ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಮಹದೇವ ತಾತನವರ ಪ್ರೀತಿಗೆ ಪಾತ್ರರಾದ ಸಿದ್ಧಲಿಂಗ ಗುರುವರ

Share Below Link

ಹಣವಿzಗಲೆ ಭಕ್ತಿ.. ಗುಣವಿzಗಲೆ ಸೇವೆ… ನೆಣವಿzಗಲೆ ಮಾಡಿ ಮಕ್ತಿ ಪಡಿ ಇದು ಶರಣರ ಸಂದೇಶ.
ಬಸವಣ್ಣನವರು ತಮ್ಮ ವಚನದಲ್ಲಿ ನೆರೆಗೆನ್ನೆಗೆ ತೆರೆ, ಗಲ್ಲಕೆ ಶರೀರ, ಗೂಡ ಹೋಗದ ಮುನ್ನ , ಹಲ್ಲು ಹೋಗಿ ಬೆನ್ನು ಬಾಗದ ಮುನ್ನ, ಕಾಲ ಮೇಲೆ ಕೈಯನೂರಿ ಕೋಲು ಹಿಡಿಯದ ಮುನ್ನ, ಮುಪ್ಪಿಂದೊಪ್ಪದ ಮುನ್ನ, ಮೃತ್ಯುಮುಟ್ಟದ ಮುನ್ನ.. ನಿಷ್ಕಲ್ಮ್ಮಷ ಸೇವೆ ಮಾಡಬೇಕು.
ಒಂದು ಸಂಸ್ಕೃತ ಶ್ಲೋಕದಲ್ಲಿ
ಯಾವತ್ ಸ್ವಸ್ಥಾವಿದಂ ದೇಹಂ
ಯಾವನ್ಮುತುಶ್ಚ ದೂರಿತಃ
ತಾವಾದಾತ್ಮ ಹಿತಂ,
ಕೂರ್ಯಾತ್ ಪ್ರಾಣಾಂತೇಕಿಂ ಕರಿಷ್ಯಸಿಃ!
ಹೀಗೆ.. ಒಟ್ಟಾರೆಯಾಗಿ ಇವುಗಳ ಸಂದೇಶ ಒಂದೇ.. ಅದು ಅಂತರಂಗ ಬಹಿರಂಗ ಶುದ್ಧವಾಗಿದ್ದು , ದೇಹದಲ್ಲಿ ಶಕ್ತಿ ಸಾಮರ್ಥ್ಯ, ಮಾನಸಿಕ ಭಕ್ತಿ ಇರುವಾಗಲೇ ಗುರು ಲಿಂಗ ಜಂಗಮ ಸೇವೆಯೊಂದಿಗೆ ಜೀವನ ಸಾರ್ಥಕ ಪಡಿಸಿಕೊಳ್ಳ ಬೇಕು. ಸ್ಚಾರ್ಥ ತೊರೆದು ಪಾರಮಾರ್ಥ ಚಿಂತನೆ.
ಲೌಕಿಕತೆಯಿಂದ ಅಲೌಕಿಕ ಬದುಕು ಇವರದಾಗಿತ್ತು. ಅಂತೆಯೇ ಮಾನವ ಮಹದೇವನಾಗುವಂತೆ , ಸರಳ ಸಾಮಾನ್ಯ ಮನುಜರಾದ ಸಿದ್ದಲಿಂಗ ಸ್ವಾಮಿಯವರು ತಮ್ಮ ನಡೆ ನುಡಿ , ಆಚಾರ ವಿಚಾರಗಳು ಶರಣಪಂಕ್ತಿಗೆ ಕೊಂಡೊಯ್ದಿವೆ ಎಂಬುದ ಸತ್ಯ.
