ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಒಂದೇ ಹೂದಲ್ಲಿ ಶಿವ-ನಾಗ ರೂಪದ ಅಚ್ಚರಿ….

Share Below Link

ನಾಗಲಿಂಗ ಪುಷ್ಪವು ಪ್ರಕೃತಿಯಲ್ಲಿನ ಅತ್ಯಂತ ವಿಶಿಷ್ಟ ಮತ್ತು ಆಕರ್ಷಕ ಹೂಗಳಲ್ಲಿ ಒಂದು. ಇದರ ವೈeನಿಕ ಹೆಸರು Couroupita guianensis. ಈ ಮರವು ಲೆಸಿಥಿಡೇಸಿಯೆ Lecythidaceae ಕುಟುಂಬಕ್ಕೆ ಸೇರಿದ್ದು, ಮೂಲತಃ ದಕ್ಷಿಣ ಅಮೆರಿಕಾ ಮತ್ತು ಅಮೆಜಾನ್ ಕಾಡು ಪ್ರದೇಶಗಳಿಗೆ ಸೇರಿದದ್ದು. ಆದರೆ ಇಂದಿಗೆ ಭಾರತ ಸೇರಿದಂತೆ ಅನೇಕ ಉಷ್ಣವಲಯ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ.


ನಾಗಲಿಂಗ ಪುಷ್ಪದ ವಿಶೇಷತೆ ಅದರ ರೂಪದಲ್ಲಿ ಇದೆ. ಈ ಹೂವು ಮರದ ಕೊಂಬೆಗಳ ಮೇಲೆ ಅಲ್ಲ, ನೇರವಾಗಿ ಕಾಂಡದ ಮೇಲೆ ಅರಳುತ್ತದೆ. ಈ ರೀತಿಯ ಹೂವುಗಳ ಬೆಳವಣಿಗೆಗೆ ಕಾಲಿಫ್ಲೋರಿ ಎಂದು ಕರೆಯಲಾಗುತ್ತದೆ. ಒಂದು ಮರದಲ್ಲಿ ದಿನಕ್ಕೆ ನೂರಾರು ಹೂಗಳು ಅರಳುವ ಸಾಮರ್ಥ್ಯವಿದೆ, ಕೆಲವೊಮ್ಮೆ ೧೦೦೦ಕ್ಕೂ ಹೆಚ್ಚು ಹೂಗಳು ಒಂದೇ ದಿನದಲ್ಲಿ ಅರಳಬಹುದು ಎಂಬುದು ಆಶ್ಚರ್ಯಕರ ಸಂಗತಿ.


ಈ ಹೂವಿನ ಮಧ್ಯಭಾಗದಲ್ಲಿ ಶಿವಲಿಂಗದಂತಿರುವ ಆಕಾರ ಕಂಡುಬರುತ್ತದೆ. ಅದರ ಮೇಲೆ ನಾಗದ ತಲೆ ಹಾಸಿದಂತೆ ಕಾಣುವ ರಚನೆ ಇರುವುದರಿಂದ ಇದನ್ನು ನಾಗಲಿಂಗ ಎಂದು ಕರೆಯುತ್ತಾರೆ. ಭಾರತದಲ್ಲಿ ಶಿವ ದೇವರಿಗೆ ಈ ಹೂವನ್ನು ಅರ್ಪಿಸುವುದು ಪವಿತ್ರವೆಂದು ನಂಬಲಾಗಿದೆ.
ಈ ಮರವು ೨೫ರಿಂದ ೩೫ ಮೀಟರ್ ಎತ್ತರದವರೆಗೆ ಬೆಳೆಯುತ್ತದೆ. ಇದರ ಹೂವುಗಳು ಸುಗಂಧಯುಕ್ತವಾಗಿದ್ದು ವಿಶೇಷವಾಗಿ ಬೆಳಗ್ಗೆ ಮತ್ತು ರಾತ್ರಿ ಹೆಚ್ಚು ಸುಗಂಧ ನೀಡುತ್ತವೆ. ಆದರೆ ವಿಚಿತ್ರವೆಂದರೆ, ಇದರ ಹಣ್ಣುಗಳಿಗೆ ದುರ್ವಾಸನೆ ಇರುತ್ತದೆ. ಹಣ್ಣುಗಳು ದೊಡ್ಡದು, ಗೋಳಾಕಾರದಿದ್ದು, ತೋಪಿನ ಗುಂಡಿನಂತೆ ಕಾಣುವುದರಿಂದ ಇದನ್ನು ಇಂಗ್ಲಿಷ್‌ನಲ್ಲಿ”Cannonball Tree” ಎಂದು ಕರೆಯುತ್ತಾರೆ.


