ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಗುಡ್-ಡೇ: ಶಿಲುಬೆಯ ನೆರಳಿನಲ್ಲಿ ಉದಯಿಸಿದ ನಿತ್ಯ ಭರವಸೆ

Share Below Link

ಅ. ರಾಕೇಶ್ ಡಿಸೋಜ, ಮೊ: ೯೪೪೮೩ ೪೩೨೧೧
ವಿಶ್ವದಾದ್ಯಂತ ಕ್ರೈಸ್ತ ಬಾಂಧವರು ಶ್ರದ್ಧಾ-ಭಕ್ತಿಯಿಂದ ಆಚರಿಸುವ ಗುಡ್ ಫ್ರೈಡೇ ಅಥವಾ ಶುಭ ಶುಕ್ರವಾರವು ಮಾನವ ಇತಿಹಾಸದ ಅತ್ಯಂತ ಆಳವಾದ ಆಧ್ಯಾತ್ಮಿಕ ಅರ್ಥವನ್ನು ಹೊತ್ತಿರುವ ಪವಿತ್ರ ದಿನವಾಗಿದೆ. ಇದು ಕೇವಲ ಶೋಕದ ದಿನವಲ್ಲ. ಪ್ರೀತಿ, ತ್ಯಾಗ ಮತ್ತು ವಿಮೋಚನೆಯ ಮಹಾನ್ ಸಂದೇಶವನ್ನು ಹೊತ್ತ ದಿವ್ಯ ಕ್ಷಣವಾಗಿದೆ.
ಈ ದಿನವು ದೇವಪುತ್ರ ಯೇಸು ಕ್ರಿಸ್ತರನ್ನು ಶಿಲುಬೆಗೆ ಏರಿಸಿ ಕೊಂದ ದಿನದ ಸ್ಮರಣೆ. ಆದರೆ, ಕ್ರೈಸ್ತ ನಂಬಿಕೆಯ ಪ್ರಕಾರ ಇದು ಅಂತ್ಯವಲ್ಲ, ಮಾನುಕುಲದ ರಕ್ಷಣೆಗಾಗಿ ಆರಂಭವಾದ ಹೊಸ ಭರವಸೆಯ ಬೆಳಕು. ಕತ್ತಲೆಯ ಮಧ್ಯೆ ಬೆಳಕು ಹುಟ್ಟಿದ ಕ್ಷಣವೇ ಈ ಶುಭ ಶುಕ್ರವಾರ.
ಬೈಬಲ್ ಶ್ರೀಗ್ರಂಥದಲ್ಲಿ ಯೋಹಾನ ೩:೧೬ರಲ್ಲಿ ಹೇಳುವಂತೆ;
ದೇವರು ಈ ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ, ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ಅವರಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ.
ಈ ವಾಕ್ಯವು ಗುಡ್ ಫ್ರೈಡೇಯ ಮೂಲಭೂತ ಅರ್ಥವನ್ನು ಸಾರ್ಥಕವಾಗಿ ಪ್ರತಿಬಿಂಬಿಸುತ್ತದೆ.
ಗುಡ್ ಫ್ರೈಡೇಯು ಪಾಸ್ಕಲ್ ಟ್ರಿಡ್ಯೂಮ್ ಎಂಬ ಮೂರು ಪವಿತ್ರ ದಿನಗಳ ಅವಽಯ ಪ್ರಮುಖ ಅಂಗವಾಗಿದೆ. ಪವಿತ್ರ ಗುರುವಾರದ ಕೊನೆಯ ಭೋಜನದಿಂದ ಆರಂಭವಾಗಿ, ಈ ದಿನ ಯೇಸುವಿನ ತ್ಯಾಗವನ್ನು ಸ್ಮರಿಸಲಾಗುತ್ತದೆ ಮತ್ತು ಈಸ್ಟರ್ ಭಾನುವಾರದಲ್ಲಿ ಪುನರುತ್ಥಾನದ ಸಂತೋಷದೊಂದಿಗೆ ಮುಕ್ತಾಯಗೊಳ್ಳುತ್ತದೆ.
ಆ ದಿನದ ಘಟನಾವಳಿಗಳು ಹೃದಯವನ್ನು ಕದಡುವಂತಿವೆ. ಬೈಬಲ್ ದಾಖಲೆಯ ಪ್ರಕಾರ, ಯೇಸುವಿಗೆ ಮುಳ್ಳಿನ ಕಿರೀಟವನ್ನು ತೊಡಿಸಿ ಅವಮಾನಿಸಿ, ಹೊಡೆದು, ಭಾರವಾದ ಶಿಲುಬೆಯನ್ನು ಹೊತ್ತುಕೊಂಡು ಹೋಗುವಂತೆ ಮಾಡಲಾಯಿತು.
