ಒಲವಿನ ನೆರಳು ಬೆಂಕಿಯಾದಾಗ… ನಂಬಿಕೆಯ ಮಳೆಯ ನಿರೀಕ್ಷೆಯಲ್ಲಿ…
ಗೆಳೆಯ…
ನಿನ್ನ ಒಲವಿನ ಬಂಧನದಲ್ಲಿ ಬೇಯುತ್ತಿರುವ ಪ್ರೇಮ ಕುಸುಮ ನಾನು! ನಿನ್ನ ಒಲವ್ಯಾಕೋ ನನ್ನನ್ನು ಸುಡುತ್ತಿದೆ ಎಂಬ ಭಾವ ನನ್ನನ್ನು ಬೆಂಬಿಡದೆ ಕಾಡುತ್ತಿದೆ. ನೀನ್ಯಾಕೆ ಈಗೀಗ ಸುಡುವ ಬೆಂಕಿಯಾದೆ? ಮೊದಲೆಲ್ಲ ನಿನ್ನ ಪ್ರೀತಿಯ ತಂಪು ತಂಗಾಳಿಯಲ್ಲಿ ಹಾರಾಡುತ್ತಿದ್ದ ನಾನು, ಈಗ್ಯಾಕೋ ಬಿಸಿ ನೀರಲ್ಲಿ ಸಾವಿನ ಸುಳಿಯಲ್ಲಿ ಸಿಕ್ಕ ಮೀನಿನಂತಾಗಿzನೆ.
ಅದೆಷ್ಟು ಕಾಡಿ ನನ್ನನ್ನು ನೀನು ಒಲಿಸಿಕೊಂಡೆ ನೆನಪಿದ್ಯಾ ಗೆಳೆಯ? ನಾನು ಆಗ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿz. ಕೆಲಸ ಮುಗಿಸಿ ಹೊರಡುವ ಸಮಯದಲ್ಲಿ ನನ್ನ ಸ್ಕೂಟಿ ಪಾರ್ಕ್ ಮಾಡುತ್ತಿದ್ದ ಜಾಗದಲ್ಲಿ ಕಾದು ನಿಂತಿರುತ್ತಿz. ಹೀಗೆ ನೂರಾರು ದಿನ ನಿಂತು, ಮಾತಾಡಿಸಲು ಯತ್ನಿಸಿz. ಅದೆಷ್ಟೋ ತಿಂಗಳಾದ ಮೇಲೆ ನಾನು ನಿನ್ನೆಡೆಗೆ ತಿರುಗಿ ನೋಡಿದೆ. ಅದೆಷ್ಟೋ ದಿನ ಕಳೆದ ಮೇಲೆ ನನ್ನ ಹುಟ್ಟುಹಬ್ಬದಂದು ಒಂದು ನಗು ಬೀರಿ ಮಾತಾಡಿ, ಹೃದಯವನ್ನೇ ನಿನಗೊಪ್ಪಿಸಿz ನೆನಪಿದ್ಯಾ…?
ನನ್ನ ಪಾಲಿಗೆ ನೀನೇ ಈಗ ಎಲ್ಲವೂ. ಅದೆಷ್ಟು ಆಪ್ತವಾಗಿದ್ದೀಯ ಎಂದರೆ ವರ್ಣಿಸಲು ಪದಗಳೇ ಸಿಗುತ್ತಿಲ್ಲ. ಈಗ್ಯಾಕೆ ಸಣ್ಣ ಸಣ್ಣ ವಿಷಯಕ್ಕೂ ಕೋಪ..? ಆ ಡ್ರೆಸ್ ಹಾಕಿಕೊಳ್ಳಬೇಡ… ಅವನು ನಿನ್ನ ಫ್ರೆಂಡಾ..? ಅವನ ಹತ್ತಿರ ಮಾತಾಡಬೇಡ… ಯಾಕೆ ಹೀಗೆಲ್ಲ ನಿನ್ನ ಪ್ರಶ್ನೆಗಳು? ನಾನು ನಿನಗೆ ಮೋಸ ಮಾಡಿಬಿಡುತ್ತೇನೆ ಅಂತನಾ? ಅಥವಾ ನನ್ನ ಮೇಲೆ ಅಷ್ಟೊಂದು ಅನುಮಾನನಾ…?
