ಧರ್ಮದ ಗದ್ದಲ ಮತ್ತು ವಿಭಜನೆಯ ನಡುವೆ ಮನುಷ್ಯತ್ವ…
ವಿಶೇಷ ಲೇಖನ: ರಾಕೇಶ್ ಡಿಸೋಜ
ಇಂದಿನ ಸಮಾಜದಲ್ಲಿ ಜಾತಿ-ಧರ್ಮ ಎಂಬ ಪದಗಳು ರಾಜಕೀಯದ ಸುಲಭ ಆಯುಧಗಳಾಗಿ ಪರಿವರ್ತನೆಗೊಂಡಿವೆ. ತತ್ವ, ಸಿದ್ಧಾಂತ, ಮಲ್ಯಗಳು ಎಂಬ ಶಬ್ದಗಳು ನಿಧಾನವಾಗಿ ಅಂಚಿಗೆ ಸರಿದಂತೆ, ಜಾತಿ ವ್ಯವಸ್ಥೆ ಮತ್ತು ಧರ್ಮದ ಆಧಾರದ ಮೇಲಿನ ಗುರುತಿನ ರಾಜಕಾರಣ ಮುಂದಿನ ಸಾಲಿಗೆ ಬಂದಿದೆ. ಬಹುತೇಕ ಎ ಪಕ್ಷಗಳ ನಾಯಕರಿಗೂ ಇಂದು ಜಾತಿ-ಧರ್ಮವೇ ಚುನಾವಣಾ ಊರುಗೋಲು. ಇದರ ಪರಿಣಾಮವಾಗಿ ಸಮಾಜದಲ್ಲಿ ಭೇದಭಾವ, ಅಸಹಿಷ್ಣುತೆ ಮತ್ತು ಅನಗತ್ಯ ಸಂಘರ್ಷಗಳು ಹೆಚ್ಚಾಗುತ್ತಿರುವುದು ಕಣ್ಣಿಗೆ ಕಾಣುವ ವಾಸ್ತವವಾಗಿದೆ.
ರಾಜಕೀಯ ಮತ್ತು ಸಾಮಾಜಿಕ ವಾತಾವರಣದಲ್ಲಿ ಜಾತಿ ಧರ್ಮ ಎಂಬುದು ವಿಚಾರಧಾರೆಗಳಿಗಿಂತ ದೊಡ್ಡ ಘೋಷಣೆಯಾಗಿದೆ. ಇಲ್ಲಿ ತತ್ವ, ಮಲ್ಯ, ಸಿದ್ಧಾಂತಗಳ ಸ್ಥಾನವನ್ನು ಕೀಳುಮಟ್ಟದ ರಾಜಕಾರಣ ಆಕ್ರಮಿಸಿಕೊಂಡಿದೆ. ಇದರ ಪರಿಣಾಮವಾಗಿ ಸಮಾಜ ಮತ್ತಷ್ಟು ವಿಭಜನೆಯ ದಾರಿಯತ್ತ ಸಾಗುತ್ತಿದೆ ಎಂಬುದು ನೋವಿನ ವಾಸ್ತವ.
ಈ ಗೊಂದಲದ ಮಧ್ಯೆ ಮನುಷ್ಯ ಮನುಷ್ಯನಾಗಿಯೇ ಉಳಿಯಬೇಕು ಎಂಬ ಜಾಗತಿಕ ಮನವಿಯೊಂದಿಗೆ ಜನವರಿ ತಿಂಗಳ ಮೂರನೇ ಭಾನುವಾರವನ್ನು ವಿಶ್ವಧರ್ಮ ದಿನವಾಗಿ ಆಚರಿಸಲಾಗುತ್ತದೆ. ಈ ದಿನದ ಆಶಯ ಯಾವುದೇ ಒಂದು ಧರ್ಮವನ್ನು ಮಹಿಮೆ ಪಡಿಸುವುದಲ್ಲ; ಬದಲಾಗಿ ಎ ಧರ್ಮಗಳು ಸಾರುವ ಮಾನವೀಯ ಮಲ್ಯಗಳನ್ನು ನೆನಪಿಸಿಕೊಳ್ಳುವುದೇ ಅದರ ಮೂಲ ಉzಶವಾಗಿದೆ.
