ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಹಲಸಿನ ಸಿಹಿ ರಹಸ್ಯ: ಕಡುಬಿನ ಕಥೆ…

Share Below Link

ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಹಲಸಿನ ಹಣ್ಣು ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಇದರಲ್ಲಿಯೇ ವಿಶಿಷ್ಟ ಸ್ಥಾನ ಪಡೆದಿರುವುದು ಹಲಸಿನ ಕಡುಬು. ಇದು ಕೇವಲ ಆಹಾರವಲ್ಲ, ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಪ್ರಕೃತಿ ಜೀವನಶೈಲಿಯ ಸಂಕೇತವಾಗಿದೆ. ಮನೆಮಂದಿಯ ಒಗ್ಗಟ್ಟಿನ ಸುವಾಸನೆಯೂ ಇದರಲ್ಲಿ ಅಡಗಿದೆ.
ಹಲಸಿನ ಕಡುಬಿನ ಇತಿಹಾಸವು ಶತಮಾನಗಳ ಹಿಂದಿನದು. ಮಲೆನಾಡಿನ ಗ್ರಾಮೀಣ ಜನರು ತಮ್ಮ ತೋಟಗಳಲ್ಲಿ ಬೆಳೆಯುವ ಹಲಸಿನ ಹಣ್ಣನ್ನು ಸಂರಕ್ಷಿಸುವುದಕ್ಕಾಗಿ ವಿವಿಧ ಪದಾರ್ಥಗಳನ್ನು ತಯಾರಿಸುತ್ತಿದ್ದರು. ಅದರಲ್ಲಿ ಒಂದು ಈ ಕಡುಬು. ಅಕ್ಕಿ ಹಿಟ್ಟು, ತೆಂಗಿನಕಾಯಿ ಮತ್ತು ಬೆಲ್ಲವನ್ನು ಸೇರಿಸಿ ಹಲಸಿನ ಹಣ್ಣಿನ ಸುವಾಸನೆ ಯೊಂದಿಗೆ ತಯಾರಿಸುವ ಈ ತಿಂಡಿ, ಮಳೆಗಾಲದಲ್ಲಿ ಹೆಚ್ಚಾಗಿ ಮಾಡಲಾಗುತ್ತಿತ್ತು.
ಹಳೆಯ ಕಾಲದಲ್ಲಿ ಮನೆಗಳಲ್ಲಿ ಕಲ್ಲು ಉರುಳಿ ಬಳಸಿ ಅಕ್ಕಿ ಹಿಟ್ಟು ತಯಾರಿಸಿ, ಕಾಡಿನಲ್ಲಿ ದೊರೆಯುವ ಮರದ ಎಲೆಗಳಲ್ಲಿ ಈ ಕಡುಬನ್ನು ಮುಚ್ಚಿ ಬೇಯಿಸುವ ಪದ್ಧತಿ ಇತ್ತು. ಇದು ಪರಿಸರ ಸ್ನೇಹಿ ಜೀವನದ ಉದಾಹರಣೆ.
ಪೌರಾಣಿಕವಾಗಿ ಹಲಸಿನ ಮರವನ್ನು ಶ್ರೀಮಂತಿಕೆಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಕೆಲವೆಡೆ ಇದನ್ನು ದೇವರ ಮರ ಎಂದು ಕರೆಯುತ್ತಾರೆ. ಹಲಸಿನ ಹಣ್ಣಿನಿಂದ ತಯಾರಿಸಲಾದ ಕಡುಬುಗಳನ್ನು ಹಬ್ಬ-ಹರಿದಿನಗಳಲ್ಲಿ ದೇವರಿಗೆ ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯ ಇದೆ.
ವಿಶೇಷವಾಗಿ ನಾಗ ಪಂಚಮಿ, ವರಮಹಾಲಕ್ಷ್ಮಿ ಹಬ್ಬಗಳಲ್ಲಿ ಹಲಸಿನ ಕಡುಬಿಗೆ ಮಹತ್ವವಿದೆ. ಪುರಾಣಗಳ ಪ್ರಕಾರ, ಪ್ರಕೃತಿಯ ಫಲಗಳನ್ನು ದೇವರಿಗೆ ಅರ್ಪಿಸುವುದು ಪುಣ್ಯಕರ ಎಂದು ನಂಬಲಾಗಿದ್ದು, ಹಲಸಿನ ಕಡುಬು ಅದರಲ್ಲಿ ಪ್ರಮುಖವಾಗಿದೆ.