ನಿನ್ನ ಇಂತಹ ಸಣ್ಣ ಸಣ್ಣ ಮಾತುಗಳು ನಮ್ಮ ಪ್ರೀತಿಯ ದೋಣಿಯಲ್ಲಿ ಬಿರುಕು ಮೂಡಿಸಬಾರದಲ್ವಾ? ನಿನ್ನ ಪ್ರಶ್ನೆಗಳನ್ನೇ ನಾನು ಮಾಡಿದರೆ ನೀನೇನು ಮಾಡುತ್ತೀಯ? ನನ್ನ ಜಗದಲ್ಲೂ ನಿಂತು ನೋಡು. ಖಂಡಿತಾ ನನ್ನ ಮಾತುಗಳು ನಿನಗೆ ಸರಿ ಎನಿಸಿದರೆ, ಪ್ರೀತಿಯಲ್ಲಿರುವ ನಂಬಿಕೆ ಎಂಥದ್ದು ಎಂದು ನಿನಗೆ ಅರಿವಾಗುತ್ತದೆ.
ಪ್ರೀತಿ ಎಂದರೆ ಬಂಧನವಲ್ಲ ಗೆಳೆಯ….
ಅದು ಹಕ್ಕಿಯ ರೆಕ್ಕೆಗೆ ಕೊಡುವ ಆಕಾಶ.
ಪ್ರೀತಿ ಎಂದರೆ ಕಾವಲಲ್ಲ ಗೆಳೆಯ…
ಅದು ಮನಸ್ಸಿಗೆ ಕೊಡುವ ನೆಮ್ಮದಿ.
ನಂಬಿಕೆ ಇಲ್ಲದ ಪ್ರೀತಿ ನೆರಳಿಲ್ಲದ ಮರದಂತೆ.
ಅನುಮಾನ ತುಂಬಿದ ಪ್ರೀತಿ
ಸುಗಂಧ ಕಳೆದುಕೊಂಡ ಹೂವಿನಂತೆ ಗೆಳೆಯ…
ಒಮ್ಮೆ ನೆನಪಿಸಿಕೋ…
ನನ್ನ ಕಣ್ಣಲ್ಲಿ ಕನಸುಗಳನ್ನು ಬಿತ್ತಿದವನು ನೀನೇ. ನನ್ನ ಮನದಲ್ಲಿ ಪ್ರೀತಿಯ ಅರ್ಥ ಹುಡುಕಿದವನು ನೀನೇ. ಆಗ ನನ್ನ ನಗುವಿನ ಹಿಂದೆ ಬದುಕುತ್ತಿದ್ದ ನೀನು, ಇಂದು ನನ್ನ ಕಣ್ಣೀರಿನ ಕಾರಣವಾಗಬೇಡ. ನಿನ್ನ ಒಂದು ಸಣ್ಣ ನಗು ಸಾಕು, ನನ್ನ ದಿನವನ್ನೇ ಹೂವಿನಂತೆ ಅರಳಿಸಲು. ನಿನ್ನ ಒಂದು ಕಠೋರ ಮಾತು ಸಾಕು, ನನ್ನ ಮನಸ್ಸನ್ನು ಶರದೃತುವಿನ ಎಲೆಯಂತೆ ಉದುರಿಸಲು. ಅಷ್ಟೊಂದು ಆಳವಾಗಿ ಬೆರೆತಿರುವ ನಿನ್ನ ಪ್ರೀತಿ, ಈಗ ಯಾಕೋ ನನ್ನ ಹೃದಯದ ಬಾಗಿಲಿಗೆ ಮುಳ್ಳಾಗಿ ಚುಚ್ಚುತ್ತಿದೆ.
ನನ್ನ ಈ ಪತ್ರ ನಿನ್ನ ಅಂತರಾತ್ಮವನ್ನು ತಟ್ಟಲಿ ಎಂಬುದೇ ನನ್ನ ಆಸೆ. ಜಗತ್ತಿನಲ್ಲಿ ಅನೇಕ ಪ್ರೀತಿಗಳು ಆಗಿ ಹೋಗಿವೆ. ಆದರೆ ನಿಜವಾದ ಪ್ರೀತಿಗಳು ಗೆದ್ದದ್ದು ಸೌಂದರ್ಯದಿಂದಲ್ಲ, ನಂಬಿಕೆಯಿಂದ. ಅನುಮಾನಗಳ ಬೆಂಕಿಯಲ್ಲಿ ಎಷ್ಟೋ ಪ್ರೇಮ ಕಥೆಗಳು ಬೂದಿಯಾಗಿವೆ. ನಮ್ಮ ಕಥೆಯೂ ಅಂತಹ ಪುಟವಾಗಬಾರದು.
