ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ; ಶರಾವತಿ ಸಂತ್ರಸ್ಥರು- ವಿಐಎಸ್‌ಎಲ್ ಕಾರ್ಮಿಕರ ಸಮಸ್ಯೆ ಬಗೆಹರಿಸುತ್ತೇನೆ: ಬಿವೈಆರ್…
ಶಿವಮೊಗ್ಗ,: ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿವೆ. ಮುಂದೆ ಶರಾವತಿ ಸಂತ್ರಸ್ಥರ ಮತ್ತು ವಿಐ.ಎಸ್‌ಎಲ್ ಕಾರ್ಖಾನೆ ಕಾರ್ಮಿಕರ ಸಮಸ್ಯೆಯನ್ನು ನಾನು ಖಂಡಿತ ಬಗೆಹರಿಸುತ್ತೇನೆ ಈಗಾಗಲೇ ಈ ಬಗ್ಗೆ ಪ್ರಯತ್ನದ ಹಾದಿ ಮುಂದು ವರೆದಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಾವತಿ ಸಂತ್ರಸ್ಥರ ಮತ್ತು ವಿ.ಐ.ಎಸ್.ಎಲ್. ಕಾರ್ಖಾನೆ ಸಮಸ್ಯೆ ಬಿಜೆಪಿ ಸರ್ಕಾರದ್ದಲ್ಲ. ೧೯೮೦ರವರೆಗೂ ಮತ್ತು ಅದಾದ ನಂತರವು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇತ್ತು. ನಾಡಿನ ಬೆಳಕಿಗಾಗಿ ಭೂಮಿ ಕಳೆದುಕೊಂಡ ಮುಳುಗಡೆ ಸಂತ್ರಸ್ಥರ ಸಮಸ್ಯೆಯನ್ನು ಆಗಿನ ಕಾಂಗ್ರೆಸ್ ಸರ್ಕಾರ ಏಕೆ ಬಗೆಹರಿಸಲಿಲ್ಲ. ಈಗ ನಮ್ಮ ಕಡೆ ಬೆರಳು ತೋರಿಸುತ್ತಿದ್ದಾರೆ ಏಕೆ ಎಂದು ಅವರು ಪ್ರಶ್ನಿಸಿದರು.
ಕಾಗೋಡು ತಿಮ್ಮಪ್ಪನವರು ವಿಧಾನಸಭಾ ಅಧ್ಯಕ್ಷರಾಗಿದ್ದಾಗ ಮತ್ತು ಸಚಿವರಾಗಿದ್ದಾಗ ಈ ಬಗ್ಗೆ ಒಂದಿಷ್ಟು ಕಾಯಕಲ್ಪ ನೀಡಿದ್ದರು ಎಂದು ನಾನು ಒಪ್ಪಿಕೊಳ್ಳುತ್ತೇನೆ. ೯೯೦೦ ಎಕರೆಯಲ್ಲಿ ಸುಮಾರು ೫೦೦೦ ಎಕರೆಯನ್ನು ಡಿ.ನೋಟಿಪೀಕೇಷನ್‌ಗಾಗಿ ಅವರು ಪ್ರಯತ್ನಪಟ್ಟಿದ್ದರು. ಆದರೆ ಆಗ ಕೇಂದ್ರದ ಒಪ್ಪಿಗೆ ಪಡೆಯಬೇಕಿತ್ತು. ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯದೇ ಇದ್ದುದ್ದರಿಂದ ಸುಪ್ರೀಂ ಕೋರ್ಟ್ ಇದಕ್ಕೆ ಒಪ್ಪಿಲ್ಲ ಎಂದರು.
ಇದು ಕಾಂಗ್ರೆಸ್ ಸರ್ಕಾರದ ತಪ್ಪಾಗಿದೆ. ಈ ತಪ್ಪನ್ನು ನಾವು ಸರಿಮಾಡಲು ಸತತ ಹೋರಾಟ ಮಾಡುತ್ತಿದ್ದೇವೆ. ಸಂಸತ್‌ನಲ್ಲಿ ಮಾತನಾಡಿಲ್ಲ ಎಂದು ಕಾಂಗ್ರೆಸ್ಸಿಗರು ಹೇಳುತ್ತಾರೆ. ಆದರೆ ನಾನು ಮಾತನಾಡಿರುವುದನ್ನು ರಾಜ್ಯದ ಎಲ್ಲಾ ಪತ್ರಿಕೆಗಳು ವರದಿ ಮಾಡಿದೆ ಎಂದು ಪತ್ರಿಕಾ ವರದಿಯನ್ನು ತೋರಿಸಿದರು.
