ಕ್ಷಣದ ಮೌಲ್ಯ: ಬದುಕನ್ನು ಮುಂದೂಡದಿರಿ…
ಬದುಕನ್ನು ಮುಂದೂಡದಿರಿ
ಏಕೆಂದರೆ……
ಕೆಲವೊಮ್ಮೆ ಜೀವನ ನಮಗೆ ಯಾವುದೇ ಎಚ್ಚರಿಕೆ ನೀಡುವುದಿಲ್ಲ. ನಿನ್ನೆ ನಮ್ಮ ಜೊತೆಯಲ್ಲಿದ್ದ ಕ್ಷಣಗಳು, ಇಂದು ಕೇವಲ ನೆನಪುಗಳಾಗಿ ಉಳಿದಿರುತ್ತವೆ. ಒಮ್ಮೆ ನಮ್ಮದಾಗಿದ್ದ ಸಮಯ, ಅವಕಾಶಗಳು, ಸಂಬಂಧಗಳು ಇವೆಲ್ಲವೂ ನಿಧಾನವಾಗಿ ಕೈತಪ್ಪಿದ ನಂತರವೇ ಅವುಗಳ ನಿಜವಾದ ಮಲ್ಯ ಅರಿವಾಗುತ್ತದೆ.
ಮಾನವನು ಬಹಳ ಬಾರಿ ನಾಳೆ ಎಂಬ ನಿರೀಕ್ಷೆಯ ಬದುಕುತ್ತಾನೆ. ನಾಳೆ ಮಾಡುತ್ತೇನೆ. ಸಮಯ ಸಿಕ್ಕಾಗ ಮಾತನಾಡುತ್ತೇನೆ. ಒಂದು ದಿನ ನನ್ನ ಕನಸನ್ನು ನೆರವೇರಿಸುತ್ತೇನೆ ಎಂದು ಹೇಳುತ್ತಲೇ ಅನೇಕ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳುತ್ತಾನೆ.
ಆದರೆ ಜೀವನದ ದೊಡ್ಡ ಸತ್ಯವೇನೆಂದರೆ ನಮ್ಮ ಕೈಯಲ್ಲಿ ನಿಜವಾಗಿ ಇರುವುದೇ ಈಕ್ಷಣ. ನಾವು ಬದುಕಿನ ಮಹತ್ವವನ್ನು ಅರಿಯುವುದು ಹೆಚ್ಚಾಗಿ ಯಾವುದಾದರೂ ಕಳೆದುಕೊಂಡ ನಂತರವೇ. ತಾಯಿಯ ಮಮತೆಯ ನೆರಳು ದೂರವಾದಾಗ ಆ ಪ್ರೀತಿಯ ಬೆಲೆ ತಿಳಿಯುತ್ತದೆ. ಮನಸ್ಸಿಗೆ ಹತ್ತಿರವಾದವರು ದೂರವಾದಾಗ ಅವರ ಉಪಸ್ಥಿತಿಯ ಅರ್ಥ ತಿಳಿಯುತ್ತದೆ. ಒಂದು ಅವಕಾಶ ಕೈ ತಪ್ಪಿದಾಗ ಸಮಯದ ಮಲ್ಯ ಅರಿವಾಗುತ್ತದೆ. ಆ ಕ್ಷಣಗಳಲ್ಲಿ ಮನಸ್ಸು ಮನವಾಗಿ ಒಂದೇ ಮಾತು ಕೇಳುತ್ತದೆ, ಆ ದಿನ ನಾನು ಸ್ವಲ್ಪ ಧೈರ್ಯ ಮಾಡಿದ್ದರೆ… ಆ ಮಾತನ್ನು ಹೇಳಿದ್ದರೆ… ಆ ಒಂದು ಹೆಜ್ಜೆ ಮುಂದೆ ಇಟ್ಟಿದ್ದರೆ…

ಪಶ್ಚಾತ್ತಾಪ ಎಂಬುದು ಕೇವಲ ನೋವಲ್ಲ; ಅದು ಸಮಯ ಮರಳಿ ಬರುವುದಿಲ್ಲ ಎಂಬ ಅರಿವಿನ ಭಾರ. ಅದಕ್ಕಾಗಿಯೇ ಬದುಕಿನಲ್ಲಿ ಪ್ರತಿಯೊಂದು ದಿನವೂ ಅಮೂಲ್ಯ. ಪ್ರತಿ ಬೆಳಗ್ಗೆಯೂ ದೇವರು ನಮಗೆ ಕೊಡುವ ಮತ್ತೊಂದು ಅವಕಾಶ. ನಿನ್ನೆ ಮಾಡಿದ ತಪ್ಪುಗಳನ್ನು ಸರಿಪಡಿಸಲು, ಮುರಿದ ಸಂಬಂಧಗಳನ್ನು ಜೋಡಿಸಲು, ಮನಸ್ಸಿನ ಕನಸುಗಳಿಗೆ ಜೀವ ತುಂಬಲು ಮತ್ತು ನಮ್ಮೊಳಗಿನ ಹೊಸ ವ್ಯಕ್ತಿಯನ್ನು ಕಂಡುಕೊಳ್ಳಲು ದೊರಕುವ ಅವಕಾಶ.
