ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಭಕ್ತರಿಗೆ ಆಸರೆಯಾದ ದೇವಮಾತೆ…

Share Below Link

ಆಕಾಶವನ್ನೆಲ್ಲಾ ಆವರಿಸಿದ ಕಾರ್ಮೋಡ, ಮಿಂಚು, ಗುಡುಗು, ಸಿಡಿಲು, ರೊಂಯ್ಯನೆ ಬೀಸುವ ಗಾಳಿಯೊಂದಿಗೆ ಧೋ… ಎಂದು ಸುರಿಯುವ ಮಳೆ ಇದು ಮುಂಗಾರಿನಲ್ಲಿ ಕಾಣುವ ಸಾಮಾನ್ಯ ದೃಶ್ಯಾವಳಿ. ಎಲ್ಲೆಡೆ ಮಳೆಯದ್ದೇ ಕಾರುಬಾರು.
ಹೀಗೆ ಜೂನ್ ತಿಂಗಳ ಮೊದಲ ವಾರದಲ್ಲಿ ನೈರುತ್ಯ ಮುಂಗಾರಿನ ಮೂಲಕ ದೇಶಾದ್ಯಂತ ೪ ತಿಂಗಳ ಪಯಣಕ್ಕೆ ಇದು ಮುನ್ನುಡಿ ಇದ್ದಂತೆ. ಅದೇ ರೀತಿ ರಾಜ್ಯದ ಮಳೆನಾಡು ಭಾಗದಲ್ಲಿ ಪ್ರತಿ ವರ್ಷ ಅದರ ಅಬ್ಬರ ಜೋರಾಗಿಯೇ ಇರುತ್ತಿತ್ತು. ಈ ರೀತಿಯ ಮುಂಗಾರು ಮಳೆಯ ಹನಿಗಳನ್ನು ಕಣ್ತುಂಬಿಕೊಳ್ಳುವ ಜೊತೆ ಜೊತೆಗೆ ತುಂಗೆಯ ತಟದಲ್ಲಿ ವಾಸಿಸುತ್ತಿದ್ದ ಜನತೆ ನೆರೆಯ ಭಯದಿಂದ ನಲುಗಿ ಹೋಗಿದ್ದರು.
ವಿಶೇಷವಾಗಿ ಶಿವಮೊಗ್ಗ ನಗರದ ಕ್ರೈಸ್ತ ಭಕ್ತರು ಮಳೆಗಾಲಕ್ಕೆ ಮುನ್ನುಡಿ ಬರೆಯುವ ಜೂನ್ ತಿಂಗಳಲ್ಲಿಯೇ ಪ್ರತಿವರ್ಷ ಯೇಸುವಿನ ಪವಿತ್ರ ಹೃದಯದ (ಸೇಕ್ರೆಡ್‌ಹಾರ್ಟ್) ಹಬ್ಬವನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸುತ್ತಿದ್ದರು. ಆದರೆ ೧೯೨೮ರಿಂದ ಈಚೆಗೆ ಸೇಕ್ರೆಡ್ ಹಾರ್ಟ್ ಹಬ್ಬದ ಜೊತೆಜೊತೆಗೆ ಜುಲೈ ೧೬ರಂದು ಮಳೆಯ ಆರ್ಭಟದ ನಡುವೆಯೇ ದೇವತಾಯಿ ಕಾರ್ಮೆಲ್ ಮಾತೆಯ ಉತ್ಸವವನ್ನು ಸಹ ಅತ್ಯಂತ ವಿಜೃಂಭಣೆಯಿಂದ ಆಚರಿಸತೊಡಗಿದ್ದು ಇಲ್ಲಿನ ವಿಶೇಷತೆಯಾಗಿದೆ.
