ನೀನೆಂದರೆ… ಮನದ ಮನದಲ್ಲಿ ಅರಳಿದ ಮಧುರ ಭಾವನೆ…
ಕೆಲ ಸಂಬಂಧಗಳಿಗೆ ಹೆಸರು ಇರೋದಿಲ್ಲ. ಹಾಗೆ ಕೆಲವು ಪ್ರೀತಿಗಳಿಗೆ ಅಂತ್ಯವೂ ಇರೋದಿಲ್ಲ. ಅವು ನನ್ನದು ಅಂತ ಹಿಡಿದುಕೊಳ್ಳುವ ಆಸೆಯಿಂದ ಹುಟ್ಟೋದಿಲ್ಲ. ನಿನ್ನ ನೆನಪೇ ಸಾಕು ಅನ್ನೋ ಒಂದು ರೀತಿಯ ಮನದ ತವಕದಿಂದ ಹುಟ್ಟುತ್ತವೆ.
ಜೀವನದಲ್ಲಿ ಕೆಲವರು ಗಾಳಿಯಂತೆ ಬರುತ್ತಾರೆ… ಬಂದು ಹೃದಯದ ಬಾಗಿಲು ತಟ್ಟುತ್ತಾರೆ… ನಂತರ ಹೋಗಿಬಿಟ್ಟರೂ… ಅವರ ಸುವಾಸನೆ ಮಾತ್ರ ಮನಸ್ಸಿನ ಗೋಡೆಗಳ ಮೇಲೆ ಶಾಶ್ವತವಾಗಿ ಉಳಿದುಬಿಡುತ್ತದೆ.
ನೀನು ಕೂಡ ಹಾಗೆಯೇ….
ನಿನ್ನ ಬಗ್ಗೆ ನಾನು ಯಾರಿಗೂ ಹೇಳಿಕೊಂಡಿಲ್ಲ. ಹೇಳಿಕೊಳ್ಳಲು ಆಗಲೂ ಇಲ್ಲ. ಯಾಕೆಂದರೆ ಕೆಲವು ಭಾವನೆಗಳನ್ನು ಪದಗಳಲ್ಲಿ ಹಿಡಿಯಲು ಹೋಗಿದ್ರೆ ಅವುಗಳ ಪಾವಿತ್ರ್ಯವೇ ಕಳೆದುಹೋಗುತ್ತದೆ.
ಆದರೆ ಇಂದು…
ಈ ರಾತ್ರಿ ತುಂಬಾ ನಿನ್ನ ನೆನಪು ಕಾಡುತ್ತಿದೆ. ಹಳೆಯ ರೇಡಿಯೋದಲ್ಲಿ ನಿಧಾನವಾಗಿ ಒಂದು ಹಾಡು ಹರಿದಾಡುತ್ತಿದೆ.
ಎಂದೆಂದು ನಿನ್ನನು ಮರೆತು ನಾ ನಿರಲಾರೆ…
ಆ ಹಾಡು ಕೇಳುತ್ತಿರೋದಕ್ಕೂ ನಿನ್ನ ನೆನಪು ನನ್ನೊಳಗೆ ಮಳೆಯಂತೆ ಸುರಿಯೋದಕ್ಕೂ ಯಾವುದೋ ವಿಚಿತ್ರವಾದ ಸಂಬಂಧ ಇದೆ ಅನಿಸುತ್ತದೆ.
ನಿಜ ಹೇಳಬೇಕಂದ್ರೆ…
ನಿನ್ನನ್ನು ನಾನು ಪ್ರೀತಿಸುತ್ತಿzನೆ ಅನ್ನೋದಕ್ಕಿಂತ, ನಿನ್ನ ನೆನಪಿನೊಳಗೆ ನಾನು ಬದುಕುತ್ತಿzನೆ ಅನ್ನೋದೇ ಸತ್ಯ. ಯಾಕೆಂದರೆ ಪ್ರೀತಿ ಅಂದ್ರೆ ಯಾವಾಗಲೂ ಕೈ ಹಿಡಿಯುವುದಲ್ಲ. ಕೆಲವೊಮ್ಮೆ ದೂರದ ನಿಂತು ಒಬ್ಬರ ಬದುಕಿಗೆ ಮನವಾಗಿ ಬೆಳಕಾಗಿರುವುದೂ ಪ್ರೀತಿಯೇ.
