ಸಾಮಾಜಿಕ ನ್ಯಾಯದ ಹೋರಾಟಗಳನ್ನು ಹತ್ತಿಕ್ಕುವ ಸಂಚು…
ಶಿಕಾರಿಪುರ, ಜು.೨೪: ಸಾಮಾಜಿಕ ನ್ಯಾಯಕ್ಕಾಗಿ ದೇಶಾದ್ಯಂತ ನಡೆಯುತ್ತಿರುವ ಹೋರಾಟಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ವ್ಯವಸ್ಥಿತ ಪ್ರಯತ್ನ ನಡೆಸುತ್ತಿದೆ ಎಂದು ಎನ್ಎಸ್ಯುಐ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಸುರೇಶ್ ಹೊನ್ನಾವರ ಆರೋಪಿಸಿದರು.
ಪಟ್ಟಣದ ತಾಲೂಕು ಕಚೇರಿ ಎದುರು ಯುವ ಕಾಂಗ್ರೆಸ್ನಿಂದ ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಲಾಠಿಚಾರ್ಜ್ ಹಾಗೂ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ವಿರುದ್ಧ ಕೈಗೊಂಡ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

ಸುಮಾರು ೨೦ ದಿನಗಳಿಂದ ನ್ಯಾಯಸಮ್ಮತ ಬೇಡಿಕೆಗಳಿಗಾಗಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಕ್ರೂರವಾಗಿ ಲಾಠಿಚಾರ್ಜ್ ನಡೆಸಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಯಾಗಿದ್ದು, ಸಂವಿಧಾನ ನೀಡಿರುವ ಶಾಂತಿಯುತ ಪ್ರತಿಭಟನೆಯ ಹಕ್ಕಿನ ಮೇಲಿನ ನೇರ ದಾಳಿಯಾ ಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪರಿಸರ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹಕ್ಕೆ ಗೌರವ ನೀಡುವ ಬದಲು ಅವರನ್ನು ಬಲವಂತವಾಗಿ ವಶಕ್ಕೆ ಪಡೆದಿರುವ ಕ್ರಮ ಪ್ರಜಪ್ರಭುತ್ವದ ಮಲ್ಯಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿದರು.
೨೦೧೪ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಾಮಾಜಿಕ ನ್ಯಾಯ ಕ್ಕಾಗಿ ನಡೆದ ವಿವಿಧ ಹೋರಾಟ ಗಳನ್ನು ಹತ್ತಿಕ್ಕುವ ಪ್ರವೃತ್ತಿ ಹೆಚ್ಚಾಗಿದೆ ಎಂದು ಆರೋಪಿಸಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಎನ್ಆರ್ಸಿ ವಿರೋಧಿ ಪ್ರತಿಭಟನೆಗಳ ಸಂದರ್ಭದ ಲ್ಲಿಯೂ ಪ್ರತಿಭಟನಾಕಾರರ ವಿರುದ್ಧ ದೌರ್ಜನ್ಯ ನಡೆದಿತ್ತು ಎಂದು ಹೇಳಿದರು.
ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಯುವಕರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮಾನಸಿಕ ಆಘಾತಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಸಾವಿನ ಹೊಣೆ ಕೇಂದ್ರ ಸರ್ಕಾರವೇ ಹೊತ್ತುಕೊಳ್ಳಬೇಕು ಎಂದು ಅವರು ಆಪಾದಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಂ ಪಾರಿವಾಳದ ಮಾತ ನಾಡಿ, ಕಳೆದ ಹತ್ತು ವರ್ಷಗಳಲ್ಲಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ ಶಿಕ್ಷಣ ವ್ಯವಸ್ಥೆಯ ಮೇಲಿನ ವಿಶ್ವಾಸ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಪ್ರತಿಭಟನೆ ಬಳಿಕ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮವನ್ನು ಖಂಡಿಸಿ, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿಗಳಿಗೆ ಉzಶಿಸಿದ ಮನವಿಪತ್ರವನ್ನು ತಹಸೀಲ್ದಾರ್ ಮೂಲಕ ಸಲ್ಲಿಸಲಾಯಿತು.
ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಗಳನ್ನು ಕೂಗುತ್ತ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಕೆಪಿಸಿಸಿ ಸದಸ್ಯ ಮಾಲತೇಶ್ ಗೋಣಿ, ಪ್ರಮುಖರಾದ ಉಳ್ಳಿ ದರ್ಶನ್, ಚರಣ್, ಬನ್ನೂರು ಮಂಜಪ್ಪ, ಜೀನಳ್ಳಿ ದೊಡ್ಡಪ್ಪ, ಕೃಷ್ಣೋಜಿರಾವ್, ಈಶಣ್ಣ ಕಲವತ್ತಿ, ರೋಷನ್, ಹನುಮಂತಪ್ಪ, ಶಿವು ಸಂದಿಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
