ರಾಜೀನಾಮೆ ಕೇಳಲು ಬಿಜೆಪಿಯವರಿಗೇನು ನೈತಿಕತೆ ಇದೆ: ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ: ನನ್ನ ಖಾಸಗಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಕೇಳಲು ಬಿಜೆಪಿ ನಾಯಕರಿಗೆ ಯಾವ ಯೋಗ್ಯತೆ ಇದೆ ಎಂದು ಸಚಿವ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರಾದ ಆರ್. ಅಶೋಕ್, ಬಿ.ವೈ. ವಿಜಯೇಂದ್ರ, ನಳಿನ್ ಕುಮಾರ್ ಕಟೀಲ್ ಮತ್ತು ರವಿ ಕುಮಾರ್ ನನ್ನ ರಾಜೀನಾಮೆ ಕೇಳಿದ್ದಾರೆ. ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದರು.
ವಿಪಕ್ಷ ನಾಯಕ ಆರ್. ಅಶೋಕ್ ಸಾವಿನಲ್ಲೂ ದುಡ್ಡು ಮಾಡಿದವರು. ಅವರಿಗೆ ಮಾನ ಮರ್ಯಾದೆ, ನೈತಿಕತೆ ಇದ್ದರೆ ನನ್ನ ರಾಜೀನಾಮೆ ಕೇಳುವುದನ್ನು ಬಿಟ್ಟು ಅವರು ರಾಜೀನಾಮೆ ಕೊಡಬೇಕು. ಹಾಗೆಯೇ ಬಿಜೆಪಿ ರಾಜಧ್ಯಕ್ಷ ರಾಗಿದ್ದ ನಳಿನ್ ಕುಮಾರ್ ಕಟೀಲ್ ಬಿಜೆಪಿಯನ್ನು ಈ ಬಾರಿ ಎಲ್ಲಿಗೆ ತಂದಿಟ್ಟಿದ್ದಾರೆ ಎಂದು ಅವರೇ ಹೇಳಲಿ. ಅವರೂ ಕೊರೋನಾ ಸಂದರ್ಭದಲ್ಲಿ ಭ್ರಷ್ಟಾಚಾರ ಮಾಡಿದವರೇ. ಅವರು ಒಂದು ಸೋಲಿನ ಪಕ್ಷದ ಅಧ್ಯಕ್ಷ. ಕರಾವಳಿ ಭಾಗದಲ್ಲಿ ಪ್ರವೀಣ್ ನೆಟ್ಟಾರು ಸೇರಿದಂತೆ ಯಾರ ಯಾರ ಸಾವಿಗೆ ಕಾರಣರಾಗಿದ್ದಾರೆ ಎಂದು ಒಮ್ಮೆ ಯೋಚನೆ ಮಾಡಲಿ. ಆರ್.ಎಸ್.ಎಸ್., ಬಜರಂಗದಳ ದವರೇ ಅವರನ್ನು ಗೋ ಬ್ಯಾಕ್ ಎಂದು ವಿರೋಧಿಸಿದ್ದರು ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ರಾಜಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ಹರಿಹಾಯ್ದ ಮಧು ಬಂಗಾರಪ್ಪ, ವಿಜಯೇಂದ್ರ ಯಾವ ಆಧಾರದಲ್ಲಿ ರಾಜಧ್ಯಕ್ಷರಾಗಿದ್ದಾರೋ ಅದು ನನಗೆ ಗೊತ್ತಿಲ್ಲ. ಆದರೆ, ಅವರು ತಿಳಿದುಕೊಳ್ಳಲಿ. ೨೦೦೪ರಲ್ಲಿಯೇ ನಾನು ಅವರ ತಂದೆ ಪರ ಪ್ರಚಾರ ಮಾಡಿದ್ದೆ. ನಮ್ಮ ತಂದೆ ಬಂಗಾರಪ್ಪ ಅವರು ಬಿಜೆಪಿಗೆ ಬರದಿದ್ದರೆ ಈಗ ಬಿಜೆಪಿಯವರ ಅಡ್ರಸ್ಸೇ ಇರುತ್ತಿರಲಿಲ್ಲ. ವಿಜಯೇಂದ್ರ ಈಗ ಪ್ರಚಾರ ಮಾಡುತ್ತಿದ್ದಾರೆ. ನಾನು ಆಗಲೇ ಪ್ರಚಾರ ಮಾಡಿದ್ದೇನೆ. ನನ್ನ ಖಾಸಗಿತನಕ್ಕೆ ಕೈಹಾಕುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಅವರ ಭ್ರಷ್ಟಾಚಾರಗಳನ್ನು ಬಯಲು ಮಾಡುವುದು ನನಗೇನೂ ದೊಡ್ಡದಲ್ಲ ಎಂದರು.
