ಸಕಾಲದ ತಪಾಸಣೆಯಿಂದ ಕ್ಯಾನ್ಸರ್ ತಡೆಯಲು ಸಾಧ್ಯ…
ಶಿವಮೊಗ್ಗ : ಕ್ಯಾನ್ಸರ್ ಸದ್ದಿಲ್ಲದೇ ಬರುವ ಕಾಯಿಲೆ ಯಾಗಿದ್ದು, ತಪಾಸಣೆಯೇ ಇದನ್ನು ತಡೆಯಲು ಇರುವ ಮುಂಜಾಗ್ರತೆ ಕ್ರಮ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ , ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಕ್ಯಾನ್ಸರ್ ಮಾಹಿತಿ ಕೇಂದ್ರ ಮತ್ತು ಎಂಐಒ ಆಸ್ಪತ್ರೆ ತೀರ್ಥಹಳ್ಳಿ ಇವರ ಆಶ್ರಯದಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಮಾಹಿತಿ ಸಂಗ್ರಹ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಕ್ಯಾನ್ಸರ್ ಹೆಚ್ಚು ಕಾಡುತ್ತಿರುವ ಕಾಯಿಲೆಯಾಗಿದೆ. ಇದು ಬರುವುದೇ ಗೊತ್ತಾಗುವುದಿಲ್ಲ. ಹಾಗಾಗಿ ಮುಂಜಾಗ್ರತಾ ಕ್ರಮ ಎಂದರೆ ಕಾಲ ಕಾಲಕ್ಕೆ ತಪ್ಪದೇ ತಪಾಸಣೆ ಮಾಡಿಸಿಕೊಳ್ಳಬೇಕು. ಅದರಲ್ಲೂ ಮಹಿಳೆಯರು ಈ ಬಗ್ಗೆ ಹೆಚ್ಚು ಜಾಗೃತರಾಗಬೇಕು ಎಂದು ಕಿವಿಮಾತು ಹೇಳಿದರು.

ಕ್ಯಾನ್ಸರ್ ಅರಿವು ಮೂಡಿಸು ವುದು ಕೂಡ ಒಂದು ಸಮಾಜ ಸೇವೆಯೇ ಆಗಿದೆ. ಇದರಿಂದ ಸಾವಿರಾರು ರೋಗಿಗಳು ಜೀವ ಉಳಿಸಿಕೊಳ್ಳಬಹುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಂಐಒ ಆಸ್ಪತ್ರೆಯ ಮುಖ್ಯಸ್ಥ ಡಾ.ಸುರೇಶ್ ರಾವ್, ಕ್ಯಾನ್ಸರ್ ಮಿತಿಮೀರಿ ಬೆಳೆಯುತ್ತಿದೆ. ಸಾಮಾನ್ಯವಾಗಿ ೪ನೇ ಹಂತಕ್ಕೆ ತಲುಪಿದ ಮೇಲೆ ರೋಗಿಗಳು ಬರುತ್ತಾರೆ. ಇದರಿಂದ ಸಮಾಜಕ್ಕೂ ಕಷ್ಟ. ವ್ಯಕ್ತಿಯ ಜೀವಕ್ಕೂ ಕಷ್ಟ. ಸರ್ಕಾರಕ್ಕೂ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಆಸ್ಪತ್ರೆ ಕ್ಯಾನ್ಸರ್ ವಿರುದ್ಧ ಅಭಿಯಾನವನ್ನೇ ಹಮ್ಮಿಕೊಂಡಿದೆ ಎಂದರು.
ರೆಡ್‌ಕ್ರಾಸ್ ಸಂಸ್ಥೆಯ ವಿ.ಎಲ್.ಎಸ್. ಕುಮಾರ್ ಮಾತನಾಡಿ, ಯಾವ ದುರಭ್ಯಾಸ ಇಲ್ಲದವರಿಗೂ ಕ್ಯಾನ್ಸರ್ ಬರುತ್ತಿದೆ. ಪ್ರಸ್ತುತ ಆಹಾರ, ನೀರು, ಗಾಳಿ ಕೂಡ ಕಲಬೆರಕೆಯಾಗಿದೆ. ತುಂಗಾ ನದಿ ನೀರು ಕಲುಷಿತಗೊಂಡಿದೆ. ಕ್ಯಾನ್ಸರ್ ಕಾಯಿಲೆಗೆ ಇದೂ ಒಂದು ಕಾರಣ. ಈ ಬಗ್ಗೆ ಜಗೃತಿಯ ಅವಶ್ಯಕತೆ ಇದೆ ಎಂದರು.
ಪ್ರಮುಖರಾದ ಎನ್. ಗೋಪಿನಾಥ್, ಕೆ.ಇ. ಕಾಂತೇಶ್, ಉಮೇಶ್ ಆರಾಧ್ಯ, ಡಾ. ದಿನೇಶ್, ಎ. ಮಂಜುನಾಥ್, ವಿಜಯಕುಮಾರ್ ಇನ್ನಿತರರಿದ್ದರು.
ಕ್ಯಾನ್ಸರ್ ಮಾಹಿತಿ ಕೇಂದ್ರದ ಅ.ನಾ. ವಿಜಯೇಂದ್ರರಾವ್ ಸ್ವಾಗತಿಸಿ, ಕೆ.ಜಿ. ಕೃಷ್ಣಾನಂದ ನಿರೂಪಿಸಿ, ದಿಲೀಪ್ ನಾಡಿಗ್ ವಂದಿಸಿದರು.

