ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಬಿಎಸ್‌ವೈ ಪುತ್ರ- ಬಿಜೆಪಿ ಹಾಲಿ ಸಂಸದರ ಬಗ್ಗೆ ಜನರಲ್ಲಿ ಆಕ್ರೋಶವಿದೆ: ಈಶ್ವರಪ್ಪ…

Share Below Link

ಶಿವಮೊಗ್ಗ: ಕ್ಷೇತ್ರದ ಹಾಲಿ ಸಂಸದರ ಬಗ್ಗೆ ಜನರಲ್ಲಿ ಆಕ್ರೋಶವಿದ್ದು, ನನಗಾದ ಅನ್ಯಾಯವನ್ನು ಕಂಡು ಹೋದೆಡೆಯಲ್ಲೆಲ್ಲಾ ಮತದಾರರು ನನಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಜೆಪಿಯಿಂದ ಸಿಡಿದೆದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಗುಂಡಪ್ಪ ಶೆಡ್‌ನಲ್ಲಿರುವ ತಮ್ಮ ಮನೆಯ ಆವರಣದಲ್ಲಿ ಚುನಾವಣಾ ಕಚೇರಿ ಉದ್ಘಾಟನೆ ಮಾಡಿದ ನಂತರ ಮಾತನಾಡಿದ ಅವರು, ಒಂದು ಕುಟುಂಬದ ಕೈಯಲ್ಲಿ ರಾಜ್ಯ ಬಿಜೆಪಿ ಇರುವುದು ಜನರಿಗೂ ಸಹ ಇಷ್ಟವಿಲ್ಲ. ಹಿಂದುತ್ವದ ಪರವಾಗಿ ಹೋರಾಟ ಮಾಡಿದ ಎಲ್ಲರಿಗೂ ಅನ್ಯಾಯ ವಾಗಿದೆ. ಅನೇಕ ಕಾರ್ಯಕರ್ತರು ತಮಗಾದ ನೋವನ್ನು ನನ್ನ ಬಳಿ ತೋಡಿಕೊಂಡಿದ್ದು, ನನ್ನ ಸ್ಪರ್ಧೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಿಮ್ಮ ಪಕ್ಷ ನಿಷ್ಠೆ, ಹಿಂದುತ್ವದ ಹೋರಾಟ ಬೆಂಬಲಿಸಿ ನಿಮ್ಮ ಹಿಂದೆ ನಾವಿದ್ದೇವೆ ಎಂದು ನಮ್ಮ ಕಾರ್ಯಕರ್ತರು ಹೇಳಿದ್ದಾರೆ ಎಂದರು.
ನನ್ನ ನಿರ್ಧಾರ ಬೆಂಬಲಿಸಿ ನಮ್ಮ ಕಾರ್ಯಕರ್ತರು ಮಾತ್ರವಲ್ಲ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಬಹಳಷ್ಟು ಕಾರ್ಯಕರ್ತರು ಬೆಂಬಲ ಸೂಚಿಸಿದ್ದಾರೆ ಎಂದರು.
ಈ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತವಾಗಿದ್ದು, ಗೆಲುವಿನ ನಂತರ ಮೋದಿ ಮತ್ತೆ ಪ್ರಧಾನಿಯಾಗಲು ಕ್ಷೇತ್ರದ ಮತದಾರರ ಪರವಾಗಿ ಕೈಜೋಡಿಸುತ್ತೇನೆ. ಮೋದಿ ಹೇಳಿದ ಕೂಡಲೇ ನಾಮಪತ್ರ ವಾಪಾಸ್ಸು ಪಡೆಯಲಿದ್ದಾರೆ ಎಂದು ಸುಳ್ಳು ಸುದ್ಧಿ ಹಬ್ಬಿಸುತ್ತಿದ್ದಾರೆ. ಮೋದಿಯಲ್ಲ ಬ್ರಹ್ಮ ಬಂದು ಹೇಳಿದರೂ ಚುನಾವಣೆಗೆ ನಿಲ್ಲುವುದು ಶತಸಿದ್ಧ ಎಂದರು.
ಕ್ಷೇತ್ರದಲ್ಲಿ ಹಾಲಿ ಸಂಸದರ ಬಗ್ಗೆ ಆಕ್ರೋಶವಿದೆ. ಅದರೊಂದಿಗೆ ನನಗಾದ ಅನ್ಯಾಯವನ್ನು ಗಮನಿಸಿ, ಅದನ್ನು ಸರಿಪಡಿಸಲು ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಜನರ ಪ್ರೀತಿ ಹಾಗೂ ನಂಬಿಕೆ ಉಳಿಸಿಕೊಂಡು ಅಭಿವೃದ್ಧಿಗಾಗಿ ದುಡಿಯುತ್ತೇನೆ. ಭದ್ರಾವತಿ, ಶಿಕಾರಿಪುರ, ಸಾಗರ ಭಾಗಗಳಲ್ಲಿ ಆಶ್ಚರ್ಯಕರ ರೀತಿಯಲ್ಲಿ ಜೊತೆಗೆ ಬೈಂದೂರು ಮತ್ತು ಶಿವಮೊಗ್ಗ ಗ್ರಾಮಾಂತರದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಆಗಮಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ನಾನು ಭೇಟಿಯಾದ ಎಲ್ಲಾ ಸ್ವಾಮೀಜಿಗಳೂ ನನಗೆ ಆಶೀರ್ವಾದ ಮಾಡಿದ್ದಕ್ಕೆ ಕೆಲವರು ಅಸಹನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗುರುಗಳು ನನ್ನ ಬಳಿ ತಮಗೆ ನೋವು ಕೊಟ್ಟರು ಎಂದರು.
ಚುನಾವಣಾ ಕಚೇರಿ ಉದ್ಘಾಟನೆಗೂ ಮುನ್ನಾ ಇಂದು ಮುಂಜನೆ ಋತ್ವಿಜರಿಂದ ಸಹಸ್ರ ಮೋದಕ ಗಣ ಹೋಮ ಜರುಗಿತು.
ಸಭೆಯಲ್ಲಿ ಭದ್ರಾವತಿಯ ಮುಖಂಡ ಮಹೇಶ್ ಕುಮಾರ್, ಬಿಸಿಯೂಟ ಸಹಾಯಕರ ಸಂಘದ ಅಧ್ಯಕ್ಷೆ ಹನುಮಕ್ಕ, ವಕೀಲರಾದ ಅಶೋಕ್‌ಭಟ್, ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಟೇಶ್, ವೀರಶೈವ ಲಿಂಗಾಯತ ಸಮಾಜದ ಮುಖಂಡ ಮಹಾಲಿಂಗಯ್ಯಶಾಸ್ತ್ರಿ, ವೀರಶೈವ ಪ್ರಮುಖರಾದ ರುದ್ರೇಶ್, ಜಗದೀಶ್‌ಪ್ಪ, ಶಿಕಾರಿಪುರದ ರುದ್ರೇಗೌಡ, ಬೂದಪ್ಪ, ಗಂಗಾಧರ್, ತೇಜು, ಇ.ವಿಶ್ವಾಸ್, ಶ್ರೀಕಾಂತ್, ಕೆ.ಇ.ಕಾಂತೇಶ್, ಛಲವಾದಿ ಸಮಾಜದ ಅಧ್ಯಕ್ಷ ಸುರೇಶ್, ತಮಿಳು ಸಮಾಜದ ಮುಖಂಡ ಎಂ. ಭೂಪಾಲ್ ಮತ್ತಿತರರು ಇದ್ದರು.