ತಾಜಾ ಸುದ್ದಿ

ತ್ರಿಶಕ್ತಿಯ ಪವಿತ್ರ ಸನ್ನಿಧಿ

Share Below Link

ಪಶ್ಚಿಮ ಘಟ್ಟಗಳ ಹಸಿರು ಬೆಟ್ಟಗಳ ಮಧ್ಯೆ, ಸೌಪರ್ಣಿಕಾ ನದಿಯ ತಟದಲ್ಲಿ ನೆಲೆಗೊಂಡಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವು ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಶಕ್ತಿಪೀಠ ಗಳಲ್ಲಿ ಒಂದಾಗಿದೆ. ಕರ್ನಾಟಕದ ಉಡುಪಿ ಜಿಯ ಕೊಲ್ಲೂರಿನಲ್ಲಿ ಇರುವ ಈ ದೇವಾಲಯವು ಭಕ್ತಿ, ಆಧ್ಯಾತ್ಮ ಹಾಗೂ ಸಾಂಸ್ಕೃತಿಕ ಪರಂಪರೆಯ ಅದ್ಭುತ ಸಂಗಮವಾಗಿದೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊತ್ತಿರುವ ಈ ಕ್ಷೇತ್ರವು ಕೇವಲ ದೇವಾಲಯವಲ್ಲ, ಲಕ್ಷಾಂತರ ಭಕ್ತರ ನಂಬಿಕೆಯ ಕೇಂದ್ರವಾಗಿದೆ.


