ಜಿಲ್ಲಾ ಸುದ್ದಿತಾಜಾ ಸುದ್ದಿ

ನಮ್ಮ ಸಂಸ್ಕೃತಿಯ ಮೂಲ ಬೇರಾದ ಜಾನಪದವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ: ಡಾ| ಶುಭ ಮರವಂತೆ

Share Below Link

ಶಿಕಾರಿಪುರ : ಜಾನಪದ ನಮ್ಮ ಸಂಸ್ಕೃತಿಯ ಮೂಲ ಬೇರು, ಅಂತಃಸತ್ವವಾಗಿದ್ದು ಅದನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ವೈಯುಕ್ತಿಕ ಅನುಭವವನ್ನು ಸಾಮೂಹಿಕ ಗೊಳಿಸುವ ಮೂಲಕ ಜಾನಪದರು ಹೊಸ ಲೋಕವನ್ನು ಸೃಷ್ಟಿಸುವ ಅಗಾಧವಾದ ಶಕ್ತಿಯನ್ನು ಹೊಂದಿದ್ದಾರೆ ಎಂದು ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಶುಭ ಮರವಂತೆ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು(ರಿ) ಶಿಕಾರಿಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಾಲೂಕು ಪರ್ತಕರ್ತರ ಸಂಘದ ಸಹಯೋಗ ದಲ್ಲಿ ನಡೆದ ವಿಶ್ವ ಜಾನಪದ ದಿನಾಚರಣೆ ೨೦೨೩ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಜಾನಪದ ಕಥೆ, ಕಾವ್ಯ, ಲಾವಣಿಪದ ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಸುಲಭವಾಗಿ ಅರ್ಥೈಸಿಕೊಳ್ಳಲು ಅಸಾಧ್ಯವಾದ ಜಾನಪದ ಕಥೆ ಕಾವ್ಯ ಲಾವಣಿ ಪದವು ಬಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸಿದೆ ಎಂದ ಅವರು, ಜಾನಪದ ಆಚರಣೆ ಪದ್ದತಿಯನ್ನು ನಿರಾಕರಿಸಿ ಬದುಕುವುದು ಅಸಾಧ್ಯವಾಗಿದ್ದು ನಮ್ಮ ಪ್ರತಿಯೊಂದು ಆಚರಣೆ ಯಲ್ಲಿ ಜಾನಪದ ಹಾಸುಹೊಕ್ಕಾಗಿದೆ ಬಾಷೆಯ ಶ್ರೀಮಂತಿಕೆ ಜತೆಗೆ ಬದುಕಿನ ಖುಷಿಯನ್ನು ಜಾನಪದ ಹೆಚ್ಚಿಸುತತಿದೆ ಎಂದು ತಿಳಿಸಿದರು.
ಸಂಸ್ಕೃತಿಯ ಭಾಗವಾಗಿರುವ ಜಾನಪದ ಆಚರಣೆಯು ಮೌಡ್ಯದ ನೆಪದಲ್ಲಿ ನೇಪಥ್ಯಕ್ಕೆ ಸರಿಯದಂತೆ ಹೆಚ್ಚು ಜಾಗ್ರತೆಯನ್ನು ವಹಿಸ ಬೇಕಾಗಿದೆ ಎಂದ ಅವರು, ಚಿಕ್ಕ ವಯಸ್ಸಿನಲ್ಲಿ ಅಜ್ಜಿ ಹೇಳುತ್ತಿದ್ದ ಕಥೆಗಳು ವಿಸ್ಮಯ ಲೋಕಕ್ಕೆ ಕರೆದೊಯ್ಯುವ ಮಾಂತ್ರಿಕ ಶಕ್ತಿ ಯನ್ನು ಹೊಂದಿದ್ದು ನಗರೀಕರಣ ದಿಂದಾಗಿ ಸಂಸ್ಕೃತಿ ಭಾಷೆ ಇತಿಹಾಸವನ್ನು ಮರೆಯುತ್ತಿರುವ ಆಧುನಿಕ ಪೀಳಿಗೆಗೆ ಜಾನಪದದ ಬಗ್ಗೆ ಅರಿವು ಮೂಡಿಸಲು ಉಳಿಸಿ ಕೊಳ್ಳಬೇಕಾದ ಬಹು ದೊಡ್ಡ ಜವಾಬ್ದಾರಿ ಇದೆ ಎಂದರು.
