ಮೊದಲ ನೋಟದ ಪ್ರೀತಿ: ಜೊತೆಯಾಗದಿದ್ದರೂ ಜೀವಂತವಾಗಿರುವ ನೆನಪಿನ ಅನಂತ ಪಯಣ…
ಹದಿಹರೆಯದ ಮನಸ್ಸು ನಿಜಕ್ಕೂ ವಿಚಿತ್ರ ಅಲ್ವಾ..!
ಅದು ಲೆಕ್ಕಾಚಾರಗಳನ್ನು ಮಾಡುವುದಿಲ್ಲ.
ಲಾಭ-ನಷ್ಟಗಳ ಮೌಲ್ಯಮಾಪನವಂತೂ ಮಾಡುವುದೇ ಇಲ್ಲ.
ಹೃದಯ ಹೇಳಿದ ಮಾತನ್ನೇ ಅಂತಿಮ ಸತ್ಯವೆಂದು
ಹಿಂದೆ ಮುಂದೆ ನೋಡದೆ ನಂಬುತ್ತದೆ.
ಆ ವಯಸ್ಸಿನ ಪ್ರೀತಿಯೂ ಹಾಗೆಯೇ..!
ಒಂದು ಚಿಕ್ಕ ನೋಟದಲ್ಲಿ ಹುಟ್ಟುವ ಆ ಭಾವನೆ,
ಒಂದು ನಗುವಿನಲ್ಲಿ ಅರಳುವ ಆಕರ್ಷಣೆ,
ಮುಂದೊಂದು ದಿನ ಒಂದು ನೆನಪಿನಲ್ಲಿ ಜೀವಮಾನವಿಡೀ
ಉಳಿಯುವ ಸಾಮರ್ಥ್ಯ ಹೊಂದಿರುತ್ತದೆ.
ಅದಕ್ಕೇ ಬಹುಶಃ ಹದಿಹರೆಯದ ಪ್ರೀತಿಯನ್ನು
ಅತ್ಯಂತ ಮುಗ್ಧ, ಅತ್ಯಂತ ನಿಷ್ಕಲ್ಮಷ ಮತ್ತು ಅತ್ಯಂತ
ನಿಸ್ವಾರ್ಥ ಪ್ರೀತಿಯೆಂದು ಕರೆಯಲಾಗುತ್ತದೆ.
ನನ್ನ ಮನಸ್ಸೂ ಅಂತಹ ಹದಿಹರೆಯದ ಮುಗ್ಧ ಮನಸ್ಸೇ…
ಆ ದಿನ ನಿನ್ನನ್ನು ಮೊದಲ ಬಾರಿಗೆ ಕಂಡ ಕ್ಷಣ
ಇಂದಿಗೂ ನನ್ನ ನೆನಪಿನ ಪುಟಗಳಲ್ಲಿ ಅಚ್ಚೊತ್ತಿದ ಚಿತ್ರವಾಗಿ ಉಳಿದಿದೆ.
ಲವ್ ಅಟ್ ಫಸ್ಟ್ ಸೈಟ್
ಎಂಬುದು ಕೇವಲ ಸಿನಿಮಾಗಳಲ್ಲಿ ಮಾತ್ರ ನಡೆಯುವ ಕಲ್ಪನೆ ಅಲ್ಲ
ಎಂಬ ಸತ್ಯವನ್ನು ನಾನು ಅಂದು ಅರಿತುಕೊಂಡೆ.
ಒಂದು ಕ್ಷಣ… ಒಂದೇ ಒಂದು ನೋಟ…
ಆದರೆ ಆ ನೋಟವೇ ನನ್ನ ಇಡೀ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿತು.
ಆ ಕ್ಷಣದಲ್ಲಿ ನನ್ನನ್ನು ನಾನು ಮರೆತೆ.
ನನ್ನ ಕನಸುಗಳಿಗೆ ಹೊಸ ಅರ್ಥ ಸಿಕ್ಕಿತು.
ನನ್ನ ಉಸಿರಿನ ಲಯಕ್ಕೂ, ನನ್ನ ನಗುವಿನ ಹೊಳಪಿಗೂ,
ನನ್ನ ಭವಿಷ್ಯದ ಪ್ರತಿಯೊಂದು ಕಲ್ಪನೆಗೂ ನೀನೇ ಕೇಂದ್ರಬಿಂದುವಾದೆ.
ಬದುಕು ಎಂದರೆ ನೀನು,
ಸಂತೋಷ ಎಂದರೆ ನಿನ್ನ ನಗು,
ಭವಿಷ್ಯ ಎಂದರೆ ನಿನ್ನ ಜೊತೆಯ ಜೀವನ ಎಂಬ ಭ್ರಮೆಯಲ್ಲಿ
ನನಗರಿವಿಲ್ಲದೇ ನನ್ನ ಹೃದಯ ಸಂಪೂರ್ಣವಾಗಿ ಮುಳುಗಿಹೋಯಿತು.