ಕಾರ್ಮೆಲ್ ಮಾತೆಯ ಉತ್ಸವದ ಹಿನ್ನೆಲೆ:
ಜುಲೈ ೧೬; ಈ ದಿನ ವಿಶ್ವದೆಲ್ಲೆಡೆಯ ಕ್ರೈಸ್ತರು ಮತ್ತು ದೇವ ಮಾತೆಯ ಸಕಲ ಭಕ್ತರಿಗೆ ಶುಭದಿನ. ಅಂದು ಕಾರ್ಮೆಲ್ ಬೆಟ್ಟದ ಮೇಲೆ ದೇವ ಮಾತೆ ಪ್ರತ್ಯಕ್ಷವಾಗಿ ಮನುಕುಲಕ್ಕೆ ದರ್ಶನ ನೀಡಿದ್ದರು ಎಂಬ ನಂಬಿಕೆಯಿದೆ. ಈ ಕಾರಣದಿಂದಲೇ ವಿಶ್ವದೆಲ್ಲೆಡೆ ಇಂದಿಗೂ ಕಾರ್ಮೆಲ್ ಮಾತೆಯ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ತುಂಗೆಯ ಆರ್ಭಟಕ್ಕೆ
ಸಿಕ್ಕು ನಲುಗಿದ್ದ ನಗರ ವಾಸಿಗಳು:
ಅಂತೆಯೇ ಮಲೆನಾಡಿನ ಹೃದಯ ಭಾಗವಾದ ಶಿವಮೊಗ್ಗ ನಗರದಲ್ಲಿ ಕ್ರಿ.ಶ. ೧೯೨೮ರಲ್ಲಿ ಇಲ್ಲಿನ ಜೀವನದಿ ತುಂಗೆಯು ಉಕ್ಕಿ ಹರಿದ ಪರಿಣಾಮ ನೂರಾರು ಸಂಖ್ಯೆಯ ಜನಸಾಮಾನ್ಯರು, ಸಾವಿರಾರು ಪ್ರಾಣಿಪಕ್ಷಿಗಳು ಹಾಗೂ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಾಶವಾಗಿತ್ತು. ಹೀಗೆ ಅಂದು ಜಲಪ್ರಳಯವಾದಾಗ ಅಂದಿನ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಜಾತಿ-ಧರ್ಮದ ಬೇಧವಿಲ್ಲದೆ ಪ್ರವಾಹ ಪೀಡಿತರಿಗೆ ಆಶ್ರಯ ನೀಡಿ, ಚರ್ಚ್‌ನ ಅಂದಿನ ಧರ್ಮಕೇಂದ್ರದ ಗುರುಗಳು, ಮೇರಿ ಇಮ್ಯಾಕ್ಯುಲೇಟ್ ಕನ್ಯಾಸ್ತ್ರೀ ಮಠದ ಸಿಸ್ಟರ್‍ಸ್‌ಗಳು ನಿರಾಶ್ರಿತರಿಗೆ ಊಟೋಪಚಾರದ ವ್ಯವಸ್ಥೆಯ ಜೊತೆಗೆ ಅನಾರೋಗ್ಯ ಪೀಡಿತರಿಗೆ ಶುಶ್ರೂಷೆಯ ಸೇವೆಯನ್ನೂ ನಿಸ್ವಾರ್ಥವಾಗಿ ನೀಡಿದ್ದರು.
ಆದರೆ ಪ್ರಕೃತಿಯ ಮುನಿಸು ಮಾತ್ರ ಕಡಿಮೆಯಾಗದೆ ದಿನದಿಂದ ದಿನಕ್ಕೆ ಮಳೆಯ ಆರ್ಭಟ ಹೆಚ್ಚಿತು. ಈ ಕಾರಣದಿಂದ ತುಂಗೆಯ ಒಡಲು ತುಂಬಿ, ಜೀವನದಿಯಲ್ಲಿ ಪ್ರವಾಹ ಉಂಟಾಯಿತು. ಅಂದು ತುಂಗೆಯ ರೌದ್ರಾವತಾರಕ್ಕೆ ನಲುಗಿದ್ದ ಜನತೆ ಅಕ್ಷರಶಃ ಕಂಗಾಲಾಗಿದ್ದರು.
ಮಾತೆಯ ಮೊರೆಹೋದ ನಿರಾಶ್ರಿತರು:
ಈ ಸಂದರ್ಭದಲ್ಲಿ ಚರ್ಚ್‌ನಲ್ಲಿ ಆಶ್ರಯ ಪಡೆದಿದ್ದ ನೆರೆ ನಿರಾಶ್ರಿತರು ಸೇರಿದಂತೆ ಜಾತಿ-ಧರ್ಮದ ಬೆಧವಿಲ್ಲದೆ ನಗರದ ವಿವಿಧ ಸ್ಥಳಗಳಿಂದ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಬಂದು ಕಾರ್ಮೆಲ್ ಮಾತೆಯ ಸನ್ನಿಧಿಯಲ್ಲಿ ಸೇರಿ ಪ್ರಕೃತಿ ವಿಕೋಪದಿಂದ ತಮ್ಮನ್ನು ರಕ್ಷಿಸಲು ಪರಿಪರಿಯಾಗಿ ಬೇಡಿಕೊಂಡು ಕಣ್ಣೀರಿಟ್ಟು ಪ್ರಾರ್ಥಿಸಿದರು ಮತ್ತು ಕಾರ್ಮೆಲ್ ಮಾತೆಯ ಉತ್ಸವವನ್ನು ಮಲೆನಾಡಿನ ಹೃದಯ ಭಾಗದಲ್ಲಿರುವ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಪ್ರತಿ ವರ್ಷವೂ ಅತ್ಯಂತ ವಿಜೃಂಭಣೆಯಿಂದ ಭಕ್ತಿಪೂರ್ವಕವಾಗಿ ಆಚರಿಸುವುದಾಗಿ ಮಾತೆಯಲ್ಲಿ ಹರಕೆಯನ್ನು ಸಹ ಹೊತ್ತುಕೊಂಡರು ಎಂಬುದು ಇತಿಹಾಸ.
