ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ದಲಿತರ ಸೂರ್ಯನಂತಿದ್ದ ಸ್ವಾಭಿಮಾನಿ, ಕಳಂಕರಹಿತ ರಾಜಕಾರಣಿ ವಿ.ಶ್ರೀನಿವಾಸ್ ಪ್ರಸಾದ್ ಯುಗಾಂತ್ಯ…

Share Below Link

ಬೆಂಗಳೂರು: ಚಾಮರಾಜ ನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ವಿ. ಶ್ರೀನಿವಾಸ ಪ್ರಸಾದ್(೭೬) ರಾತ್ರಿ ೧.೨೦ರ ಸುಮಾರಿಗೆ ತೀವ್ರ ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇತ್ತೀಚೆಗೆ ಬಹು ಅಂಗಾಂಗ ವೈಫಲ್ಯದಿಂದ ತೀವ್ರ ಅನಾರೋಗ್ಯ ದಿಂದ ಬಳಲುತ್ತಿದ್ದ ಶ್ರೀನಿವಾಸ ಪ್ರಸಾದ್ ಅವರು, ಮೂರು ದಿನಗಳ ಹಿಂದೆ ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ದ್ದರು. ತುರ್ತು ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.


ಮೃತರು ಪತ್ನಿ ಭಾಗ್ಯಲಕ್ಷ್ಮಿ ಪ್ರಸಾದ್, ಪುತ್ರಿಯರಾದ ಪ್ರತಿಮಾ ಪ್ರಸಾದ್, ಪೂರ್ಣಿಮಾ ಪ್ರಸಾದ್, ಪೂನಂ ಪ್ರಸಾದ್ ಹಾಗೂ ಅಪಾರ ಬಂಧು-ಮಿತ್ರರು, ಅಭಿಮಾನಿ ಗಳನ್ನು ಅಗಲಿzರೆ.
ಶ್ರೀನಿವಾಸ್ ಪ್ರಸಾದ್ ಅವರು ಇತ್ತೀಚೆಗೆ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಮೈಸೂರು, ಚಾಮರಾಜನಗರ ಭಾಗದ ಪ್ರಭಾವಿ ದಲಿತ ಮುಖಂಡರಾಗಿದ್ದರು. ಸ್ವಾಭಿಮಾನಿ ರಾಜಕಾರಣಿ ಎಂದೇ ಹೆಸರಾಗಿದ್ದರು. ಮೂಲತಃ ಮೈಸೂರಿನ ಅಶೋಕಪುರಂ ನವರಾದ ಶ್ರೀನಿವಾಸಪ್ರಸಾದ್ ಚಾಮರಾಜ ನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ೬ ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.
ಮೈಸೂರಿನ ಅಶೋಕಪುರಂ ನಲ್ಲಿ ಆಗಸ್ಟ್ ೬, ೧೯೪೭ರಂದು ಜನಿಸಿದ ಪ್ರಸಾದ್ ಅವರ ರಾಜಕೀಯ ಪ್ರಯಾಣವು ಮಹತ್ವದ ಮೈಲಿಗಲ್ಲು ಗಳಿಂದ ಗುರುತಿಸಲ್ಪಟ್ಟಿದೆ. ಅವರು ಚಾಮರಾಜನಗರ ಕ್ಷೇತ್ರವನ್ನು ಏಳು ಅವಧಿಗೆ ಸಂಸದರಾಗಿ ಪ್ರತಿನಿಧಿಸಿದ್ದರು ಮತ್ತು ಎರಡು ಬಾರಿ ನಂಜನಗೂಡು ಕ್ಷೇತ್ರದಿಂದ ಶಾಸಕರಾಗಿದ್ದರು.
ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮತ್ತು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಇಲಾಖೆ ಸಚಿವ ಸೇರಿದಂತೆ ಪ್ರಮುಖ ಸಚಿವ ಖಾತೆಗಳನ್ನು ಹೊಂದಿದ್ದರು.
ಡಿಸೆಂಬರ್ ೨೦೧೬ರಲ್ಲಿ ಅಧಿಕೃತ ವಾಗಿ ಬಿಜೆಪಿಗೆ ಸೇರ್ಪಡೆ ಗೊಂಡರು ಮತ್ತು ೨೦೧೯ರಲ್ಲಿ ಮತ್ತೆ ಚಾಮರಾಜ ನಗರದಿಂದ ಸಂಸದ ರಾಗಿ ಆಯ್ಕೆ ಯಾದರು, ಮತದಾರ ರಲ್ಲಿ ತಮ್ಮ ನಿರಂತರ ಜನಪ್ರಿಯತೆ ಯನ್ನು ಕಂಡುಕೊಂಡಿದ್ದರು.