ಶರಣ… ಶರಣರೆಂದು ಪರಿಭ್ರಮಿಸುವ ನಾವು ಶರಣರಾರೆಂದು ಅರಿಯ ಬೇಕಿದೆ…
ಮನೆ ಮಠವನು ತೊರೆದು ಅಡವಿ ಅರಣ್ಯದಲಿ ತಪವ ಗೈದವರಲ್ಲ… ಕಾವಿ ಕಾಷಾಂಬ ರವ ಧರಿಸಿ ನೀತಿ ನಿಯಮಗಳ ಮರೆತವರಲ್ಲ. ವೇದಾಗಮ ಪುರಾಣ ಶಾಸ್ತ್ರಗಳನೋದಿ ಪ್ರಖಂಡತೆಯಲಿ ಭಾಷಣ ಬೀಗುವವರಲ್ಲ.. ವಾಮಾಚಾರಗಳಿಂದ ಜನರ ಭಾವನೆಗಳೊಂದಿಗೆ ಆಟ ಆಡುವವರಲ್ಲ. ನಾನೇ.. ನನ್ನಿಂದ ಎಂಬ ಅಹಂನಿಂದ ಸಕಲ ವೈಭೋಗದಿಂದ ಮೆರೆಯುವವರಲ್ಲ.


ಶರಣರ ಜೀವನ ಮರಣದಲ್ಲಿ ನೋಡು ಎಂಬ ಅನುಭಾವಿಕರ ಅನುಭಾವದ ನುಡಿಯಂತೆ.. ನಾನು.. ನನ್ನದು.. ನನ್ನವರೆಂಬ ಮಾಯಾ ಮೋಹವತೊರೆದವರು. ಆಶೆಯನು ಮೆಟ್ಟಿ ನಿಂತವರು, ಸರ್ವಸಂಗ ಪರಿತ್ಯಾಗಿಯಾಗಿ ಸಕಲ ಜೀವಿಗಳ ಕಲ್ಯಾಣಕ್ಕೆ ಅರ್ಪಿಸಿ ಕೊಂಡವರು.
ಲಿಂಗಯೋಗವ ಅರಿತು ಆಚರಿಸುವವರು, ಸಾಯುವ ಮುನ್ನ ಸ್ವಯಂ ಅರಿತವರು, ಇದ್ದುದರಲ್ಲಿಯೇ ಸಂತೃಪ್ತಿ ಪಡುವವರು, ಸತ್ಯ ಶುದ್ಧ ಕಾಯಕ ನಿತ್ಯ ಲಿಂಗಾರ್ಚನೆ, ಶಿವಾನುಭವ, ಶಿವಯೋಗದಲಿ ನಿರತರಾದವರು.
ಬೈದವರೆನ್ನ ಬಂಧುಗಳೆಂದು ಅಪ್ಪಿ ಆಲಿಂಗಿಸಿ ಹರಸಿದಂತವರು. ಮೌಢ್ಯತೆ ಕಂದಾಚಾರ ವಾಮಾಚಾರಗಳನ್ನು ದೂರವಿಟ್ಟು ನಡೆಯುವವರು. ಅಂತರಂಗ ಬಹಿರಂಗ ಶುದ್ಧಿ ಹೊಂದಿದವರು. ಸಕಲ ಜೀವ ರಾಶಿಗಳಿಗೆ ಲೇಸನೇ ಬಯಸುವವರು. ಅರಿಷಡ್ವರ್ಗಗಳು.. ಅಷ್ಠಮದಗಳನ ಅಷ್ಠಾವರಣಗಳ ಆಚರಣೆಗಳಿಂದ ಸಂಹರಿಸದಂತಹ ಮಹಾತ್ಮರೇ ಶರಣರು.
ಸಂಸಾರ ಭವ ಬಂಧನದೊಳಗಿದ್ದೂ ಇಲ್ಲದಂತೆ ಶರಣರಾಗಿ ಮರಣವನೆ ಗೆದ್ದ ಮಹಾತ್ಮರು ಅನೇಕರನ್ನು ಕಾಣ ಬಹುದಾಗಿದೆ. ಅಂತವರಲ್ಲಿ. ವಿಜಯನಗರ ಜಿ ಹೂವಿನಹಡಗಲಿ ತಾಲೂಕಿನ ನವಲಿ ಹಿರೇಮಠದ ಧರ್ಮಾನುರಾಗಿಗಳು ಸದಾಚಾರ ಸಂಪನ್ನರು ಗುರು ಲಿಂಗ ಜಂಗಮ ಪ್ರೇಮಿಗಳು ಕಾಯಕ ನಿರತ ತಾಯಿ ಕೊಟ್ರಮ್ಮ ಹಾಗೂ ವೀರಭದ್ರಯ್ಯ ನವರ ವರ ಪುತ್ರರಾದ ವೇ.ಮೂ. ಸಿದ್ದಲಿಂಗ ಸ್ವಾಮಿಗಳರು ಬಾಲ್ಯದಿಂದಲೆ ಧರ್ಮದಾಚರಣೆಗಳ ಬಗ್ಗೆ ಆಸಕ್ತರು.
