ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಏನೆಂದು ಹೇಳಲಿ ನಾನು… ಪ್ರೀತಿಯ ಮನವೇ ಬದುಕಿನ ಸುಂದರ ಭಾಷೆ

Share Below Link

ಕೆಲವು ಪ್ರೇಮಗಳಿಗೆ ಕಾರಣವಿರುವುದಿಲ್ಲ. ಕೆಲವು ಭಾವನೆಗಳಿಗೆ ಭಾಷೆಯಿರುವುದಿಲ್ಲ. ಇನ್ನೂ ಕೆಲವು ಸಂಬಂಧಗಳಿಗೆ ಅಂತ್ಯವೇ ಇರುವುದಿಲ್ಲ. ಅವು ನಮಗರಿವಿಲ್ಲದಂತೆ ನಮ್ಮೊಳಗೆ ಮನವಾಗಿ ಬೇರುಬಿಟ್ಟು, ನೆನಪುಗಳ ನೆರಳಲ್ಲಿ ಅರಳಿ, ಜೀವನದ ಪ್ರತಿಯೊಂದು ಉಸಿರಿನಲ್ಲೂ ತಮ್ಮ ಅಸ್ತಿತ್ವವನ್ನು ದಾಖಲಿಸುತ್ತಲೇ ಇರುತ್ತವೆ.
ಪ್ರೀತಿಯ ನಿಜವಾದ ಪಯಣ ಆರಂಭವಾಗುವುದು ಇಬ್ಬರು ಜೊತೆಯಾಗುವ ಕ್ಷಣದಲ್ಲಿ ಅಲ್ಲ. ಬದಲಿಗೆ ಒಬ್ಬರ ನೆನಪು ಮತ್ತೊಬ್ಬರ ಬದುಕಿನ ಭಾಗವಾಗುವ ಕ್ಷಣದಲ್ಲಿ.
ಅದಕ್ಕೇನೋ ಮನಸ್ಸು ಕೆಲವೊಮ್ಮೆ ಏನೆಂದು ಹೇಳಲಿ ನಾನು? ಎಂಬುದನ್ನೇ ತನ್ನ ಪ್ರಶ್ನೆಯನ್ನಾಗಿ ಮಾಡಿಕೊಂಡು ನಿಂತುಬಿಡುತ್ತದೆ. ಪ್ರೀತಿಸಿದ ಪ್ರತಿಯೊಂದು ಹೃದಯದೊಳಗೂ ಈ ಪ್ರಶ್ನೆ ಎಂದಿಗೂ ಉತ್ತರವಿಲ್ಲದ ಪ್ರತಿಧ್ವನಿಯಂತೆ ಕೇಳಿಸುತ್ತಲೇ ಇರುತ್ತದೆ. ಏಕೆಂದರೆ ಕೆಲವು ಭಾವನೆಗಳನ್ನು ಪದಗಳಿಂದ ಹೇಳಲು ಸಾಧ್ಯವಿಲ್ಲ. ಅವನ್ನು ಬದುಕಬೇಕು.
ಬಹುಷಃ ಹೊರಗೆ ಎಲ್ಲವೂ ಸಹಜವಾಗಿಯೇ ಕಾಣಬಹುದು. ನಗು, ಮಾತು, ಕೆಲಸ, ಜವಾಬ್ದಾರಿಗಳು… ಹೀಗೆ ಎಲ್ಲವೂ ತಮ್ಮ ಹಾದಿಯಲ್ಲಿ ಸಾಗುತ್ತಿರುತ್ತವೆ.
ಆದರೆ ಒಳಗೆ ಒಂದೇ ಒಂದು ಹೆಸರಿನ ಸುತ್ತ ಹೃದಯ ತನ್ನದೇ ಆದ ಪುಟ್ಟ ಪ್ರಪಂಚವನ್ನು ಕಟ್ಟಿಕೊಂಡಿರುತ್ತದೆ. ಆ ಲೋಕದಲ್ಲಿ ಗೆಲುವು-ಸೋಲುಗಳ ಲೆಕ್ಕವಿಲ್ಲ. ಕೇವಲ ನಿರೀಕ್ಷೆ – ನೆನಪು ಇರುತ್ತದೆ, ನಿಷ್ಕಳಂಕ ಪ್ರೀತಿ ಇರುತ್ತದೆ. ಪ್ರತಿಫಲದ ಆಸೆಯಿಲ್ಲದ ಆ ಪ್ರೀತಿ, ತನ್ನ ಅಸ್ತಿತ್ವವೇ ತನ್ನ ದೊಡ್ಡ ಗೆಲುವೆಂದು ನಂಬಿರುತ್ತದೆ.
