ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ನಸುಕಿನ ಕನಸಿನಲ್ಲಿ ನಿನ್ನ ನೆನಪೇ ಸುಂದರ…

Share Below Link

ನಸುಕಿನ ಕನಸಿಗೆ ತನ್ನದೇ ಆದ ಒಂದು ಮಾಯಾ ಲೋಕವಿರುತ್ತದೆ. ಆ ಹೊತ್ತಿನ ಕನಸುಗಳು ಕೇವಲ ಕಣ್ಣುಗಳಿಗೆ ಮಾತ್ರ ಕಾಣುವುದಿಲ್ಲ; ಅವು ಹೃದಯದ ಆಳದಲ್ಲಿ ಹುಟ್ಟಿ ಆತ್ಮದೊಂದಿಗೆ ಮಾತನಾಡುತ್ತವೆ. ಅಂತಹ ನಸುಕಿನ ಕನಸಿನಲ್ಲಿ ಮೂಡುವ ನಿನ್ನ ನೆನಪು ನನಗೆ ಎಲ್ಲಕ್ಕಿಂತಲೂ ಸುಂದರ. ಅದು ಕೇವಲ ಒಂದು ನೆನಪಲ್ಲ, ನನ್ನ ಬದುಕಿನ ಪ್ರತಿಯೊಂದು ಪುಟದಲ್ಲೂ ಅಚ್ಚೊತ್ತಿರುವ ಪ್ರೀತಿಯ ಸಹಿ.
ಚಂದ್ರನ ಮಸುಕಾದ ಬೆಳಕು ಭೂಮಿಯ ಮೇಲೆ ತನ್ನ ಬೆಳ್ಳಿಯ ಹೊದಿಕೆಯನ್ನು ಹರಡಿರುವ ರಾತ್ರಿಯಲ್ಲಿ, ಮನಸ್ಸು ಮನದ ಮಡಿಲಿಗೆ ಜರಿದಾಗ, ನನ್ನ ಕಣ್ಣುಗಳು ನಿದ್ರೆಯ ಅಂಗಳ ಪ್ರವೇಶಿಸುತ್ತವೆ. ಆದರೆ ನಿದ್ರೆಯಲ್ಲೂ ನನ್ನ ಮನಸ್ಸು ಹುಡುಕುವುದು ನಿನ್ನನ್ನೇ. ಏಕೆಂದರೆ ನನ್ನ ಕನಸುಗಳಿಗೆ ನೀನೇ ದಾರಿ, ನನ್ನ ಭಾವನೆಗಳಿಗೆ ನೀನೇ ಭಾಷೆ.
ಕನಸಿನ ದಾರಿಯಲ್ಲಿ ನೀನು ನಿಧಾನವಾಗಿ ನಡೆದು ಬರುತ್ತಿರುವಂತೆ ಕಂಡಾಗ ನನ್ನ ಹೃದಯದ ಮಿಡಿತಗಳು ಹೊಸ ಹಾಡೊಂದನ್ನು ಹಾಡಲು ಆರಂಭಿಸುತ್ತವೆ. ಆ ರಾಗದಲ್ಲಿ ಪ್ರೀತಿಯ ಪರಿಮಳವಿರುತ್ತದೆ, ನೆನಪಿನ ನವಿಲುಗರಿಯಿರುತ್ತದೆ. ನಿನ್ನ ಕಣ್ಣಿನ ಆಳದಲ್ಲಿ ಅನೇಕ ಕಥೆಗಳು ಅಡಗಿವೆ. ನಿನ್ನ ನಗುವಿನಲ್ಲಿ ಸಾವಿರ ಸೂರ್ಯೋದಯಗಳ ಹೊಳಪು ಇದೆ. ನಿನ್ನ ಮಾತಿನ ಮಧುರತೆಯಲ್ಲಿ ವಸಂತದ ಗಾಳಿಯ ಮೃದುವಾದ ಸ್ಪರ್ಶವಿದೆ.