ಆದರೆ ಹದಿಹರೆಯದ ಪ್ರೀತಿಗೆ ಒಂದು ದೌರ್ಬಲ್ಯವೂ ಇರುತ್ತದೆ.
ಅದು ಎದುರಿನವರ ಮನಸ್ಸನ್ನು
ಅರ್ಥಮಾಡಿಕೊಳ್ಳುವ ತಾಳ್ಮೆಯನ್ನು ಕಳೆದುಕೊಳ್ಳುತ್ತದೆ.
ಅಂದು ನಿನ್ನ ಮನಸ್ಸಿನಲ್ಲಿ ಏನಿತ್ತು ಎಂದು ಕೇಳುವಷ್ಟು ಸಹನೆ ನನಗಿರಲಿಲ್ಲ.
ನಿನ್ನ ಭಾವನೆಗಳನ್ನು ಅರಿಯುವ ಪ್ರಯತ್ನಕ್ಕಿಂತ
ನನ್ನ ಹೃದಯದ ಧ್ವನಿಯನ್ನೇ ಸತ್ಯವೆಂದು ನಂಬಿಬಿಟ್ಟೆ.
ನನ್ನ ಪ್ರೀತಿಯ ಆಳವೇ ನಿನ್ನ ಉತ್ತರವಾಗಿರುತ್ತದೆ ಎಂದು ಭಾವಿಸಿದೆ.
ಆದರೆ ಜೀವನ ಎಲ್ಲ ಸಮಯದಲ್ಲೂ ನಮ್ಮ ಕಲ್ಪನೆಯಂತೆ ಸಾಗುವುದಿಲ್ಲ.
ನನ್ನ ಜೀವಕ್ಕಿಂತ ಹೆಚ್ಚಾಗಿ ನಾನು ನಿನ್ನನ್ನು ಪ್ರೀತಿಸಿದೆ.
ಪ್ರತಿಯೊಂದು ಕನಸಿನಲ್ಲೂ ನಿನ್ನನ್ನೇ ಕಂಡೆ.
ಪ್ರತಿಯೊಂದು ಪ್ರಾರ್ಥನೆಯಲ್ಲೂ ನಿನ್ನ ಸಂತೋಷವನ್ನೇ ಬೇಡಿಕೊಂಡೆ.
ನಿನ್ನ ನಗುವಿನಲ್ಲಿ ನನ್ನ ಸಂತೋಷವನ್ನು ಕಂಡೆ.
ನಿನ್ನ ನೋವನ್ನು ನನ್ನದಾಗಿ ಭಾವಿಸಿದೆ.
ಪ್ರೀತಿ ಎಂದರೆ ಪಡೆಯುವುದಲ್ಲ,
ಪ್ರೀತಿಸುವುದೇ ಎಂಬ ನಂಬಿಕೆಯಿಂದ ಬದುಕಿದೆ.
ಆದರೆ ವಿಧಿ ಎಲ್ಲರ ಆಸೆಗಳನ್ನು ಈಡೇರಿಸುವುದಿಲ್ಲ
ಎಂಬ ಕಠೋರ ಸತ್ಯವನ್ನು ಕಾಲವೇ ನನಗೆ ಕಲಿಸಿತು.
ಕೊನೆಗೆ ನನ್ನ ಪಾಲಿಗೆ ಸಿಕ್ಕದ್ದು ನಿನ್ನ ಜೊತೆಗಿನ ಬದುಕಲ್ಲ…
ನಿನ್ನ ನೆನಪು ಮಾತ್ರ..!
ಸಿಗಲಾರದ ಪ್ರೀತಿಯನ್ನು ಮರೆಯಲಾಗದಷ್ಟು ಪ್ರೀತಿಸಿಬಿಟ್ಟೆ…
ಇದೇ ನನ್ನ ಜೀವನದ ಅತಿ ದೊಡ್ಡ ಸಂತೋಷವೂ ಆಯಿತು,
ಅತಿ ಆಳವಾದ ನೋವೂ ಆಯಿತು.
ಏಕೆಂದರೆ ನಿಜವಾಗಿ ಪ್ರೀತಿಸಿದವರಿಗೆ ನೆನಪುಗಳು ಆಶ್ರಯವೂ ಆಗುತ್ತವೆ,
ಗಾಯವೂ ಆಗುತ್ತವೆ.
ಜೀವನದಲ್ಲಿ ಕೆಲವರು ಜೊತೆಯಾಗಲು ಬರುತ್ತಾರೆ.
ಇನ್ನೂ ಕೆಲವರು ಜೀವಮಾನವಿಡೀ ನೆನಪಾಗಿ ಉಳಿಯಲು ಮಾತ್ರ ಬರುತ್ತಾರೆ.
ನೀನು ಎರಡನೇ ಸಾಲಿನಲ್ಲಿ ನಿಂತವಳು.
ದೂರವಾದರೂ ಅಳಿಸಿಹೋಗದ ನೆನಪು.