ದಯೆ ಕರುಣೆ ಅನುಕಂಪ, ಸಹಾಯ ಸಹಾನು ಭೂತಿ ಸದ್ಗುಣಗಳು ಇವರಲ್ಲಿ ಕಾಣ ಬಹುದಾಗಿದೆ. ಸತತ ಅಧ್ಯಯನ ಪರಿಶ್ರಮದ ಫಲವಾಗಿ ಶಿಕ್ಷಾ ಗುರುವಾಗಿ ಬಹು ಕಾಲ ಹಂಪಸಾಗರದ ಖಾಸಗೀ ಪ್ರೌಢಶಾಲೆ ಯಲ್ಲಿ ಕನ್ನಡ ಪಂಡಿತರಾಗಿ ತೃಪ್ತಿಕರ ಸೇವೆಯ ಮಾಡಿ ಅಪಾರ ಶಿಷ್ಯ ಬಳಗವನ್ನು ಬೆಳಸಿದವರು. ವೃತ್ತಿ ಬಾಂಧವ್ಯದ ಬೆಸುಗೆ ಎಂಬಂತೆ ನನ್ನ ಮತ್ತು ಇವರ ನಡುವೆ ಸಂಬಂಧ ಬೆರೆಯಿತು ಪರಿಚಯವಾಗಿ ಆತ್ಮೀಯತೆ ಬೆಸುಗೆಯಾಗಿ ಅರಿಯುವ ಅವಕಾಶ ಒದಗಿ ಬಂದಿತು. ಇವರು ಸರಳ ಸಜ್ಜನಿಕೆಯ ಭಾವ , ಬಿಳಿ ಶ್ವೇತ ವಸ್ತ್ರಧಾರಿಗಳಾಗಿ ಸದಾ ಭಸ್ಮಧಾರಣೆಯಿಂದ ಕೂಡಿದ ಇವರ ಹಸನ್ಮುಖದ ಮುಗುಳು ನಗೆ ಸರ್ವಾಕರ್ಷಣೀಯ, ಭಕ್ತಿ ಭಾವ ಮೂಡಿಸುವಂತಿತ್ತು.


ಕನ್ನಡ ಬೋಧನೆಯಲ್ಲಿ ಪಾಂಡಿತ್ಯ ಪಡೆದ ಆದರ್ಶ ಶಿಕ್ಷಕರಾಗಿ ಬೋಧಿಸುವುದರ ಜೊತೆಗೆ ಇವರು ಧರ್ಮಾಚರಣೆಯ ಬಗ್ಗೆಯೂ ಅಪಾರ ಆಸಕ್ತಿ ಹೊಂದಿ ಧರ್ಮದರಿವು, ಸಂಸ್ಕಾರ , ಸಂಸ್ಕೃತಿ ಮೂಡಿಸುವಲ್ಲಿ ಮುಂದಾದರು.
ಹಂಪಸಾಗರದಲ್ಲಿ ಸೇವೆ ನಿರ್ವಹಿಸುತ್ತಿರುವ ಇವರು ಸ್ಥಳೀಯ ಉಘಾಮಠದ ಪವಾಡ ಪುರುಷ ಮಹಾದೇವ ತಾತನ ಕೃಪೆಗೆ ಪಾತ್ರರಾಗಿ ನಿರಂತರ ಸೇವೆಯ ಫಲದಿಂದ ಭಕ್ತರ ಸ್ನೇಹ ಸಂಪಾದಿಸಿ, ಅವರ ಸಹಾಯ ಸಹಕಾದೊಂದಿಗೆ ಮಹದೇವ ತಾತನ ಮಠದ ವೈಭವಕ್ಕೆ ಕಾರಣೀ ಭೂತರಾದವರು. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಕರುಳಿನ ಕುಡಿಯನ್ನೇ ಸಮಾಜಕ್ಕೆ ಅರ್ಪಣೆ ಮಾಡದ ಮಹಾನುಭಾವರಿವರು.