ಅಪರೂಪದ ತಯಾರಿ ವಿಧಾನ:
ಹಲಸಿನ ಕಡುಬಿನ ವಿಶಿಷ್ಟತೆಯೇ ಅದರ ತಯಾರಿ ವಿಧಾನ. ಹಣ್ಣಾದ ಹಲಸಿನ ಗಡ್ಡೆಯನ್ನು ಚೆನ್ನಾಗಿ ನುಣ್ಣಗೆ ಮಾಡಿ, ಅಕ್ಕಿ ಹಿಟ್ಟು, ತೆಂಗಿನಕಾಯಿ ತುರಿ, ಬೆಲ್ಲ ಸೇರಿಸಿ, ಕೆಲವೆಡೆ ಏಲಕ್ಕಿ ಪುಡಿ ಸೇರಿಸಿ ಸುಗಂಧ ಹೆಚ್ಚಿಸಲಾಗುತ್ತದೆ. ಬಳಿಕ ಮರವಿನ ಎಲೆಗಳಲ್ಲಿ ಹೆಚ್ಚಾಗಿ ಹಲಸಿನ ಎಲೆ ಅಥವಾ ಬಾಳೆ ಎಲೆ ಮುಚ್ಚಿ, ಆವಿಯಲ್ಲಿ ಬೇಯಿಸಲಾಗುತ್ತದೆ. ಇದರ ಸುವಾಸನೆ ಮತ್ತು ರುಚಿ, ಯಾವುದೇ ಆಧುನಿಕ ಮಿಠಾಯಿಗೆ ಸಾಟಿಯಾಗಿದೆ.
ಜನಜೀವನದಲ್ಲಿ ಸ್ಥಾನ:
ಹಲಸಿನ ಕಡುಬು ಕೇವಲ ತಿಂಡಿಯಲ್ಲ, ಅದು ಒಂದು ಭಾವನೆ. ಮಳೆಗಾಲದಲ್ಲಿ ಮನೆಮಂದಿ ಎಲ್ಲರೂ ಸೇರಿ ತಯಾರಿಸುವ ಈ ಪದಾರ್ಥ ಕುಟುಂಬ ಬಾಂಧವ್ಯವನ್ನು ಬಲಪಡಿಸುತ್ತದೆ. ಹಳ್ಳಿಗಳಲ್ಲಿ ಹಬ್ಬದ ದಿನಗಳಲ್ಲಿ ಈ ಕಡುಬುಗಳನ್ನು ಹಂಚಿಕೊಳ್ಳುವ ಪದ್ಧತಿ ಇತ್ತು. ಇಂದಿನ ವೇಗದ ಜೀವನದಲ್ಲೂ ಈ ಪರಂಪರೆಯನ್ನು ಉಳಿಸಿಕೊಂಡಿರುವುದು ವಿಶೇಷವಾಗಿದೆ.
ಹಲಸಿನ ಕಡುಬು ಆರೋಗ್ಯಕರವಾಗಿದ್ದು ನೈಸರ್ಗಿಕ ಸಕ್ಕರೆಗಳಿಂದ ಸಮೃದ್ಧವಾಗಿದೆ. ಎಲೆಗಳಲ್ಲಿ ಬೇಯಿಸುವುದರಿಂದ ವಿಶೇಷ ಸುವಾಸನೆ ಬರುತ್ತದೆ. ಹಳೆಯ ಕಾಲದಲ್ಲಿ ಇದನ್ನು ಬಡವರ ಮಿಠಾಯಿ ಎಂದು ಕರೆಯಲಾಗುತ್ತಿತ್ತು. ಆದರೆ ಇಂದು ಇದು ಸಂಪ್ರದಾಯದ ಚಿಹ್ನೆಯಾಗಿದೆ.
ಕೆಲವೆಡೆ ಇದನ್ನು ಕಡುಬು ಕದಲೆ ಎಂಬ ಹೆಸರಿನಿಂದಲೂ ಕರೆಯುತ್ತಾರೆ.
ಹಲಸಿನ ಕಡುಬು ನಮ್ಮ ಊರಿನ ಸುವಾಸನೆ, ನಮ್ಮ ಸಂಸ್ಕೃತಿಯ ಪ್ರತೀಕ. ಇದು ಕೇವಲ ರುಚಿಗಿಂತ ಹೆಚ್ಚು ನಮ್ಮ ಪೂರ್ವಜರ eನ, ಪ್ರಕೃತಿ ಪ್ರೀತಿ ಮತ್ತು ಪರಂಪರೆಯ ಮಲ್ಯವನ್ನು ತೋರಿಸುತ್ತದೆ. ಇಂತಹ ಅಪರೂಪದ ಆಹಾರಗಳನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮ ಹೊಣೆಗಾರಿಕೆಯಾಗಿದೆ.

ಸನ್ನಿಧಿ ವಿ, ಶಿರಸಿ


Leave a Reply

Your email address will not be published. Required fields are marked *