ನೀನು ನಗುವಾಗ ನನ್ನ ಹೃದಯದಲ್ಲಿ ಹೂವುಗಳು ಅರಳುತ್ತವೆ…, ನೀನು ಮಾತಾಡುವಾಗ ನನ್ನ ಮನಕ್ಕೂ ಸಂಗೀತ ಸಿಗುತ್ತದೆ…
ಕೆಲವೊಮ್ಮೆ ನಿಜ ಜೀವನದ ದಾರಿಗಳು ನಮ್ಮನ್ನು ದೂರ ಮಾಡಬಹುದು. ಪರಿಸ್ಥಿತಿಗಳು ನಮ್ಮನ್ನು ಬೇರೆ ಬೇರೆ ತೀರಗಳಲ್ಲಿ ನಿಲ್ಲಿಸಬಹುದು. ಆದರೆ ಪ್ರೀತಿಯ ವಿಶೇಷತೆ ಏನೆಂದರೆ ಅದು ದೂರವನ್ನು ಅಳೆಯುವುದಿಲ್ಲ. ನೀನು ಹತ್ತಿರವಿಲ್ಲ ಎಂಬ ಸತ್ಯವನ್ನು ಮನಸ್ಸು ಒಪ್ಪಿಕೊಂಡರೂ ನಿನ್ನ ನೆನಪುಗಳು ಮಾತ್ರ ಎಂದಿಗೂ ನನ್ನಿಂದ ದೂರವಾಗುವುದಿಲ್ಲ. ಅವು ಪ್ರತಿಯೊಂದು ಉಸಿರಿನಲ್ಲೂ, ಪ್ರತಿಯೊಂದು ಹೃದಯದ ಬಡಿತದಲ್ಲೂ, ಪ್ರತಿಯೊಂದು ಭಾವನೆಯಲ್ಲೂ ಬೆರೆತು ಹೋಗಿವೆ.
ಅನೇಕ ಬಾರಿ ನನ್ನ ಮನಸ್ಸು ನಿನ್ನ ನೆನಪಿನೊಂದಿಗೆ ಮಾತನಾಡುತ್ತದೆ. ಕೆಲವೊಮ್ಮೆ ನೀನು ನನ್ನ ಪಕ್ಕದ ಕುಳಿತುಕೊಂಡಿರುವಂತೆ ಭಾಸವಾಗುತ್ತದೆ. ಆ ಕ್ಷಣದಲ್ಲಿ ನನಗೆ ನೆನಪಾಗುವುದು ಆ ಸಿನಿಮಾದ ಅಮರ ಸಾಲು…
ನಿನ್ನನ್ನು ನೋಡಿದ ಮೊದಲ ಕ್ಷಣವೇ ನನ್ನ ಬದುಕಿನ ದಿಕ್ಕು ಬದಲಾಯಿಸಿತು…
ಮತ್ತೊಮ್ಮೆ ಮನದೊಳಗೆ ಮಿಡಿಯುವುದು ಮತ್ತೊಂದು ಮಧುರ ಭಾವನೆ…
ಪ್ರೀತಿ ಅಂದರೆ ಕೇವಲ ಜೊತೆಯಾಗಿ ನಡೆಯುವುದಲ್ಲ, ದೂರದಲ್ಲಿದ್ದರೂ ಒಬ್ಬರೊಳಗೆ ಮತ್ತೊಬ್ಬರು ಬದುಕುವುದೇ ಪ್ರೀತಿ…
ನಿಜಕ್ಕೂ ನಮ್ಮ ಪ್ರೀತಿ ಅಂಥz… ಸಮಯ ಬದಲಾಗಬಹುದು, ಋತುಗಳು ಬದಲಾಗಬಹುದು, ಜೀವನದ ಹಾದಿಗಳು ಹೊಸ ತಿರುವುಗಳನ್ನು ಪಡೆಯಬಹುದು. ಆದರೆ ನಿನ್ನ ನೆನಪು ಮಾತ್ರ ಬದಲಾಗುವುದಿಲ್ಲ.
ಬೆಳಗಿನ ಸೂರ್ಯನು ಉದಯಿಸಿದಾಗ ನಸುಕಿನ ಕನಸುಗಳು ನಿಧಾನವಾಗಿ ಕರಗುತ್ತವೆ. ಚಂದ್ರಬೆಳಕು ಮಾಯವಾಗುತ್ತದೆ. ರಾತ್ರಿಯ ಮನ ಮುಗಿಯುತ್ತದೆ. ಆದರೆ ನಿನ್ನ ನೆನಪುಗಳು ಮಾತ್ರ ನನ್ನ ಮನಸ್ಸಿನೊಳಗೆ ಎಂದೆಂದಿಗೂ ಜೀವಂತವಾಗಿಯೇ ಉಳಿಯುತ್ತವೆ. ಅವು ಕನಸಿನೊಂದಿಗೆ ಮುಗಿಯುವುದಿಲ್ಲ ಬದಲಾಗಿ ನನ್ನ ದಿನದ ಪ್ರತಿಯೊಂದು ಕ್ಷಣವನ್ನೂ ಸುಂದರಗೊಳಿಸುತ್ತವೆ.