ಧರ್ಮ ಎಂದರೆ ವಿಭಜನೆಯ ಗೋಡೆ ಅಲ್ಲ; ಅದು ಮನುಷ್ಯನನ್ನು ಮನುಷ್ಯನೊಂದಿಗೆ ಜೋಡಿಸುವ ಸೇತುವೆಯಾಗಿರಬೇಕು. ಸತ್ಯ, ಅಹಿಂಸೆ, ಪ್ರೀತಿ, ಕ್ಷಮೆ, ಸಹಾನುಭೂತಿ, ಸೇವೆ ಇವು ಯಾವ ಧರ್ಮಕ್ಕೂ ಸೀಮಿತವಲ್ಲ. ಆದರೆ ಇಂದಿನ ದಿನಗಳಲ್ಲಿ ಈ ಮಲ್ಯಗಳಿಗಿಂತ ಧರ್ಮದ ಹೊರಪೊರೆ, ಆಚರಣೆ ಮತ್ತು ಗುರುತಿಗೇ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರಿಂದ ಧರ್ಮದ ಆತ್ಮವೇ ಮಸುಕಾಗುತ್ತಿದೆ.
ಈ ಸಂದರ್ಭದಲ್ಲಿ ಕನ್ನಡದ ಮಹಾಕವಿ ಕುವೆಂಪು ಅವರ ಸಾಹಿತ್ಯ ಮತ್ತು ಚಿಂತನೆಗಳು ನಮಗೆ ದಿಕ್ಕು ತೋರಿಸುತ್ತವೆ. ವಸುದೈವ ಕುಟುಂಬಕಂ, ಮಾನವ ಧರ್ಮ ಎಂಬ ಅವರ ಕಲ್ಪನೆಗಳು ಇಂದಿಗೂ ಪ್ರಸ್ತುತ. ಜತಿ ಧರ್ಮಗಳ ಗಡಿಗಳನ್ನು ದಾಟಿ ಮನುಷ್ಯತ್ವವನ್ನು ಪ್ರಧಾನವಾಗಿ ನೋಡುವ ದೃಷ್ಟಿ ಕುವೆಂಪು ಅವರ ಬರಹಗಳಲ್ಲಿದೆ. ಅವರು ಸಾರಿದ ಮಾನವೀಯತೆಯ ಸಂದೇಶ ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ.
ಧರ್ಮಗಳ ನಡುವಿನ ಭೇದಗಳನ್ನೇ ಚರ್ಚಿಸುವ ಬದಲು, ಅವುಗಳ ಮೂಲ ಸಂದೇಶಗಳಾದ ಮಾನವ ಗೌರವ, ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಮೇಲೆ ಗಮನಹರಿಸುವುದು ಇಂದಿನ ಅಗತ್ಯವಾಗಿದೆ. ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಬಳಸುವ ಪ್ರವೃತ್ತಿಗೆ ಸಮಾಜವೇ ಎಚ್ಚರಿಕೆ ನೀಡಬೇಕಾದ ಸಮಯ ಇದಾಗಿದೆ.
ವಿಶ್ವಧರ್ಮ ದಿನ ಕೇವಲ ಆಚರಣೆಯ ದಿನವಲ್ಲ. ಅದು ಆತ್ಮಾವಲೋಕನದ ದಿನವಾಗಬೇಕು. ಜಾತಿ ಧರ್ಮಗಳನ್ನು ಪಕ್ಕಕ್ಕೆ ಸರಿಸಿ ಮನುಷ್ಯತ್ವವನ್ನು ಕೇಂದ್ರಬಿಂದುವಾಗಿಸಿಕೊಂಡು ಬದುಕುವ ಸಂಕಲ್ಪವನ್ನು ಪುನಃ ದೃಢಪಡಿಸಿಕೊಳ್ಳುವ ದಿನವಾಗಬೇಕು. ಧರ್ಮಗಳು ವಿಭಜಿಸಲು ಅಲ್ಲ, ಒಂದಾಗಿಸಲು ಎಂಬ ಸತ್ಯವನ್ನು ಅರಿತಾಗ ಮಾತ್ರ ವಿಶ್ವಧರ್ಮ ದಿನದ ಆಶಯ ಸಾರ್ಥಕವಾಗುತ್ತದೆ.