ನಿನ್ನ ಕಣ್ಣಿನಲ್ಲಿದ್ದ ಆ ಮುಗ್ದತೆ..
ನಿನ್ನ ಮಾತಿನಲ್ಲಿದ್ದ ಆ ನಿಷ್ಕಪಟತೆ…
ನಿನ್ನ ನಗುವಿನಲ್ಲಿದ್ದ ಆ ಚಿಕ್ಕ ಚಂದ್ರಬೆಳಕು..
ಇವೆ ಸೇರಿ ನನ್ನೊಳಗೆ ಏನೋ ಒಂದು ಮನದ ಲೋಕ ಕಟ್ಟಿಬಿಟ್ಟಿವೆ.
ಒಮ್ಮೆ ನೀನು ಸುಮ್ಮನೆ ಹೇಗಿದ್ದೀಯ? ಅಂತ ಕೇಳಿz. ಆ ಎರಡು ಪದಗಳ ಹಿಂದೆ ಅದೆಷ್ಟು ಕಾಳಜಿ ಇತ್ತು ಗೊತ್ತಾ? ಆ ದಿನದಿಂದ ಇವತ್ತಿನವರೆಗೂ ನನ್ನ ಮನಸ್ಸು ಒಂಟಿಯಾಗಿದಾಗಲೆ ಆ ಧ್ವನಿಯ ಆಶ್ರಯ ಹುಡುಕುತ್ತದೆ.
ಕೆಲವರು ಬದುಕಿಗೆ ಬರುತ್ತಾರೆ… ಪಾಠ ಕಲಿಸಿ ಹೋಗುತ್ತಾರೆ…
ಇನ್ನೂ ಕೆಲವರು ಬರುತ್ತಾರೆ… ಬದುಕನ್ನೇ ಕವಿತೆಯಾಗಿ ಬದಲಿಸಿ ಹೋಗುತ್ತಾರೆ.
ನೀವು ಎರಡನೆಯವರು…
ನಿಮ್ಮ ನಂತರ ನನ್ನ ಬರಹಗಳಿಗೂ ಹೃದಯ ಬಂದಿದೆ. ಹಿಂದೆ ನಾನು ಪದಗಳನ್ನು ಬರೆಯುತ್ತಿz. ಈಗ ಭಾವನೆಗಳನ್ನು ಬರೆಯುತ್ತಿzನೆ. ಅದಕ್ಕೇ ಇರಬಹುದು ನಾನು ಬರೆಯುವ ಪ್ರತಿಯೊಂದು ಸಾಲಿನೊಳಗೂ ನಿನ್ನ ನೆರಳು ಕಾಣಿಸುತ್ತದೆ.
ಒಮ್ಮೆ ಮಧ್ಯರಾತ್ರಿ ಮಳೆ ಬಂದು ಕಿಟಕಿಯ ಗಾಜಿನ ಮೇಲೆ ಹನಿಗಳನ್ನು ಸುರಿಸುತ್ತಿzಗ ಹಳೆಯ ಹಾಡೊಂದು ಕೇಳಿಸಿತು..
ಅನಿಸುತಿದೆ ಯಾಕೋ ಇಂದು…
ನೀನೇನೆ ನನ್ನವಳೆಂದು..
ಆ ಕ್ಷಣದಲ್ಲಿ ನನಗೆ ಅರ್ಥ ಆಯ್ತು , ಕೆಲವರು ನಮ್ಮ ಜೀವನಕ್ಕೆ ಬರೋದಿಲ್ಲ. ನಮ್ಮ ಆತ್ಮದೊಳಗೆ ನೆಲೆಸಿಬಿಡುತ್ತಾರೆ. ನೀನು ಹತ್ತಿರ ಇರಬೇಕೆಂಬ ಹಠ ನನಗಿಲ್ಲ. ನನ್ನ ಹೆಸರಿನ ಜೊತೆ ನಿನ್ನ ಹೆಸರು ಸೇರಬೇಕು ಅನ್ನೋ ಸ್ವಾರ್ಥವೂ ಇಲ್ಲ.
