ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಮೌಂಡಿ ಥರ್ಸ್‌ಡೇ: ಪ್ರೀತಿಯ ಪಾಠವನ್ನು ಜೀವಂತಗೊಳಿಸಿದ ದಿನ..

Share Below Link

ಅ. ರಾಕೇಶ್ ಡಿಸೋಜ
ಪತ್ರಕರ್ತರು- ಮೊ: ೯೪೪೮೩೪೩೨೧೧
ವಿಶ್ವದೆಲ್ಲೆಡೆ ಕ್ರೈಸ್ತ ಧರ್ಮೀಯರ ಪವಿತ್ರ ಆಚರಣೆಗಳಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿರುವ ಪವಿತ್ರ ಗುರುವಾರ ಅಥವಾ ಮಂಡಿ ಥರ್ಸ್‌ಡೇ, ಆಧ್ಯಾತ್ಮಿಕತೆ ಮತ್ತು ಭಾವನಾತ್ಮಕತೆಯ ಅದ್ಭುತ ಸಂಗಮವಾಗಿದೆ. ಈ ದಿನವು ಕೇವಲ ಆಚರಣೆಯಲ್ಲ, ಅದು ಪರಸ್ಪರ ಪ್ರೀತಿ, ಸೇವೆ ಮತ್ತು ತ್ಯಾಗದ ಮೂಲಕ ಮಾನವಕುಲಕ್ಕೆ ಶಾಶ್ವತ ಮಲ್ಯಗಳನ್ನು ಸಾರಿದ ದಿವ್ಯ ಕ್ಷಣಗಳ ಸ್ಮರಣೆಯಾಗಿದೆ.
ಈ ಪವಿತ್ರ ದಿನದಲ್ಲಿ ದೇವಪುತ್ರ ಯೇಸು ಕ್ರಿಸ್ತರು ತಮ್ಮ ಶಿಷ್ಯರೊಂದಿಗೆ ನಡೆಸಿದ ಕೊನೆಯ ಭೋಜನ ಮಾನವ ಇತಿಹಾಸದ ಅತ್ಯಂತ ಪವಿತ್ರ ಘಟನೆಯಾಗಿದೆ.
ಬೈಬಲ್ ಶ್ರೀಗ್ರಂಥದಲ್ಲಿ ಮತ್ತಾಯ ೨೬:೨೬-೨೮ರಲ್ಲಿ ಯೇಸು ಹೇಳುತ್ತಾರೆ;
ಯೇಸುಸ್ವಾಮಿ ರೊಟ್ಟಿಯನ್ನು ತೆಗೆದುಕೊಂಡು ದೈವಸ್ತುತಿ ಮಾಡಿ, ಅದನ್ನು ಮುರಿದು ಶಿಷ್ಯರಿಗೆ ಕೊಡುತ್ತಾ, ನೀವು ಇದನ್ನು ತೆಗೆದುಕೊಂಡು ಭುಜಿಸಿರಿ; ಇದು ನನ್ನ ಶರೀರ ಎಂದರು.
ಬಳಿಕ ಪಾನ ಪಾತ್ರೆಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾ ಸ್ತೋತ್ರವನ್ನು ಸಲ್ಲಿಸಿ, ಅದನ್ನು ಕೊಡುತ್ತಾ ಹೀಗೆಂದರು; ಈ ಪಾನಪಾತ್ರೆಯಲ್ಲಿರುವುದನ್ನು ನೀವೆಲ್ಲರೂ ಕುಡಿಯಿರಿ; ಇದು ನನ್ನ ರಕ್ತ. ಸಮಸ್ತ ಜನರ ಪಾಪ ಕ್ಷಮೆಗಾಗಿ ಸುರಿಯಲ್ಪಡುವ ಒಡಂಬಡಿಕೆಯ ನನ್ನ ರಕ್ತ.
ಈ ಮಾತುಗಳ ಮೂಲಕ ಯೇಸು ತನ್ನನ್ನೇ ಮಾನವಕುಲದ ರಕ್ಷಣೆಗಾಗಿ ಅರ್ಪಿಸಿದ ದಿವ್ಯ ಸತ್ಯವನ್ನು ವ್ಯಕ್ತಪಡಿಸಿದರು.
ಪವಿತ್ರ ಗುರುವಾರದ ಅತ್ಯಂತ ಮನಮುಟ್ಟುವ ಘಟನೆಯೆಂದರೆ, ಯೇಸು ತನ್ನ ಶಿಷ್ಯರ ಪಾದಗಳನ್ನು ತೊಳೆದದ್ದು.