ಶರಾವತಿ ಸಂತ್ರಸ್ಥರು ಭಿಕ್ಷೆ ಕೇಳುತ್ತಿಲ್ಲ. ಅದು ಅವರ ಹಕ್ಕು, ಅವರ ಸಮಸ್ಯೆ ಯನ್ನು ನಾನು ಖಂಡಿತ ಬಗೆಹರಿಸು ತ್ತೇನೆ. ಆ ಪ್ರಯತ್ನ ಈಗಾಗಲೇ ಮುಂದುವರೆದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ವಾಗಿದೆ. ಸಂತ್ರಸ್ಥರ ಸಮಸ್ಯೆಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ಗೆ ಆಫಿಡೆವಿಟ್ ಕೂಡ ಹಾಕಿಲ್ಲ ಎಂದರು.
ಹಾಗೆಯೇ ವಿ.ಐ.ಎಸ್.ಎಲ್. ಕಾರ್ಖಾನೆ ಸಂಕಷ್ಟದಲ್ಲಿದ್ದಾಗ ರಾಜ್ಯ ಸರ್ಕಾರ ಅದನ್ನು ಕೇಂದ್ರಕ್ಕೆ ವಹಿಸಿ ಕೊಟ್ಟಿತ್ತು. ಒಂದು ಪಕ್ಷ ವಿ.ಐ.ಎಸ್.ಎಲ್. ಕಾರ್ಖಾನೆ ನಷ್ಟ ಹೊಂದಿದರೆ ಅದನ್ನು ಮತ್ತೆ ರಾಜ್ಯ ಸರ್ಕಾರಕ್ಕೆ ವಾಪಾಸ್ಸು ಕೊಡಬೇಕು ಎಂಬ ನಿಯಮವನ್ನು ಅಂದಿನ ರಾಜ್ಯ ಸರ್ಕಾರ ಮಾಡಲಿಲ್ಲ. ಇದು ಕೂಡ ಕಾಂಗ್ರೆಸ್ ಸರ್ಕಾರದ ತಪ್ಪು, ಆದರೆ ನಾನು ಸಂಸದನಾದ ಮೇಲೆ ವಿ.ಐ.ಎಸ್.ಎಲ್. ಕಾರ್ಖಾನೆಗೆ ಬೀಗ ಹಾಕಲು ಬಿಟ್ಟಿಲ್ಲ. ಹಾಗೆಯೇ ಎಂಪಿಎಂ ಕಾರ್ಖಾನೆಯ ಪುನಶ್ಚೇತನಕ್ಕೂ ನಾನು ಪ್ರಯತ್ನಿಸುತ್ತಿದ್ದೇನೆ ಎಂದರು.
ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇದು ಪಾರದರ್ಶಕವಾಗಿದೆ. ಸುಪ್ರೀಂ ಕೋರ್ಟ್‌ಗೆ ಈಗಾಗಲೇ ನಮ್ಮ ಪಕ್ಷಕ್ಕೆ ವಿವರವನ್ನು ತಿಳಿಸಿದೆ. ತನಿಖಾ ಸಂಸ್ಥೆಗಳು ತಮ್ಮ ಕೆಲಸ ತಾವು ಮಾಡುತ್ತವೆ ಎಂದರು.
ವಿಧಾನ ಪರಿಷತ್ ಶಾಸಕರಾದ ಎಸ್. ರುದ್ರೇಗೌಡರು, ಡಿ.ಎಸ್. ಅರುಣ್, ಮಾಜಿ ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಎಸ್.ಎಸ್. ಜ್ಯೋತಿಪ್ರಕಾಶ್, ಎಸ್.ದತ್ತಾತ್ರಿ, ಬಳಿಗಾರ್, ಗಾಯಿತ್ರಿ ಮಲ್ಲಪ್ಪ, ಶಿವರಾಜ್, ಜಗದೀಶ್ ಇದ್ದರು.