದವು.
ಗಣಪತಿಯ ಭವ್ಯ ಮೂರ್ತಿ, ವಿಶೇಷ ಅಲಂಕಾರ ಮತ್ತು ರಾಜಗಾಂಭೀರ್ಯದ ಮೆರವಣಿಗೆ ಜನರನ್ನು ತನ್ನತ್ತ ಸೆಳೆಯಿತು. ಹಿರಿಯರು ಭಕ್ತಿಭಾವದಿಂದ ಉತ್ಸವದಲ್ಲಿ ಪಾಲ್ಗೊಂಡರೆ, ಯುವ ಸಮೂಹ ಉತ್ಸಾಹದಿಂದ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿತು. ಮಹಿಳೆಯರು ಹಾಗೂ ಪುಟಾಣಿ ಮಕ್ಕಳು ಕೂಡ ಉತ್ಸವದಲ್ಲಿ ಭಾಗವಹಿಸಿ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದರು.
ನಮ್ಮೂರ ಗಣಪ ಎಂಬ ಆತ್ಮೀಯತೆಯಿಂದ ಶಿವಮೊಗ್ಗದ ಜನತೆ ಆರಾಧಿಸುವ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ನಗರದ ಜನರ ಭಾವನಾತ್ಮಕ ಬೆಸುಗೆಯ ಪ್ರತೀಕವಾಗಿಯೂ ಗಮನ ಸೆಳೆಯಿತು. ವಿವಿಧ ವರ್ಗ ಹಾಗೂ ವಯೋಮಾನದ ಜನರು ಒಂದೆಡೆ ಸೇರಿ ಗಣಪತಿಯ ದರ್ಶನ ಪಡೆದು ಭಕ್ತಿಭಾವದಲ್ಲಿ ಮಿಂದೆದ್ದರು.
ಮೆರವಣಿಗೆ ಸಾಗಿದ ಪ್ರತಿಯೊಂದು ಪ್ರದೇಶದಲ್ಲೂ ಭಕ್ತರು ಗಣಪತಿಯನ್ನು ಉತ್ಸಾಹದಿಂದ ಸ್ವಾಗತಿಸಿದರು. ಹಲವೆಡೆ ಪ್ರಸಾದ ವಿತರಣೆ ನಡೆಯಿತು. ದಾರಿಯುದ್ದಕ್ಕೂ ಭಕ್ತರ ಹರ್ಷೋದ್ಗಾರ, ಜಯಘೋಷ ಹಾಗೂ ಆರತಿಯ ದೃಶ್ಯಗಳು ಉತ್ಸವಕ್ಕೆ ವಿಶೇಷ ಮೆರುಗು ನೀಡಿದವು.
ಅಪಾರ ಸಂಖ್ಯೆಯಲ್ಲಿ ಭಕ್ತರು ಸ್ವಯಂಪ್ರೇರಿತರಾಗಿ ಉತ್ಸವದಲ್ಲಿ ಪಾಲ್ಗೊಂಡಿದ್ದರೂ ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಉತ್ಸವವು ಅತ್ಯಂತ ಶಾಂತಿಯುತವಾಗಿ ಹಾಗೂ ಯಶಸ್ವಿಯಾಗಿ ಸಂಪನ್ನಗೊಂಡಿತು.
ಭಕ್ತರ ಶಿಸ್ತು, ಸಂಘಟಕರ ವ್ಯವಸ್ಥೆ ಹಾಗೂ ಜಿಡಳಿತ ಮತ್ತು ಪೊಲೀಸ್ ಇಲಾಖೆಯ ಸಹಕಾರದಿಂದ ರಾಜಬೀದಿ ಉತ್ಸವ ಸುಗಮವಾಗಿ ನಡೆಯಿತು.
ಭಕ್ತರ ಕಣ್ಮನ ಸೆಳೆದ ಗಣಪತಿಯ ಭವ್ಯ ಮೆರವಣಿಗೆ, ಸಾವಿರಾರು ಜನರ ಹರ್ಷೋದ್ಗಾರ, ವಾದ್ಯಮೇಳಗಳ ನಾದ ಹಾಗೂ ಭಕ್ತಿಭಾವದ ವಾತಾವರಣ ಶಿವಮೊಗ್ಗದ ಗಣೇಶೋತ್ಸವದ ವೈಭವವನ್ನು ಸಾರಿತು.
ರಾಜಬೀದಿ ಉತ್ಸವ ಹಾಗೂ ವಿಸರ್ಜನಾ ಕಾರ್ಯಕ್ರಮ ಯಶಸ್ವಿ ಯಾಗಿ ಸಂಪನ್ನಗೊಂಡ ಹಿನ್ನೆಲೆಯಲ್ಲಿ ಹಿಂದೂ ಸಂಘಟನಾ ಮಹಾ ಮಂಡಳಿಯು ಉತ್ಸವದಲ್ಲಿ ಪಾಲ್ಗೊಂಡ ಸಮಸ್ತ ಭಕ್ತರು, ಜಿಡಳಿತ, ಪೊಲೀಸ್ ಇಲಾಖೆ ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದೆ.