ಪಂಚ ಪೀಠಗಳಂದಾದ ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠದ ಉತ್ತರಾಧಿಕಾರಿಯನ್ನಾಗಿ ಸಮಾಜಕ್ಕೆ ಅರ್ಪಿಸಿದ ಕೀರ್ತಿಗೆ ಪಾತ್ರರಾದವರು. ಇಂದು ಪರಮ ಪೂಜ್ಯ ಶ್ರೀ ಷ.ಬ್ರ. ಶಿವಲಿಂಗ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಎಂಬ ನಾಮಾಂಕಿತದಲ್ಲಿ ಸಮಾಜ ಹಾಗೂ ಸದ್ಭಕ್ತರ ಪ್ರೀತಿ ಪಾತ್ರರಾಗಿ ಧರ್ಮದುಂದುಭಿಯನ್ನ ಮೊಳಗಿಸುತ್ತಿರುವುದು ಸ್ತುತ್ಯಾರ್ಹ. ಈ ಗೌರವಕ್ಕೆ ಪಾತ್ರರು ಲಿಂ.ವೇ ಮೂ. ಸಿದ್ದಲಿಂಗ ಸ್ವಾಮಿಗಳವರು.
ಇಂತಹ ಶರಣರ ಮೂರನೇ ವರ್ಷದ ಪುಣ್ಯಾರಾಧನೆ ಜರುಗುತ್ತಿರುವುದು ಸ್ತುತ್ಯಾರ್ಹ. ಶರಣರಿಗೆ ಮರಣವೇ ಮಹಾ ನವಮಿ . ಅಂತೆಯೇ ಅವರಿಗೆ ಸಾವಿಲ್ಲ. ದೇಹ ಮರೆಯಾದರೂ ಆತ್ಮ ಅವರ ಭಾವನೆಗಳನ್ನ ಕಾರ್ಯ ರೂಪಕ್ಕೆ ತರುತ್ತದೆ ಎನ್ನುವುದಕ್ಕೆ ಈಗ ನಡೆಯಲಿರುವ ಹಾಗೂ ಮುಂದೆ ನಡೆಯ ಬಹುದಾದ ಸಾಮಾಜಿಕ ಧಾರ್ಮಿಕ, ಸಂಸ್ಕೃತಿಕ ಕಾರ್ಯಗಳೇ ಸಾಕ್ಷಿಯಾಗಲಿವೆ.
ಅಂತಹ ಶರಣರಪಂಕ್ತಿಯಲ್ಲಿ ಬರುವ ಶ್ರೀ ಸಿದ್ಧಲಿಂಗ ಸ್ವಾಮಿಯವರು ಇಂದು ಸಮಸ್ತ ಭಕ್ತರ ಹೃದಯಲ್ಲಿ ಮನೆ ಮಾಡಿರುವರು. ಅವರ ಆಶಯ ಆದರ್ಶಗಳನ್ನ ಪಾಲಿಸುವುದರೊಂದಿಗೆ ಧರ್ಮದ ದಾರಿಯಲ್ಲಿ ನಡೆದು ಜನುಮ ಸಾರ್ಥಕ ಪಡಿಸಿಕೊಳ್ಳುವ ಮೂಲಕ ಅವರಿಗೆ ಸಮರ್ಪಣಾ ಭಾವದೊಂದಿಗೆ ನಮಿಸೋಣ.
ಸರ್ವೇ ಜನಾಃ ಸುಖಿನೋ ಭವಂತು
ಎಂ.ಪಿ.ಎಂ.ಕೊಟ್ರಯ್ಯ ಹೂವಿನಹಡಗಲಿ.