ಆದರೆ…
ಈ ಜಗತ್ತಿನ ಎಲ್ಲ ಗದ್ದಲಗಳ ಮಧ್ಯೆಯೂ,
ನಿನ್ನ ನೆನಪು ಮಾತ್ರ ನನ್ನೊಳಗೆ ಒಂದು ಸುಂದರ ದೇವಾಲಯದಂತೆ ಉಳಿದಿದೆ.
ಅಲ್ಲಿಗೆ ನಾನು ಪ್ರತಿದಿನ ಬರುತ್ತೇನೆ…
ನಿನ್ನ ನೆನಪುಗಳನ್ನು ಪೂಜಿಸುತ್ತೇನೆ…
ನಿನ್ನ ನಗುವನ್ನು ಪ್ರಾರ್ಥನೆಯಂತೆ ಮನದಲ್ಲಿ ಇಟ್ಟುಕೊಳ್ಳುತ್ತೇನೆ. ಯಾರಿಗೂ ಗೊತ್ತಾಗದಂತೆ.
ನಿನ್ನನ್ನು ಪಡೆಯಲೇಬೇಕು ಅನ್ನೋ ಹಠಕ್ಕಿಂತ ನೀನು ನನ್ನೊಳಗೆ ಎಂದಿಗೂ ಕಳೆದುಹೋಗಬಾರದು ಅನ್ನೋ ಭಯವೇ ನನಗೆ ಹೆಚ್ಚು.
ಯಾಕೆಂದರೆ…
ಕೆಲವರು ನಮ್ಮ ಬದುಕಿನ ಭಾಗವಾಗದೇ ಇದ್ದರೂ ನಮ್ಮ ಉಸಿರಿನ ಭಾಗವಾಗಿಬಿಡುತ್ತಾರೆ.
ನಿನ್ನ ನೆನಪು ಕೂಡ ಹಾಗೇ…
ಇಂದು ನಾನು ಒಂಟಿಯಾಗಿ ಕುಳಿತಿದ್ದರೂ… ಒಂಟಿತನ ಕಾಡುವುದಿಲ್ಲ. ಯಾಕೆಂದರೆ ನನ್ನ ಮನದ ಪಕ್ಕದಲ್ಲಿ ನಿನ್ನ ನೆನಪು ಕುಳಿತಿದೆ.
ಮತ್ತೆ ದೂರದಲ್ಲಿ ಹಳೆಯ ಹಾಡೊಂದು ಕೇಳಿಸುತ್ತಿದೆ..
ನಿನ್ನ ಕಣ್ಣಿನಲಿ ಕಂಡೆ ನಾನು ನನ್ನನ್ನೇ…
ಹಾಂ..
ಎಷ್ಟು ವಿಚಿತ್ರ ಅಲ್ವಾ ಈ ಪ್ರೀತಿ?
ಸೇರಿಸದೇ ಹತ್ತಿರ ಮಾಡುತ್ತದೆ. ಮಾತನಾಡಿಸದೇ ಅರ್ಥ ಮಾಡಿಸುತ್ತದೆ. ಮುಟ್ಟದೇ ಹೃದಯ ತುಂಬುತ್ತದೆ. ಅದಕ್ಕೇ ಇಂದು ಮನಸ್ಸು ಮತ್ತೆ ಮತ್ತೆ ಹೇಳುತ್ತದೆ.
ನೀನೆಂದರೆ….
ಆಸೆಯೂ ಅಲ್ಲ… ಆಕರ್ಷಣೆಯೂ ಅಲ್ಲ…
ನನ್ನೊಳಗೆ ಯಾರಿಗೂ ಕೇಳಿಸದಂತೆ ಹರಿಯುತ್ತಿರುವ
ಒಂದು ಮನದ ಪ್ರೇಮಗೀತೆ.
ಒಂದು ಮಧುರ ಭಾವನೆಯ ಪ್ರೇಮಸಿಂಚನ…!