ಕೆಲವೊಮ್ಮೆ ರಾತ್ರಿಯ ನಿಶ್ಶಬ್ದತೆಯಲ್ಲಿ ಆಕಾಶದತ್ತ ನೋಡಿದಾಗ, ಚಂದ್ರನೂ ಸಹ ನಿನ್ನ ನೆನಪಿನಂತೆ ಕಾಣುತ್ತಾನೆ. ಅವನು ದೂರದಲ್ಲಿದ್ದರೂ ತನ್ನ ಬೆಳಕಿನಿಂದ ಭೂಮಿಯನ್ನು ಮುಟ್ಟುವಂತೆ, ನೀನೂ ದೂರದಲ್ಲಿದ್ದರೂ ನಿನ್ನ ಪ್ರೀತಿಯಿಂದ ನನ್ನ ಹೃದಯವನ್ನು ಮುಟ್ಟುತ್ತೀಯೆ. ಅದಕ್ಕೇ ನಿನ್ನ ನೆನಪುಗಳು ನನ್ನ ಜೀವನದ ಚಂದ್ರಬೆಳಕು.
ನೀನು ನನ್ನ ಜೊತೆ ಇಲ್ಲದಿದ್ದರೂ,
ನಿನ್ನ ನೆನಪು ನನ್ನ ಜೊತೆಗಿದೆ.
ನೀನು ನನ್ನ ಕಣ್ಣಿಗೆ ಕಾಣದಿದ್ದರೂ,
ನಿನ್ನ ಪ್ರೀತಿ ನನ್ನ ಹೃದಯದಲ್ಲಿ ಉಸಿರಾಡುತ್ತಿದೆ…
ಪ್ರೀತಿ ಎಂದರೆ ಕೇವಲ ಒಬ್ಬ ವ್ಯಕ್ತಿಯನ್ನು ಪ್ರೀತಿಸುವುದಲ್ಲ. ಅವರ ನೆನಪುಗಳಲ್ಲಿ ಬದುಕುವುದೂ ಹೌದು. ನಿನ್ನ ನೆನಪುಗಳು ನನ್ನ ಮನದ ತೋಟದಲ್ಲಿ ಅರಳಿದ ಹೂವುಗಳು. ಅವುಗಳ ಪರಿಮಳವೇ ನನ್ನ ಬದುಕಿನ ಸೌಂದರ್ಯ. ನಿನ್ನ ಪ್ರೀತಿಯ ಉಷ್ಣತೆಯೇ ನನ್ನ ಹೃದಯದ ನೆಮ್ಮದಿ. ಆದ್ದರಿಂದಲೇ ನಸುಕಿನ ಕನಸಿನಲ್ಲಿ ಮೂಡುವ ನಿನ್ನ ನೆನಪು ನನಗೆ ಅತ್ಯಂತ ಸುಂದರ. ಅದು ನನ್ನ ಆತ್ಮಕ್ಕೆ ಸಾಂತ್ವನ ನೀಡುವ ಹಾಡು. ನನ್ನ ಏಕಾಂತಕ್ಕೆ ಸಂಗಾತಿಯಾಗುವ ಮನ. ನನ್ನ ಬದುಕಿಗೆ ಬೆಳಕು ನೀಡುವ ಪ್ರೀತಿ. ನನ್ನ ಹೃದಯದಲ್ಲಿ ಸದಾ ಮಿಡಿಯುವ ಶಾಶ್ವತ ಕಾವ್ಯ.
ಕನಸು ಮುಗಿದರೂ ಪರವಾಗಿಲ್ಲ.
ರಾತ್ರಿ ಕಳೆದು ಹೋದರೂ ಪರವಾಗಿಲ್ಲ.
ಕಾಲ ಬದಲಾಗಿದರೂ ಪರವಾಗಿಲ್ಲ.
ಏಕೆಂದರೆ ನನ್ನ ಹೃದಯದ ಪ್ರತಿಯೊಂದು ಪುಟದಲ್ಲೂ ನಿನ್ನ ಹೆಸರಿದೆ. ನನ್ನ ಆತ್ಮದ ಪ್ರತಿಯೊಂದು ಉಸಿರಿನಲ್ಲೂ ನಿನ್ನ ಪ್ರೀತಿಯಿದೆ. ನನ್ನ ಕನಸುಗಳ ಪ್ರತಿಯೊಂದು ಚಂದ್ರಬೆಳಕಿನಲ್ಲೂ ನಿನ್ನ ನೆನಪಿದೆ.
ಅದಕ್ಕೇ…
ನಸುಕಿನ ಕನಸಿನಲ್ಲಿ ನಿನ್ನ ನೆನಪೇ ಸುಂದರ…
ಯಾಕೆಂದರೆ ಆ ನೆನಪಿನ
ನನ್ನ ಪ್ರಪಂಚವಿದೆ,
ನನ್ನ ಸಂತೋಷವಿದೆ,
ನನ್ನ ಪ್ರೀತಿಯಿದೆ… ಮತ್ತು ನೀನಿದ್ದೀಯ…!

Leave a Reply

Your email address will not be published. Required fields are marked *