ದಲಿತರ ಸೂರ್ಯನಂತಿದ್ದ ಸ್ವಾಭಿಮಾನಿ ನಾಯಕ:
ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಹೆಸರು ಕೆಡಿಸಿಕೊಳ್ಳದ ಶ್ರೀನಿವಾಸಪ್ರಸಾದ್ ಓರ್ವ ಸ್ವಾಭಿಮಾನಿ, ಕಳಂಕರಹಿತ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಹಳೇ ಮೈಸೂರು ಭಾಗದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರುವ ಶ್ರೀನಿವಾಸ್‌ಪ್ರಸಾದ್, ದಕ್ಷಿಣ ಕರ್ನಾಟಕದ ದಲಿತ ಸೂರ್ಯ ಎಂದೇ ಖ್ಯಾತರಾಗಿದ್ದರು.
ರಾಜಕೀಯದ ಏಳು- ಬೀಳುಗಳ ನಡುವೆ ಸ್ವಾಭಿಮಾನಕ್ಕೆ ಹೆಸರಾಗಿದ್ದ ಶ್ರೀನಿವಾಸಪ್ರಸಾದ್ ಅವರು, ಕಳೆದ ತಿಂಗಳು ರಾಜಕೀಯದಿಂದ ನಿವೃತ್ತಿ ಪಡೆದಿ ದ್ದರು. ಚುನಾವಣೆಯಲ್ಲಿ ಸೋಲು ಗೆಲುವು ಕಂಡಿದ್ದರೂ ಎಂದಿಗೂ ಅವರು ಧೃತಿಗೆಡದೇ ಅಂಬೇಡ್ಕರ್ ಚಿಂತನೆ, ದಲಿತಪರ ಹೋರಾಟದ ಮುಖ್ಯ ಧ್ವನಿಯಾಗಿದ್ದರು.
ದಲಿತ ನಾಯಕರಾಗಿದ್ದ, ತುಳಿತಕ್ಕೆ ಒಳಗಾದ ಪರವಾಗಿ ಸದಾ ಧ್ವನಿ ಎತ್ತುತ್ತಿದ್ದ, ನೇರ-ನಿಷ್ಠುರ ವಾದಿಯಾಗಿದ್ದ ಪ್ರಸಾದ್ ಅವರು ಸಾಕಷ್ಟು ಬಾರಿ, ನಾನು ಹಲವಾರು ಪಕ್ಷಗಳನ್ನು ಬದಲಿಸಿರಬಹುದು. ಆದರೆ ತತ್ವ ಬಿಟ್ಟಿಲ್ಲ, ನಾನು ಪಕ್ಷಾಂತರಿ ಆಗಿರಬಹುದು. ಆದರೆ ತತ್ವಾಂತರಿಯಾಗಿಲ್ಲ. ಸ್ವಾಭಿಮಾನ ಬಿಟ್ಟಿಲ್ಲ ಎನ್ನುತ್ತಿದ್ದರು. ಅದರಂತೆಯೇ ನಡೆದುಕೊಂಡಿ ದ್ದರು. ರಾಜಕೀಯ ಜೀವನದಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಉಂಟಾದಾಗ ಬಂಡಾಯವೆದ್ದಿದ್ದರು. ಪಕ್ಷ ಯಾವುದೇ ಇರಲಿ, ನಾಯಕ ಯಾರೇ ಇರಲಿ ಅವರನ್ನು ಬಿಟ್ಟು ಹೊರನಡೆದಿದ್ದ ಸ್ವಾಭಿಮಾನಿ ರಾಜಕಾರಣಿ ಎಂದೇ ಕರೆಯಿಸಿಕೊಂಡಿದ್ದರು.
ರಾಜಕೀಯ ಪ್ರವೇಶಿಸಿ ೫೦ ವರ್ಷ ತುಂಬಿದ ಹಿನ್ನಲೆಯಲ್ಲಿ ಕಳೆದ ಮಾ.೧೭ ರಂದು ಸುವರ್ಣ ಮಹೋತ್ಸವ ಆಚರಿಸಿ ಚುನಾವಣಾ ರಾಜಕೀಯ ಹಾಗೂ ಸಕ್ರಿಯ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು. ರಾಜಕೀಯ ನಿವೃತ್ತಿ ಘೋಷಿಸಿದ್ದರೂ ಸಹ ಪ್ರಸ್ತುತ ನಡೆದ ಲೋಕಸಭಾ ಚುನಾವಣೆಯಲ್ಲಿ ಶ್ರೀನಿವಾಸ್‌ಪ್ರಸಾದ್ ಅವರ ಬೆಂಬಲ ಪಡೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಪ್ರಯತ್ನ ನಡೆಸಿದ್ದವು.
ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀನಿವಾಸ್ ಪ್ರಸಾದ್ ಅವರ ಆರೋಗ್ಯ ವಿಚಾರಿಸುವ ನೆಪದಲ್ಲಿ ಅವರ ಮೈಸೂರಿನ ನಿವಾಸಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು. ಆದರೆ ಯಾರಿಗೆ ಬೆಂಬಲ ಘೋಷಿಸದ ಶ್ರೀನಿವಾಸ ಪ್ರಸಾದ್ ತಟಸ್ಥ ನಿಲುವು ತಾಳಿದ್ದರು.