ಆರೋಗ್ಯಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಯುವಜನತೆ ಮತ್ತು ನಶೆ: ಶಿಕ್ಷೆಯ ಕಾನೂನಿನಿಂದ ಸಂರಕ್ಷಣೆಯತ್ತ ಸಾಗಲು ಸಾಧ್ಯವೇ..?!

Share Below Link

ನಶೆ ಸಮಸ್ಯೆಯನ್ನು ಭಾರತ ಇನ್ನೂ ಮುಖ್ಯವಾಗಿ ಅಪರಾಕಧದ ಕಣ್ಣಿನಿಂದಲೇ ನೋಡುತ್ತಿದೆ. ಪ್ರಕರಣ, ಬಂಧನ, ಶಿಕ್ಷೆ.
ಈ ಕ್ರಮಗಳು ಅಗತ್ಯವೇ. ಆದರೆ ಪ್ರಶ್ನೆ, ಈ ದಾರಿ ಯುವಜನತೆಯನ್ನು ನಶೆ ಯಿಂದ ದೂರ ಇಡಲು ಸಾಕಾಗುತ್ತಿ ದೆಯೇ? ಅಥವಾ ತಪ್ಪು ನಡೆದ ನಂತರ ಮಾತ್ರ ಪ್ರತಿಕ್ರಿಯಿಸುವ ವ್ಯವಸ್ಥೆ ಯಾಗಿ ಕಾನೂನು ಸೀಮಿತವಾಗಿ ದೆಯೇ? ನಶೆ ಕೇವಲ ಕಾನೂನು ಉಲ್ಲಂಘನೆಯ ಪ್ರಶ್ನೆಯಲ್ಲ. ಅದು ಸಾರ್ವಜನಿಕ ಆರೋಗ್ಯ, ಸಾಮಾಜಿಕ ಜವಾಬ್ದಾರಿ ಮತ್ತು ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಸಂಬಂಧಿಸಿದ ಗಂಭೀರ ವಿಚಾರ.
ಯುವಜನತೆಯ ದೊಡ್ಡ ಭಾಗ ನಶೆಯತ್ತ ತಿರುಗುತ್ತಿರುವುದು ವೈಯಕ್ತಿಕ ದುರ್ಬಲತೆಯ ಫಲವಲ್ಲ. ಅದು ಕುಟುಂಬ, ಶಿಕ್ಷಣ ವ್ಯವಸ್ಥೆ ಮತ್ತು ಸಮಾಜದ ಒಟ್ಟು ಗೂಡಿದ ವೈಫಲ್ಯದ ಪ್ರತಿಬಿಂಬ.
ಕಾನೂನು ಬಲವಂತವಾಗಿದೆ, ಆದರೆ ಸಮಗ್ರವಾಗಿದೆಯೇ?
ಭಾರತದಲ್ಲಿ ನಶೆ ವಿರುದ್ಧ ಕಠಿಣ ಕಾನೂನು ವ್ಯವಸ್ಥೆಯಿದೆ. ತನಿಖಾ ಸಂಸ್ಥೆಗಳು, ವಿಶೇಷ ನ್ಯಾಯಾಲಯ ಗಳು ಮತ್ತು ದೀರ್ಘ ಶಿಕ್ಷೆಗಳಿವೆ. ಆದರೆ ಈ ವ್ಯವಸ್ಥೆಯ ಪ್ರಮುಖ ಲಕ್ಷಣ ಶಿಕ್ಷೆ ಪ್ರಧಾನ ನಿಲುವು. ನಶೆ ಬಳಕೆದಾರನನ್ನು ಅಪರಾಧಿಯಾಗಿ ನೋಡುವ ದೃಷ್ಟಿಕೋನವೇ ಮೊದಲ ಹೆಜ್ಜೆ.
ಇಲ್ಲಿ ಕಾನೂನು ತನ್ನ ಮಿತಿ ಯನ್ನು ತಲುಪುತ್ತದೆ. ನಶೆ ಪ್ರಾರಂಭ ವಾಗುವ ಮೊದಲು ಕಾನೂನು ಪ್ರವೇಶಿಸುವು ದಿಲ್ಲ. ಯುವಕ ನೊಳಗಿನ ಒತ್ತಡ, ಒಂಟಿತನ, ನಿರ್ಲಕ್ಷ್ಯ, ವಿಫಲತೆಯ ಭಯ ಇವುಗಳ ಎದುರು ಕಾನೂನು ಮನವಾಗಿರುತ್ತದೆ. ತಪ್ಪು ನಡೆದ ಮೇಲೆ ಮಾತ್ರ ಮಾತನಾಡುವ ವ್ಯವಸ್ಥೆ, ತಡೆಯುವಲ್ಲಿ ಸದಾ ಹಿಂದೆ ಬೀಳುತ್ತದೆ.