ಈ ದಿನ ಪರಿಪೂರ್ಣವಾಗಿರದೇ ಇರಬಹುದು. ಸಮಸ್ಯೆಗಳಿರಬಹುದು, ಬೇಸರಗಳಿರಬಹುದು, ಮನಸ್ಸನ್ನು ಕಾಡುವ ಅನೇಕ ನೋವುಗಳಿರ ಬಹುದು. ಕೆಲವೊಮ್ಮೆ ಬದುಕು ತುಂಬಾ ಭಾರವಾಗಿಯೇ ಅನಿಸುತ್ತದೆ. ನಗುತಿದ್ದ ಮುಖದ ಹಿಂದೆ ಕಣ್ಣೀರು ಅಡಗಿರಬಹುದು. ನಾನು ಚೆನ್ನಾಗಿzನೆ ಎಂಬ ಮಾತಿನೊಳಗೆ ಸಾವಿರ ನೋವುಗಳು ಮನವಾಗಿರಬಹುದು. ಆದರೂ ಜೀವನ ತನ್ನ ಸೌಂದರ್ಯವನ್ನು ಕಳೆದುಕೊಳ್ಳುವುದಿಲ್ಲ. ಮಳೆಯ ನಂತರ ಭೂಮಿ ಹೇಗೆ ಹಸಿರಾಗುತ್ತದೆಯೋ, ಅದೇ ರೀತಿ ಕಷ್ಟಗಳ ನಂತರ ಬದುಕೂ ಹೊಸ ಬೆಳಕನ್ನು ಕಾಣುತ್ತದೆ. ರಾತ್ರಿಯ ಕತ್ತಲೆ ಎಷ್ಟು ಗಾಢವಾಗಿದ್ದರೂ, ಬೆಳಗಿನ ಸೂರ್ಯೋದಯವನ್ನು ತಡೆಯಲು ಸಾಧ್ಯವಿಲ್ಲ. ಅದೇ ರೀತಿ ನೋವುಗಳ ನಡುವೆ ಸಹ ಆಶೆಯೊಂದು ಸದಾ ಜೀವಂತವಾಗಿರುತ್ತದೆ.
ಬಹಳ ಬಾರಿ ನಾವು ಜೀವನವನ್ನು ದೊಡ್ಡ ಸಾಧನೆಗಳಲ್ಲಿ ಹುಡುಕುತ್ತೇವೆ. ಆದರೆ ಬದುಕಿನ ನಿಜವಾದ ಸಂತೋಷ ಸಣ್ಣ ಸಣ್ಣ ಕ್ಷಣಗಳಲ್ಲಿ ಅಡಗಿದೆ. ಮನೆಯವರ ಜೊತೆ ಕುಳಿತು ನಗುವ ಒಂದು ಕ್ಷಣ, ಮಳೆಯ ಹನಿಯಲ್ಲಿ ಮಣ್ಣಿನ ವಾಸನೆ ಅನುಭವಿಸುವ ಕ್ಷಣ, ಮನಸ್ಸಿಗೆ ಇಷ್ಟವಾದ ಹಾಡನ್ನು ಕೇಳುವ ಸಮಯ, ಪ್ರೀತಿಸಿದವರ ಕಾಳಜಿಯ ಮಾತು ಇವೆಲ್ಲವೂ ಜೀವನದ ನಿಜವಾದ ಸಂಪತ್ತು.
