ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ವಿಶ್ವ ಪರಿಸರ ದಿನಾಚರಣೆ: ಹಸಿರೇ ನಮ್ಮ ಉಸಿರು…

Share Below Link

ಭೂಮಿ ನಮ್ಮ ತಾಯಿ, ನಾವು ಅವಳ ಮಕ್ಕಳು ಎಂಬುದು ಕೇವಲ ಮಾತಲ್ಲ, ಸತ್ಯ. ಆದರೆ ಇಂದು ಅದೇ ತಾಯಿಯ ಎದೆಯ ಮೇಲೆ ನಾವು ಗಾಯ ಮಾಡುತ್ತಿದ್ದೇವೆ. ಇದನ್ನು ತಡೆದು, ಪರಿಸರದ ಮಹತ್ವವನ್ನು ಜಗತ್ತಿಗೆ ಸಾರಲು ಪ್ರತಿ ವರ್ಷ ಜೂನ್ ೫ ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ೧೯೭೨ರಲ್ಲಿ ಸ್ವೀಡನ್‌ನ ಸ್ಟಾಕ್‌ಹೋಂನಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಪರಿಸರ ಸಮ್ಮೇಳನದ ನೆನಪಿಗಾಗಿ ೧೯೭೪ರಿಂದ ಈ ದಿನವನ್ನು ಆಚರಿಸುತ್ತಾ ಬರಲಾಗಿದೆ.
೨೦೨೬ರ ವಿಶೇಷ ಘೋಷವಾಕ್ಯ: ಈ ವರ್ಷದ ಥೀಮ್ ನಮ್ಮ ಭೂಮಿ. ನಮ್ಮ ಭವಿಷ್ಯ. ನಾವು ಪುನಃಸ್ಥಾಪನೆಯ ಪೀಳಿಗೆ Generation Restoration.. ಹವಾಮಾನ ಬದಲಾವಣೆ, ಮರುಭೂಮೀಕರಣ ಮತ್ತು ಬರದಿಂದ ಹಾಳಾಗಿರುವ ಭೂಮಿ ಯನ್ನು ಮತ್ತೆ ಹಸಿರಾಗಿಸುವುದು ಇದರ ಮುಖ್ಯ ಗುರಿ. ವಿಶ್ವಸಂಸ್ಥೆಯ ಪ್ರಕಾರ, ಪ್ರತಿ ೧ ಡಾಲರ್ ಹೂಡಿಕೆಯು ಭೂಮಿ ಪುನಃಸ್ಥಾಪನೆಗೆ ೩೦ ಡಾಲರ್ ಲಾಭ ತರುತ್ತದೆ.
ಪರಿಸರ ಏಕೆ ಹಾಳಾಗುತ್ತಿದೆ?
೧. ಅರಣ್ಯನಾಶ: ಕಾಗದ, ಪೀಠೋಪಕರಣ, ನಗರೀಕರಣಕ್ಕಾಗಿ ಪ್ರತಿದಿನ ಲಕ್ಷಾಂತರ ಮರಗಳನ್ನು ಕಡಿಯಲಾಗುತ್ತಿದೆ. ಒಂದು ಮರ ೧ ವರ್ಷಕ್ಕೆ ೨೦ ಕೆ.ಜಿ. ಇಂಗಾಲದ ಡೈಆಕ್ಸೈಡ್ ಹೀರಿಕೊಳ್ಳುತ್ತದೆ. ಮರ ಹೋದರೆ ನಮ್ಮ ಉಸಿರಾಟಕ್ಕೆ ಕುತ್ತು.
೨. ಪ್ಲಾಸ್ಟಿಕ್ ಮಾಲಿನ್ಯ: ಭಾರತವೊಂದರ ದಿನಕ್ಕೆ ೨೬,೦೦೦ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದು ೫೦೦ ವರ್ಷ ಕಳೆದರೂ ಕರಗುವುದಿಲ್ಲ. ಸಮುದ್ರ ಸೇರುವ ಪ್ಲಾಸ್ಟಿಕ್‌ನಿಂದ ಮೀನು, ಆಮೆಗಳು ಸಾಯುತ್ತಿವೆ.
೩. ಜಲ ಮಾಲಿನ್ಯ: ಕಾರ್ಖಾನೆಯ ರಾಸಾಯನಿಕ, ಊರಿನ ಚರಂಡಿ ನೀರು ನೇರವಾಗಿ ನದಿ-ಕೆರೆ ಸೇರುತ್ತಿದೆ. ಬೆಂಗಳೂರಿನ ಬೇಲಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಇದಕ್ಕೆ ಸಾಕ್ಷಿ.
೪. ವಾಯು ಮಾಲಿನ್ಯ: ವಾಹನ, ಥರ್ಮಲ್ ವಿದ್ಯುತ್ ಸ್ಥಾವರಗಳಿಂದ ಹೊರಬರುವ ಹೊಗೆ ದೆಹಲಿಯಂತಹ ನಗರ ಗಳಲ್ಲಿ ಉಸಿರಾಡಲೂ ಕಷ್ಟವಾಗಿಸಿದೆ.
