ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಕೃಷಿ ಮತ್ತು ಸಾಮಾಜಿಕ ಬುನಾದಿ ರಕ್ಷಿಸಲು ಪ್ರತ್ಯೇಕ ಅಧಿವೇಶನವನ್ನು ಕರೆಯಿರಿ..

Share Below Link

ಶಿವಮೊಗ್ಗ : ಕರ್ನಾ ಟಕದ ಕೃಷಿ ಮತ್ತು ಸಾಮಾಜಿಕ ಬುನಾದಿಯನ್ನು ರಕ್ಷಿಸಲು ರಾಜ್ಯ ಸರ್ಕಾರವು ಕೂಡಲೇ ಪ್ರತ್ಯೇಕ ಅಧಿವೇಶನವನ್ನು ಕರೆಯಬೇಕು ಎಂದು ಕೃಷಿ ಆರ್ಥಿಕ ತಜ್ಞ ಮತ್ತು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಇಂದು ಅವರು ಮಾತನಾಡಿ, ಕೇಂದ್ರ ಸರ್ಕಾರವು ಅಮೇರಿಕಾ ಮತ್ತು ಐರೋಪ್ಯ ಒಕ್ಕೂಟದೊಂದಿಗೆ ನಡೆಸುತ್ತಿರುವ ಮುಕ್ತ ವಾಣಿಜ್ಯ ಒಪ್ಪಂದಗಳು ಕರ್ನಾಟಕದ ಕೃಷಿ ವ್ಯವಸ್ಥೆ ಮತ್ತು ಆಹಾರ ಸಾರ್ವ ಭೌಮತ್ವಕ್ಕೆ ನೀಡುವ ಮಾರಕ ಹೊಡೆತವಾಗಿದೆ. ರಾಜ್ಯದ ವಿವಿಧ ರೈತ ಸಂಘಟನೆಗಳು, ಕೃಷಿತಜ್ಞರು, ಸಮಾಜದ ವಿವಿಧ ಸ್ತರದ ಪ್ರತಿನಿಧಿಗಳು, ಪರಿಸರ ವಾದಿಗಳು, ಮೊದಲಾದವರ ಜೊತೆ ಸೇರಿ ದಿ ವೇ ಫಾರ್‌ವರ್ಡ್ ವೇದಿಕೆ ಮುಖಾಂ ತರ ಇತ್ತೀಚೆಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಕುರಿತು ಒತ್ತಾಯಿಸಲಾಯಿತು ಎಂದರು.
ಪಂಜಬ್ ಮತ್ತು ಹಿಮಾಚಲ ಪ್ರದೇಶದ ಮಾದರಿಯಲ್ಲಿ ಕೂಡಲೇ ವಿಶೇಷ ಅಧಿವೇಶನ ಕರೆದು, ಕೃಷಿ ಮತ್ತು ಹೈನುಗಾರಿಕೆಯನ್ನು ಮುಕ್ತ ವಾಣಿಜ್ಯ ಒಪ್ಪಂದದ ವ್ಯಾಪ್ತಿಯಿಂದ ಹೊರಗಿಡಲು ಕೇಂದ್ರ ಸರ್ಕಾರ ವನ್ನು ಒತ್ತಾಯಿಸುವ ನಿರ್ಣಯ ಕೈಗೊಳ್ಳಬೇಕು. ಈ ಒಪ್ಪಂದಗಳ ಪರಿಣಾಮದ ಕುರಿತು ತಜ್ಞರಿಂದ ಸಮಗ್ರ ಅಧ್ಯಯನ ನಡೆಸಿ, ಶ್ವೇತ ಪತ್ರ ಹೊರಡಿಸಬೇಕು ಹಾಗೂ ನಿರಂತರ ನಿಗಾ ಇಡಲು ಕೃಷಿ ವಾಣಿಜ್ಯ ಒಪ್ಪಂದ ನಿಗಾ ಘಟಕ ಸ್ಥಾಪಿಸ ಬೇಕು ಎಂಬ ಆಗ್ರಹವನ್ನು ಮಾಡಲಾಯಿತು ಎಂದು ಮಾಹಿತಿ ನೀಡಿದರು.
ಕೃಷಿ ರಾಜ್ಯ ಪಟ್ಟಿಯ ವಿಷಯ ವಾಗಿದ್ದರೂ ರಾಜ್ಯಗಳ ಜೊತೆ ಸಮಾಲೋಚನೆ ಇಲ್ಲದೆ ಕೇಂದ್ರವು ಏಕಪಕ್ಷೀಯವಾಗಿ ನಡೆಸುತ್ತಿರುವ ಈ ಒಪ್ಪಂದಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿವೆ. ಸಬ್ಸಿಡಿ ಯುಕ್ತ ಹಾಲಿನ ಉತ್ಪನ್ನಗಳಿಂದ `ನಂದಿನಿ ಅಸ್ಮಿತೆಗೆ ಧಕ್ಕೆ, ಅಗ್ಗದ ಮೆಕ್ಕೆಜೋಳದಿಂದ ಮಾರಕಟ್ಟೆ ಕುಸಿತ ಹಾಗೂ ತೆಂಗು, ಕಾಫಿ, ರೇಷ್ಮೆ ಮತ್ತು ತರಕಾರಿ ಬೆಳೆಗಾರರ ಬದುಕು ದುಸ್ತರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತಮುಖಂಡ ಹೆಚ್.ಆರ್. ಬಸವರಾಜಪ್ಪ, ದೇವಕುಮಾರ್, ಜೆ.ಎಲ್. ಜನಾರ್ಧನ ಇದ್ದರು.