ಆದರೆ ನಾವು ಅವುಗಳನ್ನು ಗಮನಿಸುವಷ್ಟರಲ್ಲಿ ಸಮಯ ಮುಂದೆ ಸಾಗಿರುತ್ತದೆ. ಮಾನವ ಜೀವನದ ದೊಡ್ಡ ದುಃಖವೆಂದರೆ ನಾವು ಬದುಕುವುದಕ್ಕಿಂತ ಹೆಚ್ಚು ಕಾಯುತ್ತೇವೆ.ಸಂತೋಷಕ್ಕೆ ಸರಿಯಾದ ಸಮಯಕ್ಕಾಗಿ ಕಾಯುತ್ತೇವೆ. ಕನಸುಗಳಿಗೆ ಧೈರ್ಯಕ್ಕಾಗಿ ಕಾಯುತ್ತೇವೆ. ಪ್ರೀತಿಯನ್ನು ಹೇಳಲು ಅವಕಾಶಕ್ಕಾಗಿ ಕಾಯುತ್ತೇವೆ.
ಆದರೆ ಸಮಯ ಯಾರನ್ನೂ ಕಾಯುವುದಿಲ್ಲ. ದಿನಗಳು ನಿಧಾನವಾಗಿ ವರ್ಷಗಳಾಗಿ ಬದಲಾಗುತ್ತವೆ. ಕೊನೆಗೆ ಉಳಿಯುವುದು ನಾವು ಬದುಕಿದ ಕ್ಷಣಗಳ ನೆನಪು ಮಾತ್ರ. ಆಗ ಮನಸ್ಸು ಮತ್ತೆ ಕೇಳುತ್ತದೆ ನನ್ನ ಬಳಿ ಸಮಯ ಇzಗ ನಾನು ಏಕೆ ಬದುಕಲಿಲ್ಲ?
ಆದ್ದರಿಂದ ಬದುಕನ್ನು ಮುಂದೂಡಬಾರದು. ಮನಸ್ಸು ಹೇಳುವ ಒಳ್ಳೆಯ ಕೆಲಸವನ್ನು ತಕ್ಷಣ ಆರಂಭಿಸಬೇಕು. ಕ್ಷಮೆ ಕೇಳಬೇಕಾದರೆ ಇಂದು ಕೇಳಬೇಕು. ಪ್ರೀತಿಯನ್ನು ಹೇಳಬೇಕಾದರೆ ಇಂದು ಹೇಳಬೇಕು. ಕನಸಿನ ದಾರಿಯಲ್ಲಿ ನಡೆಯಬೇಕಾದರೆ ಇಂದು ಮೊದಲ ಹೆಜ್ಜೆ ಇಡಬೇಕು. ಏಕೆಂದರೆ ಪ್ರತಿಯೊಂದು ದೊಡ್ಡ ಸಾಧನೆಯ ಹಿಂದೆ ಒಂದು ಸಣ್ಣ ಆರಂಭ ಇರುತ್ತದೆ. ಇಂದಿನ ದಿನ ನಮ್ಮ ಕೈಯಲ್ಲಿರುವ ಅಮೂಲ್ಯ ಉಡುಗೊರೆ. ಇದು ಮತ್ತೆ ಮರಳಿ ಬರುವುದಿಲ್ಲ. ಈ ಕ್ಷಣಗಳು ನಾಳೆ ಕೇವಲ ನೆನಪುಗಳಾಗಿಬಿಡುತ್ತವೆ. ಆದ್ದರಿಂದ ಪ್ರತಿಯೊಂದು ದಿನವನ್ನೂ ಅರ್ಥಪೂರ್ಣವಾಗಿ ಬದುಕಬೇಕು.
