ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಮಹಾ ಸ್ವಾಮೀಜಿಗಳು…
ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರು ಸುಮಾರು ೧೨೦೦ ವರ್ಷದ ಇತಿಹಾಸ ಹೊಂದಿರುವ ಶೃಂಗೇರಿ ಶ್ರೀ ಶಾರದಾ ಪೀಠದ ಅವಿಚ್ಚಿನ್ನ ಗುರು ಪರಂಪರೆಯ ೩೬ನೇ ಜಗದ್ಗುರುಗಳು.
ಶ್ರೀ ಆದಿ ಶಂಕರಾಚಾರ್ಯರು ಧರ್ಮ ರಕ್ಷಣೆಗಾಗಿ ದೇಶದ ನಾಲ್ಕು ದಿಕ್ಕುಗಳಲ್ಲಿ ಆಮ್ನಾಯ ಪೀಠಗಳನ್ನು ಸ್ಥಾಪಿಸಿ, ಅದರ ಮೂಲಕ ಧರ್ಮ ಪ್ರಚಾರ ಕೈಗೊಳ್ಳಲು ಯತಿಗಳನ್ನು ನೇಮಕ ಮಾಡುತ್ತಾರೆ. ದಕ್ಷಿಣ ಭಾಗದಲ್ಲಿ ಸ್ಥಾಪಿಸಿದ ದಕ್ಷಿಣಾಮ್ನಾಯ ಪೀಠವೇ ಶ್ರೀ ಶಾರದಾ ಪೀಠ. ಇದರ ೩೬ನೇ ಜಗದ್ಗುರುಗಳಾಗಿ ನಿಯುಕ್ತರಾದವರು ಶ್ರೀ ಭಾರತಿ ತೀರ್ಥ ಸ್ವಾಮೀಜಿ. ಇವರು ಬ್ರಹ್ಮೈಕ್ಯ ಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮಿಗಳ ಶಿಷ್ಯರು.
ಆಂಧ್ರಪ್ರದೇಶದ ಗುಂಟೂರು ಜಿಯ ಪಲ್ನಾಡು ತಾಲ್ಲೂಕಿನ ಅಲಗು ಮಪಾಡು ಗ್ರಾಮದ ವೆಂಕಟೇಶ್ವರ ಅವಧಾನಿ ಹಾಗೂ ಅನಂತ ಲಕ್ಷ್ಮಿ ಅವಧಾನಿಯವರು ಶ್ರೀ ಭವಾನಿಶಂಕರ ಸ್ವಾಮೀಜಿ ಯವರನ್ನು ಬೇಡಿ ಕೊಂಡಂತೆ, ಶ್ರೀ ಖರ ನಾಮ ಸಂವತ್ಸರದ ಚೈತ್ರ ಶುದ್ಧ ಷಷ್ಠೀ, ಬುಧವಾರ ದಿನಾಂಕ: ೧೧-೦೪-೧೯೫೧ರ ಶುಭದಿನದಂದು ಜನಿಸಿದ ಪುತ್ರನಿಗೆ ಸೀತಾರಾಮ ಆಂಜನೇಯಲು ಎಂದು ನಾಮಕರಣ ಮಾಡಿದ್ದರು.