ಜಾನಪದ ಅಡುಗೆ,ಜಾನಪದ ಉಡುಗೆ ತೊಡುಗೆ ಆಧುನಿಕತೆಯ ಸೋಂಕಿನಲ್ಲಿ ಮರೆಯಾಗುತ್ತಿದ್ದು ಜಂಕ್‌ಫುಡ್ ಸೇವಿಸಿ, ಹರಕು ಉಡುಗೆ ತೊಡುಗೆಯನ್ನುಟ್ಟು ಸಂಭ್ರಮಿಸುವ ಇಂದಿನ ಪೀಳಿಗೆಗೆ ಜಾನಪದದ ವೈಭವವನ್ನು ಪರಿಚಯಿಸಬೇಕಾದ ಅನಿವಾರ್ಯ ಸ್ಥಿತಿ ಉಂಟಾಗಿದೆ ಎಂದರು.
ಜಾನಪದ ಸಂಸ್ಕೃತಿ ಮರೆತಲ್ಲಿ ತಾಯಿ ಮಗು ಮರೆತಂತೆ ಅನಾಥ ಸ್ಥಿತಿ ಅನುಭವಿಸಬೇಕಾಗುತ್ತದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಜಾನಪದ ಆಚರಣೆಯನ್ನು ಸಂಗ್ರಹಿಸಿ ಪೋಷಿಸಿದಲ್ಲಿ ಮುಗಿದು ಹೋದ ಸಂಪನ್ಮೂಲವನ್ನು ಕ್ರೋಡಿಕರಿಸಿದ ಪುಣ್ಯ ಲಭಿಸಲಿದೆ ಎಂದು ತಿಳಿಸಿದರು.
ಖ್ಯಾತ ಲಾವಣಿಕಾರ ಮಲೆಬೆನ್ನೂರಿನ ಜಿಲಾನಿಸಾಬ್ ಲಾವಣಿಕಾರ್ ಮಾತನಾಡಿ, ತಾಲೂಕಿನ ಪುನೇದಹಳ್ಳಿಯಲ್ಲಿ ವಾಸವಾಗಿದ್ದ ತಂದೆ ಚಿಮನ್‌ಸಾಬ್ ಮೂಲಕ ಲಾವಣಿಪದ ಹಾಡುವ ಅಭ್ಯಾಸ ಹೊಂದಿದ್ದು ಸ್ವಾತಂತ್ರ ಪೂರ್ವದಲ್ಲಿ ಬ್ರಿಟಷರ ವಿರುದ್ದ ಹೋರಾಟದ ಕಿಚ್ಚನ್ನು ಹಚ್ಚಲು ತಂದೆ ಲಾವಣಿಪದದ ಮೂಲಕ ಕೊಡುಗೆಯನ್ನು ನೀಡಿದ್ದಾರೆ ಎಂದು ಸ್ಮರಿಸಿಕೊಂಡರು.
ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಎ.ಕೆ ತಿಮ್ಮಪ್ಪ ಮಾತನಾಡಿ,ಜಾನಪದಕ್ಕೆ ಎಂದಿಗೂ ಸಾವಿಲ್ಲ ಕಾಲಕಾಲಕ್ಕೆ ತಕ್ಕಂತೆ ರೂಪಾಂತರಗೊಳ್ಳುವುದು ಜಾನಪದವನ್ನು ರಕ್ಷಿಸಿದಲ್ಲಿ ಜಾನಪದವು ನಮ್ಮ ಸಂಸ್ಕೃತಿಯನ್ನು ರಕ್ಷಿಸಲಿದೆ ಮುಂದಿನ ಪೀಳಿಗೆಗಾಗಿ ಜಾನಪದ ರಕ್ಷಣೆ ತುರ್ತು ಅಗತ್ಯ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಆರ್.ಕೆ ವಿನಯ್, ಕಸಾಪ ಮಾಜಿ ಅಧ್ಯಕ್ಷ ಎಂ.ಆರ್ ರಘು ಮತ್ತಿತರರು ಮಾತನಾಡಿದರು. ಲಾವಣಿಕಾರ ಜಿಲಾನಿಸಾಬ್, ಬೇಗೂರು ಶಿವಪ್ಪ ಲಾವಣಿ ಹಾಡಿ ರಂಜಿಸಿದರು. ಗಣ್ಯರನ್ನು ಸನ್ಮಾನಿಸಲಾಯಿತು. ಜಾನಪದ ಪರಿಷತುತಿ ಅಧ್ಯಕ್ಷ ಬಿ.ಪಾಪಯ್ಯ, ಕಾರ್ಯದರ್ಶಿ ಸತ್ಯನಾರಾಯಣ, ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಕೆ.ಎಸ್ ಹುಚ್ರಾಯಪ್ಪ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಬಿ.ಎಲ್ ಮತ್ತಿತರರು ಉಪಸ್ಥಿತರಿದ್ದರು.
ಸುನೀಲ ಸ್ವಾಗತಿಸಿ, ಮಮತಾ, ಸಂಜನಾ ನಿರೂಪಿಸಿ, ನರಸೇಗೌಡ ವಂದಿಸಿದರು.