ಮುನಿಸು ಬಿಟ್ಟ ಮಳೆರಾಯ:
ನಂತರ ಮಳೆರಾಯ ತನ್ನ ಆರ್ಭಟವನ್ನು ಕಡಿಮೆಗೊಳಿಸತೊಡಗಿದ, ಹಾಗೆಯೇ ತುಂಗೆಯ ಪ್ರವಾಹವು ನಿಧಾನವಾಗಿ ಇಳಿಯಿತು ಎಂಬ ಬಲವಾದ ನಂಬಿಕೆ ಅಂದಿನಿಂದ ಇಂದಿನವರೆಗೂ ಮಾತೆಯ ಭಕ್ತರಲ್ಲಿ ಆಳವಾಗಿ ಬೇರೂರಿದೆ. ಈ ಕಾರಣದಿಂದಾಗಿ ಅಂದಿನಿಂದ ಪ್ರತಿವರ್ಷವೂ ಕಾರ್ಮೆಲ್ ಮಾತೆಯ ಹಬ್ಬವನ್ನು ಏಸುವಿನ ಪವಿತ್ರ ಹೃದಯಕ್ಕೆ ಸಮರ್ಪಿಸಲ್ಪಟ್ಟ ಈ ದೇವಾಲಯದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಮತ್ತು ಕಾರ್ಮೆಲ್ ಮಾತೆಯ ವಾರ್ಷಿಕ ಸಭೆಯನ್ನು ನಡೆಸಿ ಉತ್ತರಿಕೆ ಹಾಗೂ ಜೇನುಮೇಣದ ಭತ್ತಿಗಳನ್ನು ಸದಸ್ಯರಿಗೆ ನೀಡಿ ಗೌರವಿಸಲಾಗುತ್ತಿದೆ.
ರಾಜ್ಯದ ವಿವಿಧ ಭಾಗದಿಂದ ವಿವಿಧ ಪಂಗಡಗಳ ಕ್ರೈಸ್ತರು, ಹಿಂದೂ-ಮುಸ್ಲಿಂಮರು ದೇವಮಾತೆಯ ಉತ್ಸವವನ್ನು ಆಚರಿಸಲು ಮಲೆನಾಡಿದ ಹೃದಯ ಭಾಗವಾದ ಶಿವಮೊಗ್ಗ ನಗರದಲ್ಲಿರುವ ಇಂದಿನ ಸೇಕ್ರೆಡ್ ಹಾರ್ಟ್ ಪ್ರಧಾನಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಕಾರ್ಮೆಲ್ ಮಾತೆಗೆ ಹೂವು, ಧೂಪ, ಮೇಣದ ಭತ್ತಿ, ದವಸ-ಧಾನ್ಯಗಳನ್ನು ಕಾಣಿಕೆಯಾಗಿ ಅರ್ಪಿಸಿ ಧನ್ಯತಾಭಾವ ಹೊಂದುತ್ತಿದ್ದಾರೆ.
ಮಾತೆಯ ಉತ್ಸವಕ್ಕೆ ಸಿದ್ದತೆ:
ಕಾರ್ಮೆಲ್ ಮಾತೆಯ ಉತ್ಸವವನ್ನು ಭಕ್ತಿಪೂರ್ವಕವಾಗಿ ಆಚರಿಸುವ ಸಲುವಾಗಿ ಪ್ರತಿವರ್ಷವೂ ನವದಿನಗಳ ಪ್ರಾರ್ಥನೆಯೊಂದಿಗೆ ಭಕ್ತಾಧಿಗಳು ಆಧ್ಯಾತ್ಮಿಕವಾಗಿ ತಮ್ಮನ್ನು ಸಿದ್ದಪಡಿಕೊಳ್ಳುತ್ತಾರೆ. ಈ ನವದಿನಗಳಲ್ಲಿ ವಿಶೇಷವಾಗಿ ಜಪಸರ ಪ್ರಾರ್ಥನೆ ಜರುಗಲಿದ್ದು, ವಿವಿಧ ಧರ್ಮಕೇಂದ್ರಗಳ ಗುರುಗಳು ಆಗಮಿಸಿ ಕಾರ್ಮೆಲ್ ಮಾತೆಯ ಕುರಿತು ಪ್ರವಚನ ನೀಡುತ್ತಾರೆ.
ಸೇಕ್ರೆಡ್ ಹಾರ್ಟ್ ಚರ್ಚ್‌ನ ವಿಶೇಷತೆ:
ಪರಮಪೂಜ್ಯ ಬಿಷಪ್ ಡಾ| ಫ್ರಾನ್ಸಿಸ್ ಶೆರೇವೋ ಅವರು ಶಿವಮೊಗ್ಗ ಧರ್ಮಕ್ಷೇತ್ರದ ಪೀಠಾಧಿಕಾರಿಗಳಾಗಿದ್ದು, ದೇವಪುತ್ರ ಯೇಸುಕ್ರಿಸ್ತರ ಪವಿತ್ರ ಹೃದಯಕ್ಕೆ ಸಮರ್ಪಿಸಲ್ಪಟ್ಟ ಈ ದೇವಾಲಯವು ಶಿವಮೊಗ್ಗ ಧರ್ಮಕ್ಷೇತ್ರದ ಪ್ರಧಾನಾಲಯವಾಗಿದೆ. ಇದು ವಿಶ್ವದಲ್ಲೇ ೨ನೇ ಅತಿ ದೊಡ್ಡ ಕ್ರೈಸ್ತ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.