ಸೀತಾರಾಮನಿಗೆ ಮನೆಯ ಧಾರ್ಮಿಕ ವಾತಾವರಣವು ವ್ಯಕ್ತಿತ್ವ ನಿರೂಪಣೆಗೆ ಪ್ರೇರಕವಾಗಿತ್ತು. ಬಾಲ್ಯದಲ್ಲಿಯೇ ಸ್ಫುಟವಾದ ವಾಣಿ, ತನ್ಮಯತೆ, ಪ್ರೌಡಿಮೆ, ಅತ್ಯಂತ ತೀಕ್ಷ್ಣ ಮತ್ತು ಸೂಕ್ಷ್ಮತೆ ಮತ್ತು ಪೋಷಕರು ಅಚ್ಚರಿ ಪಡುವಷ್ಟು ದೈವಭಕ್ತಿಯನ್ನು ಮೈಗೂಡಿಸಿ ಕೊಂಡಿದ್ದರು. ತಂದೆ ತಾಯಿಯವರ ವ್ರತ, ಪೂಜಾದಿಗಳು, ಸ್ತೋತ್ರ ಪಾಠಗಳು, ಪುರಾಣಗಳ ಕಥೆಗಳು ಆತನ ಮನಸ್ಸನ್ನು ಸೆಳೆಯುತ್ತಿದ್ದವು. ಶೈಶವದಲ್ಲಿನ ಸೀತಾರಾಮರಿಗೆ ಭಗವನ್ನಾಮ ಜಪ ಅದರಲ್ಲಿಯೂ, ಶಿವನಾಮ ಜಪವು ಅತ್ಯಂತ ಪ್ರಿಯವಾಗಿರುತ್ತಿತ್ತು. ಸೀತಾರಾಮರು ತಮ್ಮ ವೇದ ವಿದ್ಯಾಭ್ಯಾಸದ ಜತೆಗೆ ಲೌಕಿಕ ವಿದ್ಯಾಭ್ಯಾಸದಲ್ಲಿಯೂ ಕೂಡ ಪ್ರಥಮರಾಗಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಸಂಸ್ಕೃತ ಭಾಷೆ ಅರಗಿಸಿಕೊಂಡಿದ್ದು, ಏಳನೇ ವಯಸ್ಸಿನಲ್ಲಿ ಬ್ರಹ್ಮೋಪದೇಶ ಪಡೆದರು.
೩೫ನೇ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥರು ತಮ್ಮ ಯಾತ್ರಾ ಕಾಲದಲ್ಲಿ ನರಸರಾವ್ ಪೇಟೆಯಲ್ಲಿ ವಾಸ್ತವ್ಯ ಹೂಡಿzಗ, ಅಚಾನಕ್ಕಾಗಿ ಸೀತಾರಾಮರಿಗೆ ಮಹಾ ಸನ್ನಿಧಾನದ ದರ್ಶನವಾಗಿತ್ತು. ಪ್ರಥಮ ಭೇಟಿಯಲ್ಲಿಯೇ ನಿರರ್ಗಳವಾಗಿ ಸಂಸ್ಕೃತದಲ್ಲಿ ಮಾತನಾಡಿದ ಇವರು, ಜಗದ್ಗುರುಗಳ ಮನ ಸೆಳೆದಿದ್ದರು. ಮತ್ತೊಮ್ಮೆ ಶ್ರೀಗಳು ಉಜ್ಜಯಿನಿಯಲ್ಲಿ ಚಾತುರ್ಮಾಸ ವ್ರತ ಕೈಗೊಂಡಿzಗ ಸೀತಾರಾಮಾಂಜನೇಯರು ಜಗದ್ಗುರುಗಳ ದರ್ಶನ ಪಡೆದು, ತಮ್ಮನ್ನು ಶಿಷ್ಯರನ್ನಾಗಿ ಸ್ವೀಕರಿಸುವಂತೆ ಕೋರಿಕೊಂಡರು.
೧೯೭೪ರ ನವರಾತ್ರಿ ಉತ್ಸವದ ರಥೋತ್ಸವದ ನಂತರ ಶ್ರೀ ಅಭಿನವ ವಿದ್ಯಾತೀರ್ಥ ಮಹಾ ಸ್ವಾಮೀಜಿ ಅವರು ಅಂತರಂಗದಲ್ಲಿ ಶಿಷ್ಯ ಸ್ವೀಕಾರದ ಬಗ್ಗೆ ಒಲವು ತೋರಿದರು. ಶ್ರೀಗಳು ಅಮ್ಮನವರ ಗರ್ಭಗೃಹ ಪ್ರವೇಶಿಸಿ ಧ್ಯಾನ ಮಗ್ನರಾದಾಗ ಶ್ರೀ ಶಾರದಾಂಬೆಯ ಅನುಗ್ರಹ ಪ್ರೇರಣೆಯಿಂದ ಶ್ರೀ ಸೀತಾರಾಮ ಆಂಜನೇಯ ಶರ್ಮರನ್ನು ಶಿಷ್ಯರನ್ನಾಗಿ ಸ್ವೀಕರಿಸಿ, ಸನ್ಯಾಸ ನೀಡಿ, ಉತ್ತರಾಧಿಕಾರಿಯನ್ನಾಗಿ ನೇಮಿಸುವ ಸ್ಪಷ್ಟತೆ ಮೂಡಿತ್ತು. ಶ್ರೀಗಳ ಅಂಗೀಕಾರದಿಂದ ಸೀತಾರಾಮಾಂಜನೇಯರು ಶ್ರೀಗಳ ಶಿಷ್ಯರಾದರು.