ನನ್ನ ಹೃದಯ ನಿನ್ನ ಮೇಲೆ ಇಟ್ಟುಕೊಂಡಿರುವ ಪ್ರೀತಿಯನ್ನು ನೀನು ಅರಿಯದಿರಬಹುದು. ಆದರೆ ನನ್ನ ಬದುಕಿನ ಕೇಂದ್ರಬಿಂದು ನೀನೇ ಆಗಿದ್ದೀಯೆಂಬ ಸತ್ಯವನ್ನು ನಾನು ಮರೆಮಾಚಲಾರೆ. ಕೆಲವು ಪ್ರೇಮಗಳು ಒಪ್ಪಿಗೆಯನ್ನು ಬಯಸುವುದಿಲ್ಲ. ಅವು ಕೇವಲ ನೆನಪಿನಲ್ಲಿ ಉಳಿಯುವ ಅವಕಾಶವನ್ನಷ್ಟೇ ಕೇಳುತ್ತವೆ.
ದೂರದಲ್ಲಿದ್ದರೂ, ಕಾಣಿಸದಿದ್ದರೂ, ಮಾತನಾಡದಿದ್ದರೂ ಅವುಗಳ ಬೆಳಕು ಕ್ಷೀಣಿಸುವುದಿಲ್ಲ.
ಒಮ್ಮೆ ನಿನ್ನ ಕಣ್ಣಲ್ಲಿ ಕಂಡ ಆ ಸಣ್ಣ ಮಿಂಚು ಬಹುಶಃ ನಿನಗೆ ಸಾಮಾನ್ಯ ಕ್ಷಣವಾಗಿರಬಹುದು. ಆದರೆ ನನ್ನ ಪಾಲಿಗೆ ಅದು ಬದುಕಿನ ದೀರ್ಘ ಪಯಣಕ್ಕೆ ದಾರಿದೀಪವಾಯಿತು. ಕತ್ತಲೆಯ ದಾರಿಯಲ್ಲಿ ಚಂದ್ರ ಎಷ್ಟು ಮುಖ್ಯವೋ, ನೆನಪುಗಳಲ್ಲಿ ಬದುಕುವ ಮನಸ್ಸಿಗೆ ಆ ಒಂದು ನೋಟವೂ ಅಷ್ಟೇ ಅಮೂಲ್ಯ.
ಕೆಲವೊಮ್ಮೆ ಬದುಕನ್ನು ಉಳಿಸುವುದು ಯಾವುದೋ ಒಂದು ದೊಡ್ಡ ಘಟನೆಗಳಲ್ಲ. ಯಾರೋ ಒಮ್ಮೆ ಪ್ರೀತಿಯಿಂದ ನೋಡಿದ ಒಂದು ಕ್ಷಣವೇ ಸಾಕಾಗುತ್ತದೆ.
ಅದಕ್ಕೇನೋ ಮನಸ್ಸು ಮತ್ತೆ ಮತ್ತೆ ಅನುರಾಗ ಏನಾಯ್ತು ಎಂಬ ನೆನಪಿನಲ್ಲಿ ತೇಲುತ್ತದೆ. ಅದು ಅನೇಕ ಹೇಳಲಾಗದ ಭಾವನೆಗಳ ಮನ ಪ್ರತಿಧ್ವನಿ. ಪ್ರೀತಿಯ ಸೌಂದರ್ಯ ಪ್ರತಿಫಲ ಪಡೆಯುವುದರಲ್ಲಿ ಇಲ್ಲ. ಪ್ರೀತಿಸಲು ಸಾಧ್ಯವಾದ ಅದೃಷ್ಟವನ್ನು ಕೃತಜ್ಞತೆಯಿಂದ ಸಂಭ್ರಮಿಸುವುದರಲ್ಲಿ ಇದೆ.
