ಜಿಲ್ಲಾ ಸುದ್ದಿತಾಜಾ ಸುದ್ದಿ

ಸಣ್ಣ ಕೈಗಾರಿಕೆಗಳ ಬಲವರ್ಧನೆಯಿಂದ ಭಾರತ ವಿಶ್ವದ ಅಗ್ರ ಆರ್ಥಿಕ ಶಕ್ತಿಯಾಗಲಿ: ದೇವರಾಜ್

Share Below Link

ಶಿವಮೊಗ್ಗ, ಅ. ೨೮: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಉತ್ಪಾದನೆ ಹಾಗೂ ಗುಣಮಟ್ಟಕ್ಕೆ ಆದ್ಯತೆ ನೀಡಿದರೆ, ಭಾರತ ವಿಶ್ವದ ಅಗ್ರ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಬೆಂಗಳೂರಿನ ಎಂಎಸ್‌ಎಂಇ ನಿರ್ದೇಶಕ ದೇವರಾಜ್ ಕೆ. ಹೇಳಿದರು.
ಮಾಚೇನಹಳ್ಳಿಯ ಉದ್ಯಮ ಭವನದಲ್ಲಿ ಶಿವಮೊಗ್ಗ-ಭದ್ರಾವತಿ ಕೈಗಾರಿಕಾ ಸಂಘ, ವಿವಿಧ ಕೈಗಾರಿಕಾ ಸಂಘಟನೆಗಳು ಹಾಗೂ ಎಂಎಸ್‌ಎಂಇ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ವೆಂಡರ್ ಡೆವಲಪ್‌ಮೆಂಟ್ ಕಾರ್ಯಕ್ರಮ, ಕೈಗಾರಿಕಾ ವಸ್ತುಗಳ ಪ್ರದರ್ಶನ ಮತ್ತು ಕೈಗಾರಿಕಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆತ್ಮನಿರ್ಭರ ಭಾರತ ಅಭಿಯಾನದಡಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತಿವೆ. ಸಾರ್ವಜನಿಕ ವಲಯದ ಸಂಸ್ಥೆಗಳು ತಮ್ಮ ವಾರ್ಷಿಕ ಖರೀದಿಯಲ್ಲಿ ಕನಿಷ್ಠ ಶೇ. ೨೫ರಷ್ಟು ಪ್ರಮಾಣವನ್ನು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಂದ ಖರೀದಿಸುವ ಗುರಿ ಹೊಂದಿವೆ. ಈ ಕಾರ್ಯಕ್ರಮ ಸ್ಥಳೀಯ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳ ಗುಣಮಟ್ಟ, ತಾಂತ್ರಿಕ ಸಾಮರ್ಥ್ಯ ಮತ್ತು ಉತ್ಪಾದನಾ ಸೌಲಭ್ಯಗಳನ್ನು ಪ್ರಮುಖ ಖರೀದಿದಾರರಿಗೆ ಪರಿಚಯಿಸಲು ಉತ್ತಮ ವೇದಿಕೆಯಾಗಿದೆ ಎಂದರು.
ಕೈಗಾರಿಕಾ ರತ್ನ ಪ್ರಶಸ್ತಿ ಪುರಸ್ಕೃತ ಹಿರಿಯ ಉದ್ಯಮಿ ಎಸ್. ರುದ್ರೇಗೌಡ ಮಾತನಾಡಿ, ಶಿವಮೊಗ್ಗ ಜಿಯ ಕೈಗಾರಿಕೆಗಳು ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿವೆ. ವೋಕಲ್ ಫಾರ್ ಲೋಕಲ್ ಆಶಯದಂತೆ ಸ್ಥಳೀಯ ಉತ್ಪನ್ನಗಳ ಪ್ರಚಾರಕ್ಕೆ ಉದ್ಯಮಿಗಳು ಮುಂದಾಗಬೇಕು. ಯುವಕರು ಸ್ವಯಂ ಉದ್ಯೋಗದ ಅವಕಾಶಗಳನ್ನು ಬಳಸಿಕೊಂಡು ಉದ್ಯೋಗದಾತರಾಗಬೇಕು ಎಂದು ಕರೆ ನೀಡಿದರು.
ಸಂಘದ ಅಧ್ಯಕ್ಷ ಎ.ಎಲ್. ಚಂದ್ರಶೇಖರ್ ಮಾತನಾಡಿ, ಖರೀದಿದಾರರು ಮತ್ತು ಮಾರಾಟಗಾರರ ನಡುವೆ ಸಂಪರ್ಕ ಬೆಳೆಸಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ಯುವ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಕಲ್ಪಿಸುವುದು ಇದರ ಉದ್ದೇಶ ಎಂದರು.
ಸಮಾರಂಭದಲ್ಲಿ ಮಲ್ನಾಡ್ ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷ ಮಧುಕರ್ ಜೋಯಿಸ್ ಹಾಗೂ ಪೀಯರ್ ಲೈಟ್ ಲೈನರ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ರಾಮಪ್ರಸಾದ್ ಎಚ್.ಜಿ. ಅವರಿಗೆ ಕೈಗಾರಿಕಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷ ಬಿ. ಗೋಪಿನಾಥ್, ಜಿ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್ ಆರ್., ಎಂಎಸ್‌ಎಂಇ ಉಪನಿರ್ದೇಶಕ ಎ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ವಿವಿಧ ಕೈಗಾರಿಕೆಗಳ ಉತ್ಪನ್ನಗಳ ಪ್ರದರ್ಶನವೂ ನಡೆಯಿತು.

Leave a Reply

Your email address will not be published. Required fields are marked *