ಶ್ರೀ ಪೀಠದ ಉತ್ತರಾಧಿಕಾರಿಯಾಗಿ, ಶ್ರೀ ಅಭಿನವ ವಿದ್ಯಾತೀರ್ಥ ಮಹಾ ಸ್ವಾಮೀಜಿಯವರ ಆಶೀರ್ವಾದ ದಿಂದ ಇವರು ನ್ಯಾಯ ಶಾಸ್ತ್ರ, ವ್ಯಾಕರಣ, ಮೀಮಾಂಸ ಶಾಸ್ತ್ರ, ತರ್ಕಶಾಸ್ತ್ರ, ವಿದ್ವತ್ ಸಾಧನೆಯಲ್ಲಿಯೂ ಕೂಡ ಪ್ರಗತಿಯನ್ನು ಸಾಧಿಸಿದರು.
ಸೀತಾರಾಮರು ಪೀಠದ ಉತ್ತರಾಧಿಕಾರಿಯಾಗಲು ತನ್ನಲ್ಲಿ ಅರ್ಹತೆ ಇದೆಯೇ ಎಂದು ಚಿಂತಿಸಿದರು. ಆದರೆ, ಈ ಮಹತ್ತಾದ ಸ್ಥಾನಕ್ಕೆ ಅಗತ್ಯವಾದ ಅರ್ಹತೆ, ಯೋಗ್ಯತೆಗಳನ್ನು ತನಗೆ ಅನುಗ್ರಹಿಸಿ, ತನ್ನನ್ನು ಪೂರ್ಣವಾಗಿ ರೂಪಿಸುವವರು ಜಗದ್ಗುರುಗಳೇ ಆಗಿರುವುದರಿಂದ ಗುರು ಆe ಪಾಲನೆ ತನ್ನ ಕರ್ತವ್ಯ ಎಂದು ನಿರ್ಧರಿಸಿದ್ದರು.
ಅದರಂತೆಯೇ ಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮೀಜಿಗಳು ತಮ್ಮ ಶಿಷ್ಯರಿಗೆ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಎಂಬ ಯೋಗ ಪಟ್ಟವನ್ನು ಅನುಗ್ರಹಿಸಿ, ಪ್ರಣವ ಮಂತ್ರ, ಚತುರ್ವೇದ ಮಹಾ ವಾಕ್ಯಗಳನ್ನು ಉಪದೇಶಿಸಿದರು. ಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮೀಜಿಗಳು ೧೯೮೯ರ ಸೆಪ್ಟೆಂಬರ್ ೨೧ರಲ್ಲಿ ನರಸಿಂಹವನದಲ್ಲಿ ತಮ್ಮ ಭೌತಿಕ ದೇಹ ತ್ಯಜಿಸಿದರು. ಆ ಸಂದರ್ಭದಲ್ಲಿ ಪುಣೆಯಲ್ಲಿದ್ದ ಶ್ರೀ ಭಾರತೀತೀರ್ಥ ಸ್ವಾಮೀಜಿಗಳು ಶ್ರೀ ಶಾರದಾ ಪೀಠಕ್ಕೆ ಧಾವಿಸಿದರು.
೧೯೮೯ರ ಅಕ್ಟೋಬರ್, ೧೯ ರಂದು ಶ್ರೀ ಭಾರತೀತೀರ್ಥ ಸ್ವಾಮೀಜಿಗಳವರ ಪಟ್ಟಾಭಿಷೇಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದವು. ಕಳೆದ ೭೨ ವರ್ಷಗಳಿಂದ ಧರ್ಮ ಪ್ರಚಾರವನ್ನು ನಿರಂತರವಾಗಿ ನಡೆಸುತ್ತಿರುವ ಶ್ರೀ ಭಾರತೀ ತೀರ್ಥ ಸ್ವಾಮೀಜಿಗಳ ವರ್ಧಂತಿ ಮಹೋತ್ಸವವನ್ನು ದೇಶದ ನಾನಾ ಭಾಗಗಳಿಂದ ಬಂದಿರುವ ಭಕ್ತಾದಿಗಳು ಶ್ರz ಭಕ್ತಿಯಿಂದ ಆಚರಿಸುತ್ತಿzರೆ..

ಪತ್ರಕರ್ತರು, ಶಿವಮೊಗ್ಗ.