ಬೈಬಲ್‌ನಲ್ಲಿ ಮತ್ತಾಯ ೨೭:೨೯ರಲ್ಲಿ ಹೀಗೆ ಬರೆಯಲಾಗಿದೆ:
ಮುಳ್ಳಿನಿಂದ ಒಂದು ಕಿರೀಟವನ್ನು ಹೆಣೆದು, ಅವರ ತಲೆಯ ಮೇಲೆ ಇರಿಸಿದರು.
ಬೈಬಲ್‌ನಲ್ಲಿ ಪ್ರವಾದಿ ಯೆಶಾಯನ ಗ್ರಂಥ ೫೩:೫ರಲ್ಲಿ ಯೇಸುವಿನ ನೋವಿನ ಆಳವನ್ನು ವಿವರಿಸುತ್ತಾ:
ಗಾಯಗೊಂಡನಾತ ನಮ್ಮ ಪಾಪಗಳ ನಿಮಿತ್ತ, ಜಜ್ಜರಿತನಾದ ನಮ್ಮ ದ್ರೋಹಗಳ ದೆಸೆಯಿಂದ, ಶಿಕ್ಷೆಗೊಳಗಾದ ನಮ್ಮ ರಕ್ಷೆಗಾಗಿ, ಪೆಟ್ಟು ತಿಂದ ನಮ್ಮ ಸ್ವಸ್ಥತೆಗಾಗಿ…
ಆತನಿಗೆ ನಮ್ಮ ಅಕ್ರಮ ಗಳಿಗಾಗಿ ಗಾಯವಾಯಿತು, ನಮ್ಮ ದೋಷಗಳಿಗಾಗಿ ಆತನನ್ನು ಹಂಗಿಸಲಾಯಿತು; ನಮಗೆ ಶಾಂತಿ ತರುವ ಶಿಕ್ಷೆ ಆತನ ಮೇಲೆ ಬಂತು.
ಈ ವಾಕ್ಯವು ಯೇಸುವಿನ ತ್ಯಾಗದ ದಿವ್ಯತೆಯನ್ನು ಮನಮುಟ್ಟುವಂತೆ ವ್ಯಕ್ತಪಡಿಸುತ್ತದೆ.
ಅಂದು ಮಧ್ಯಾಹ್ನ ನಡೆಯುವ ತ್ರಿ ಅವರ್ಸ್ ಆಗನಿ ಸೇವೆ ಈ ದಿನದ ಅತ್ಯಂತ ಪವಿತ್ರ ಆಚರಣೆಗಳಲ್ಲಿ ಒಂದು. ಈ ಸಮಯದಲ್ಲಿ ಯೇಸು ಶಿಲುಬೆಯ ಮೇಲೆ ಇzಗ ಭೂಮಿಯಲ್ಲಿ ಕತ್ತಲೆ ಆವರಿಸಿತ್ತು ಎಂಬ ನಂಬಿಕೆ ಇದೆ.
ಬೈಬಲ್ ಶ್ರೀ ಗ್ರಂಧದಲ್ಲಿ ಲೂಕ ೨೩:೪೪-೪೬ರಲ್ಲಿ ಹೇಳುತ್ತದೆ;
ಆಗ ಸುಮಾರು ನಡುಮಧ್ಯಾಹ್ನ, ಆಗಿನಿಂದ ಮೂರು ಗಂಟೆಯವರೆಗೂ ಸೂರ್ಯನು ಕಾಂತಿಹೀನ ನಾದನು. ನಾಡಿನಲ್ಲೆಲ್ಲಾ ಕತ್ತಲೆ ಕವಿಯಿತು. ಮಹಾ ದೇವಾಲಯದ ತೆರೆಯು ಇಬ್ಬಾಗವಾಗಿ ಸೀಳಿ ಹೋಯಿತು. ಯೇಸುಸ್ವಾಮಿ, ಪಿತನೇ, ನನ್ನಾತ್ಮ ವನ್ನು ನಿಮ್ಮ ಕೈಗೊಪ್ಪಿಸುತ್ತೇನೆ ಎಂದು ಹೇಳಿ ಗಟ್ಟಿಯಾಗಿ ಕೂಗಿ ಪ್ರಾಣ ಬಿಟ್ಟರು.