ಕಲಿಯಿರಿ.. ನಗಿರಿ… ಪ್ರೀತಿಸಿ… ಕ್ಷಮಿಸಿ… ನಿಮ್ಮವರ ಜೊತೆ ಸಮಯ ಕಳೆಯಿರಿ. ಮನಸ್ಸಿಗೆ ಸಂತೋಷ ಕೊಡುವ ಕೆಲಸಗಳನ್ನು ಮಾಡಿ ಮತ್ತು ಮುಖ್ಯವಾಗಿ ನಿಮ್ಮ ಬದುಕನ್ನು ಸಂಪೂರ್ಣವಾಗಿ ಬದುಕಿ.
ಏಕೆಂದರೆ ನಾಳೆ ನಮ್ಮ ಕೈಯಲ್ಲಿಲ್ಲ. ಆದರೆ ಇಂದು ಇನ್ನೂ ನಮ್ಮ ಕೈಯಲ್ಲಿದೆ. ನಾಳೆಯ ಪಶ್ಚಾತ್ತಾಪವನ್ನು ತಪ್ಪಿಸಬೇಕಾದರೆ, ಇಂದಿನ ದಿನವನ್ನು ಪ್ರೀತಿಯಿಂದ, ಧೈರ್ಯದಿಂದ ಮತ್ತು ಸಂಪೂರ್ಣ ಹೃದಯದಿಂದ ಬದುಕಬೇಕು. ಯಾಕೆಂದರೆ ಬದುಕು ಎಂದರೆ ಕೇವಲ ಉಸಿರಾಟವಲ್ಲ, ಪ್ರತಿ ಕ್ಷಣವನ್ನೂ ಮನಸಾರೆ ಅನುಭವಿಸುವುದು.

ನಮ್ಮ ಕೈಯಲ್ಲಿ ಇಂದಿನ ದಿನ ಇದೆ. ಮಾನವ ಜೀವನದಲ್ಲಿ ಅತ್ಯಂತ ಅಮೂಲ್ಯವಾದದ್ದು ಸಮಯ. ಹಣ ಕಳೆದುಹೋದರೆ ಮತ್ತೆ ಸಂಪಾದಿಸಬಹುದು, ಕಳೆದುಹೋದ ವಸ್ತುಗಳನ್ನು ಮತ್ತೆ ಪಡೆಯಬಹುದು, ಆದರೆ ಕಳೆದ ಸಮಯವನ್ನು ಯಾವತ್ತೂ ಮರಳಿ ತರಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಬದುಕಿನಲ್ಲೂ ನಾಳೆ ಎಂಬ ನಿರೀಕ್ಷೆ ಇರುತ್ತದೆ. ಆದರೆ ನಿಜವಾಗಿ ನಮ್ಮ ಕೈಯಲ್ಲಿರುವುದು ಇಂದು ಮಾತ್ರ. ನಾವು ಬಹಳ ಬಾರಿ ಈ ಸತ್ಯವನ್ನು ಅರಿಯದೇ ಬದುಕುತ್ತೇವೆ. ಯಾವುದನ್ನಾದರೂ ಮಾಡಬೇಕು ಎಂದುಕೊಂಡು ಮುಂದೂಡುತ್ತೇವೆ. ಪ್ರೀತಿಯನ್ನು ಹೇಳಬೇಕಾದಾಗ ಮನವಾಗುತ್ತೇವೆ. ಕನಸುಗಳನ್ನು ಬೆನ್ನಟ್ಟಬೇಕಾದಾಗ ಭಯಕ್ಕೆ ಶರಣಾಗುತ್ತೇವೆ. ನಂತರ ಒಂದು ದಿನ ಹಿಂದಿರುಗಿ ನೋಡಿದಾಗ, ಅಂದು ನಾನು ಅದನ್ನು ಮಾಡಿದ್ದರೆ? ಎಂಬ ಪಶ್ಚಾತ್ತಾಪ ಮಾತ್ರ ಉಳಿದುಕೊಳ್ಳುತ್ತದೆ.
