ಜಿಲ್ಲಾ ಸುದ್ದಿತಾಜಾ ಸುದ್ದಿ

ಶ್ರೀ ನಾಗಸುಬ್ರಮಣ್ಯ ದೇವಳದಲ್ಲಿ ಶರನ್ನವರಾತ್ರಿ ಉತ್ಸವ…

Share Below Link

ಶಿವಮೊಗ್ಗ: ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ನಾಗಕ್ಷೇತ್ರವಾದ ಶ್ರೀ ನಾಗ ಸುಬ್ರಮಣ್ಯ ದೇವಸ್ಥಾನದಲ್ಲಿ ಅ. ೩ರಿಂದ ೧೧ ರವರೆಗೆ ಶರನ್ನವರಾತ್ರಿ ಉತ್ಸವ ಆಯೋಜಿಸಲಾಗಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸಂದೇಶ ಉಪಾಧ್ಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ನಾಗಸುಬ್ಹಮಣ್ಯ ದೇವಸ್ಥಾನ ಸಮಿತಿ ವತಿಯಿಂದ ಕಳೆದ ೧೬ ವರ್ಷಗಳಿಂದ ನವರಾತ್ರಿ ಉತ್ಸವ ಆಚರಿಸುತ್ತಾ ಬಂದಿದ್ದೇನೆ. ಅ. ೩ ರಂದು ಸಂಜೆ ೬ ಗಂಟೆಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ ವಿಜೇತೆ ಪುಷ್ಪಾ ಕೃಷ್ಣಮೂರ್ತಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ದೇವಸ್ಥಾನದ ಅಧ್ಯಕ್ಷ ಹೆಚ್. ರಾಮಲಿಂಗಪ್ಪ ಅಧ್ಯಕ್ಷತೆ ವಹಿಸುವರು. ನವರಾತ್ರಿ ಉತ್ಸವ ಅ. ೧೧ರವರೆಗೆ ನಡೆಯಲಿದೆ ಎಂದರು.
ಈ ಬಾರಿ ದೇವಿಯ ೯ನೇ ಅವತಾರವಾದ ಚಾಮುಂಡದೇವಿ ವಿಗ್ರಹವನ್ನು ಖ್ಯಾತ ಶಿಲ್ಪಿ ಪ್ರವೀಣ್ ಕವೇಕರ್ ನಿರ್ಮಿಸಿದ್ದಾರೆ. ಪ್ರತಿದಿನ ಬೆಳಗ್ಗೆ ಚಂಡಿಕಾಯಾಗದೊಂದಿಗೆ ಕಾರ್ಯಕ್ರಮ ಆರಂಭವಾಗಿ ೧೨.೩೦ಕ್ಕೆ ಮಂಗಳಾರತಿಯೊಂದಿಗೆ ಮುಗಿಯತ್ತದೆ. ಹಾಗೆಯೇ ಪ್ರತಿದಿನ ಸಂಜೆ ೫ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಗಳಲ್ಲಿ ಭರತನಾಟ್ಯ, ಗಾನ ನೃತ್ಯಾಮೃತ, ಸಂಗೀತ ಭಕ್ತಿಗೀತೆ, ದೇವಿ ಕೃತಿಗಳ ಗಾಯನ ಭರತನಾಟ್ಯ, ನಾಟಕ, ಯಕ್ಷಗಾನ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ಹಾಗೆಯೇ ಪ್ರತಿದಿನ ನಗರದ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸೌಂದರ್ಯ ಲಹರಿ, ಲಲಿತಾ ಸಹಸ್ರನಾಮ ಏರ್ಪಡಿಸಲಾಗಿದೆ ಎಂದರು.
೯ ದಿನಗಳ ಕಾಲ ನಡೆಯುವ ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಆಗಮಿಸಿ ತಮ್ಮ ಸೇವೆ ಸಲ್ಲಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ರಮೇಶ್ ಕೆ.ಎ., ಮಾಜಿ ಅಧ್ಯಕ್ಷ ಜಿ.ಹೆಚ್. ಮಂಜುನಾಥ್, ಅಧ್ಯಕ್ಷ ಹೆಚ್. ರಾಮಲಿಂಗಪ್ಪ ಇದ್ದರು.