ಅಡಿಕೆ ಕ್ಯಾನ್ಸರ್‌ಕಾರಕ ವರ್ಗೀಕರಣ – ಅಡಿಕೆ ಹಾಳೆ ತಟ್ಟೆಗಳ ಮೇಲಿನ ಅಮೆರಿಕ ನಿಷೇಧ ಪ್ರಶ್ನೆಗೆ ರಾಜತಾಂತ್ರಿಕ ಕ್ರಮಕ್ಕೆ ಸಂಸದ ಬಿವೈಆರ್ ಮನವಿ
ನವದೆಹಲಿ: ಅಡಿಕೆಗೆ ‘ಕ್ಯಾನ್ಸರ್ ಕಾರಕ’ ಎಂಬ ವರ್ಗೀಕರಣ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ (WHO) ಹಾಗೂ ಅದರ ಅಂಗ ಸಂಸ್ಥೆ IARC ನ ನಿಲುವು ವೈಜ್ಞಾನಿಕವಾಗಿ ಸಮರ್ಥನೀಯವಲ್ಲ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ. ಈ ಕುರಿತು ನವದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ, ಅಡಿಕೆ ಬೆಳೆಗಾರರ ಹಿತಾಸಕ್ತಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಕ್ಷಣ ಮಧ್ಯಪ್ರವೇಶ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.
ಮಲೆನಾಡು ಭಾಗವು ದೇಶದ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಸುಮಾರು 65% ಕೊಡುಗೆ ನೀಡುತ್ತಿದ್ದು, ಈ ಬೆಳೆ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ರೈತರು ಆತಂಕದಲ್ಲಿದ್ದಾರೆ. ಅಡಿಕೆ ಆಧಾರಿತ ಆರ್ಥಿಕತೆ ಸುಮಾರು ₹1 ಲಕ್ಷ ಕೋಟಿ ಮೌಲ್ಯ ಹೊಂದಿದ್ದು, 11 ರಾಜ್ಯಗಳಲ್ಲಿ 2 ಕೋಟಿಗೂ ಅಧಿಕ ಜನರ ಜೀವನಾಧಾರವಾಗಿದೆ. ಈ ಹಿನ್ನೆಲೆ, ಅಡಿಕೆ ಕುರಿತ ಯಾವುದೇ ತಪ್ಪು ವರ್ಗೀಕರಣವು ದೊಡ್ಡ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮ ಉಂಟುಮಾಡುತ್ತದೆ ಎಂದು ರಾಘವೇಂದ್ರ ಹೇಳಿದರು.
IARC ಅಡಿಕೆಯನ್ನು “Group-I Carcinogen” ಎಂದು ವರ್ಗೀಕರಿಸಿರುವುದನ್ನು ಅವರು ಪ್ರಶ್ನಿಸಿ, ಈ ನಿರ್ಧಾರದಲ್ಲಿ ವೈಜ್ಞಾನಿಕ ದೋಷಗಳಿವೆ ಎಂದು ವಾದಿಸಿದರು. ICAR-CPCRI ನಡೆಸಿದ ಅಧ್ಯಯನಗಳ ಪ್ರಕಾರ, ಬಹುತೇಕ ಸಂಶೋಧನೆಗಳು ತಂಬಾಕು ಮಿಶ್ರಿತ ಉತ್ಪನ್ನಗಳ ಪರಿಣಾಮಗಳನ್ನು ಶುದ್ಧ ಅಡಿಕೆಯೊಂದಿಗೆ ಗೊಂದಲಪಡಿಸಿ ತೀರ್ಮಾನಿಸಿದವು ಎಂದು ತಿಳಿಸಿದರು. ಅಡಿಕೆಯ ಪ್ರಮುಖ ಘಟಕವಾದ “ಅರೆಕೋಲಿನ್” Group-2B ಪಟ್ಟಿಯಲ್ಲಿರುವಾಗ, ಸಂಪೂರ್ಣ ಅಡಿಕೆಯನ್ನು Group-I ಎಂದು ಗುರುತಿಸಿರುವುದು ಆಂತರಿಕ ವಿರೋಧಾಭಾಸವನ್ನು ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಇತ್ತೀಚೆಗೆ WHO-SEARO ಆಯೋಜಿಸಿದ ವೆಬಿನಾರ್‌ನಲ್ಲಿ ನಿಯಂತ್ರಣಾತ್ಮಕ ನೀತಿಗಳ ಸೂಚನೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಭಾರತ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಅಡಿಕೆ ಕುರಿತ ಮರು-ವರ್ಗೀಕರಣಕ್ಕಾಗಿ ಒತ್ತಾಯಿಸಬೇಕು ಎಂದು ಸಂಸದರು ಹೇಳಿದರು.