ಒಮ್ಮೆ ನಮ್ಮ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳೋಣ ನಾಳೆ ಬಂದಿದೆ ಎಂದು. ಆಗ ಇಂದಿನ ದಿನವನ್ನು ಹಿಂದಿರುಗಿ ನೋಡುತ್ತಾ, ನಾನು ಇಂದು ಏನು ಮಾಡದೇ ಬಿಟ್ಟಿದ್ದಕ್ಕೆ ವಿಷಾದಿಸುತ್ತಿzನೆ ಎಂದು ನಮ್ಮನ್ನೇ ಪ್ರಶ್ನಿಸೋಣ. ಈ ಪ್ರಶ್ನೆಯೇ ಬದುಕಿನ ದಿಕ್ಕನ್ನು ಬದಲಾಯಿಸುವ ಶಕ್ತಿಯಿದೆ. ಏಕೆಂದರೆ ಆ ಪ್ರಶ್ನೆಗೆ ಸಿಗುವ ಉತ್ತರವೇ ನಮ್ಮ ಮನದ ನಿಜವಾದ ಆಸೆಗಳನ್ನು ತೋರಿಸುತ್ತದೆ. ಯಾರಿಗಾದರೂ ಕ್ಷಮೆ ಕೇಳಬೇಕಿತ್ತೇ? ಮನೆಯವರ ಜೊತೆ ಇನ್ನಷ್ಟು ಸಮಯ ಕಳೆಯಬೇಕಿತ್ತೇ? ಕನಸಿನ ಕೆಲಸ ಆರಂಭಿಸಬೇಕಿತ್ತೇ? ನಮ್ಮ ಆರೋಗ್ಯದ ಕಡೆ ಗಮನ ಕೊಡಬೇಕಿತ್ತೇ? ಅಥವಾ ನಮ್ಮ ಮನಸ್ಸು ಹೇಳುತ್ತಿದ್ದ ದಾರಿಯಲ್ಲಿ ಹೆಜ್ಜೆ ಇಡಬೇಕಿತ್ತೇ?
ಬಹಳ ಬಾರಿ ನಾವು ಬದುಕನ್ನು ದೊಡ್ಡ ಘಟನೆಗಳಲ್ಲಿ ಹುಡುಕುತ್ತೇವೆ. ಆದರೆ ಬದುಕಿನ ನಿಜವಾದ ಸಂತೋಷ ಸಣ್ಣ ಸಣ್ಣ ಕ್ಷಣಗಳಲ್ಲಿ ಅಡಗಿದೆ. ತಾಯಿಯ ಮಮತೆಯ ಮಾತು, ಸ್ನೇಹಿತನ ನಗು, ಮಳೆಯ ಹನಿ, ಬೆಳಗಿನ ಸೂರ್ಯೋದಯ, ಮನಸ್ಸಿಗೆ ಹತ್ತಿರವಾದವರ ಜೊತೆಗಿನ ಒಂದು ಕ್ಷಣ ಇವೆಲ್ಲವೂ ಬದುಕಿನ ಅಮೂಲ್ಯ ಉಡುಗೊರೆಗಳು. ಆದರೆ ಅವು ನಮ್ಮ ಬಳಿಯೇ ಇರುವಾಗ ನಾವು ಅವುಗಳ ಮಲ್ಯ ಅರಿಯುವುದಿಲ್ಲ. ಅವು ಕಳೆದುಹೋದ ನಂತರವೇ ಅದರ ಬೆಲೆ ತಿಳಿಯುತ್ತದೆ.
ಇಂದಿನ ದಿನ ಪರಿಪೂರ್ಣವಾಗಿರದಿರಬಹುದು. ಪ್ರತಿಯೊಬ್ಬರ ಬದುಕಿನಲ್ಲೂ ಸಮಸ್ಯೆಗಳು ಇವೆ. ಕೆಲವರಿಗೆ ಆರ್ಥಿಕ ಸಂಕಷ್ಟ, ಕೆಲವರಿಗೆ ಮಾನಸಿಕ ಒತ್ತಡ, ಕೆಲವರಿಗೆ ಸಂಬಂಧಗಳ ನೋವು, ಇನ್ನೂ ಕೆಲವರಿಗೆ ಭವಿಷ್ಯದ ಭಯ. ಜೀವನ ಎಲ್ಲರಿಗೂ ಒಂದೇ ರೀತಿಯಲ್ಲ. ಆದರೆ ಯಾವ ಜೀವನದದರೂ ಒಂದು ಬೆಳಕು ಇರುತ್ತದೆ. ಮೋಡಗಳ ನಡುವೆ ಸೂರ್ಯನ ಕಿರಣ ಹೇಗೆ ದಾರಿ ಹುಡುಕುತ್ತದೆಯೋ ಹಾಗೆಯೇ ಸಮಸ್ಯೆಗಳ ನಡುವೆಯೂ ಅವಕಾಶಗಳು ಅಡಗಿರುತ್ತವೆ. ಆ ಅವಕಾಶಗಳನ್ನು ಕಾಣಲು ಧೈರ್ಯ ಬೇಕು.
