ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಭವಿಷ್ಯದ ಕನಸುಗಳ ನಡುವೆ ಪಿಸುಮಾತು…

Share Below Link

ಮಳೆ ಬಿದ್ದ ನಂತರದ ಮಣ್ಣಿನ ವಾಸನೆ ಹೇಗೋ ಹದಿಹರೆಯದ ಪ್ರೇಮಕ್ಕೂ ಅಂಥದೇ ಒಂದು ಮೃದುವಾದ ಮನಸ್ಸು ತುಂಬುವ ಸುಗಂಧ ಇರುತ್ತದೆ. ಅದು ಯಾವುದೇ ರೀತಿಯ ಸದ್ದು ಮಾಡುವುದಿಲ್ಲ… ಆದರೆ ಮನದ ಒಳಗಡೆ ಆಳವಾಗಿ ನೆಲಸಿಕೊಂಡು, ನಿಧಾನವಾಗಿ ಮೊಳಕೆಯೊಡೆದು ಹೂವಾಗಿ ಅರಳುತ್ತದೆ.
ಆ ಬೆಳಗ್ಗೆ ಕಾಲೇಜಿನ ಆವರಣದ ಮೇಲೆ ಸೂರ್ಯನ ಕಿರಣಗಳು ಮೃದುವಾಗಿ ಹರಡಿಕೊಂಡಿದ್ದವು. ಗಾಳಿಯಲ್ಲಿ ಒಂದು ವಿಚಿತ್ರ ಉದ್ವಿಗ್ನತೆ.. ವಿದ್ಯಾರ್ಥಿಗಳ ಮುಖದಲ್ಲಿ ಒತ್ತಡ… ಕಣ್ಣುಗಳಲ್ಲಿ ನೂರಾರು ಕನಸುಗಳು… ಎಲ್ಲರಿಗೂ ಅದು ಸಿಇಟಿ ಪರೀಕ್ಷೆಯ ದಿನ. ಆದರೆ ಆ ಜನಸಂದಣಿಯ ನಡುವೆ ಎರಡು ಹೃದಯಗಳು ಮಾತ್ರ ತಮ್ಮದೇ ಕನಸುಗಳೊಂದಿಗೆ ಪಿಸುಗುಡುತ್ತಿದ್ದವು…
ಅವರಿಗೆ ಅದು ಕೇವಲ ಪರೀಕ್ಷೆಯ ದಿನವಲ್ಲ, ಅದು ತಮ್ಮ ಭವಿಷ್ಯದ ಬಾಗಿಲು ತಟ್ಟುವ ಕ್ಷಣವಾಗಿತ್ತು. ಅದರ ಜೊತೆಗೂಡಿ ತಮ್ಮ ಪ್ರೀತಿಯನ್ನೂ ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಒಂದು ಮನ ಪ್ರತಿeಯಾಗಿತ್ತು.
ಅವನು ಕೈಯಲ್ಲಿ ಹಾಲ್ ಟಿಕೆಟ್ ಹಿಡಿದು ನಿಂತಿದ್ದ.
ಅವಳ ಕಣ್ಣುಗಳಲ್ಲಿ ಸ್ವಲ್ಪ ಭಯ… ಸ್ವಲ್ಪ ಗೊಂದಲ… ಆದರೆ ಹೃದಯದಲ್ಲಿ ಒಂದು ಗಟ್ಟಿ ನಂಬಿಕೆ ಹೊಳೆಯುತ್ತಿತ್ತು.
ಅವನು ನಿಧಾನವಾಗಿ ಅವಳ ಬಳಿ ಬಂದು…
ರಿವೈಸ್ ಆಗಿದೆಯಾ…? ನೀನು ಚೆನ್ನಾಗಿ ಬರೀತೀಯ….? u can… ಎಂದು ಪಿಸುಗುಟ್ಟಿದ.
ಅವಳು ಸಣ್ಣ ನಗುವಿನ ಜೊತೆ ಅವನ ಬೆನ್ನಿಗೆ ಗುದ್ದುತ್ತಾ… ಕೋತಿ.. ನನ್ನ ಜೊತೆ ನೀನು ಇದ್ದೀಯಲ್ಲ… ಅದೇ ಸಾಕು… ಎಂದಳು. ಆ ಮಾತುಗಳಲ್ಲಿ ಯಾವುದೇ ಆತಂಕವಿರಲಿಲ್ಲ, ಬದಲಿಗೆ ಆತ್ವಿಶ್ವಾಸ ಎದ್ದುಕಾಣುತ್ತಿತ್ತು. ಆ ಕ್ಷಣದಲ್ಲಿ ಅವರ ಮನಸ್ಸಿನೊಳಗೆ ನಿಧಾನವಾಗಿ ಒಂದು ಹಾಡು ಮೊಳಗಿತು.