ಶಿಲುಬೆಯ ಮೇಲೆ ಯೇಸು ತನ್ನ ಕೊನೆಯ ಕ್ಷಣಗಳಲ್ಲಿ ಹೇಳಿದ ಮಾತುಗಳು ಮಾನವಕುಲಕ್ಕೆ ಶಾಶ್ವತ ಸಂದೇಶವಾಗಿದೆ.
ತಂದೆಯೇ, ಇವರು ಏನು ಮಾಡುತ್ತಿzರೆಂದು ತಿಳಿಯದೆ ಮಾಡುತ್ತಿzರೆ; ಅವರನ್ನು ಕ್ಷಮಿಸು. (ಲೂಕ ೨೩:೩೪)
ಈ ಕ್ಷಮೆಯ ಮಾತುಗಳು ಪ್ರೀತಿ ಮತ್ತು ದಯೆಯ ಪರಮಾವಽಯ ಉದಾಹರಣೆ.
ಗುಡ್ ಫ್ರೈಡೇಯು ಶೋಕದ ದಿನವಾಗಿದ್ದರೂ, ಅದರಲ್ಲಿ ಆಶೆಯ ಬೀಜವಿದೆ. ಯೇಸುವಿನ ಮರಣವು ಮಾನವಕುಲದ ಪಾಪಗಳಿಗೆ ವಿಮೋಚನೆಯ ದಾರಿ ತೆರೆದಿತು ಎಂದು ಕ್ರೈಸ್ತರು ನಂಬುತ್ತಾರೆ.
ರೋಮಾಪುರದವರಿಗೆ ೫:೮ರಲ್ಲಿ ಹೀಗೆ ಹೇಳಲಾಗಿದೆ:
ನಾವಿನ್ನೂ ಪಾಪಿಗಳಾಗಿರುವಾಗಲೇ ಕ್ರಿಸ್ತಯೇಸು ನಮಗೋಸ್ಕರ ಪ್ರಾಣತ್ಯಾಗ ಮಾಡಿದರು. ಇದರಿಂದ ನಮ್ಮ ಮೇಲೆ ದೇವರಿಗಿರುವ ಪ್ರೀತಿ ಎಷ್ಟೆಂದು ವ್ಯಕ್ತವಾಗುತ್ತದೆ.
ಈ ಪವಿತ್ರ ದಿನದ ಹಿಂದೆ ಇರುವ ಆಧ್ಯಾತ್ಮಿಕ ಸಿದ್ಧತೆಗೂ ಮಹತ್ವ ಇದೆ. ಬೂದಿ ಬುಧವಾರ ದಿಂದ ಆರಂಭವಾಗುವ ೪೦ ದಿನಗಳ ಉಪವಾಸ, ಶಿಲುಬೆ ಹಾದಿಯ ಪ್ರಾರ್ಥನೆ ಮತ್ತು ದಾನಧರ್ಮದ ಮೂಲಕ ಕ್ರೈಸ್ತರು ತಮ್ಮ ಆತ್ಮವನ್ನು ಪರಿಶುದ್ಧಗೊಳಿಸಲು ಪ್ರಯತ್ನಿಸುತ್ತಾರೆ. ಗುಡ್ ಫ್ರೈಡೇ ದಿನ ಸಂಪೂರ್ಣ ಉಪವಾಸ ವಿದ್ದು, ತಮ್ಮ ನೋವು- ದುಃಖಗಳನ್ನು ದೇವರ ಮುಂದೆ ಇಟ್ಟು ಶಾಂತಿ ಮತ್ತು ಶಕ್ತಿಯನ್ನು ಬೇಡುತ್ತಾರೆ. ತ್ಯಾಗದ ಪ್ರೀತಿ ಇದೆ, ನೋವಿನ ವಿಮೋಚನೆ ಇದೆ ಮತ್ತು ಮರಣದ ನೆರಳಲ್ಲಿಯೂ ಬದುಕಿನ ಬೆಳಕು ಹೊಳೆಯುತ್ತದೆ. ಶಿಲುಬೆಯ ಕತ್ತಲೆಯ ಹಿಂದೆ, ಪುನರುತ್ಥಾನದ ಬೆಳಕು ನಮ್ಮನ್ನು ಕಾಯುತ್ತಿದೆ ಎಂಬುದು ಕ್ರೈಸ್ತ ಭಕ್ತರ ಬಲವಾದ ನಂಬಿಕೆಯಾಗಿದೆ.