ನಾವು ಅನೇಕ ಬಾರಿ ಸರಿಯಾದ ಸಮಯ ಬಂದಾಗ ಮಾಡುತ್ತೇನೆ ಎಂದು ಕಾಯುತ್ತೇವೆ. ಆದರೆ ಬದುಕಿನಲ್ಲಿ ಎಲ್ಲವೂ ಪರಿಪೂರ್ಣವಾಗುವ ದಿನ ಎಂದಿಗೂ ಬರುವುದಿಲ್ಲ. ಸಮಯ ಕಾಯುವುದಿಲ್ಲ. ದಿನಗಳು ನಿಧಾನವಾಗಿ ವರ್ಷಗಳಾಗಿ ಬದಲಾಗುತ್ತವೆ. ಕೊನೆಗೆ ನಾವು ಮಾಡದೇ ಉಳಿಸಿದ ಕೆಲಸಗಳೇ ನಮ್ಮ ಮನಸ್ಸನ್ನು ಕಾಡುತ್ತವೆ. ಬದುಕಿನಲ್ಲಿ ನಾವು ಮಾಡಿದ ತಪ್ಪುಗಳಿಗಿಂತ, ಮಾಡದೇ ಬಿಟ್ಟ ಅವಕಾಶಗಳೇ ಹೆಚ್ಚು ನೋವು ಕೊಡುತ್ತವೆ.
ಇಂದು ನಮ್ಮ ಕೈಯಲ್ಲಿರುವ ಅತ್ಯಂತ ದೊಡ್ಡ ಶಕ್ತಿ ಆರಂಭಿಸುವ ಶಕ್ತಿ. ಸಣ್ಣ ಹೆಜ್ಜೆಯಾದರೂ ಮುಂದೆ ಇಡುವುದು ಮುಖ್ಯ. ಪುಸ್ತಕ ಓದಬೇಕು ಎಂದರೆ ಇಂದು ಮೊದಲ ಪುಟ ಓದಿ. ಆರೋಗ್ಯ ಕಾಪಾಡಬೇಕು ಎಂದರೆ ಇಂದು ಸ್ವಲ್ಪ ನಡೆಯಿರಿ. ಪ್ರೀತಿಯನ್ನು ವ್ಯಕ್ತಪಡಿಸಬೇಕು ಎಂದರೆ ಇಂದು ಒಂದು ಮಾತು ಹೇಳಿ. ಕನಸನ್ನು ಸಾಕಾರಗೊಳಿಸಬೇಕು ಎಂದರೆ ಇಂದು ಮೊದಲ ಪ್ರಯತ್ನ ಆರಂಭಿಸಿ. ಏಕೆಂದರೆ ಪ್ರತಿಯೊಂದು ದೊಡ್ಡ ಸಾಧನೆಯ ಹಿಂದೆ ಒಂದು ಸಣ್ಣ ಆರಂಭ ಇರುತ್ತದೆ.

