ಈಸೂರು ಹುತಾತ್ಮರ ತ್ಯಾಗ ದೇಶಕ್ಕೆ ಸದಾ ಪ್ರೇರಣೆ…
ಶಿಕಾರಿಪುರ, ಸೆ.೨೮: ಸ್ವಾತಂತ್ರ್ಯ ಪೂರ್ವದ ಸ್ವತಂತ್ರ ಗ್ರಾಮ ಎಂದು ಘೋಷಿಸಿ
ಕೊಂಡು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಈಸೂರು ಗ್ರಾಮ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದೆ. ಗ್ರಾಮದ ೬೫ ಹುತಾತ್ಮರು, ಸ್ವಾತಂತ್ರ್ಯ ಹೋರಾಟ ಗಾರರು ಹಾಗೂ ಯೋಧರ ಭಾವಚಿತ್ರಗಳನ್ನು ಅನಾವರಣ ಗೊಳಿಸುವ ಅವಕಾಶ ದೊರೆತಿರುವುದು ಗೌರವ ಹಾಗೂ ಹೆಮ್ಮೆಯ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ತಾಲೂಕಿನ ಈಸೂರು ಗ್ರಾಮದಲ್ಲಿರುವ ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕದಲ್ಲಿ ಭಾವಚಿತ್ರಗಳನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ೮೪ ವರ್ಷಗಳ ಹಿಂದೆ ಇದೇ ನೆಲ ಐತಿಹಾಸಿಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಮಹಾತ್ಮ ಗಾಂಧೀಜಿ ಕರೆ ನೀಡಿದ್ದ ಕ್ವಿಟ್ ಇಂಡಿಯಾ ಚಳವಳಿಗೆ ಸ್ಪಂದಿಸಿದ ಗ್ರಾಮಸ್ಥರು ಬ್ರಿಟಿಷ್ ಆಡಳಿತದ ವಿರುದ್ಧ ಬಂಡೆದ್ದು, ಈಸೂರನ್ನು ಸ್ವತಂತ್ರ ಗ್ರಾಮವೆಂದು ಘೋಷಿಸಿದ್ದರು. ಗ್ರಾಮದ ದೇವಸ್ಥಾನ ಹಾಗೂ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದರು ಎಂದು ಸ್ಮರಿಸಿದರು.
ಹೋರಾಟದಲ್ಲಿ ಪಾಲ್ಗೊಂಡ ಐವರು ಗ್ರಾಮಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಹಲವರು ಲಾಠಿ ಏಟು ಹಾಗೂ ಕಠಿಣ ಶಿಕ್ಷೆ ಅನುಭವಿಸಿದರು. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಪ್ರತಿಯೊಬ್ಬ ಹೋರಾಟಗಾರರಿಗೂ ಶಿರಬಾಗಿ ನಮಿಸುವುದಾಗಿ ತಿಳಿಸಿದ ಯಡಿಯೂರಪ್ಪ, ಅವರ ತ್ಯಾಗದ ಫಲವಾಗಿ ಇಂದು ನಾವು ಸ್ವಾತಂತ್ರ್ಯ ಅನುಭವಿಸುತ್ತಿzವೆ. ಅವರ ಹೋರಾಟವನ್ನು ಮುಂದಿನ ಪೀಳಿಗೆ ಮರೆಯಬಾರದು ಎಂದರು.

ಈಸೂರು ಸ್ಮಾರಕ ಭವನ ಕೇವಲ ಕಟ್ಟಡವಲ್ಲ. ಅದು ಪ್ರತಿಯೊಬ್ಬ ಮಗುವಿಗೂ ಸ್ವಾತಂತ್ರ್ಯದ ಮಲ್ಯ ಹಾಗೂ ದೇಶಭಕ್ತಿಯ ಸಂದೇಶ ಸಾರುವ ಪವಿತ್ರ ಸ್ಥಳವಾಗಿದೆ. ಅನಕ್ಷರತೆ, ಬಡತನ ಹಾಗೂ ವ್ಯಸನದ ವಿರುದ್ಧ ಹೋರಾಡಿ, ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಕಾಪಾಡುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸೆ.೨೭ರಂದು ಈಸೂರು ಸ್ವತಂತ್ರ ಗ್ರಾಮವೆಂದು ಘೋಷಿಸಿಕೊಂಡ ಘಟನೆ ಇತಿಹಾಸದಲ್ಲಿ ಶಾಶ್ವತವಾಗಿ ಉಳಿದಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿzಗ ಸ್ಮಾರಕ ಭವನಕ್ಕೆ ರೂ. ೫ ಕೋಟಿ ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿಗೆ ರೂ.೧೧ ಕೋಟಿ ಅನುದಾನ ನೀಡಿದ್ದರು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ನಿವೃತ್ತ ಶಿಕ್ಷಕ ಕಾಳೇಶಪ್ಪ ಮಾತನಾಡಿದರು. ಹುತಾತ್ಮರ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು. ಹುತಾತ್ಮ ಸೂರ್ಯನಾರಾಯಣಾಚಾರಿ ಅವರ ಮೊಮ್ಮಗ ಎ.ಎಸ್. ಮೋಹನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಐಎಎಸ್ ಅಧಿಕಾರಿ ಪ್ರಭಾಕರ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

