ವಿಕಸಿತ ಸಂಕಲ್ಪ ಯಾತ್ರೆ ವಾಹನಗಳಿಗೆ ಬಿವೈಆರ್ ಚಾಲನೆ…
ಶಿವಮೊಗ್ಗ: ಕೃಷಿ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ದಿ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವುದು ವಿಕಸಿತ ಸಂಕಲ್ಪ ಯಾತ್ರೆಯ ಉದ್ದೇಶವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ನುಡಿದರು.
ಕೆನರಾ ಲೀಡ್ ಬ್ಯಾಂಕ್ ಆವರಣ ದಲ್ಲಿ ಇಂದು ಜಿಲ್ಲೆಯಾದ್ಯಂತೆ ಸಂಚರಿಸಲಿರುವ ವಿಕಸಿತ ಸಂಕಲ್ಪ ಯಾತ್ರೆಯ ವಾಹನಗಳಿಗೆ ಹಸಿರು ನಿಶಾನೆ ಮೂಲಕ ಅವರು ಚಾಲನೆ ನೀಡಿ ಮಾತನಾಡಿದರು.
ಬುಡಕಟ್ಟು ನಾಯಕರಾದ ಬಿರ್ಸಾ ಮುಂಡಾರವರ ಜನ್ಮದಿನವಾದ ನ.೧೫ ರಂದು ಝಾರ್ಕಂಡ್ನಲ್ಲಿ ವಿಕಸಿತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಾಯಿತು. ಕೇಂದ್ರ ಸರ್ಕಾರದ ಎಲ್ಲ ಯೋಜನೆ-ಕಾರ್ಯಕ್ರಮಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಿಳಿಸುವುದು ಹಾಗೂ ತಲುಪಿಸುವುದು ಯಾತ್ರೆಯ ಮುಖ್ಯ ಉದ್ದೇಶವಾಗಿದ್ದು, ಎಲ್ಲ ಅರ್ಹರು ಇದರ ಸದುಪಯೋಗ ಪಡೆಯಬೇಕು ಎಂದರು.
ನಮ್ಮ ಜಿಲ್ಲೆಯಲ್ಲಿ ೨ ವಿಕಸಿತ ಸಂಕಲ್ಪ ಯಾತ್ರೆಯ ವಾಹನಗಳು ೨೬೨ ಗ್ರಾ.ಪಂ ಗಳಲ್ಲಿ ೨೦೨೪ ರ ಜ.೨೫ ರವರೆಗೆ ಸಂಚರಿಸಿ, ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ನೀಡಲಿವೆ. ಹಾಗೂ ಸ್ಥಳದಲ್ಲೇ ಯೋಜನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಗುದು. ಕ್ವಿಜ್ ಕಾರ್ಯಕ್ರಮ, ಮೇರಾ ಕಹಾನಿ ಮೇರಾ ಝುಬಾನಿ ಯಶೋಗಾಥೆ, ಡ್ರೋನ್ ಮೂಲಕ ಕೃಷಿ ಜಮೀನು ಗಳಿಗೆ ನ್ಯಾನೋ ಯೂರಿಯಾ ಗೊಬ್ಬರ ಸಿಂಪಡಣೆ ಪ್ರಾತ್ಯಕ್ಷಿಕೆ ಹೀಗೆ ಫಲಾನುಭವಿಗಳನ್ನು ತಲುಪುವ ಮೂಲಕ ಸರ್ಕಾರ ಮತ್ತು ಜನರ ನಡುವಿನ ಅಂತರ ಕಡಿಮೆ ಮಾಡಿ ಕೊಂಡಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದರು.