ಸಾಮಾನ್ಯವಾಗಿ ಇದು ಸೇವಕರ ಕೆಲಸ. ಆದರೆ ಮಾನವ ಕುಲದ ರಕ್ಷಣೆಗಾಗಿ ಧರೆಗಿಳಿದ ದೇವಪುತ್ರ ಯೇಸು ಕ್ರಿಸ್ತರು ತನ್ನನ್ನು ಸೇವಕನಾಗಿ ತೋರಿಸಿದರು.
ಪವಿತ್ರ ಬೈಬಲ್ ಶ್ರೀಗ್ರಂಥದಲ್ಲಿ ಯೊವಾನ್ನ ೧೩:೧೪-೧೫ರಲ್ಲಿ ಹೇಳುತ್ತಾರೆ;
ನಿಮಗೆ ಪ್ರಭುವೂ ಬೋಧಕನೂ ಆಗಿರುವ ನಾನೇ ನಿಮ್ಮ ಕಾಲುಗನ್ನು ತೊಳೆದಿರುವಾಗ ನೀವು ಸಹ ಒಬ್ಬರ ಕಾಲುಗಳನ್ನು ಇನ್ನೊಬ್ಬರು ತೊಳೆಯುವ ಹಂಗಿನಲ್ಲಿದ್ದೀರಿ. ನಾನು ನಿಮಗೆ ಒಂದು ಆದರ್ಶವನ್ನು ಕೊಟ್ಟಿದ್ದೇನೆ. ನಾನು ನಿಮಗೆ ಮಾಡಿದಂತೆಯೇ ನೀನೂ ಇತರರಿಗೆ ಮಾಡಿ.
ಈ ಘಟನೆಯು ನಮಗೆ ಹೇಳುವುದೇನೆಂದರೆ ನಿಜವಾದ ನಾಯಕತ್ವವು ಸೇವೆಯಲ್ಲಿ ಇದೆ. ಪ್ರೀತಿ ಎಂದರೆ ಕೇವಲ ಮಾತಲ್ಲ; ಅದು ಸೇವೆಯ ಮೂಲಕ ವ್ಯಕ್ತವಾಗಬೇಕು ಎಂಬ ದಿವ್ಯ ಸಂದೇಶ ಇದಾಗಿದೆ.
ಈ ದಿನವೇ ಕ್ರೈಸ್ತ ಧರ್ಮದ ಪ್ರಮುಖ ಸಂಸ್ಕಾರವಾದ ಪವಿತ್ರ ಪರಮ ಪ್ರಸಾದ ಸ್ಥಾಪನೆಯಾಯಿತು. ದೇವಪುತ್ರ ಯೇಸುಕ್ರಿಸ್ತರು ರೊಟ್ಟಿ ಮತ್ತು ದ್ರಾಕ್ಷಾರಸದ ಮೂಲಕ ತಮ್ಮ ಸಾನ್ನಿಧ್ಯವನ್ನು ಶಾಶ್ವತವಾಗಿ ಉಳಿಸಿದರು.
ಪವಿತ್ರ ಬೈಬಲ್ ಶ್ರೀಗ್ರಂಥದಲ್ಲಿ ಲೂಕ ೨೨:೧೯ರಲ್ಲಿ ಯೇಸು ಹೇಳುತ್ತಾರೆ:
ರೊಟ್ಟಿಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾ ಸೋತ್ರವನ್ನು ಸಲ್ಲಿಸಿ ಅದನ್ನು ಮುರಿದು ಶಿಷ್ಯರಿಗೆ ಕೊಡುತ್ತಾ ಇದು ನನ್ನ ಶರೀರ, ಇದನ್ನು ನನ್ನ ಸ್ಮರಣಾರ್ಥವಾಗಿ ಮಾಡಿರಿ.
ಇದು ಕೇವಲ ಆಚರಣೆ ಅಲ್ಲ; ಅದು ದೇವರೊಂದಿಗೆ ಆತ್ಮೀಯ ಸಂಬಂಧವನ್ನು ಗಾಢಗೊಳಿಸುವ ಆಧ್ಯಾತ್ಮಿಕ ಅನುಭವ.
