ಸಚಿವ ಜಮೀರ್ ಅವರೇ ರಾಜ್ಯದ ಜನತೆಗೆ ಕ್ಷಮೆ ಕೇಳಿ ಗೌರವಯುತವಾಗಿ ರಾಜೀನಾಮೆ ನೀಡಿ: ರಾಕೇಶ್ ಡಿಸೋಜ
ಶಿವಮೊಗ್ಗ : ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಮೈ ಬಣ್ಣದ ಕುರಿತು ಹಗುವಾಗಿ ಮಾತನಾಡುವ ಮೂಲಕ ಜನಾಂಗೀಯ ನಿಂದನೆ ಮಾಡಿರುವ ಸಚಿವ ಜಮೀರ್ ಅಹ್ಮದ್ ವಿರುದ್ಧ ಜೆಡಿಎಸ್ ರಾಜ್ಯ ಕಾರ್ಯದರ್ಶಿ ರಾಕೇಶ್ ಡಿಸೋಜ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಚಿವ ಜಮೀರ್ ಅಹ್ಮದ್ ಅವರು ರಾಜ್ಯದ ಜನತೆಯಲ್ಲಿ ಬಹಿರಂಗ ಕ್ಷಮೆ ಕೇಳಿವ ಜೊತೆಗೆ ಸಚಿವ ಹಾಗೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸಚಿವ ಜಮೀರ್ ಅಹ್ಮದ್ ಅವರೇ, ಹೆಚ್.ಡಿ ಕುಮಾರಸ್ವಾಮಿ ಅವರು ಜಾತಿ, ಪಂಥ ಮತ್ತು ಬಣ್ಣದಿಂದ ಜನನಾಯಕರಾಗಿ ಹೊರಹೊಮ್ಮಿಲ್ಲ. ಬದಲಿಗೆ ಅವರಿಗಿರುವ ಜನಪರ ಕಾಳಜಿ, ನಾಯಕತ್ವ ಗುಣ, ಸಮಾಜಕ್ಕೆ ಮತ್ತು ಸರ್ವ ಸಮುದಾಯಗಳ ಅಭಿವೃದ್ಧಿಗೆ ಅವರ ಅಧಿಕಾರಾ ವಧಿಯಲ್ಲಿ ಕೊಟ್ಟಿರುವ ಕೊಡುಗೆಗಳು, ಜನಪರ ಯೋಜನೆಗಳು ಮತ್ತು ಉತ್ತಮವಾದ ಆಡಳಿತ ಮತ್ತು ರಾಜ್ಯದ ಆರ್ಥಿಕ ಅಭಿವೃದ್ಧಿ ದೃಷ್ಟಿಕೋನ ದಿಂದಲೇ ಕುಮಾರಸ್ವಾಮಿ ಅವರು ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ ಎಂದಿದ್ದಾರೆ.
ಸರ್ವಜನಾಂಗದ ಶಾಂತಿಯ ತೋಟದಂತಿರುವ ನಮ್ಮ ರಾಜ್ಯ ಕರ್ನಾಟಕದಲ್ಲಿ ನಿಮ್ಮಂತಹ ಕೆಲ ನಾಯಕರು, ಕ್ಷುಲ್ಲಕ ರಾಜಕೀಯಕ್ಕಾಗಿ ಜನಾಂಗೀಯ ದ್ವೇಷ ಹರಡಲು, ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದೀರಿ ಎಂದು ಆರೋಪಿಸಿದ್ದಾರೆ.
ಸಚಿವ ಜಮೀರ್ ಅವರೇ ನಿಮಗೆ ನೆನಪಿರಲಿ, ಕರ್ನಾಟಕ ರಾಜ್ಯದಲ್ಲಿ ನಿಮ್ಮ ಒಡೆದು ಆಳುವ ನೀತಿಗೆ ಎಂದೂ ಜಾಗವಿಲ್ಲ. ಜನಾಂಗೀಯ ನಿಂದನೆ, ವರ್ಣಭೇದ ಹೇಳಿಕೆಗಳನ್ನು ನೀಡಿ ಅಪಮಾನ ಎಸಗಿರುವ ನೀವು ಕರುನಾಡ ಜನತೆಯಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿ, ಗೌರವಯುತವಾಗಿ ತಮ್ಮ ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಆಗ್ರಹಿಸಿದ್ದಾರೆ.