೫. ಹವಾಮಾನ ವೈಪರೀತ್ಯ: ಇದರ ಪರಿಣಾಮವಾಗಿ ಮಳೆ ಏರುಪೇರಾಗಿದೆ. ಸುಡು ಬೇಸಿಗೆ, ಅಕಾಲಿಕ ಮಳೆ, ಬರ-ಪ್ರವಾಹ ಹೆಚ್ಚಾಗಿದೆ. ಕರ್ನಾಟಕದ ಕಳೆದ ೧೦ ವರ್ಷದಲ್ಲಿ ೩ ಬಾರಿ ಬರಗಾಲ ಬಂದಿದೆ.
ಪರಿಸರ ಉಳಿಸದಿದ್ದರೆ ಏನಾಗುತ್ತದೆ?
ಮಂಕುತಿಮ್ಮನ ಕಗ್ಗ ಹೇಳುತ್ತದೆ:
ನಿಸರ್ಗವಿದು ನಿಯಮದಲಿ ನಡೆದಿಹುದು |
ಮೀರಿದರೆ ಮನುಜನು ಅಳಿದಿಹನು ||
ನಾವು ಪ್ರಕೃತಿಯ ನಿಯಮ ಮೀರಿದರೆ, ಪ್ರಕೃತಿಯೇ ನಮ್ಮನ್ನು ಶಿಕ್ಷಿಸುತ್ತದೆ. ಕುಡಿಯಲು ನೀರಿಲ್ಲ, ಉಸಿರಾಡಲು ಶುದ್ಧ ಗಾಳಿಯಿಲ್ಲ, ತಿನ್ನಲು ವಿಷಮುಕ್ತ ಆಹಾರವಿಲ್ಲ ಎಂಬ ಸ್ಥಿತಿ ಬರುತ್ತದೆ. ನಮ್ಮ ಮಕ್ಕಳ ಭವಿಷ್ಯ ಕತ್ತಲಾಗುತ್ತದೆ.
ನಾವೇನು ಮಾಡಬಹುದು? ಶಾಲೆಯಿಂದಲೇ ಆರಂಭ
೧. ಒಂದು ಮಗು, ಒಂದು ಮರ ಯೋಜನೆ: ಪ್ರತಿ ವಿದ್ಯಾರ್ಥಿ ಶಾಲೆಯಲ್ಲಿ ಒಂದು ಗಿಡ ನೆಟ್ಟು, ತನ್ನ ಹೆಸರಿನ ಫಲಕ ಹಾಕಿ, ೫ನೇ ತರಗತಿ ಮುಗಿಯುವವರೆಗೂ ಪೋಷಿಸಲಿ. ಬೇವು, ಹೊಂಗೆ, ಅರಳಿ, ಅತ್ತಿ – ಇವು ನಮ್ಮ ನಾಡಿನ ಮರಗಳು.
೨. ಪ್ಲಾಸ್ಟಿಕ್ ಮುಕ್ತ ಶಾಲೆ: ನೋ ಪ್ಲಾಸ್ಟಿಕ್ ಝೆನ್ ಎಂದು ಘೋಷಿಸಿ. ಮಕ್ಕಳು ಸ್ಟೀಲ್ ಬಾಟಲ್, ತಿಂಡಿಗೆ ಬಾಳೆಎಲೆ/ತಟ್ಟೆ, ಬಟ್ಟೆ ಕೈಚೀಲ ತರಲಿ. ಶಾಲಾ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಲೋಟ-ಪ್ಲೇಟ್ ಸಂಪೂರ್ಣ ನಿಷೇಽಸಿ.
೩. ಕಸದಿಂದ ರಸ: ಹಸಿ ಕಸದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಶಾಲೆಯ ಕೈತೋಟಕ್ಕೆ ಬಳಸಿ. ಒಣ ಕಸವನ್ನು ವಿಂಗಡಿಸಿ ಮರುಬಳಕೆಗೆ ಕೊಡಿ. ‘Best out of Waste’ ಸ್ಪರ್ಧೆ ನಡೆಸಿ.
೪. ನೀರಿಂಗಿಸಿ, ಉಳಿಸಿ: ಮಳೆ ನೀರು ಕೊಯ್ಲು ಗುಂಡಿ ತೋಡಿ. ಸೋರುವ ನಲ್ಲಿಗಳನ್ನು ತಕ್ಷಣ ದುರಸ್ತಿ ಮಾಡಿ. ಒಂದು ಹನಿ ನೀರು, ಒಂದು ಜೀವ ಎಂದು ಮಕ್ಕಳಿಗೆ ತಿಳಿಸಿ.
೫. ಜಾಗೃತಿ ಜಾಥಾ: ಪರಿಸರ ದಿನದಂದು ಮಕ್ಕಳಿಂದ ಊರಿನಲ್ಲಿ ಜಾಥಾ ಮಾಡಿ. ಗಿಡ ನೆಡಿ, ಪರಿಸರ ಉಳಿಸಿ, ಪ್ಲಾಸ್ಟಿಕ್ ಬೇಡ, ಬದುಕು ಕಾಪಾಡಿ ಘೋಷಣೆ ಕೂಗಲಿ.
೬. ಪಠ್ಯದ ಜೊತೆ ಪ್ರಕೃತಿ: ವಿeನ, ಸಮಾಜ ಪಾಠವನ್ನು ತೋಟ, ಕೆರೆದಂಡೆ, ಗzಯಲ್ಲಿ ಮಾಡಿ. ಮಕ್ಕಳಿಗೆ ಮಣ್ಣಿನ ಘಮ, ಹಕ್ಕಿಯ ಕಲರವ ಪರಿಚಯಿಸಿ.