ಸಿಗದಿದ್ದರೂ ಕಳೆದುಹೋಗದ ಪ್ರೀತಿ.
ಕಾಲ ಬದಲಾಗಿದೆ.
ದಾರಿಗಳು ಬೇರೆಬೇರೆ ಆಗಿವೆ.
ನೀನು ನಿನ್ನ ಬದುಕಿನಲ್ಲಿ, ನಾನು ನನ್ನ ಬದುಕಿನಲ್ಲಿ ಮುಂದೆ ಸಾಗಿರಬಹುದು.
ಆದರೆ ಕೆಲವು ನೆನಪುಗಳಿಗೆ ಸಮಯದ ಹರಿವೂ ಸೋಲುತ್ತದೆ.
ಅವು ಹೃದಯದ ಆಳದಲ್ಲಿ ಶಾಶ್ವತವಾಗಿ ಕೆತ್ತಲ್ಪಟ್ಟಿರುತ್ತವೆ.
ಇಂದಿಗೂ ನಿನ್ನ ನೆನಪು ಅನಿರೀಕ್ಷಿತವಾಗಿ ಮನಸ್ಸಿನ ಬಾಗಿಲು ತಟ್ಟಿದಾಗ,
ಹೃದಯದ ಯಾವುದೋ ಮೂಲೆಯಲ್ಲಿ ಹೇಳಲಾಗದ ನೋವು ಚಿಗುರುತ್ತದೆ.
ಕಣ್ಣಂಚಿನಲ್ಲಿ ನೀರಿನ ಹನಿಗಳು ಮನವಾಗಿ ಮೂಡುತ್ತವೆ.
ಅವು ದುಃಖದ ಕಣ್ಣೀರು ಮಾತ್ರವಲ್ಲ.
ಒಮ್ಮೆ ಮನಸಾರೆ ಪ್ರೀತಿಸಿz ಎಂಬ ಹೆಮ್ಮೆಯ ಸಾಕ್ಷಿಯೂ ಹೌದು.
ಇಂದು ಹಿಂದೆ ತಿರುಗಿ ನೋಡಿದಾಗ ಒಂದು ಸತ್ಯ ಸ್ಪಷ್ಟವಾಗಿ ಅರ್ಥವಾಗುತ್ತದೆ.
ಪ್ರೀತಿ ಎಂದರೆ ಕೇವಲ ಇಬ್ಬರು ಜೊತೆಯಾಗಿ ಬದುಕುವುದಲ್ಲ.
ಕೆಲವೊಮ್ಮೆ ಅದು ದೂರದಲ್ಲಿದ್ದರೂ
ಪರಸ್ಪರದ ಒಳಿತನ್ನು ಹಾರೈಸುವ ನಿಸ್ವಾರ್ಥ ಭಾವನೆ.
ಜೊತೆಯಾಗದಿದ್ದರೂ ಹೃದಯದಲ್ಲಿ ಜೀವಂತವಾಗಿ ಉಳಿಯುವ ನೆನಪು.
ಪಡೆದಿಲ್ಲವೆಂಬ ಬೇಸರಕ್ಕಿಂತ,
ಒಮ್ಮೆ ಮನಸಾರೆ ಪ್ರೀತಿಸಿz ಎಂಬ ಹೆಮ್ಮೆ ಜೀವನಪೂರ್ತಿ ಜೊತೆಯಾಗಿರುವ ಅಮೂಲ್ಯ ಸಂಪತ್ತು.
ಏಕೆಂದರೆ ನಿಜವಾದ ಪ್ರೀತಿ ಎಂದಿಗೂ ಸೋಲುವುದಿಲ್ಲ.
ಅದು ಎಲ್ಲರ ಕಥೆಯಲ್ಲಿ ಮದುವೆಯಾಗಿ ಅಂತ್ಯಗೊಳ್ಳುವುದಿಲ್ಲ.
ಕೆಲವೊಮ್ಮೆ ಅದು ಒಂದು ನೆನಪಾಗಿ,
ಒಂದು ತಣ್ಣನೆಯ ನೋವಾಗಿ,
ಒಂದು ಸುಂದರ ಅನುಭವವಾಗಿ ಬದುಕಿನ ಕೊನೆಯ ಉಸಿರಿನವರೆಗೂ ಜೊತೆಯಾಗಿರುತ್ತದೆ.
ಪ್ರೀತಿ ಸಿಗದಿರಬಹುದು,
ಆದರೆ ನಿಜವಾಗಿ ಪ್ರೀತಿಸಿದ ಹೃದಯ ಎಂದಿಗೂ ಖಾಲಿಯಾಗುವುದಿಲ್ಲ.
ಅದು ನೆನಪುಗಳ ಬೆಳಕಿನಲ್ಲಿ ಬದುಕುತ್ತಲೇ ಇರುತ್ತದೆ.
ಬಹುಶಃ ಅದೇ ನಿಜವಾದ ಪ್ರೀತಿಯ ಅಮರತ್ವ….