ಆದರೆ. ಅವರ ಪಕ್ಷದವರೇ ಆದ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯೇಂದ್ರ ಸೇರಿದಂತೆ ಅವರ ಕುಟುಂಬದವರ ವಿರುದ್ಧ ಭ್ರಷ್ಟಾಚಾರದ ಮೂಟೆಯನ್ನೇ ಹೊರಿಸಿದ್ದಾರೆ. ಅವರ ತಟ್ಟೆಯಲ್ಲಿಯೇ ಹೆಗ್ಗಣ ಬಿದ್ದಿದೆ. ನನ್ನ ತಟ್ಟೆಯ ಚಿಂತೆ ಅವರಿಗೇಕೆ? ಅವರಿಗೂ ನನ್ನ ರಾಜೀನಾಮೆ ಕೇಳುವ ನೈತಿಕತೆಯೂ ಇಲ್ಲ, ಯೋಗ್ಯತೆಯೂ ಇಲ್ಲ. ನಾನೇನು ನಕಲಿ ಸಹಿ ಮಾಡಿಲ್ಲ ಎಂದರು.
ಚೆಕ್ ಬೌನ್ಸ್ ಪ್ರಕರಣ ಎಂದು ಎಲ್ಲಿಯೂ ಉಲ್ಲೇಖ ಮಾಡದ ಸಚಿವರು ಈ ಘಟನೆ ನನ್ನ ಖಾಸಗಿತನದ್ದು. ಇದು ವ್ಯವಹಾರದ ವಿಷಯ. ೧೨ ವರ್ಷ ಹಳೆಯದು. ಅದನ್ನು ನಾನು ಬಗೆಹರಿಸಿ ಕೊಳ್ಳುತ್ತೇನೆ. ಹೀಗೆ ಟ್ವೀಟ್ ಮಾಡಿದ ಬಿಜೆಪಿಯವರು ನನಗೆ ಮತ್ತೊಂದು ಅನುಕೂಲ ಮಾಡಿಕೊಟ್ಟಿದ್ದಾರೆ. ಇದನ್ನು ಕೇಳಿದ ಅನೇಕ ಗೆಳೆಯರು ನನಗೆ ೧೦೦ ಕೋಟಿ ರೂ. ಕೊಡಲು ಮುಂದೆ ಬಂದಿದ್ದಾರೆ. ಇದು ೬ ಕೋಟಿ ರೂ. ಪ್ರಕರಣ. ನನ್ನ ಹತ್ತಿರ ದುಡ್ಡು ಇಲ್ಲವೆಂದಲ್ಲ. ಆದರೆ ಅದೊಂದು ವ್ಯವಹಾರ ಅದನ್ನು ವ್ಯಹಾರಿಕವಾಗಿಯೇ ಬಗೆಹರಿಸ ಬೇಕು. ನ್ಯಾಯ ನನ್ನ ಕಡೆಗೇ ಇದೆ ಎಂದರು.
ಮಾಧ್ಯಮಗಳ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ ಅವರು ನನ್ನ ಖಾಸಗಿತನದ ವಿಚಾರ ಪ್ರಚಾರ ಮಾಡುವ ಮುನ್ನ ಮಾಧ್ಯಮದವರು ನನ್ನ ಕೇಳಬಹುದಿತ್ತು. ಪ್ರಶ್ನೆ ಮಾಡಬಹುದಿತ್ತು. ಆದರೆ ಹಾಗೆ ಮಾಡದೇ ಹೆಚ್ಚು ಪ್ರಚಾರ ಮಾಡಿದ್ದು ಸರಿಯಲ್ಲ. ಯಾವುದೇ ವಿಷಯ ಬಂದಾಯ ಅದನ್ನು ಕೇಳುವುದು ಒಳ್ಳೆಯದು. ವ್ಯವಹಾರಗಳು ನೂರೆಂಟು ಇರುತ್ತದೆ. ಎಲ್ಲರ ವ್ಯವಹಾರಗಳು ಅಷ್ಟೇ ಎಂದರು.
ಸಂಸದ ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದ ಮಧು ಬಂಗಾರಪ್ಪ ವಿಚಾರ ಡೈವರ್ಟ್ ಮಾಡಲು ನನ್ನ ತಮ್ಮನ ವಿಚಾರ ಎತ್ತಲಾಗಿದೆ ಎನ್ನುತ್ತಾರೆ. ನನ್ನ ವಿಚಾರ ಎಲ್ಲಿ? ಮರಗಳ್ಳತನದ ವಿಚಾರ ಎಲ್ಲಿ? ಇವನೇನು ದೊಡ್ಡ ಮನುಷ್ಯನಾ? ಅರಣ್ಯ ಕಡಿದು ಮರಗಳ್ಳತನ ಮಾಡಿದ್ದರೆ ನನಗೇನು ಸಂಬಂಧ? ಎಂದರು.