ಇದೇ ವೇಳೆ, 2025ರಲ್ಲಿ ಅಮೆರಿಕ “Toxic Alkaline Migration” ಕಾರಣ ನೀಡಿ ಅಡಿಕೆ ಹಾಳೆ ತಟ್ಟೆಗಳ ಮೇಲೆ ವಿಧಿಸಿರುವ ನಿಷೇಧವನ್ನು ಅವರು ತೀವ್ರವಾಗಿ ವಿರೋಧಿಸಿದರು. ಪರಿಸರ ಸ್ನೇಹಿ ಉತ್ಪನ್ನಗಳಾದ ಅಡಿಕೆ ಹಾಳೆ ತಟ್ಟೆಗಳ ವಿರುದ್ಧದ ಈ ಕ್ರಮ ‘ಮೇಕ್ ಇನ್ ಇಂಡಿಯಾ’ ಧೋರಣೆಗೆ ವಿರುದ್ಧವಾಗಿದ್ದು, ಇದನ್ನು ವೈಜ್ಞಾನಿಕ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಪ್ರಶ್ನಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
AIIMS, IISc, CCMB ಹಾಗೂ CFTRI ತಜ್ಞರನ್ನು ಒಳಗೊಂಡ ಉನ್ನತ ಮಟ್ಟದ ತಾಂತ್ರಿಕ ತಂಡವನ್ನು WHOಗೆ ಕಳುಹಿಸಿ, ಅಡಿಕೆಯ ಕುರಿತು ವಾಸ್ತವಾಂಶಗಳನ್ನು ಪ್ರಸ್ತುತಪಡಿಸುವಂತೆ ಹಾಗೂ ಅಡಿಕೆ ಹಾಳೆ ಉತ್ಪನ್ನಗಳಿಗೆ ಜಾಗತಿಕ ಮಾನ್ಯತೆ ದೊರಕುವಂತೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅವರು ಸೂಚಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ಅಡಿಕೆ ಕೇವಲ ಮಂಗಳದ ಸಂಕೇತವಲ್ಲ, ಅದು ಲಕ್ಷಾಂತರ ಕುಟುಂಬಗಳ ಬದುಕಿನ ಮೂಲವಾಗಿದ್ದು, ಇದರ ರಕ್ಷಣೆಯು ರಾಷ್ಟ್ರದ ಜವಾಬ್ದಾರಿಯಾಗಿದೆ ಎಂದು ರಾಘವೇಂದ್ರ ಹೇಳಿದರು. “ಇದು ಕೇವಲ ಶಿವಮೊಗ್ಗದ ವಿಚಾರವಲ್ಲ, ಇಡೀ ದೇಶದ ಅಡಿಕೆ ಬೆಳೆಗಾರರ ಅಸ್ತಿತ್ವದ ಪ್ರಶ್ನೆ” ಎಂದು ಅವರು ಸ್ಪಷ್ಟಪಡಿಸಿದರು.
ಸಂಸದರಿಂದ ಸಲ್ಲಿಸಲಾದ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಈ ವಿಷಯದಲ್ಲಿ ಸರ್ಕಾರ ಗಂಭೀರವಾಗಿ ಪರಿಗಣನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. CPCRI ನೇತೃತ್ವದಲ್ಲಿ ದೇಶದ 11 ಪ್ರಮುಖ ಸಂಶೋಧನಾ ಸಂಸ್ಥೆಗಳು ಅಡಿಕೆ ಕುರಿತು ಸಮಗ್ರ ಅಧ್ಯಯನ ನಡೆಸುತ್ತಿದ್ದು, ಶೀಘ್ರದಲ್ಲೇ ವರದಿ ಸಿದ್ಧವಾಗಲಿದೆ. ಈ ವರದಿಯನ್ನು ICMR ಗೆ ಸಲ್ಲಿಸಿದ ಬಳಿಕ, ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