ಸರ್ಕಾರ ಮತ್ತು ನಮ್ಮ ಪಾತ್ರ:
ಸರ್ಕಾರ ಹಸಿರು ಕರ್ನಾಟಕ, ವನಮಹೋತ್ಸವ, ಸ್ವಚ್ಛ ಭಾರತ ಯೋಜನೆಗಳನ್ನು ಜಾರಿ ಮಾಡಿದೆ. ಆದರೆ ಕಾನೂನು ಮಾಡಿದರೆ ಸಾಲದು. ಪ್ರತಿಯೊಬ್ಬ ಪ್ರಜೆಯೂ ಜಾಗೃತನಾಗಬೇಕು. ಡಿ.ವಿ.ಜಿ ಹೇಳಿದಂತೆ ಪರಹಿತದ ಮಾತಿರಲಿ; ಪರರಿನೆ ಜೀವಿಪನು | ನರಜಂತು; ಪಶು ಪಕ್ಷಿ ಕೀಟ ಮೀನ್ಗಳವೋಲ್ || – ನಾವು ಪರರಿಗಾಗಿ, ಅಂದರೆ ಗಿಡ-ಮರ, ಪ್ರಾಣಿ-ಪಕ್ಷಿಗಳಿಗಾಗಿ ಬದುಕಬೇಕು.
ಪರಿಸರ ಸಂರಕ್ಷಣೆ ಒಂದು ದಿನದ ಆಚರಣೆಯಲ್ಲ, ಅದು ಜೀವನಶೈಲಿ. ನಾವು ಇಂದು ಬಿತ್ತುವ ಒಂದು ಬೀಜ, ಮುಂದಿನ ಪೀಳಿಗೆಗೆ ದೊಡ್ಡ ಆಲದ ಮರ. ಪರಿಸರ ಜಾಗೃತಿಯು ಚಿಕ್ಕಮಕ್ಕಳಿಗೆ ಶಾಲೆಯಿಂದಲೇ ಮೂಡಿಸಬೇಕು. ಮಹಾತ್ಮ ಗಾಂಽಜಿ ಹೇಳಿದಂತೆ ಭೂಮಿ ಎಲ್ಲರ ಅಗತ್ಯ ಪೂರೈಸಬಲ್ಲದು, ಆದರೆ ದುರಾಸೆಯನ್ನಲ್ಲ. ಆಸೆ ಕಡಿಮೆ ಮಾಡಿ, ಆಚರಣೆ ಹೆಚ್ಚು ಮಾಡೋಣ.
ಈ ಸಂದರ್ಭದಲ್ಲಿ ಪೂರ್ಣಚಂದ್ರತೇಜಸ್ವಿಯವರ ಮಾತುಗಳು ನೆನಪಾಗುತ್ತವೆ. ಅಭಿವೃದ್ಧಿ ಅಂದರೆ ಕಾಂಕ್ರೀಟ್ ಕಾಡು ಬೆಳೆಸುವುದಲ್ಲ. ಹಸಿರು ಕಾಡನ್ನು ಉಳಿಸುವುದು.