ಪುರಾಣಗಳ ಪ್ರಕಾರ, ಮೂಕಾಸುರ ಎಂಬ ರಾಕ್ಷಸನು ಕಠಿಣ ತಪಸ್ಸಿನಿಂದ ಅಪಾರ ಶಕ್ತಿಯನ್ನು ಪಡೆಯಲು ಯತ್ನಿಸಿದಾಗ ದೇವಿ ಪಾರ್ವತಿ ಅವನನ್ನು ಮೂಕನನ್ನಾಗಿ ಮಾಡಿ ಸಂಹರಿಸಿದಳು. ಆ ಕಾರಣದಿಂದಲೇ ದೇವಿಗೆ ಮೂಕಾಂಬಿಕಾ ಎಂಬ ಹೆಸರು ಬಂದಿದೆ. ಈ ಕ್ಷೇತ್ರದಲ್ಲಿ ದೇವಿಯು ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿಯ ತ್ರಿಶಕ್ತಿ ಸ್ವರೂಪವಾಗಿ ಪೂಜಿಸಲ್ಪಡುತ್ತಾಳೆ. ಬೆಳಿಗ್ಗೆ ಕಾಳಿಯಾಗಿ, ಮಧ್ಯಾಹ್ನ ಲಕ್ಷ್ಮಿಯಾಗಿ ಹಾಗೂ ಸಂಜೆ ಸರಸ್ವತಿಯಾಗಿ ಆರಾಧನೆ ನಡೆಯುವುದು ಈ ಕ್ಷೇತ್ರದ ವಿಶಿಷ್ಟತೆಯಾಗಿದೆ.
ದೇವಾಲಯದ ಪ್ರಮುಖ ಆಕರ್ಷಣೆ ಸ್ವಯಂಭೂ ಜ್ಯೋತಿರ್ಲಿಂಗವಾಗಿದೆ. ಈ ಲಿಂಗದಲ್ಲಿ ಕಾಣುವ ಚಿನ್ನದ ರೇಖೆಯು ಶಿವ ಮತ್ತು ಶಕ್ತಿಯ ಅವಿನಾಭಾವ ಸಂಬಂಧವನ್ನು ಸಂಕೇತಿಸುತ್ತದೆ. ಒಂದು ಭಾಗವು ಬ್ರಹ್ಮ, ವಿಷ್ಣು ಮತ್ತು ಶಿವರನ್ನು ಪ್ರತಿನಿಧಿಸಿದರೆ, ಮತ್ತೊಂದು ಭಾಗವು ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿಯನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ. ಇಂತಹ ಅಪರೂಪದ ತತ್ವಸಂಯೋಜನೆ ಭಾರತದ ಬೇರೆಡೆ ವಿರಳವಾಗಿದೆ.
ಆದಿ ಶಂಕರಾಚಾರ್ಯ ರೊಂದಿಗೆ ಈ ಕ್ಷೇತ್ರದ ಸಂಬಂಧ ವಿಶೇಷ ಮಹತ್ವzಗಿದೆ. ಕೊಡಚಾದ್ರಿ ಬೆಟ್ಟದಲ್ಲಿ ತಪಸ್ಸು ಮಾಡಿದ ಆದಿ ಶಂಕರರಿಗೆ ದೇವಿಯು ದರ್ಶನ ನೀಡಿದಳು ಎನ್ನುವ ನಂಬಿಕೆ ಇದೆ. ನಂತರ ಅವರು ಪಂಚಲೋಹದ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಾ ಸಂಪ್ರದಾಯವನ್ನು ವ್ಯವಸ್ಥಿತಗೊಳಿಸಿದರು. ಇಂದಿಗೂ ಕೊಡಚಾದ್ರಿಯ ಸರ್ವಜ್ಞ ಪೀಠವು ಭಕ್ತರನ್ನು ಆಕರ್ಷಿಸುವ ಪವಿತ್ರ ತಾಣವಾಗಿದೆ.
ಮೂಕಾಂಬಿಕಾ ಕ್ಷೇತ್ರದ ಮತ್ತೊಂದು ಅಪರೂಪದ ವೈಶಿಷ್ಟ್ಯವೆಂದರೆ ಸೌಪರ್ಣಿಕಾ ನದಿ. ಗರುಡನು ಇಲ್ಲಿ ತಪಸ್ಸು ಮಾಡಿದ ಕಾರಣ ಈ ನದಿಗೆ ಸೌಪರ್ಣಿಕಾ ಎಂಬ ಹೆಸರು ಬಂದಿದೆ ಎಂದು ಪುರಾಣಗಳು ಹೇಳುತ್ತವೆ. ಔಷಧೀಯ ಗುಣಗಳನ್ನು ಹೊಂದಿರುವ ಅನೇಕ ಗಿಡಮೂಲಿಕೆಗಳ ಸಾರ ಈ ನದಿಯಲ್ಲಿ ಸೇರುತ್ತದೆ ಎಂಬ ನಂಬಿಕೆಯೂ ಇದೆ. ಭಕ್ತರು ನದಿಯಲ್ಲಿ ಸ್ನಾನ ಮಾಡಿ ದೇವಿಯ ದರ್ಶನ ಪಡೆಯುವುದನ್ನು ಪುಣ್ಯಕರವೆಂದು ಪರಿಗಣಿಸುತ್ತಾರೆ.
ವಿದ್ಯಾಭ್ಯಾಸ ಆರಂಭಿಸುವ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಅತ್ಯಂತ ಪ್ರಸಿದ್ಧ ಕ್ಷೇತ್ರಗಳಲ್ಲಿ ಕೊಲ್ಲೂರು ಪ್ರಮುಖವಾಗಿದೆ. ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಪೋಷಕರು ತಮ್ಮ ಮಕ್ಕಳನ್ನು ಕರೆತಂದು ದೇವಿಯ ಸನ್ನಿಧಿಯಲ್ಲಿ ಮೊದಲ ಅಕ್ಷರವನ್ನು ಬರೆಯಿಸುತ್ತಾರೆ. ಸಂಗೀತ, ನೃತ್ಯ ಮತ್ತು ಕಲಾರಂಗದ ಅನೇಕ ಸಾಧಕರು ತಮ್ಮ ಕಲಾಜೀವನದ ಆರಂಭಕ್ಕೂ ಮುನ್ನ ದೇವಿಯ ಆಶೀರ್ವಾದ ಪಡೆಯುವುದು ಸಂಪ್ರದಾಯವಾಗಿದೆ.
ನವರಾತ್ರಿ ಉತ್ಸವವು ಇಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಈ ಸಂದರ್ಭದಲ್ಲಿ ದೇವಾಲಯವು ದೀಪಾಲಂಕಾರದಿಂದ ಕಂಗೊಳಿಸುತ್ತದೆ. ಪ್ರತಿದಿನ ನಡೆಯುವ ವಿಶೇಷ ಪೂಜೆಗಳು, ರಥೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾವಿರಾರು ಭಕ್ತರನ್ನು ಸೆಳೆಯುತ್ತವೆ. ದೇವಾಲಯದಲ್ಲಿ ರಾತ್ರಿ ನಡೆಯುವ ಬಲಿ ಮಂಗಳಾರತಿ ಹಾಗೂ ಭಕ್ತರಿಗೆ ನೀಡುವ ಕಷಾಯ ಪ್ರಸಾದವೂ ವಿಶೇಷ ಆಕರ್ಷಣೆಯಾಗಿದೆ.
ಸಹ್ಯಾದ್ರಿಯ ಮಡಿಲಿನಲ್ಲಿ ನೆಲೆಸಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವು ಕೇವಲ ಧಾರ್ಮಿಕ ಕೇಂದ್ರವಲ್ಲ. ಅದು eನ, ಶಕ್ತಿ, ಭಕ್ತಿ ಮತ್ತು ಭಾರತೀಯ ಸಂಸ್ಕೃತಿಯ ಜೀವಂತ ಪ್ರತೀಕವಾಗಿದೆ. ದೇವಿಯ ಕೃಪೆಯನ್ನು ಪಡೆಯಲು ಬರುವ ಪ್ರತಿಯೊಬ್ಬ ಭಕ್ತನಿಗೂ ಈ ಕ್ಷೇತ್ರವು ಆತ್ಮಶಾಂತಿ ಮತ್ತು ಹೊಸ ಚೈತನ್ಯವನ್ನು ನೀಡುವ ದಿವ್ಯ ತಾಣವಾಗಿದೆ.

ಸನ್ನಿಧಿ, ಶಿರಸಿ.


Leave a Reply

Your email address will not be published. Required fields are marked *