ಮಾನವ ಜೀವನದ ಸೌಂದರ್ಯ ಅದರ ಅನಿಶ್ಚಿತತೆಯಲ್ಲಿದೆ. ನಾಳೆ ಏನಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಅದಕ್ಕಾಗಿಯೇ ಇಂದಿನ ಕ್ಷಣವನ್ನು ಅರ್ಥಪೂರ್ಣವಾಗಿ ಬದುಕುವುದು ಮುಖ್ಯ. ಕೋಪವನ್ನು ಹಿಡಿದುಕೊಂಡು ಬದುಕುವುದಕ್ಕಿಂತ ಕ್ಷಮಿಸುವುದು ಉತ್ತಮ. ದ್ವೇಷವನ್ನು ಬೆಳೆಸುವುದಕ್ಕಿಂತ ಪ್ರೀತಿಯನ್ನು ಹಂಚುವುದು ಉತ್ತಮ. ಭಯದಲ್ಲಿ ಕಾಲ ಕಳೆಯುವುದಕ್ಕಿಂತ ಧೈರ್ಯವಾಗಿ ಪ್ರಯತ್ನಿಸುವುದು ಉತ್ತಮ. ಏಕೆಂದರೆ ಜೀವನ ಎಂದಿಗೂ ನಿಲ್ಲುವುದಿಲ್ಲ; ಅದು ಮುಂದೆ ಸಾಗುತ್ತಲೇ ಇರುತ್ತದೆ.
ನಾವು ಬದುಕನ್ನು ಮುಂದೂಡುತ್ತಾ ಇರಬಾರದು. ಒಂದು ದಿನ ಸಂತೋಷವಾಗುತ್ತೇನೆ ಎಂದು ಕೊಳ್ಳುವುದಕ್ಕಿಂತ ಇಂದು ಸಂತೋಷಕ್ಕೆ ಕಾರಣ ಹುಡುಕುತ್ತೇನೆ ಎಂಬ ಮನೋಭಾವ ಬೇಕು. ಏಕೆಂದರೆ ಬದುಕು ಎಂದರೆ ಭವಿಷ್ಯದ ನಿರೀಕ್ಷೆಯಲ್ಲ; ಪ್ರತಿ ದಿನದ ಅನುಭವಗಳ ಸಮೂಹ. ಇಂದು ನಾವು ಹೇಗೆ ಬದುಕುತ್ತೇವೋ, ಅದೇ ನಮ್ಮ ನಾಳೆಯ ನೆನಪು ಆಗುತ್ತದೆ.
ಇಂದಿನ ದಿನ ಇನ್ನೂ ನಮ್ಮ ಕೈಯಲ್ಲಿದೆ. ಈ ದಿನದೊಂದಿಗೆ ಅನೇಕ ಅವಕಾಶಗಳಿವೆ. ಕಲಿಯಲು, ಬದಲಾಯಲು, ಪ್ರೀತಿಸಲು, ಹೊಸ ಕನಸು ಕಾಣಲು, ತಪ್ಪುಗಳನ್ನು ಸರಿಪಡಿಸಲು, ಬದುಕನ್ನು ಹೊಸದಾಗಿ ಆರಂಭಿಸಲು ಅವಕಾಶ ಇದೆ. ಒಂದು ದಿನ ಕಳೆದ ಮೇಲೆ ಅದು ಮರಳಿ ಬರುವುದಿಲ್ಲ. ಆದ್ದರಿಂದ ಈ ದಿನವನ್ನು ವ್ಯರ್ಥ ಮಾಡಬೇಡಿ.
ನಾಳೆ ವಿಷಾದಿಸದಿರಲು, ಇಂದೇ ಬದುಕನ್ನು ಅಪ್ಪಿಕೊಳ್ಳಿ. ಮನಸ್ಸು ಹೇಳುವ ಒಳ್ಳೆಯ ಕೆಲಸವನ್ನು ಮುಂದೂಡಬೇಡಿ. ನಿಮ್ಮ ಕನಸುಗಳಿಗೆ ಒಂದು ಹೆಜ್ಜೆ ಹತ್ತಿರವಾಗಿರಿ. ನಿಮ್ಮವರ ಜೊತೆ ಪ್ರೀತಿಯಿಂದ ಮಾತನಾಡಿ. ನಿಮ್ಮೊಳಗಿನ ಭಯವನ್ನು ಮೀರಿ ಮುಂದೆ ಸಾಗಿರಿ.
ಏಕೆಂದರೆ ನಮ್ಮ ಬಳಿ ಇನ್ನೂ ಇಂದಿನ ದಿನ ಇದೆ ಅದನ್ನು ಅರ್ಥಪೂರ್ಣವಾಗಿಸುವ ಜವಾಬ್ದಾರಿಯೂ ನಮ್ಮದೇ ಅಲ್ಲವೇ?

ಶಿವಮೊಗ್ಗ.