ನಾಗಲಿಂಗ ಮರದ ಹಣ್ಣುಗಳು ಸುಮಾರು ೨೦-೨೫ ಸೆಂ.ಮೀ. ಗಾತ್ರವಿದ್ದು, ಒಳಗೆ ನೂರಾರು ಬೀಜಗಳನ್ನು ಹೊಂದಿರುತ್ತವೆ. ಹಣ್ಣುಗಳು ನೆಲಕ್ಕೆ ಬಿzಗ ಒಡೆದು ಬೀಜಗಳು ಹೊರಬರುತ್ತವೆ. ಈ ಬೀಜಗಳನ್ನು ಕೆಲವು ಪ್ರಾಣಿಗಳು ತಿನ್ನುವುದರಿಂದ ಅವುಗಳ ಮೂಲಕ ಬೀಜ ಪ್ರಸರಣವಾಗುತ್ತದೆ.
ಔಷದಿಯ ದೃಷ್ಟಿಯಿಂದಲೂ ನಾಗಲಿಂಗ ಮರ ಮಹತ್ವzಗಿದೆ. ಇದರ ಎಲೆ, ಹೂ, ತೊಗಟೆ ಮತ್ತು ಹಣ್ಣುಗಳನ್ನು ಆಯುರ್ವೇದದಲ್ಲಿ ಬಳಸಲಾಗುತ್ತದೆ. ಇದು ಜ್ವರ, ಚರ್ಮರೋಗ, ಗಾಯ, ದಂತನೋವು, ಉರಿಯೂತ ಮುಂತಾದ ಸಮಸ್ಯೆಗಳಿಗೆ ಉಪಯುಕ್ತವೆಂದು ಪರಿಗಣಿಸಲಾಗಿದೆ.


ಇದಲ್ಲದೆ ನಾಗಲಿಂಗ ಹೂಗಳಲ್ಲಿ ಇಂಡಿಗೋಟಿನ್ ಮತ್ತು ಇಂಡಿರೂಬಿನ್ ಎಂಬ ರಾಸಾಯನಿಕಗಳು ಇರುವುದರಿಂದ ಪ್ರಕೃತಿಕ ಬಣ್ಣ ತಯಾರಿಕೆಯಲ್ಲಿ ಇದರ ಬಳಕೆ ಕುರಿತು ಸಂಶೋಧನೆ ನಡೆಯುತ್ತಿದೆ.
ಭಾರತದಲ್ಲಿ ಈ ಮರವು ದೇವಾಲಯಗಳ ಸುತ್ತಮುತ್ತ ಸಾಮಾನ್ಯವಾಗಿ ಕಂಡುಬರುತ್ತದೆ. ಇದು ಶೈವ ಸಂಪ್ರದಾಯದಲ್ಲಿ ಪವಿತ್ರವಾದ ಮರವೆಂದು ಪರಿಗಣಿಸಲಾಗುತ್ತದೆ. ಆದರೆ ಈ ಮರವು ಮೂಲತಃ ಭಾರತಕ್ಕೆ ಸೇರಿದ್ದು ಅಲ್ಲ; ಬ್ರಿಟಿಷರು ಇದನ್ನು ಭಾರತಕ್ಕೆ ಪರಿಚಯಿಸಿದರು ಎಂಬುದು ಒಂದು ಅಪರೂಪದ ಮಾಹಿತಿ.
ಒಟ್ಟಾರೆ ನಾಗಲಿಂಗ ಪುಷ್ಪವು ಪ್ರಕೃತಿಯ ಅಚ್ಚರಿ ಮಾತ್ರವಲ್ಲ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಔಷದಿಯ ಮಹತ್ವ ಹೊಂದಿರುವ ಅಮೂಲ್ಯ ಸಸ್ಯವಾಗಿದೆ. ಅದರ ವಿಶಿಷ್ಟ ರೂಪ, ಸುಗಂಧ ಮತ್ತು ಪೌರಾಣಿಕ ಸಂಬಂಧಗಳು ಇದನ್ನು ಇನ್ನಷ್ಟು ವಿಶೇಷವಾಗಿಸುತ್ತವೆ.

ಸನ್ನಿದಿ.ವಿ., ಶಿರಸಿ.

Leave a Reply

Your email address will not be published. Required fields are marked *