ಧರೆಗುರುಳಿದ ಮರ: ವಾಹನಗಳು ಜಖಂ…
ಸಾಗರ : ಪಟ್ಟಣದ ಗಂಗಾ ಪರಮೇಶ್ವರಿ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಬೃಹತ್ ಗಾತ್ರದ ಬಸರಿ ಮರವೊಂದು ಬಿದ್ದ ಪರಿಣಾಮ ಒಂದು ಓಮಿನಿ, ಎರಡು ಕಾರು, ಒಂದು ಬೈಕ್ ಸೇರಿದಂತೆ ಮೂರು ಮನೆಗಳಿಗೆ ಭಾಗಶಃ ಹಾನಿಯಾ ಗಿದ್ದು ಸುಮಾರು ೫೦ ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾ ಜಿಸಲಾಗಿದೆ.
ಶುಕ್ರವಾರ ತಡರಾತ್ರಿ ಮರ ಬಿದ್ದ ಪರಿಣಾಮ ಒಂದು ಓಮಿನಿ, ಒಂದು ವರ್ಣಾ ಕಾರು, ಒಂದು ಎಕ್ಸಸ್ ಕಾರು, ಒಂದು ಸ್ಕೂಟಿ ಸಂಪೂರ್ಣ ನಜ್ಜುಗುಜಗಿದೆ. ಮರ ಬಿದ್ದ ರಭಸಕ್ಕೆ ನಗರಸಭೆ ಸದಸ್ಯೆ ಮಧುಮಾಲತಿ ಅವರ ಆರ್.ಸಿ.ಸಿ. ಮನೆಯ ಮೇಲ್ಚಾ ವಣಿ ಭಾಗಶಃ ಹಾನಿಯಾಗಿದ್ದು, ಪಕ್ಕದಲ್ಲಿದ್ದ ಸುನೀಲ್ ಕುಮಾರ್ ಎಂಬುವವರ ಮನೆಗೆ ದೊಡ್ಡ ಪ್ರಮಾಣದ ಹಾನಿಯಾಗಿದೆ. ಪ್ರಸಾದ್ ಎಂಬುವವರ ಹೆಂಚಿನ ಮನೆಯ ಮೇಲೆ ಮರ ಬಿದ್ದ ಪರಿಣಾಮ ಮನೆಯೊಳಗಿದ್ದ ಟಿ.ವಿ. ಇನ್ನಿತರೆ ವಸ್ತುಗಳು ಸಂಪೂರ್ಣ ನಾಶವಾಗಿದೆ. ಎರಡು ವಿದ್ಯುತ್ ಕಂಬ ಮುರಿದು ಬಿದ್ದಿದ್ದು ಗಂಗಾ ಪರಮೇಶ್ವರಿ ರಸ್ತೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಅದೃಷ್ಟವಶಾತ್ ಯಾರಿಗೂ ಹಾನಿಯುಂಟಾಗಿಲ್ಲ.
ತಡರಾತ್ರಿ ನಗರಸಭೆ ಸದಸ್ಯರಾದ ಮಧುಮಾಲತಿ, ಸೈಯದ್ ಜಕೀರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್.ಕೆ.ನಾಗಪ್ಪ, ಸೇರಿದಂತೆ ನಗರಸಭೆ, ಅರಣ್ಯ ಇಲಾಖೆ ಸಿಬ್ಬಂದಿಗಳು ಮರವನ್ನು ತೆರವು ಗೊಳಿಸುವ ಕೆಲಸ ಮಾಡಿದರು.
ಶನಿವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್.ಕೆ.ನಾಗಪ್ಪ, ನಗರಸಭೆ ಸದಸ್ಯರಾದ ಎನ್.ಲಲಿತಮ್ಮ, ಮಧುಮಾಲತಿ ಇನ್ನಿತರರು ಹಾಜರಿದ್ದರು.