ಸಿದ್ಧರಾಮಯ್ಯ ಅವರಿಗೆ ಅಯೋಧ್ಯೆಗೆ ಆಹ್ವಾನ ನೀಡದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಧು ಬಂಗಾರಪ್ಪ, ಶ್ರೀರಾಮ ಎಲ್ಲರ ರಾಮ. ರಾಮ ಎಲ್ಲಿದ್ದರೇನು? ಒಂದೇ ಅಲ್ಲವೇ? ಮೊದಲು ಹೃದಯದಲ್ಲಿರಬೇಕು. ಈಗಾಗಲೇ ರಾಮಮಂದಿರಕ್ಕೆ ಸಂಬಂಧಿಸಿದಂತೆ ಅವ್ಯವಹಾರದ ಕೂಗು ಕೇಳಿ ಬರುತ್ತಿದೆ. ನಾನೇ ಪ್ರಧಾನಿಗಳಿಗೆ ತನಿಖೆ ಮಾಡುವಂತೆ ಆಗ್ರಹಿಸುತ್ತೇನೆ ಎಂದರು.
ಇನ್ನು ಧಾರ್ಮಿಕ ಭಾವನೆಗಳನ್ನು ಮುಂದಿಟ್ಟುಕೊಂಡು ಗೆಲ್ಲುತ್ತೇವೆ ಎಂಬ ಬಿಜೆಪಿಯವರ ಕನಸು ನನಸಾಗುವುದಿಲ್ಲ. ಏನಿದ್ದರೂ ಅಭಿವೃದ್ಧಿ ಯೋಜನೆಗಳು ಮುಖ್ಯವಾಗುತ್ತವೆ. ಗ್ಯಾರಂಟಿ ಯೋಜನೆಗಳು ತಲುಪಿಲ್ಲ ಎನ್ನುವ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದ ಅವರು ಮೆದಲು ಬಿಜೆಪಿ ಕಾರ್ಯಕರ್ತರಿಗೆ ಈ ಎಲ್ಲಾ ಯೋಜನೆಗಳು ಎಷ್ಟು ಸಿಕ್ಕಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ. ಇಲ್ಲವೇ ಬಿಜೆಪಿ ಕಾರ್ಯಕರ್ತರಿಗೆ ಈ ಯೋಜನೆಗಳೇ ಬೇಡ ಎಂದು ಹೇಳಲಿ ಎಂದು ಸವಾಲು ಹಾಕಿದರು.
ಶಾಲೆಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಸಚಿವನಾದ ಮೇಲೆ ಆದಷ್ಟು ಸಮಸ್ಯೆ ಬಗೆಹರಿಸಿದ್ದೇನೆ. ಒಂದು ಮೆಟ್ಟೆ ಬದಲಿಗೆ ಎರಡು ಮೆಟ್ಟೆ ಕೊಟ್ಟಿದ್ದೇವೆ. ಹಾಲು ನೀಡಿದ್ದೇವೆ. ಶಾಲೆಗಳ ಕಟ್ಟಡ, ಶೌಚಾಲಯಗಳ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಶಿಕ್ಷಕರನ್ನು ನೇಮಕ ಮಾಡಿದ್ದೇವೆ. ಶಾಲಾ ಮಕ್ಕಳ ಕೈಗೆ ಪೊರಕೆ ಕೊಟ್ಟವರು ಬಿಜೆಪಿಯವರು. ಇಳಿಸುತ್ತಿರುವುದು ನಾವು. ಇನ್ನೊಂದು ವರ್ಷದಲ್ಲಿ ಯಾವ ಮಕ್ಕಳನ್ನು ನೆಲದ ಮೇಲೆ ಕೂರಿಸುವುದಿಲ್ಲ ಎಂದರು.
ಪ್ರಮುಖರಾದ ಹೆಚ್.ಎಸ್. ಸುಂದರೇಶ್, ಆಯನೂರು ಮಂಜುನಾಥ್, ಪ್ರಸನ್ನಕುಮಾರ್, ಎನ್. ರಮೇಶ್, ವೈ.ಹೆಚ್. ನಾಗರಾಜ್, ಎಸ್.ಕೆ. ಮರಿಯಪ್ಪ, ಕಲಗೋಡು ರತ್ನಾಕರ್, ಎಸ್.ಪಿ. ದಿನೇಶ್, ಇಕ್ಕೇರಿ ರಮೇಶ್, ಕಲೀಂ ಪಾಶ, ಜಿ.ಡಿ. ಮಂಜುನಾಥ್ ಮುಂತಾದವರಿದ್ದರು.