ಬಾ ಗೆಳೆಯ…
ಮತ್ತೊಮ್ಮೆ ಆ ಮೊದಲ ಮಳೆಯ ಹನಿಯಂತೆ ನನ್ನ ಬದುಕಿಗೆ ಇಳಿದು ಬಾ. ನಿನ್ನ ಪ್ರೀತಿಯ ತಂಪು ಗಾಳಿಯಲ್ಲಿ ಮತ್ತೆ ನನ್ನ ಕನಸುಗಳು ಹಾರಾಡಲಿ. ಕೈ ಹಿಡಿದಾಗ ಉಸಿರಾಗಿದ್ದ ನೀನು, ಕೈಬಿಡುವ ಕಾರಣವಾಗಬೇಡ. ನಿನ್ನ ಹೃದಯದಲ್ಲಿ ನನಗಿರುವ ಜಗವನ್ನು ಅನುಮಾನಗಳಿಂದಲ್ಲ, ನಂಬಿಕೆಯಿಂದ ತುಂಬಿಸು. ಕೆಲವೊಮ್ಮೆ ರಾತ್ರಿ ಮನದಲ್ಲಿ ನಿನ್ನ ಹಳೆಯ ಸಂದೇಶಗಳನ್ನು ಓದುತ್ತೇನೆ. ಆಗ ಪ್ರತಿಯೊಂದು ಪದವೂ ನನ್ನ ಕೆನ್ನೆಯ ಮೇಲೆ ಜಾರುವ ಕಣ್ಣೀರಿನ ಹನಿಯಾಗಿ ಕರಗುತ್ತದೆ. ಒಮ್ಮೆ ನೀ ಇಲ್ಲದೆ ನಾನು ಇಲ್ಲ ಎಂದಿದ್ದ ನಿನ್ನ ಧ್ವನಿ ಇಂದಿಗೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತದೆ. ಆದರೆ ಈಗ ಅದೇ ಧ್ವನಿಯಲ್ಲಿ ಅನುಮಾನದ ನೆರಳು ಕಾಣಿಸಿದಾಗ ನನ್ನ ಮನಸ್ಸು ಸಾವಿರ ಚೂರುಗಳಾಗುತ್ತದೆ.
ಅನಿಸುತಿದೆ ಯಾಕೋ ಇಂದು… ನೀನೇನೆ ನನ್ನವಳೆಂದು… ಎಂಬ ಹಾಡಿನ ಸಾಲು ಕೇಳಿದಾಗಲೆಲ್ಲ ನಿನ್ನ ಮುಖವೇ ಕಣ್ಮುಂದೆ ಬರುತ್ತದೆ. ಹಾಗೆಯೇ ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ… ಎಂಬ ಗೀತೆಯ ಪ್ರತಿಯೊಂದು ಅಕ್ಷರವೂ ನಮ್ಮ ಪ್ರೀತಿಯ ನೆನಪುಗಳನ್ನು ಮತ್ತೆ ಜೀವಂತಗೊಳಿಸುತ್ತದೆ. ಆದರೆ ಆ ಕನಸುಗಳಿಗೆ ಈಗ ಅನುಮಾನದ ಕತ್ತಲೆ ಆವರಿಸದಿರಲಿ ಗೆಳೆಯ.
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ, ಮಿಡಿದೆ ನೀನು ಪ್ರಣಯ ನಾದ ಹೃದಯ ವೀಣೆ ಅದರಲಿ. ಮಿಡಿದ ಹಾಡು ಮುಗಿವ ಮುನ್ನ ಎಲ್ಲಿ ಹೋದೆ ಮರೆಯಲಿ…
ನನ್ನ ಪ್ರೀತಿಯ ಕೊನೆಯ ಆಸೆಯೊಂದೇ,
ಪ್ರೀತಿ ಗೆಲ್ಲಲಿ… ಅಹಂ ಸೋಲಲಿ… ನಂಬಿಕೆ ಉಳಿಯಲಿ… ಅನುಮಾನ ಕರಗಲಿ… ನಾವು ಮತ್ತೆ ಮೊದಲ ದಿನದಂತೆ ಒಬ್ಬರ ಕಣ್ಣಲ್ಲಿ ಒಬ್ಬರು ಬದುಕೋಣ. ನಿನ್ನ ಕೈಯಲ್ಲಿ ನನ್ನ ಕೈ ಬೆರೆತು, ನಿನ್ನ ಹೃದಯದ ಬಡಿತದಲ್ಲಿ ನನ್ನ ಹೆಸರೇ ಮೊಳಗುವಂತೆ ಮತ್ತೊಮ್ಮೆ ನಮ್ಮ ಪ್ರೀತಿಯ ಕಥೆ ಹೊಸದಾಗಿ ಆರಂಭವಾಗಲಿ…
ಇಂತಿ,
ನಿನ್ನ ಪ್ರೀತಿಯ ಜ್ವಾಲೆಗೆ ಸಿಕ್ಕವಳು…