ದೇಶದಾದ್ಯಂತ ೩ ಸಾವಿರ ವಾಹನಗಳು ವಿಕಸಿತ ಸಂಕಲ್ಪ ಯಾತ್ರೆಯನ್ನು ೨ ತಿಂಗಳ ಕಾಲ ನಡೆಸಿ ೨೫ ಲಕ್ಷ ಗ್ರಾ.ಪಂ ಮತ್ತು ೧೫ ಸಾವಿರ ನಗರ ಪ್ರದೇಶಗಳಲ್ಲಿ ಸಂಚಾರ ನಡೆಸಿ ಯೋಜನೆಗಳ ಕುರಿತು ಜಗೃತಿ ಮೂಡಿಸಿ ಉಪಯೋಗ ನೀಡಲಿದ್ದು, ಲೀಡ್ ಬ್ಯಾಂಕುಗಳು ಈ ಯಾತ್ರೆಯ ಜವಾಬ್ದಾರಿ ವಹಿಸಿಕೊಂಡು ಸಹಕರಿಸಲಿವೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ನಮ್ಮ ಜನತೆಗೆ ಶಕ್ತಿ ತುಂಬಲು ಸರ್ಕಾರ ಅನೇಕ ಯೋಜನೆ ಗಳನ್ನು ಜರಿಗೊಳಿಸಿದೆ. ಪ್ರಧಾನಿ ಯವರು ರೈತನಾಗಿ, ಒಬ್ಬ ತಾಯಿಯ ಜಗದಲ್ಲಿ ನಿಂತು ಉತ್ತಮ ಯೋಜನೆಗಳನ್ನು ತಂದು ದೇಶವನ್ನು ಉನ್ನತ ಸ್ಥಾನಕ್ಕೆ ತಂದಿದ್ದಾರೆ. ಗ್ರಾಮೀಣ, ಸಾಂಸ್ಕೃತಿಕ ಭಾರತವನ್ನು ಗಮನದಲ್ಲಿರಿಸಿ ಅವರು ಸಂಕಲ್ಪ ಸಿದ್ದಿಗೊಳಿಸಿದ್ದಾರೆ ಎಂದರು.
ಲೀಡ್ ಬ್ಯಾಂಕ್ ಡಿಜಿಎಂ ದೇವರಾಜ್ ಮಾತನಾಡಿ, ವಿಕಸಿಕ ಸಂಕಲ್ಪ ಯಾತ್ರೆಯ ೨ ಎಲ್ಇಡಿ ವಾಹನಗಳು ಜಿಲ್ಲೆಯ ೨೬೨ ಗ್ರಾ.ಪಂ ಗಳನ್ನು ಸಂಚರಿಸಲಿದೆ ಎಂದರು.
ಇದೇ ವೇಳೆ ಸಂಸದರು ವಿಕಸಿತ ಸಂಕಲ್ಪ ಯಾತ್ರೆಯ ಪ್ರತಿಜ ವಿಧಿಯನ್ನು ಬೋಧಿಸಿದರು. ಹಾಗೂ ಡ್ರೋನ್ ಮೂಲಕ ಕೃಷಿಭೂಮಿಗೆ ನ್ಯಾನೋ ಯೂರಿಯಾ ಗೊಬ್ಬರ ಸಿಂಪಡಣೆ ಪ್ರಾತ್ಯಕ್ಷಿಕೆಗೆ ರಿಮೋಟ್ ಮೂಲಕ ಚಾಲನೆ ನೀಡಿದರು.
ಯೂನಿಯನ್ ಬ್ಯಾಂಕ್ ಡಿಜಿಎಂ ರಾಜಮಣಿ, ಬ್ಯಾಂಕ್ ಆಫ್ ಬರೋಡ ಎಜಿಎಂ ರವಿ, ಎಸ್ಬಿಐ ಡಿಜಿಎಂ ವಿಜಯ್ ಸಾಯಿ, ನಬಾರ್ಡ್ ಬ್ಯಾಂಕ್ನ ಶರದ್, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಡಿಎಂ ಶಾರದಾ, ಲೀಡ್ ಬ್ಯಾಂಕ್ ಮ್ಯಾನೇಜರ್ ಅಮರನಾಥ್, ಇತರೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.