ಹಮ್ ತೇರೆ ಬಿನ್ ಅಬ್ ರೆಹ್ ನಹೀ ಸಕ್ತೇ..
ತೆರೆ ಬಿನಾ ಕ್ಯಾ ವಜೂದ್ ಮೇರಾ…
ಕ್ಯುಂಕಿ ತುಮ್ ಹೀ ಹೋ… ಅಬ್ ತುಮ್ ಹೀ ಹೋ…
ಜಿಂದಗಿ ಅಬ್ ತುಮ್ ಹೀ ಹೋ…
ಆ ಹಾಡು ಅವರ ತುಟಿಗಳ ಮೇಲೆ ಕೇಳಿಸದಿದ್ದರೂ ಹೃದಯದ ಒಳಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಹದಿಹರೆಯದ ಪ್ರೇಮದ ವಿಶೇಷತೆಯೇ ಅದು.
ನಾವು ನಮ್ಮ ಆತ್ಮವಿಶ್ವಾಸವನ್ನೇ ಮತ್ತೊಬ್ಬರ ಕಣ್ಣಿನಲ್ಲಿ ಹುಡುಕುತ್ತೇವೆ. ನಮ್ಮ ಭಯಗಳನ್ನು ಅವರ ಕೈಗಳಲ್ಲಿ ಇಡುತ್ತೇವೆ ಮತ್ತು ಅವರ ನಂಬಿಕೆಯನ್ನು ಹಿಡಿದು ಮುಂದೆ ಸಾಗುತ್ತೇವೆ.
ಕಾಲೇಜಿನ ಗೇಟ್ ಮುಂದೆ ನಿಂತಿದ್ದ ಆ ಇಬ್ಬರು ಪ್ರೇಮಿಗಳು ಕೇವಲ ಪರೀಕ್ಷೆಗೆ ಬಂದಿರಲಿಲ್ಲ. ಅವರು ತಮ್ಮ ಕನಸುಗಳಿಗೆ ಸಹಿ ಹಾಕಲು ಬಂದಿದ್ದರು. ಸಾಫ್ಟವೇರ್ ಇಂಜಿನಿಯರ್ ಆಗಬೇಕು ಎನ್ನುವ ಕನಸು… ಕುಟುಂಬದ ನಿರೀಕ್ಷೆಗಳ ಭಾರ… ಸ್ವಂತ ಜೀವನದ ಚಿತ್ರಣ… ಎಲ್ಲವೂ ಅವರ ಕಣ್ಣುಗಳಲ್ಲಿ ಮಿನುಗುತ್ತಿತ್ತು.
ನಾಳೆ ನಾವು ಒಂದೇ ಕಾಲೇಜ್‌ನಲ್ಲಿ ಇದ್ದರೆ ಹೇಗಿರುತ್ತೆ ಗೊತ್ತಾ? ಎಂದು ಅವನು ಕೇಳಿದ.
ಅವಳು ಕಣ್ಣು ಮಿಟುಕಿಸಿ…
ಆಗ ಪ್ರತಿದಿನ ನಿನ್ನ ಜೊತೆ ಕಾಫಿ ಕುಡಿಯೋಕೆ ಬರ್ತೀನಿ ಎಂದಳು.
ಅದು ಕೇವಲ ಹಾಸ್ಯಮಯ ಉತ್ತರ ಅಲ್ಲ, ಅದು ಭವಿಷ್ಯದ ಒಂದು ಸಣ್ಣ ಕನಸಿನ ನಕ್ಷೆ. ಆ ಕ್ಷಣದಲ್ಲಿ ಮತ್ತೆ ಒಂದು ಪಲ್ಲವಿ ಅವರ ಮನಸ್ಸಿನೊಳಗೆ ಹರಿದಂತಾಯಿತು…
ತುಜ್ಸೇ ಜುದಾ ಗರ್ ಹೋ ಜಾಯೇಂಗೆ..
ತೋ ಖುಡ್ಸೇ ಹೀ ಹೋ ಜಾಯೇಂಗೆ ಜುದಾ…
ಅಷ್ಟರಲ್ಲಿ ಪರೀಕ್ಷೆಗೆ ಗಂಟೆ ಹೊಡೆದಿತು. ವಿದ್ಯಾರ್ಥಿಗಳು ಒಳಗೆ ಓಡಿದರು. ಆದರೆ ಅವರಿಬ್ಬರೂ ಕ್ಷಣಕಾಲ ನಿಂತರು.
ಅವನು ಅವಳ ಕೈ ಹಿಡಿದು ಆಲ್ ದಿ ಬೆಸ್ಟ್ ಕಣೋ… ಎಂದ.