ಕಾಡು ನಾಶ ಮಾಡಿ ನೆಮ್ಮದಿಯಾಗಿ ಮಲಗುತ್ತೇವೆ ಅಂದುಕೊಂಡಿದ್ದೇವೆ. ಕಾಡು ಸೇಡು ತೀರಿಸಿಕೊಳ್ಳಲು ಶುರು ಮಾಡಿದರೆ ನಮಗೆ ಮಲಗಲು ಜಾಗವೇ ಇರುವುದಿಲ್ಲ.

ಚಿಟ್ಟೆ ಇಲ್ಲದ ಹೂವು, ಹಕ್ಕಿ ಇಲ್ಲದ ಮರ, ಮೀನು ಇಲ್ಲದ ನದಿ – ಇವೆಲ್ಲ ಸತ್ತ ಚಿತ್ರಗಳು. ಬದುಕಿರುವ ಚಿತ್ರ ಬೇಕಾ ಹಾಗಿದ್ರೆ ಅವುಗಳನ್ನು ಉಳಿಸಿ.
ಮಳೆ ಬರುವುದು ಆಕಾಶದಿಂದಲ್ಲ, ಕಾಡಿನಿಂದ ಮತ್ತು ಹುಲಿ ಉಳಿದರೆ ಕಾಡು ಉಳಿಯುತ್ತದೆ ಎಂಥಹ ಅದ್ಬುತ ಎಚ್ಚರಿಕೆಯ ಮಾತುಗಳನ್ನು ಹೇಳಿzರೆ.
ಈಗಿನ ಮಕ್ಕಳು ಅಲೆ ಮೃಗಾಲಯದಲ್ಲಿ ಒಂದೋ ಎರಡೊ ಹುಲಿ ಇತರೆ ಪ್ರಾಣಿಗಳನ್ನು ನೋಡುತ್ತಿzರೆ. ಮುಂದಿನ ದಿನದಲ್ಲಿ ಬರೀ ಚಿತ್ರ , ಚಲನಚಿತ್ರಗಳಲ್ಲಿ ನೋಡುವ ಕಾಲ ಬಹುದೂರದಲ್ಲಿಲ್ಲ. ಪ್ರತಿ ವಿದ್ಯಾರ್ಥಿಯಿಂದ ಗಿಡ ನೆಡಿಸಿ, ಪರಿಸರ ಜಾಗೃತಿ ಕಾಳಜಿ ಮೂಡಿಸೋಣ. ಬನ್ನಿ, ನೀರು ಗಾಳಿ ಅನ್ನ ವಾಸ ಎಲ್ಲವನ್ನು ನೀಡಿದ ಭೂಮಿ ತಾಯಿಯ ಋಣ ತೀರಿಸೋಣ. ನಮ್ಮ ಪರಿಸರ, ನಮ್ಮ ಉಸಿರು, ನಮ್ಮ ಭವಿಷ್ಯ.

ಅನಿತಸೂರ್ಯ
ಶಿಕ್ಷಕಿ -ಸಾಹಿತಿ, ಶಿವಮೊಗ್ಗ

Leave a Reply

Your email address will not be published. Required fields are marked *