ಪವಿತ್ರ ಗುರುವಾರವನ್ನು ಕ್ರೈಸ್ತ ಧರ್ಮಸಭೆಯ ಅಸ್ತಿವಾರದ ದಿನವೆಂದು ಪರಿಗಣಿಸಲಾಗುತ್ತದೆ. ಯೇಸು ತನ್ನ ೧೨ ಪ್ರೇಷಿತರನ್ನು ಆಯ್ಕೆಮಾಡಿ, ಅವರ ಮೂಲಕ ತನ್ನ ಕಾರ್ಯವನ್ನು ಮುಂದುವರಿಸಲು ನೇಮಕ ಮಾಡಿದರು. ಇದು ಯಾಜಕಾಭಿಷೇಕದ ಸ್ಥಾಪನೆಯ ದಿನವೂ ಆಗಿದೆ. ಈ ಮೂಲಕ ಸೇವೆಯೇ ಧರ್ಮ ಎಂಬ ಸಂದೇಶವು ಚಿರಸ್ಥಾಯಿಯಾಗಿ ಉಳಿಯಿತು.
ಮಾನವ ದೇಹಕ್ಕೆ ಆಹಾರ ಅಗತ್ಯವಿರುವಂತೆ, ಆತ್ಮಕ್ಕೆ ದೇವರ ಅನುಗ್ರಹ ಅಗತ್ಯ. ಪವಿತ್ರ ಗುರುವಾರದಂದು ಕ್ರೈಸ್ತ ವಿಶ್ವಾಸಿಗಳು ಒಂದೇ ಪೀಠದ ಸುತ್ತ ಸೇರಿ ಭಕ್ತಿಯಿಂದ ಪ್ರಾರ್ಥಿಸುವ ಮೂಲಕ ನಾವೆಲ್ಲರೂ ಒಂದೇ ಕುಟುಂಬ ಎಂಬ ಸತ್ಯವನ್ನು ಅನುಭವಿಸುತ್ತಾರೆ.
ಪವಿತ್ರ ಬೈಬಲ್ ಶ್ರೀಗ್ರಂಥದಲ್ಲಿ ೧ ಕೊರಿಂಥದವರಿಗೆ ೧೦:೧೭ನಲ್ಲಿ ಹೇಳಲಾಗಿದೆ;
ಒಂದು ರೊಟ್ಟಿ ಇದ್ದಂತೆ, ನಾವು ಅನೇಕರು ಇದ್ದರೂ ಒಂದೇ ದೇಹ.
ಇದು ಕ್ರೈಸ್ತ ಧರ್ಮದ ಮೂಲ ಮಲ್ಯವಾದ ಏಕತೆಯನ್ನು ಸಾರುತ್ತದೆ.
ಪವಿತ್ರ ಗುರುವಾರವು ನಮಗೆ ನೀಡುವ ಸಂದೇಶವೇನೆಂದರೆ ಪ್ರೀತಿ ಮಾತಿನಲ್ಲಿ ಅಲ್ಲ, ಕಾರ್ಯದಲ್ಲಿ ವ್ಯಕ್ತವಾಗಬೇಕು. ಸೇವೆ ಮಾಡುವುದೇ ದೇವರನ್ನು ಕಂಡುಕೊಳ್ಳುವ ಮಾರ್ಗವಾಗಿದ್ದು, ತ್ಯಾಗವೇ ನಿಜವಾದ ಪ್ರೀತಿಯಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ.
ಪವಿತ್ರ ಗುರುವಾರವು ಕೇವಲ ಇತಿಹಾಸದ ಒಂದು ಘಟನೆ ಅಲ್ಲ. ಅದು ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ, ಸೇವೆ ಮತ್ತು ಏಕತೆಯ ಬೆಳಕನ್ನು ಹಚ್ಚುವ ದಿವ್ಯ ದಿನವಾಗಿದೆ. ದೇವಪುತ್ರ ಯೇಸುಕ್ರಿಸ್ತರು ತೋರಿಸಿದ ದಾರಿಯಲ್ಲಿ ನಡೆಯುವ ಮೂಲಕ ನಾವು ನಿಜವಾದ ಕ್ರಿಸ್ತೀಯ ಜೀವನವನ್ನು ಅನುಭವಿಸಬಹುದು.
ಪರಸ್ಪರ ದ್ವೇಷ, ಅಸೂಯೆಗಳನ್ನು ತೊರೆದು ಪ್ರೀತಿ ಸೇವೆಯಾಗಿ ಮೂಡಿ ಬಂದಾಗ, ದೇವರು ನಮ್ಮೊಳಗೆ ಜೀವಿಸುತ್ತಾನೆ ಎಂಬ ಸತ್ಯವನ್ನು ಅರಿತು ಅದರ ಅನುಭವವನ್ನು ನಾವೆಲ್ಲರೂ ಪಡೆಬೇಕಿದೆ.