ಅವಳು ಕಣ್ಣು ತುಂಬ ನಂಬಿಕೆಯಿಂದ
ನಮ್ಮ ಕನಸುಗಳಿಗೆ… ಎಂದಳು.
ಆ ಕೈಹಿಡಿತದಲ್ಲಿ ಸಾವಿರ ಮಾತುಗಳಿದ್ದವು.., ಆ ನೋಟದಲ್ಲಿ ಸಾವಿರ ಪ್ರತಿeಗಳು… ಅವರು ಒಳಗೆ ನಡೆದರು. ಪ್ರಶ್ನೆಪತ್ರಿಕೆಯ ಕಡೆಗೆ ಮಾತ್ರವಲ್ಲ…
ತಮ್ಮ ಜೀವನದ ಹೊಸ ಅಧ್ಯಾಯದ ಕಡೆಗೆ…
ಮೂರು ಗಂಟೆಗಳ ನಂತರ ಅವರು ಮತ್ತೆ ಹೊರಗೆ ಎದುರಾದರು.
ಹೇಗಾಯ್ತು? ಅವನು ಕೇಳಿದ.
ಅವಳು ನಗುತಾ…
ನೀನು ಹೇಳಿದಂತೆ ಭಯಕ್ಕಿಂತ ನಿನ್ನ ನಂಬಿಕೆ ಹೆಚ್ಚು ಕೆಲಸ ಮಾಡಿತು ಕಣೋ… ಎಂದಳು.
ಆ ಉತ್ತರದಲ್ಲಿ ಫಲಿತಾಂಶದ ಸಂಖ್ಯೆ ಇರಲಿಲ್ಲ, ಆದರೆ ಪ್ರೀತಿಯ ಜಯ ಇತ್ತು. ಪ್ರೇಮ ಯಾವಾಗಲೂ ದೊಡ್ಡ ಘೋಷಣೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ… ಕೆಲವೊಮ್ಮೆ ಅದು ಪರೀಕ್ಷಾ ಹಾಲ್ ಹೊರಗೆ ಕೇಳಿಬರುವ ಒಂದು ಚಿಕ್ಕ ಹೇಗಾಯ್ತು..? ಎಂಬ ಪ್ರಶ್ನೆಯಲ್ಲಿ ಇರುತ್ತದೆ. ಕೆಲವೊಮ್ಮೆ ಅದು ನೀನು ಇದ್ದೀಯಲ್ಲ… ಎಂಬ ಸರಳ ನಂಬಿಕೆಯಲ್ಲಿ ಇರುತ್ತದೆ.
ಮತ್ತೊಮ್ಮೆ ಅವರ ಮನಸ್ಸಿನೊಳಗೆ ಆ ಪಲ್ಲವಿ ಮೃದುವಾಗಿ ಹರಿಯಿತು
ಚೈನ್ ಭೀ… ಮೇರಾ ದರ್ಡ್ ಭೀ…
ಮೇರಿ ಆಶಿಕಿ ಅಬ್ ತುಮ್ ಹೀ ಹೋ…
ಆ ದಿನ ಅವರು ಎಷ್ಟು ಅಂಕಗಳನ್ನು ಪಡೆದರು ಎಂಬುದು ನಂತರದ ಕಥೆ. ಆದರೆ ಆ ಕ್ಷಣದಲ್ಲಿ ಅವರು ಒಬ್ಬರ ಹೃದಯದಲ್ಲಿ ಮತ್ತೊಬ್ಬರು ಶಾಶ್ವತವಾಗಿ ಸ್ಥಾನ ಪಡೆದಿದ್ದರು.
ಪ್ರೀತಿ ಎಂದರೆ ಇದೇ…
ಕನಸುಗಳ ನಡುವೆ ಹುಟ್ಟುವ ಒಂದು ನಿಷ್ಕಲ್ಮಶ ನಂಬಿಕೆ, ಮಾತುಗಳ ನಡುವೆ ಮನವಾಗಿ ಬೆಳೆಯುವ ಒಂದು ಬಾಂಧವ್ಯ ಮತ್ತು ಭವಿಷ್ಯವನ್ನು ಒಟ್ಟಿಗೆ ಕಾಣುವ ಒಂದು ಧೈರ್ಯ.
ಯಾಕೆಂದರೆ…
ಕೆಲವು ಹದಿಹರೆಯದ ಪ್ರೇಮಿಗಳ ಪಿಸುಮಾತು ದೊಡ್ಡ ಕಥೆಗಳಾಗುವುದಿಲ್ಲ… ಅವು ಜೀವನದ ಅತ್ಯಂತ ಸುಂದರ ಅಧ್ಯಾಯಗಳಾಗುತ್ತವೆ….