ಈ ವಿಚಾರದಲ್ಲಿ ಇತರ ದೇಶಗಳ ಕ್ರಮ ಗಮನಿಸುವುದು ಅಗತ್ಯವಾಗಿದೆ. ಇದಕ್ಕೆ ಪೋರ್ಚುಗಲ್ ಒಂದು ಮಹತ್ವದ ಉದಾಹರಣೆ ಎನ್ನಬಹುದು. ಅಲ್ಲಿ ನಶೆ ಬಳಕೆಯನ್ನು ಅಪರಾಧವಲ್ಲದೆ ಸಾರ್ವಜನಿಕ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಲಾಗಿದೆ. ಸಣ್ಣ ಪ್ರಮಾಣದ ಬಳಕೆಗೆ ಜೈಲು ಶಿಕ್ಷೆಯ ಬದಲು ಕೌನ್ಸಿ ಲಿಂಗ್ ಮತ್ತು ಚಿಕಿತ್ಸೆ. ಪರಿಣಾಮವಾಗಿ ನಶೆ ಸಂಬಂಧಿತ ಸಾವುಗಳು, ಎಚ್‌ಐವಿ ಹರಡುವಿಕೆ ಮತ್ತು ಪುನರಾವರ್ತಿತ ಅಪರಾಧ ಗಳು ಗಣನೀಯವಾಗಿ ಇಳಿಕೆಯಾಗಿವೆ.
ನೆದರ್‌ಲೆಂಡ್ ಕಠಿಣ ನಿಯಂತ್ರಣದ ಜೊತೆಗೆ ಹಾನಿ ಕಡಿತ ನೀತಿಯನ್ನು ಅನುಸರಿಸಿದೆ. ಉzಶ ನಶೆ ಪ್ರೋತ್ಸಾಹ ವಲ್ಲ. ಅಪರಾಧ ಜಾಲದಿಂದ ಯುವ ಜನತೆಯನ್ನು ದೂರ ಇಡುವುದು. ಈ ಮಾದರಿ ಒಂದು ಸಂದೇಶ ನೀಡುತ್ತದೆ. ಎಲ್ಲ ಸಮಸ್ಯೆಗೆ ಒಂದೇ ರೀತಿಯ ಶಿಕ್ಷೆ ಪರಿಹಾರವಲ್ಲ.
ಜಪಾನ್ ದೇಶದ ಕಾನೂನು ಅತ್ಯಂತ ಕಠಿಣ. ಆದರೆ ಅಲ್ಲಿ ಕಾನೂನಿ ಗಿಂತ ಬಲವಾದುದು ಸಾಮಾಜಿಕ ಶಿಸ್ತು ಮತ್ತು ಕುಟುಂಬದ ನಿಗಾ. ಸಮಾಜವೇ ನಿಯಂತ್ರಕವಾಗಿ ಕಾರ್ಯ ನಿರ್ವಹಿಸು ತ್ತದೆ. ಇಲ್ಲಿ ಕಾನೂನು ಒಂಟಿಯಾಗಿಲ್ಲ.
ಈ ಹೋಲಿಕೆ ಸ್ಪಷ್ಟಪಡಿಸು ವುದು ಒಂದೇ. ಪರಿಣಾಮಕಾರಿ ಯಾದ ನಶೆ ತಡೆ ನೀತಿಗೆ ಕಾನೂನು, ಸಮಾಜ ಮತ್ತು ಸಂಸ್ಕೃತಿ ಒಂದೇ ದಿಕ್ಕಿನಲ್ಲಿ ನಡೆಯಬೇಕು.
ನಶೆ ಸಂಬಂಧಿತ ಅಪರಾಧ ಗಳಲ್ಲಿ ಎರಡು ವರ್ಗಗಳನ್ನು ಸ್ಪಷ್ಟವಾಗಿ ಬೇರ್ಪಡಿಸಬೇಕು. ಒಂದು, ನಶೆ ವ್ಯಾಪಾರ ಮತ್ತು ಸಂಘಟಿತ ಜಲ. ಮತ್ತೊಂದು, ನಶೆ ಬಳಕೆದಾರರು.
ವ್ಯಾಪಾರಿಗಳ ಮೇಲೆ ಕಠಿಣ ಶಿಕ್ಷೆ ಅನಿವಾರ್ಯ. ಆದರೆ ಬಳಕೆದಾರ ರನ್ನು ಅದೇ ಕಣ್ಣಿನಿಂದ ನೋಡು ವುದು ಅನ್ಯಾಯವೂ ಅಸಮರ್ಥವೂ ಆಗಿದೆ. ಹೆಚ್ಚಿನ ಯುವ ಬಳಕೆದಾರರು ಅಪರಾಧಿಗಳು ಅಲ್ಲ. ಅವರು ಪರಿಸ್ಥಿತಿಯ ಬಲಿಪಶುಗಳು. ಇಲ್ಲಿ ಕಾನೂನು ಪುನರ್ವಸತಿ ಮತ್ತು ಸಂರಕ್ಷಣೆಯ ದಿಕ್ಕಿನಲ್ಲಿ ಕಾರ್ಯನಿರ್ವಹಿಸಬೇಕು. ನ್ಯಾಯ ಎಂದರೆ ಕೇವಲ ಶಿಕ್ಷೆಯಲ್ಲ. ನ್ಯಾಯ ಎಂದರೆ ತಪ್ಪು ಆಗದಂತೆ ತಡೆಯುವ ಬುದ್ಧಿವಂತಿಕೆ.