ಮೌನವೂ ಚೆನ್ನ. ಮಾತೂ ಚೆನ್ನ. ಆದರೆ ನಗುವಾಗ ನೀನು ಇನ್ನೂ ಚೆನ್ನ. ಒಂದು ನಗು ಎಷ್ಟೋ ನೋವುಗಳನ್ನು ಕರಗಿಸಬಲ್ಲದು. ಕೆಲವರ ನಗುವಿನಲ್ಲಿ ಬದುಕಿನ ಆಯಾಸ ಕರಗುತ್ತದೆ. ಕೆಲವರ ಕಣ್ಣಿನಲ್ಲಿ ಭರವಸೆ ಹುಟ್ಟುತ್ತದೆ. ಮತ್ತೂ ಕೆಲವರ ಉಪಸ್ಥಿತಿ ಮಾತ್ರವೇ ಬದುಕಿಗೆ ಹಬ್ಬದ ಅರ್ಥ ನೀಡುತ್ತದೆ. ನಿನಗಿಂತ ಯಾರಿಲ್ಲ ಚೆನ್ನ ಎನ್ನಿಸದಿರುವುದು ಪ್ರೀತಿಯ ಅತಿರೇಕವಲ್ಲ. ಅದು ಮನಸ್ಸಿನ ನಿಷ್ಕಪಟ ಒಪ್ಪಿಗೆ.
ಪ್ರೀತಿ ಎಂದರೆ ಯಾವಾಗಲೂ ಕೈಹಿಡಿದು ಜೊತೆಯಾಗಿ ನಡೆಯುವುದಲ್ಲ. ಕೆಲವೊಮ್ಮೆ ದೂರದಿಂದಲೇ ಅವರ ಸಂತೋಷಕ್ಕಾಗಿ ಹಾರೈಸುವುದೂ ಪ್ರೀತಿಯೇ. ಅವರ ನೆನಪುಗಳನ್ನು ಎದೆಯೊಳಗೆ ಜೋಪಾನವಾಗಿ ಕಾಪಾಡಿಕೊಂಡು, ಅವುಗಳ ನೆರಳಿನಲ್ಲಿ ಬದುಕುವುದೂ ಪ್ರೀತಿಯ ಮತ್ತೊಂದು ರೂಪ. ಅಂತಹ ಪ್ರೀತಿಗೆ ಸೋಲು ಎಂಬುದೇ ಇರುವುದಿಲ್ಲ. ಏಕೆಂದರೆ ಅದು ಗೆಲ್ಲಬೇಕೆಂಬ ಉzಶದಿಂದ ಹುಟ್ಟಿರುವುದಲ್ಲ. ಮನಸ್ಸನ್ನು ಇನ್ನಷ್ಟು ಮನುಷ್ಯನನ್ನಾಗಿಸುವ ಪ್ರಯಾಣವಾಗಿ ಹುಟ್ಟಿರುತ್ತದೆ.
ಕೊನೆಗೆ ಅರಿವಾಗುವುದು ಒಂದೇ ಸತ್ಯ. ಪ್ರೀತಿಯನ್ನು ಎಲ್ಲ ಸಮಯದಲ್ಲೂ ಹೇಳಬೇಕಾಗಿಲ್ಲ. ಕೆಲವೊಮ್ಮೆ ಅದನ್ನು ಬದುಕಬೇಕು. ಪದಗಳು ಸೋಲುವಲ್ಲಿ ಮನಸ್ಸು ಗೆಲ್ಲುತ್ತದೆ. ಅಂತರ ಹೆಚ್ಚಾದರೂ ಆತ್ಮೀಯತೆ ಕಡಿಮೆಯಾಗುವುದಿಲ್ಲ. ಕಣ್ಣೀರು ಒಣಗಿದರೂ ನೆನಪುಗಳ ಹಸಿರು ಬಾಡುವುದಿಲ್ಲ. ನಿಜವಾದ ಪ್ರೀತಿ ಒಬ್ಬ ವ್ಯಕ್ತಿಯನ್ನು ಮಾತ್ರ ಪ್ರೀತಿಸುವುದಲ್ಲ. ನಮ್ಮೊಳಗಿನ ಮನುಷ್ಯನನ್ನೇ ಇನ್ನಷ್ಟು ಸುಂದರಗೊಳಿಸುತ್ತದೆ. ಬದುಕಿನ ಕೊನೆಯವರೆಗೂ ಜೊತೆಗಿರುವುದು ವ್ಯಕ್ತಿಯಲ್ಲದಿರಬಹುದು, ಆದರೆ ಅವರು ಬಿಟ್ಟುಹೋದ ಪ್ರೀತಿಯ ಬೆಳಕು ಮಾತ್ರ ನಮ್ಮೊಳಗೆ ಎಂದೆಂದಿಗೂ ಆರದು.

Leave a Reply

Your email address will not be published. Required fields are marked *