ಕುಟುಂಬ ಮತ್ತು ಶಿಕ್ಷಣ ವ್ಯವಸ್ಥೆಯ ಪಾತ್ರ ಮುಂಚೂಣಿ ಯಲ್ಲಿರಬೇಕು ಆದರೆ ಸಮಯ ನೀಡುವಲ್ಲಿ ಹಿಂದುಳಿದಿದೆ. ಕೇಳುವ ಮನಸ್ಸು ಇಲ್ಲದ ಮನೆಗಳಲ್ಲಿ ಮಕ್ಕಳು ತಪ್ಪು ಉತ್ತರಗಳನ್ನು ಹೊರಗೆ ಹುಡುಕುತ್ತಾರೆ. ಶಿಕ್ಷಣ ಸಂಸ್ಥೆಗಳು ಅಂಕ, ಶ್ರೇಣಿ ಮತ್ತು ಸ್ಪರ್ಧೆಗೆ ಒತ್ತು ನೀಡುತ್ತಿವೆ. ಆದರೆ ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಬೆಂಬಲಕ್ಕೆ ಕಡಿಮೆ ಜಗ. ಬದುಕನ್ನು ಎದುರಿಸಲು ಸಿದ್ಧಪಡಿಸದ ಶಿಕ್ಷಣ, ಯುವಜನತೆ ಯನ್ನು ಅಸುರಕ್ಷಿತವಾಗಿಸುತ್ತದೆ.
ಇಂದಿನ ಕಾಲಘಟ್ಟದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕೆಂದರೆ; ಮೊದಲನೆಯದು, ಕಾನೂನು ಸುಧಾರಣೆ. ನಶೆ ಬಳಕೆ ಪ್ರಕರಣ ಗಳಲ್ಲಿ ಚಿಕಿತ್ಸೆ ಮತ್ತು ಕೌನ್ಸಿಲಿಂಗ್‌ಗೆ ಕಾನೂನು ಆದ್ಯತೆ ನೀಡಬೇಕು. ವ್ಯಾಪಾರ ಮತ್ತು ಬಳಕೆಯ ನಡುವೆ ಸ್ಪಷ್ಟ ಕಾನೂನು ವ್ಯತ್ಯಾಸ ಜರಿಗೆ ಬರಬೇಕು.
ಎರಡನೆಯದು, ಸಂಸ್ಥಾತ್ಮಕ ಸಂರಕ್ಷಣೆ. ಶಾಲೆ, ಕಾಲೇಜು ಮತ್ತು ಸ್ಥಳೀಯ ಮಟ್ಟದಲ್ಲಿ ಕೌನ್ಸಿಲಿಂಗ್ ಮತ್ತು ಪುನರ್ವಸತಿ ಕೇಂದ್ರಗಳು ಕಡ್ಡಾಯವಾಗಬೇಕು. ಇದು ದಯೆಯ ಕ್ರಮವಲ್ಲ, ಭವಿಷ್ಯ ರಕ್ಷಣೆಯ ಹೂಡಿಕೆ.
ಮೂರನೆಯದು, ಸಮಾಜದ ಜವಾಬ್ದಾರಿ. ನಶೆ ಬಗ್ಗೆ ಮಾತನಾಡು ವುದನ್ನು ನಾಚಿಕೆ ಎಂದು ಭಾವಿಸುವ ಮನೋಭಾವ ಬದಲಾಗಬೇಕು. ಮನವೇ ಅತಿದೊಡ್ಡ ಸಹಕಾರ.
ನಾವು ಇಂದು ಶಿಕ್ಷೆಯ ಮೇಲಷ್ಟೇ ನಿಂತರೆ, ನಾಳೆ ಇನ್ನಷ್ಟು ಯುವಕರು ಕಳೆದುಹೋಗುತ್ತಾರೆ. ಇಂದು ಕಾನೂ ನಿಗೆ ಸಂವೇದನೆ ಮತ್ತು ಸಂರಕ್ಷಣೆಯನ್ನು ಜೋಡಿಸಿದರೆ, ಮುಂದಿನ ಪೀಳಿಗೆಗೆ ಸುರಕ್ಷಿತ ದಾರಿ ಸಿಗುತ್ತದೆ. ನಶೆ ಸಮಸ್ಯೆ ನಮ್ಮ ಕಾನೂನು ವ್ಯವಸ್ಥೆಗೆ ಒಂದು ಪ್ರಶ್ನೆ. ಆದರೆ ಅದು ನಮ್ಮ ಸಮಾಜಕ್ಕೆ ಒಂದು ಪರೀಕ್ಷೆ. ಈ ಪರೀಕ್ಷೆಯಲ್ಲಿ ಗೆಲ್ಲಲು ಕೇವಲ ಕಠಿಣ ಕಾನೂನು ಸಾಕಾಗದು. ಮಾನವೀಯ ನಡತೆ ಬೇಕು.
ಸಿ. ಎನ್. ಮಶ್, ವಕೀಲರು, ಶಿವಮೊಗ್ಗ.